ಯಶವಂತ ಸಿಂಹನು ಜೋಧಪುರದ ರಾಜನಾಗಿದ್ದನು. ಸುಜನಾವತಿಯು ಈತನ ಪಟ್ಟಮಹಿಷಿ ಹಾಗು ರಾಜ್ಯದ ರಾಣಿಯು ಆಗಿದ್ದಳು. ಈಕೆ ಉತ್ತಮ ವೀರಾಂಗನೆಯಾಗಿದ್ದಳು. ಅಲ್ಲದೆ ಪ್ರತಿಜ್ಞಾಬದ್ಧ ಸಂಕಲ್ಪ ಸಿದ್ಧಿಯ ಗೌರವಾನ್ವಿತ ಪ್ರತಿಮೂರ್ತಿಯಾಗಿದ್ದಳು.
ಫ್ರೆಂಚ್ ಪ್ರವಾಸಿ ವರ್ನಿಯರ್ ಈಕೆಯ ರಾಜನೀತಿ ತಜ್ಞತೆ, ಸಾಹಸ ಮತ್ತು ಸತೀತ್ವದ ಹಿರಿಮೆಗಳನ್ನು ತುಂಬಾ ಅದ್ಭುತ ರೀತಿಯಲ್ಲಿ ತನ್ನ ಗ್ರಂಥ “ಭರತ ಯಾತ್ರ”ದಲ್ಲಿ ವರ್ಣಿಸಿದ್ದಾನೆ. ತನ್ನ ಪತಿಯೊಡನೆ ರಾಜ್ಯದ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಳು. ರಾಜನೀತಿ ಪಾರಂಗತೆಯಾಗಿದ್ದ ಈಕೆ ರಾಜ್ಯದ ಜನರ ಸಮಸ್ಯೆಗಳನ್ನು ಅತ್ಯಂತ ಸರಳ ಹಾಗು ಸಮಾಧಾನದಿಂದ ಪರಿಹರಿಸುತ್ತಿದ್ದಳು. ತನ್ನ ರಾಜ್ಯದ ಅನೇಕ ಯುವಕನ್ನು ಕರೆಸಿ ಸೈನಿಕರಾಗುವಂತೆ ಪ್ರೋತ್ಸಾಹಿಸಿ ಅವರಿಗೆ ಕತ್ತಿವರಸೆ, ಕುದುರೆ ಓಡಿಸುವುದು, ಯುದ್ಧನೀತಿ ಹಾಗು ಅದರ ಜೊತೆಗೆ ಭಗವದ್ಗೀತೆಯನ್ನು ಹೇಳಿಕೊಡುತ್ತಿದ್ದಳು.
ಒಮ್ಮೆ ಮೊಘಲ್ ರಾಜನಾದ ಔರಂಗಜೇಬನು ತನ್ನ ಸುಸಜ್ಜಿತವಾದ ಸೈನ್ಯದೊಂದಿಗೆ ಜೋಧ್ಪುರದ ಮೇಲೆ ದಾಳಿಯಿಟ್ಟನು; ರಾಜ ಯಶವಂತ ಸಿಂಹನು ತನ್ನ ವಿಶಾಲವಾದ ಸೈನ್ಯದೊಡನೆ ಹೊರಟು ಔರಂಗಜೇಬನ ಮೇಲೆ ದಾಳಿ ಮಾಡಿದನು. ಸುಮಾರು 50 ದಿನಗಳಿಗಿಂತ ಹೆಚ್ಚು ದಿನಗಳವರೆಗೂ ಯುದ್ಧವು ಮುಂದುವರೆಯಿತು. ಇತ್ತ ಯುದ್ಧ ನಡೆಯುತ್ತಿದ್ದರೆ ಅತ್ತ ರಾಣಿಯು ತನ್ನ ರಾಜ್ಯವನ್ನು ನೋಡಿಕೊಳ್ಳುತ್ತಿದ್ದಳು. ಕಡೆಗೆ ಯುದ್ಧದಲ್ಲಿ ರಾಜ ಯಶವಂತ ಸಿಂಹನು ಹತನಾದನು. ಈ ಘಟನೆಯ ನಂತರ ವಿಧವೆಯಾದರೂ ಧೈರ್ಯಗೆಡದ ರಾಣಿ ಸುಜನಾವತಿಯು ಅನೇಕ ಆಶ್ಚರ್ಯಕರ ಕಾರ್ಯಗಳನ್ನು ನಿರ್ವಹಿಸಿದಳು.
ಈಕೆಯು ಮೆವಾಡದ ರಾಣಾ ನೇತೃತ್ವದಲ್ಲಿ ವಿದೇಶಿ ಹಾಗು ಮೊಘಲರ ಆಡಳಿತವನ್ನು ರಾಜಸ್ಥಾನದ ನೆಲೆಯಿಂದಲೇ ನಿರ್ಮೂಲನೆ ಮಾಡಲು ರಾಜಪೂತ ಸೈನ್ಯವೊಂದನ್ನೇ ನಿರ್ಮಿಸಿದಳು. ರಾಜ್ಯವನ್ನು ಮತ್ತು ತನ್ನ ಮಗನಾದ ಅಜೇಯಸಿಂಹನ ರಕ್ಷಣಾ ಭಾರವನ್ನು ಆಕೆಯ ಅಣ್ಣನಾದ ರಾಣಾ ರಾಜಸಿಂಹನ ಜವಾಬ್ದಾರಿಗೆ ವಹಿಸಿ ನಿಶ್ಚಿಂತಳಾಗಿ ಜೀವನಪರ್ಯಂತ ಅವಳು ಮೊಘಲರ ವಿನಾಶದ ಯೋಜನೆಗಳನ್ನು ಕಾರ್ಯಗತಗೊಳಿಸುವ ಕಾರ್ಯದಲ್ಲಿ ನಿರತಳಾಗಿದ್ದಳು.
“ಈ ಹಿಂದುಸ್ಥಾನ ಇರುವುದು ಹಿಂದುಗಳಾದ ನಮಗಾಗಿ. ವಿದೇಶಿಯರಿಗೆ ಹಾಗು ಗೋ ವಧೆ ಮಾಡುವ ಯವನರಿಗೆ ಈ ಪುಣ್ಯ ಭೂಮಿಯಲ್ಲಿ ಹೆಜ್ಜೆಯಿಡಲು ಅವಕಾಶ ನೀಡಬಾರದು, ಅಂಥವರನ್ನು ಇಲ್ಲಿಂದ ಹೊರಗಟ್ಟುವುದೇ ನಾವು ಮಾಡುವ ಪುಣ್ಯಕಾರ್ಯವಾಗಿರುತ್ತದೆ” ಎಂದು ಅವಳು ರಾಜಪೂತ ಸೈನಿಕರಿಗೆ ಈ ರೀತಿ ಬೋಧಿಸುತ್ತಾ ಅವರಲ್ಲಿ ಉತ್ತೇಜನವನ್ನು ತುಂಬುತ್ತಿದ್ದಳು.
ಈ ರಾಣಿಯು ಇನ್ನು ಕೆಲವು ವರ್ಷಗಳು ಜೀವಂತವಾಗಿ ಇದ್ದಲ್ಲಿ ಮೊಘಲರ ಸಿಂಹಾಸನವು ನಿಗದಿತ ಸಮಯಕ್ಕಿಂತ ಇನ್ನು ಮುಂಚಿತವಾಗಿಯೇ ಉರುಳಿ ಹೋಗಿ ನಮ್ಮ ನಾಡಿನ ಇತಿಹಾಸವನ್ನೇ ಬದಲಿಸಬಹುದಾಗಿತ್ತು. ಆದರೆ ವಿಧಿಯ ನಿಯಮವೇ ಬೇರೆಯಾಗಿತ್ತು. ರಾಜಸ್ಥಾನದ ಹಿಂದೂ ಪುನರುತ್ಥಾನದ ಬೀಜಾಂಕುರವಾಗಿತ್ತು ಈಕೆಯ ವೀರ್ಯೋತ್ಸಾಹ. ಔರಂಗಜೇಬನ ಅಶಿಷ್ಟ ಹಾಗು ಅಮಾನುಷ ವ್ಯವಹಾರಗಳಿಂದ ಬೇಸತ್ತ ಹಿಂದುಗಳು ಹೆಚ್ಚು ಹೆಚ್ಚು ಸಂಘಟಿತರಾಗತೊಡಗಿದರು. ರಜಪೂತರು ಶಕ್ತಿ ಹಾಗು ವೀರತ್ವಗಳ ಮುಖಾಂತರ ಸೈನ್ಯ ಸಂಚಯ ಮಾಡಲು ಪ್ರಾರಂಭಿಸಿದರು. ಇದು ಮೊಘಲರ ಅವನತಿಯ ಪ್ರಾರಂಭವಾಗಿತ್ತು. ಇಂತಹ ಶ್ರೇಷ್ಠ ಮನೋಭಾವದ ಬುನಾದಿ ಹಾಕಿದ ಯಶವಂತಸಿಂಹನು, ರಾಣಿ ಸುಜನಾವತಿಯು ಕೀರ್ತಿಸ್ಮರಣೀಯಳಾದಳು.
ಮಾತೃ ಧರ್ಮ ಹಾಗು ಮಾತೃ ಭೂಮಿಯ ರಕ್ಷಣೆಗಾಗಿ ಈಕೆಯು ನಡೆಸಿದ ಇನ್ನೊಂದು ಸ್ತುತ್ಯ ಕಾರ್ಯವೆಂದರೆ ರಜಪೂತ ಸರದಾರರು ಹಾಗು ಛತ್ರಪತಿ ಶಿವಾಜಿ ಮಹಾರಾಜರನ್ನು ಒಂದುಗೂಡಿಸಲು ಪ್ರಯತ್ನಗಳನ್ನು ನಡೆಸಿದುದು. ಇದು ತತ್ಕ್ಷಣ ಪ್ರತಿಫಲ ನೀಡಲಿಲ್ಲವಾದರೂ, ನಂತರದ ವರ್ಷಗಳಲ್ಲಿ ಉತ್ತಮ ಫಲ ನೀಡಲು ಪ್ರಾರಂಭವಾಯಿತು. ಧನ್ಯೆ ರಾಣಿ ಸುಜನಾವತಿ. ಈಕೆಯನ್ನು ಪಡೆದ ಈ ರಾಷ್ಟ್ರವೇ ಧನ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.