ನವದೆಹಲಿ: ಮೂರು ದಿನದೊಳಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಿ. ಅಕ್ಟೋಬರ್ 1 ರಿಂದ 6 ರ ವರೆಗೆ ದಿನನಿತ್ಯ 6 ಸಾವಿರ ಕ್ಯೂಸೆಕ್ಸ್ ನೀರು ಹರಿಸಿ. ಇದು ಸುಪ್ರೀಂ ಕೋರ್ಟ್ ಅನುಕ್ರಮವಾಗಿ ಕೇಂದ್ರ ಮತ್ತು ರಾಜ್ಯಕ್ಕೆ ನೀಡಿದ ಆದೇಶ. ಅಲ್ಲಿಗೆ ಕಾವೇರಿ ನದಿ ನೀರು ವಿಚಾರದಲ್ಲಿ ರಾಜ್ಯಕ್ಕೆ ಮತ್ತೆ ಆಘಾತವಾಗಿದೆ.
ಕಾವೇರಿ ಬಿಕ್ಕಟ್ಟು ಪರಿಹಾರಕ್ಕೆ ಕೇಂದ್ರದ ಮಧ್ಯಸ್ಥಿಕೆಯಲ್ಲಿ ನಡೆದ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಸಭೆಯೂ ವಿಫಲವಾಯಿತು.
3 ದಿನದೊಳಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಿ ಎಂದು ಸುಪ್ರೀಂಕೋರ್ಟ್ ಕೇಂದ್ರಕ್ಕೆ ಸೂಚನೆ ನೀಡಿದನ್ವಯ 3 ದಿನದಲ್ಲಿ ರಚಿಸುವುದಾಗಿ ಕೇಂದ್ರ ಸರ್ಕಾರ ಕೂಡಾ ಉತ್ತರ ನೀಡಿದೆ.
ಅಕ್ಟೋಬರ್ 1 ರಿಂದ 6 ರ ವರೆಗೆ ದಿನನಿತ್ಯ 6 ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎಂದು ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ಕೊನೆಯ ಎಚ್ಚರಿಕೆ ನೀಡಿ, ಕಾವೇರಿ ನೀರು ವಿವಾದದ ವಿಚಾರಣೆಯನ್ನು ಅಕ್ಟೋಬರ್ 6ಕ್ಕೆ ಮುಂದೂಡಿದೆ.
ನ್ಯಾಯಾಲಯದ ಘನತೆಗೆ ಕರ್ನಾಟಕದಿಂದ ಧಕ್ಕೆಯಾಗಿದೆ. ನಾವು ಇಂದೇ ಕರ್ನಾಟಕದ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಬಹುದಾಗಿತ್ತು. ಆದರೆ ನಿಮಗೆ(ಕರ್ನಾಟಕ) ಇದೇ ಕೊನೆಯ ಅವಕಾಶ. ಸುಪ್ರೀಂಕೋರ್ಟ್ ಆದೇಶ ಪಾಲಿಸಲೇಬೇಕು ಎಂದು ನ್ಯಾ.ದೀಪಕ್ ಮಿಶ್ರಾ ಮತ್ತು ನ್ಯಾ.ಉದಯ್ ಲಲಿತ್ ಅವರಿದ್ದ ಸುಪ್ರೀಂ ಪೀಠ ಖಡಕ್ ಎಚ್ಚರಿಕೆ ನೀಡಿದೆ.
ನ್ಯಾಯಾಂಗದ ಆದೇಶವನ್ನು ಕರ್ನಾಟಕ ಪಾಲಿಸಲೇಬೇಕು. ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ರಾಜ್ಯವೂ ಒಂದು. ದೇಶದ ಎಲ್ಲಾ ರಾಜ್ಯಗಳು ಸುಪ್ರೀಂಕೋರ್ಟ್ ಆದೇಶ ಪಾಲಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಕರ್ನಾಟಕದ ಪರ ವಕೀಲರಾದ ಫಾಲಿ ಎಸ್. ನಾರಿಮನ್ ಇಂದು ವಾದ ಮಂಡನೆಯಿಂದ ಹಿಂದೆ ಸರಿದಿರುವುದು ಕೂಡಾ ರಾಜ್ಯವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.