ಮಳೆ ನಿಂತರೂ ಮಳೆಯ ಹನಿ ನಿಂತಿಲ್ಲ. ಕಾವೇರಿ ನೀರಿಗಾಗಿ ಭುಗಿಲೆದ್ದ ಆಕ್ರೋಶ ತಣ್ಣಗಾಗಿದ್ದರೂ ಅದರ ದುಷ್ಪರಿಣಾಮಗಳು ಕೊನೆಗೊಂಡಿಲ್ಲ. ಯಾವುದೋ ಒಂದು ಘಟನೆ ಇದ್ದಕ್ಕಿದ್ದಂತೆ ಭುಗಿಲೆದ್ದು ಸಾಮಾಜಿಕ ಬದುಕಿನಲ್ಲಿ ತಲ್ಲಣ ಸೃಷ್ಟಿಸುವುದು ಇದ್ದದ್ದೇ. ಆದರೆ ಆ ಘಟನೆಯನ್ನು ಜೀರ್ಣಿಸಿಕೊಂಡು , ಮತ್ತೆ ಸಾಮಾಜಿಕ ಬದುಕನ್ನು ಸುಸ್ಥಿತಿಗೆ ತರುವುದು ಹೇಳಿದಷ್ಟು ಸುಲಭವಲ್ಲ.
ಕಾವೇರಿ ವಿವಾದದ ಬೆಂಕಿ ಭುಗಿಲೇಳುವ ಮುನ್ನ ಬೆಂಗಳೂರು ಸಿಲಿಕಾನ್ ಕಣಿವೆಯೆಂಬ ಖ್ಯಾತಿಪಡೆದು ಅಮೆರಿಕದ ಉದ್ಯೋಗಗಳು ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದವು. ಐಟಿ-ಬಿಟಿ ಮಂದಿಗೆ ಬೆಂಗಳೂರು ಸ್ವರ್ಗಸದೃಶ ಎನಿಸಿತ್ತು. ನೂರಾರು ಸಾಫ್ಟ್ವೇರ್ ಕಂಪೆನಿಗಳು ಹಿಂದೆಮುಂದೆ ಯೋಚಿಸದೆ ಬೆಂಗಳೂರನ್ನು ಕೇಂದ್ರವಾಗಿರಿಸಿಕೊಂಡಿದ್ದು ಇದೇ ಕಾರಣಕ್ಕಾಗಿ. ಆದರೆ ಹಾಗೆ ಮಾಡುವ ಮುನ್ನ ಬೆಂಗಳೂರಿನ ಮೂಲ ಸೌಕರ್ಯಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಲೇ ಇಲ್ಲ. ವರ್ಷದ ಮುನ್ನೂರ ಅರವತ್ತೈದು ದಿನ ಇಲ್ಲಿನ ಹವಾಮಾನ ಆಪ್ಯಾಯಮಾನವಾಗಿರುವುದೊಂದೇ ಇವೆಲ್ಲವನ್ನು ಮರೆಸಿತ್ತು.
ಆದರೆ ಮೊನ್ನೆ ಸೆ. 9 ರಂದು ಕಾವೇರಿ ನೀರಿಗಾಗಿ ಬೆಂಗಳೂರಿನಲ್ಲಿ ಬೆಂಕಿ ಹೊತ್ತಿ ಉರಿದಾಗ, ಅದನ್ನು ಸ್ವರ್ಗಸದೃಶ ಎಂದು ಭಾವಿಸಿದವರು ತಲ್ಲಣಗೊಂಡದ್ದು ಸುಳ್ಳಲ್ಲ. ಇಲ್ಲಿರುವ ಸುಮಾರು 500 ಐಟಿ-ಬಿಟಿ ಕಂಪೆನಿಗಳು ತಮ್ಮ ಅಸ್ತಿತ್ವಕ್ಕೇ ಧಕ್ಕೆ ತಗುಲಿತೆಂದು ಗಾಬರಿಗೊಂಡವು. ಬೆಂಗಳೂರಿನ ಬ್ರಾಂಡ್ನೇಮ್ಗೆ ಕಾವೇರಿ ವಿವಾದದ ಬೆಂಕಿ ಮಸಿ ಬಳಿದಿದೆ. ಅದಕ್ಕೆ ತಕ್ಕಂತೆ ಅಂತಾರಾಷ್ಟ್ರೀಯ ಮಾಧ್ಯಮಗಳು ತುಪ್ಪ ಸುರಿದಿವೆ. ಬೆಂಗಳೂರಿನ ಶರವೇಗದ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಈ ಮಾಧ್ಯಮಗಳು ಈಗ ಬೆಂಗಳೂರನ್ನು ಅಪಾಯಕಾರಿ ನಗರ ಎಂಬ ಕಪ್ಪುಪಟ್ಟಿಗೆ ಸೇರಿಸಲು ಮುಂದಾಗಿವೆ. ’ನ್ಯೂಯಾರ್ಕ್ ಟೈಮ್ಸ್ ’ ಬೆಂಗಳೂರು ಗಲಭೆ ಬಗ್ಗೆ ಬರೆದಿದ್ದು ಹೀಗೆ : ’ದಕ್ಷಿಣ ಭಾರತದಲ್ಲಿ ನದಿ ನೀರಿಗಾಗಿ ಹಿಂಸಾಚಾರ ಭುಗಿಲೆದ್ದಿದೆ. ಎರಡೂ ರಾಜ್ಯಗಳ ನಡುವೆ ವಿವಾದ ಹೊತ್ತಿ ಉರಿದಿದೆ… ನದಿನೀರಿನ ವಿವಾದಗಳು ಭಾರತದಲ್ಲಿ ಹೊಸತೇನಲ್ಲ. ಬರ ಹಾಗೂ ದುರ್ಬಲ ಮುಂಗಾರಿನ ಪರಿಣಾಮವಾಗಿ ಇಂಥ ಸ್ಥಿತಿ ಆಗಾಗ ಉಂಟಾಗುತ್ತಲೇ ಇದೆ. ಆದರೆ ಜಲಸಂಪತ್ತನ್ನು ಸೂಕ್ತರೀತಿಯಲ್ಲಿ ಹಂಚುವುದರಲ್ಲಿ ಕೇಂದ್ರದ ಯೋಜನೆಗಳ ಕೊರತೆ ಇಂತಹ ಸಮಸ್ಯೆಗಳನ್ನು ಮತ್ತಷ್ಟು ಜಟಿಲಗೊಳಿಸಿವೆ. ’
ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ’ನದಿನೀರಿನ ವಿವಾದ ಭವಿಷ್ಯದ ಬೆಳವಣಿಗೆಗೆ ಒಂದು ಅಪಾಯದ ಸಂಕೇತ’ ಎಂದು ವಿಶ್ಲೇಷಿಸಿ, ’ಜಗತ್ತಿನಾದ್ಯಂತ ನೀರು ಪೂರೈಕೆ ಕುರಿತಾದ ವಿವಾದಗಳು ಹೊಸತೇನಲ್ಲ. ಈಜಿಪ್ಟ್ , ಸೂಡಾನ್ ಮತ್ತು ಇಥಿಯೋಪಿಯಾ ದೇಶಗಳು ನೈಲ್ನದಿ ನೀರಿಗೆ ಸಂಬಂಧಿಸಿ ಅಣೆಕಟ್ಟು ಮತ್ತು ನೀರಿನ ಹಂಚಿಕೆ ಕುರಿತು ಸಾಕಷ್ಟು ಜಗಳವಾಡಿಕೊಂಡಿವೆ. ಅಮೆರಿಕದಲ್ಲಿ ಕೊಲರೆಡೋ ನದಿ ಕೃಷಿ ಮತ್ತು ಬೆಳೆಯುತ್ತಿರುವ ನಗರಗಳ ಅಗತ್ಯತೆಯ ಕುರಿತು ಚರ್ಚೆಯ ಕೇಂದ್ರವಾಗಿದೆ’ ಎಂದು ಬರೆದಿದೆ. ಬಿಬಿಸಿ ಕಾವೇರಿ ವಿವಾದವನ್ನು ಇನ್ನೊಂದು ಬಗೆಯಲ್ಲಿ ವಿಶ್ಲೇಷಿಸಿ, ಹಿಂಸಾತ್ಮಕ ಪ್ರತಿಭಟನೆಗಳಿಗೆ ಉತ್ತಮ ಆಡಳಿತದ ವೈಫಲ್ಯವೇ ಕಾರಣ ಎಂದು ನೇರವಾಗಿ ಹೇಳಿದೆ. ಸರ್ಕಾರಗಳು ಕಾಲಕಾಲಕ್ಕೆ ಈ ವಿವಾದವನ್ನು ಬಗೆಹರಿಸದೆ, ರಾಜಕೀಯ ಲಾಭಕ್ಕಾಗಿ ಕಾಲೆಳೆಯುವ ತಂತ್ರ ಅನುಸರಿಸಿದ್ದು , ಸಿದ್ಧರಾಮಯ್ಯ ಹಾಗೂ ಜಯಲಲಿತಾ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಪರಸ್ಪರ ಪ್ರಯತ್ನಿಸದಿದ್ದುದು ಹಾಗೂ ದೆಹಲಿಯಲ್ಲಿರುವ ಕೇಂದ್ರ ಸರ್ಕಾರ ಕೇವಲ ಪಂದ್ಯದ ರೆಫರಿಯಂತೆ ವರ್ತಿಸಿ ಸುಪ್ರೀಂಕೋರ್ಟ್ ಭುಜಕ್ಕೆ ಸಮಸ್ಯೆಯನ್ನು ರವಾನಿಸಿದ್ದು ವಿವಾದ ಇನ್ನಷ್ಟು ಭುಗಿಲೇಳಲು ಕಾರಣ ಎಂದು ಬಿಬಿಸಿ ನಿಷ್ಠುರವಾಗಿ ತಿಳಿಸಿದೆ. ಒಟ್ಟಾರೆ ಕಾವೇರಿ ವಿವಾದದಿಂದಾಗಿ ಬೆಂಗಳೂರಿಗೆ ಕೆಟ್ಟ ಕಳಂಕ ತಗಲಿದೆ ಎನ್ನುವುದು ಬಹುತೇಕ ಅಂತಾರಾಷ್ಟ್ರೀಯ ಮಾಧ್ಯಮಗಳ ಅಭಿಮತ. ’ದಿ ಗಾರ್ಡಿಯನ್’ ಪತ್ರಿಕೆ ಮಾತ್ರ ಏಷ್ಯಾಖಂಡದ ಜಲವಿವಾದಗಳು ಮುಂದಿನ ದಶಕಗಳಲ್ಲಿ ಆ ಉಪಖಂಡದ ಭದ್ರತೆಗೇ ಅಪಾಯಕಾರಿಯಾಗಲಿವೆ ಎಂದು ಎಚ್ಚರಿಸಿದೆ. ಮುಖ್ಯವಾಗಿ ಬಂಗ್ಲಾದೇಶ, ಭೂತಾನ್, ಭಾರತ ಮತ್ತು ಚೀನಾ ದೇಶಗಳುದ್ದಕ್ಕೆ ಹರಿಯುತ್ತಿರುವ ಬ್ರಹ್ಮಪುತ್ರಾ ನದಿ ಮುಂದೆ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಲಿದೆ ಎಂದೂ ಬಿಬಿಸಿ ತಿಳಿಸಿದೆ.
ಅಂತಾರಾಷ್ಟ್ರೀಯ ಮಾಧ್ಯಮಗಳು ಕಾವೇರಿ ವಿವಾದವನ್ನು ವಿಶ್ಲೇಷಿಸಿರುವ ರೀತಿ ಈ ಬಗೆಯದಾದರೆ, ನಮ್ಮ ರಾಷ್ಟ್ರೀಯ ಹಾಗೂ ರಾಜ್ಯ ಮಾಧ್ಯಮಗಳು ವಿಶ್ಲೇಷಿಸಿರುವುದು ಇನ್ನಷ್ಟು ವಿಚಿತ್ರ ರೀತಿಯಲ್ಲಿ. ತಮಿಳುನಾಡಿನಲ್ಲಿ ಎಲ್ಲೋ ಒಂದೆಡೆ ಕನ್ನಡಿಗರೊಬ್ಬರ ಮೇಲೆ ಹಲ್ಲೆ ನಡೆದುದನ್ನೇ ವೈಭವೀಕರಿಸಿ ಕನ್ನಡ ಮಾಧ್ಯಮಗಳು ದಿನವಿಡೀ ಪ್ರಸಾರ ಮಾಡಿದ್ದು ಬೆಂಗಳೂರು, ಮಂಡ್ಯ ಮತ್ತಿತರ ಕಡೆ ವಿವಾದಕ್ಕೆ ತುಪ್ಪ ಸುರಿದಂತಾಯಿತು. ಜೊತೆಗೆ ’ಬೆಂಗಳೂರು ಧಗ ಧಗ’ ಎಂಬ ಶಿರೋನಾಮೆಯೊಂದಿಗೆ ವಾಹಿನಿಗಳು ದಿನವಿಡೀ ಪ್ರಸಾರಮಾಡಿದಾಗ ಅದರ ದುಷ್ಪರಿಣಾಮಗಳು ಆಗದಿರಲು ಸಾಧ್ಯವೆ? ಕರ್ನಾಟಕ ಹೊತ್ತಿ ಉರಿದಿದ್ದಕ್ಕೆ ಮಾಧ್ಯಮಗಳೂ ಹೊಣೆಯಾಗಿವೆ ಎಂದರೆ ತಪ್ಪಲ್ಲ. ನಿಜವಾಗಿ ವಿವಾದ ಭುಗಿಲೇಳದಂತೆ, ಹಿಂಸೆಗೆ ತಿರುಗದಂತೆ ಜಾಣತನದಿಂದ ವಿದ್ಯಮಾನಗಳನ್ನು ಪ್ರಸಾರ ಮಾಡಬೇಕಾಗಿತ್ತು. ಆದರೆ ವಿವೇಕವನ್ನೇ ಮರೆತ ವಾಹಿನಿಗಳು ತಮ್ಮ ಟಿಆರ್ಪಿ ದರ ಹೆಚ್ಚಾಗಬೇಕು ಎಂಬುದನ್ನು ಮಾತ್ರ ನೆನಪಿಟ್ಟುಕೊಂಡವು!
ಕಾವೇರಿ ಗಲಭೆಯಲ್ಲಿ ಉಗ್ರ ಬಲಪಂಥೀಯ ಸಂಘಟನೆಗಳ ಕೈವಾಡವಿದೆಯೆಂದು ರಾಜ್ಯ ಗೃಹಸಚಿವ ಪರಮೇಶ್ವರ್ ಸುದ್ದಿಗೋಷ್ಠಿಯಲ್ಲಿ ಹೇಳಿರುವುದಂತೂ ನಗು ತರಿಸುವಂತಿದೆ. ಗೃಹಸಚಿವರಾಗಿ ಅವರಿಗೆ ಸೆ. 9 ರ ಗಲಭೆಗಳಿಗೆ ಯಾರು ಕಾರಣ? ಯಾರ ಕೈವಾಡವಿದೆ? ಎಂಬುದರ ಬಗ್ಗೆ ಪೊಲೀಸ್ ಇಲಾಖೆಯಿಂದಲೇ ಸ್ಪಷ್ಟ ಮಾಹಿತಿಗಳು ಸಿಗುತ್ತವೆ. ಆ ಮಾಹಿತಿಗಳ ಬಗ್ಗೆ ಪ್ರಸ್ತಾಪಿಸದೆ, ಕಾಂಗ್ರೆಸ್ ಪದಾಕಾರಿಗಳ ಸಭೆಯಲ್ಲಿ ಹಿರಿಯ ಸದಸ್ಯರೊಬ್ಬರು ಗಲಭೆಗೆ ಬಲಪಂಥೀಯ ಸಂಘಟನೆಗಳು ಕಾರಣ ಎಂದು ಹೇಳಿದ್ದನ್ನೇ ಮಾಧ್ಯಮಗಳಿಗೆ ಪುನರುಚ್ಚರಿಸುವ ಜರೂರತ್ತು ಏನಿತ್ತು? ಬಲಪಂಥೀಯ ಸಂಘಟನೆಗಳ ಬಗ್ಗೆ ಗೂಬೆ ಕೂರಿಸುವ ರಾಜಕೀಯ ಹುನ್ನಾರವೆ? ಬೆಂಗಳೂರಿನಲ್ಲಿ ನಡೆದ ಗಲಭೆಗಳ ಹಿಂದಿನ ಕಾಣದ ಕೈಗಳು ಯಾವುವು ಎಂಬುದು ಈಗ ಒಂದೊಂದಾಗಿ ಬಯಲಾಗುತ್ತಿದೆ. ತಮಿಳುನಾಡು ಮೂಲದ ಖಾಸಗಿ ಕೆಪಿಎನ್ ಬಸ್ ಕಂಪೆನಿಗೆ ಸೇರಿದ 42 ಬಸ್ಗಳಿಗೆ ಬೆಂಕಿ ಹಚ್ಚಿದವರು ಯಾರೆಂಬುದು ಈಗ ಪೊಲೀಸರಿಗೆ ಗೊತ್ತಾಗಿದೆ. ಡಿಸೋಜ ನಗರದ 5 ಮಂದಿ ಯುವಕರನ್ನು ಈ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಅವರೆಲ್ಲರೂ ಬಸ್ಸಿಗೆ ಬೆಂಕಿ ಹಚ್ಚುವಂತೆ ತಮಗೆ ಪ್ರಚೋದನೆ ನೀಡಿದ್ದು ಒಬ್ಬ ಅಪರಿಚಿತ ಮಹಿಳೆ ಎಂದು ಒಪ್ಪಿಕೊಂಡಿದ್ದಾರೆ. ಈಗ ಈ ಕೇಸ್ನಲ್ಲಿ ಆ ಅಪರಿಚಿತ ಮಹಿಳೆಯೇ ಮುಖ್ಯ ಆರೋಪಿ. ಆಕೆ ಯಾರು ಎಂಬುದು ಈ ವೇಳೆಗೆ ಪೊಲೀಸರಿಗೂ ಗೊತ್ತಾಗಿರಬಹುದು.
ರಾಜರಾಜೇಶ್ವರಿ ನಗರದಲ್ಲಿರುವ ರಾಯಲ್ ಎನ್ಫೀಲ್ಡ್ ಶೋರೂಂಗೆ ಕಲ್ಲೆಸೆದ ಆ ಸಂಸ್ಥೆಯ ಮಾಜಿ ಉದ್ಯೋಗಿ ಶರತ್ಬಾಬು ಎಂಬವನನ್ನು ಪೊಲೀಸರು ಬಂಸಿದ್ದಾರೆ. ತನ್ನನ್ನು ಏಕಾಏಕಿ ಕೆಲಸದಿಂದ ಕಿತ್ತುಹಾಕಿದ್ದಕ್ಕೆ ಆತ ಕಾವೇರಿ ಗಲಭೆ ಸಂದರ್ಭದಲ್ಲಿ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿದ್ದ. ಆತನೊಂದಿಗೆ ಸಹಕರಿಸಿದ ಇನ್ನೂ 6 ಮಂದಿಯನ್ನು ಬಂಧಿಸಲಾಗಿದೆ. ಹೀಗೆ ಬಂಧನಕ್ಕೊಳಗಾದವರಲ್ಲಿ ಯಾರೊಬ್ಬರೂ ಬಲಪಂಥೀಯ ಸಂಘಟನೆಗಳಿಗೆ ಸೇರಿದವರಲ್ಲ. ತಮ್ಮ ಸ್ವಂತಕ್ಕಾದ ಅನ್ಯಾಯಕ್ಕಾಗಿ ಅಥವಾ ಗಲಭೆ ಸಂದರ್ಭದಲ್ಲಿ ಇನ್ನಾವುದೋ ಕಾರಣಕ್ಕಾಗಿ ಹಿಂಸಾಚಾರ ನಡೆಸಿದ ದುಷ್ಕರ್ಮಿಗಳು. ಇವೆಲ್ಲ ಗೊತ್ತಿದ್ದರೂ ಕಾವೇರಿ ಗಲಭೆಯಲ್ಲಿ ಬಲಪಂಥೀಯ ಸಂಘಟನೆಗಳ ಕೈವಾಡವಿದೆ ಎಂದು ಗೃಹಸಚಿವ ಪರಮೇಶ್ವರ್ ಹಿಂದೆಮುಂದೆ ನೋಡದೆ ಆರೋಪಿಸುತ್ತಾರೆಂದರೆ, ಅವರು ಖಂಡಿತ ಆ ಸ್ಥಾನದಲ್ಲಿರಲು ಯೋಗ್ಯರಲ್ಲ ಎಂದೇ ಹೇಳಬೇಕಾಗುತ್ತದೆ.
ಕಾವೇರಿ ಗಲಭೆಯ ಕುರಿತು ಹೀಗೆ ಯಾರ್ಯಾರ ಮೇಲೋ ಗೂಬೆ ಕೂರಿಸಿ, ತಾವು ಮಾತ್ರ ಜಾರಿಕೊಳ್ಳುವ ಈ ಮಹನೀಯರು ಕಾವೇರಿ ಸಮಸ್ಯೆಗೆ ಮೂಲ ಕಾರಣವನ್ನೇ ಅರಿತುಕೊಳ್ಳದಿರುವುದು ಎಂತಹ ವಿಪರ್ಯಾಸ ! ಕಾವೇರಿ ನದಿನೀರಿನ ಪ್ರಮಾಣ ಕಡಿಮೆಯಾಗಿದ್ದಾದರೂ ಏಕೆ? ಕಾವೇರಿ ನದಿಯ ನೀರಿನ ಪ್ರಮಾಣ ಕಡಿಮೆಯಾಗದಿದ್ದಲ್ಲಿ ತಮಿಳುನಾಡು ಆಗಾಗ ಕ್ಯಾತೆ ತೆಗೆಯುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ. ಅಂದಾಜಿನಂತೆ ಸುಮಾರು 8 ಕೋಟಿ ಜನರು ಹಾಗೂ 600 ಪ್ರಮುಖ ಕೈಗಾರಿಕೆಗಳು ಇಂದು ಕಾವೇರಿ ನೀರನ್ನೇ ಆಶ್ರಯಿಸಿವೆ. ಆದರೆ ಕಾವೇರಿ ಜನಿಸುವ ಕೊಡಗಿನಲ್ಲಿ ಅವ್ಯಾಹತ ಅರಣ್ಯ ನಾಶದಿಂದಾಗಿ ಮಳೆ ಬೀಳುವ ಪ್ರಮಾಣ ಕಡಿಮೆಯಾಗಿ, ಕಾವೇರಿ ಕಣಿವೆ ಪ್ರದೇಶದ ಜಲಾಶಯಗಳಲ್ಲಿ ನೀರಿನ ಕೊರತೆ ಬಾಧಿಸಿದೆ. ಕೊಡಗಿನ 2800 ಎಕರೆಯಷ್ಟು ಕೃಷಿ ಮತ್ತು ಅರಣ್ಯ ಭೂಮಿಯನ್ನು ಕಳೆದ 10 ವರ್ಷಗಳಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ ಪರಿವರ್ತಿಸಲಾಗಿದೆ. ಇಷ್ಟೇ ಅಲ್ಲ, ಇನ್ನಷ್ಟು ಕೃಷಿ ಮತ್ತು ಅರಣ್ಯ ಭೂಮಿಯನ್ನು ವಾಣಿಜ್ಯ ಉದ್ದೇಶಗಳಿಗಾಗಿ ಪರಿವರ್ತಿಸಲು ಅನುಮತಿ ನೀಡಬೇಕೆಂದು ನೂರಾರು ಅರ್ಜಿಗಳು ಇತ್ಯರ್ಥಕ್ಕಾಗಿ ಕಡತದಲ್ಲಿ ಕೊಳೆಯುತ್ತಿವೆ. ಅರಣ್ಯ ಮತ್ತು ಕೃಷಿಭೂಮಿಯನ್ನು ವಾಣಿಜ್ಯ ಉದ್ದೇಶಗಳಿಗಾಗಿ ಪರಿವರ್ತಿಸುವುದು ಕಾನೂನುಬಾಹಿರ. ಕಳೆದ ವರ್ಷ 400 ಕೆವಿ ಹೈಟೆನ್ಶನ್ ವಿದ್ಯುತ್ ಲೈನ್ ಅನ್ನು ಮೈಸೂರಿನಿಂದ ಕೇರಳದ ಕೊಜಿಕೋಡ್ಗೆ ಎಳೆಯಲು ಬರೋಬ್ಬರಿ 55 ಸಾವಿರ ಭಾರೀ ಗಾತ್ರದ ಮರಗಳನ್ನು ಕಡಿದುರುಳಿಸಲಾಯಿತು. ಪರಿಣಾಮವಾಗಿ ಕೆಆರ್ಎಸ್ ಅಣೆಕಟ್ಟಿಗೆ ಹರಿಯುವ ನೀರಿನ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ. ಅಲ್ಲದೆ ಅಣೆಕಟ್ಟಿನಲ್ಲಿ ಸಾಕಷ್ಟು ಹೂಳು ಕೂಡ ತುಂಬಿದೆ.
ಇಷ್ಟೇ ಅಲ್ಲ , ಇನ್ನಷ್ಟು ಹೊಸ ಯೋಜನೆಗಳು ಕಾವೇರಿ ನದಿಯ ಒಡಲನ್ನು ಬರಿದಾಗಿಸಲು ಹುನ್ನಾರ ನಡೆಸಿವೆ. ಕೊಡಗಿನ ಮೂಲಕ ರೈಲ್ವೇಮಾರ್ಗ ನಿರ್ಮಾಣ, ಈಗಿರುವ ರಸ್ತೆಗಳ ಅಗಲೀಕರಣ, ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮುಂತಾದ ಯೋಜನೆಗಳು ಕಾರ್ಯಗತವಾದರೆ ಇನ್ನಷ್ಟು ಮರಗಳ ನಾಶ ಖಚಿತ. ಈ ಯೋಜನೆಗಳು ಅಭಿವೃದ್ಧಿಗೆ ಪೂರಕ ಎಂದು ತಜ್ಞರು ವಾದಿಸಬಹುದು ಆದರೆ ಅದೇ ವೇಳೆ ಈ ಯೋಜನೆಗಳ ದುಷ್ಪರಿಣಾಮವಾಗಿ 8 ಕೋಟಿ ಜನರು ಹಾಗೂ 600 ಪ್ರಮುಖ ಕೈಗಾರಿಕೆಗಳಿಗೆ ನೀರೊದಗಿಸುವ ಕಾವೇರಿಯ ಒಡಲು ಬರಿದಾಗುವುದೆಂಬ ಕಠೋರ ಸತ್ಯವನ್ನು ಯಾಕೆ ಯಾರೂ ಅರ್ಥಮಾಡಿಕೊಳ್ಳುತ್ತಿಲ್ಲ?
ಸಮಸ್ಯೆ ಇರುವುದು ಇಲ್ಲೇ. ಸಮಸ್ಯೆಗೆ ಮೂಲಕಾರಣ ಪತ್ತೆ ಹಚ್ಚಿ ಪರಿಹರಿಸುವ ಬದಲು, ಅದನ್ನು ರಾಜಕೀಯ ದಾಳವನ್ನಾಗಿ ಮಾಡಿಕೊಳ್ಳುವ ನಮ್ಮ ಮುಖಂಡರಿಗೆ ಏನೆನ್ನೋಣ. ಬೆಂಕಿಬಿದ್ದ ಮನೆಯಗಳ ಹಿರಿದು ಬೀಡಿ ಹೊತ್ತಿಸಿಕೊಳ್ಳುವ ಮೂರ್ಖರಿಗೆ ಯಾವುದರಿಂದ ಹೊಡೆಯಬೇಕು? ನೀವೇ ನಿರ್ಧರಿಸಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.