ಇತ್ತೀಚೆಗೆ ಐಎಎಸ್, ಐಪಿಎಸ್ ಅಕಾರಿಗಳು ನಾನಾ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿದ್ಯಮಾನಗಳು ಹೆಚ್ಚುತ್ತಿರುವಾಗ ಪ್ರಜ್ಞಾವಂತರಿಗೆ ಈ ಕುರಿತು ಸಾಕಷ್ಟು ಗೊಂದಲ, ಜಿಜ್ಞಾಸೆ, ಆತಂಕಗಳು ಮೂಡುವುದು ಸಹಜ. ಮಾನಸಿಕ ಖಿನ್ನತೆ, ಮೇಲಕಾರಿಗಳ ಕಿರುಕುಳ, ರಾಜಕೀಯ ಒತ್ತಡಗಳು, ವ್ಯವಸ್ಥೆಗೆ ಹೊಂದಿಕೊಳ್ಳಲು ಸಾಧ್ಯವಾಗದಿರುವುದು… ಹೀಗೆ ಸರ್ಕಾರಿ ಅಕಾರಿಗಳ ಆತ್ಮಹತ್ಯೆಗೆ ನಾನಾ ಕಾರಣಗಳು. ಡಿವೈಎಸ್ಪಿ ಎಂ. ಕೆ. ಗಣಪತಿ ಆತ್ಮಹತ್ಯೆ ಪ್ರಕರಣ, ಮತ್ತೊಬ್ಬ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣ, ವಿಜಯನಗರ ಠಾಣೆ ಇನ್ಸ್ಪೆಕ್ಟರ್ ರೂಪಾ ತಂಬದ ಆತ್ಮಹತ್ಯೆ ಯತ್ನ, ಶೃಂಗೇರಿ ಠಾಣೆ ಪಿಎಸ್ಐ ಮಂಜೇಶ್ ಆತ್ಮಹತ್ಯೆ ಬೆದರಿಕೆ, ಹಾಸನ ಎಸಿ ವಿಜಯಾ ಆತ್ಮಹತ್ಯೆ ಯತ್ನ , ಹಾವೇರಿ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ|| ಬಿ.ಹೆಚ್ ಹನುಮಂತಪ್ಪ ಆತ್ಮಹತ್ಯೆ ಬೆದರಿಕೆ, ಹಂಪಿ ವಿಶ್ವವಿದ್ಯಾಲಯದ ಪ್ರಥಮದರ್ಜೆ ಸಹಾಯಕ ಸೋಮನಾಥ್ ಆತ್ಮಹತ್ಯೆ ಬೆದರಿಕೆ… ಇಂತಹ ಹಲವು ಪ್ರಕರಣಗಳು ಪ್ರತಿನಿತ್ಯವೆಂಬಂತೆ ನಡೆಯುತ್ತಲೇ ಇವೆ. ಒಂದೊಂದು ಪ್ರಕರಣದಲ್ಲೂ ಕಾರಣಗಳು ಬೇರೆ ಬೇರೆ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮೇಲಕಾರಿಗಳ ಕಿರುಕುಳ, ರಾಜಕೀಯ ಒತ್ತಡ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ತೊಂದರೆ ಇತ್ಯಾದಿ ಕಾರಣಗಳನ್ನು ಹೇಳಲಾಗುತ್ತಿದೆ. ಕಲ್ಲಪ್ಪ ಹಂಡಿಭಾಗ್ ಪ್ರಕರಣದಲ್ಲಿ ಆತ ಅಮಾನತುಗೊಂಡಿದ್ದಾರೆಂದು ಟಿವಿಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಆತ ಆತ್ಮಹತ್ಯೆ ಮಾಡಿಕೊಂಡರು ಎನ್ನಲಾಗುತ್ತಿದೆ. ವಿಜಯನಗರ ಪಿಎಸ್ಐ ರೂಪಾ ಪ್ರಕರಣದಲ್ಲಿ ಇನ್ಸ್ಪೆಕ್ಟರ್ ಕಿರುಕುಳ ನೀಡಿದರೆಂಬ ಆರೋಪ, ಶೃಂಗೇರಿ ಪಿಎಸ್ಐ ಮಂಜೇಶ್ ಪ್ರಕರಣದಲ್ಲಿ ಮೇಲಕಾರಿಗಳ ಕಿರುಕುಳ ಆರೋಪ, ಹಾವೇರಿ ಹನುಮಂತಪ್ಪ ಪ್ರಕರಣದಲ್ಲಿ ಸರ್ಕಾರದ ಸೌಲಭ್ಯ ಸಿಗದ ಹಿನ್ನೆಲೆ, ಹಾಸನ ಎಸಿ ವಿಜಯಾ ಪ್ರಕರಣದಲ್ಲಿ ಹಿರಿಯ ಅಕಾರಿಗಳ ಕಿರುಕುಳ ಆರೋಪ, ಹಂಪಿ ವಿವಿ ಸೋಮನಾಥ್ ಪ್ರಕರಣದಲ್ಲಿ ಮೇಲಕಾರಿಗಳ ಕಿರುಕುಳ ಆರೋಪ.
ಒಟ್ಟಾರೆ ಕೆಲಸದ ಒತ್ತಡ, ಮೇಲಕಾರಿಗಳ ಕಿರುಕುಳ, ರಾಜಕೀಯ ಹಸ್ತಕ್ಷೇಪ-ಇವೇ ಆತ್ಮಹತ್ಯೆಗೆ ಅಥವಾ ಆತ್ಮಹತ್ಯೆ ಯತ್ನಕ್ಕೆ ಮುಖ್ಯ ಕಾರಣಗಳೆಂದು ಕಂಡುಬಂದಿದೆ. ಆತ್ಮಹತ್ಯೆಗೆಳಸಿದ ಇಂಥವರು ನೀಡಿರುವ ಕಾರಣಗಳನ್ನು ಒಂದೇ ಮಾತಿನಲ್ಲಿ ಹೇಳಬೇಕೆಂದರೆ ನಮ್ಮ ಇಂದಿನ ವ್ಯವಸ್ಥೆಯಲ್ಲಿನ ಲೋಪ. ಪದೇ ಪದೇ ನಡೆಯುವ ವರ್ಗಾವಣೆಯಿಂದ ಯಾವ ಅಕಾರಿಯೂ ತನ್ನ ಜವಾಬ್ದಾರಿಯನ್ನು ನಿರ್ವಹಿಸಲಾರ. ಇದರ ಜೊತೆಗೆ ಹಲವು ಸನ್ನಿವೇಶಗಳಲ್ಲಿ ಹಿರಿಯ ಅಕಾರಿಗಳ ಒತ್ತಡ, ರಾಜಕಾರಣಿಗಳು ಮತ್ತವರ ಬೆಂಬಲಿಗರ ಮೂಗುತೂರಿಸುವಿಕೆಯಿಂದಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗದ ವಾತಾವರಣ. ಇತ್ತೀಚಿನ ಈ ಅಹಿತಕರ ಘಟನೆಗಳು ನಮ್ಮ ವ್ಯವಸ್ಥೆ ಸರಿ ಇಲ್ಲ ಎನ್ನುವುದಕ್ಕೆ ಹಿಡಿದ ಕನ್ನಡಿ.
ರಾಜಕೀಯ ಪ್ರೇರಿತ ವರ್ಗಾವಣೆ, ನೇಮಕಾತಿ, ಪ್ರಾಮಾಣಿಕ ಅಕಾರಿಗಳಿಗೆ ಕಿರುಕುಳ – ಇವೆಲ್ಲಾ ಬರೀ ಕರ್ನಾಟಕಕ್ಕೇ ಸೀಮಿತವಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲಿ ಹೋದರೂ ಇದೇ ಕಥೆ. ರಾಜ್ಯ ಸರ್ಕಾರಗಳು ಮಾತ್ರವಲ್ಲ, ಕೇಂದ್ರ ಸರ್ಕಾರವೂ ಇದಕ್ಕೆ ಹೊರತಲ್ಲ. ಇವೆಲ್ಲಾ ಈಚೆಗೆ ಶುರುವಾದ ವಿದ್ಯಮಾನಗಳೇನಲ್ಲ. ಈ ಅಪಸವ್ಯಗಳು ಸ್ವಾತಂತ್ರ್ಯ ಬಂದಾಗಿನಿಂದಲೂ ವ್ಯವಸ್ಥೆಯ ಅನಿವಾರ್ಯ ಭಾಗವಾಗಿಯೇ ಅಂಟಿಕೊಂಡು ಬಂದಿವೆ. ಹೀಗಾಗಬಾರದಿತ್ತು ಆದರೆ ಇದೇ ಒಂದು ಸರಿಯಾದ ಪ್ರಕ್ರಿಯೆ ಎಂಬಂತಾಗಿರುವುದು ವಿಪರ್ಯಾಸ.
ಕರ್ನಾಟಕದಲ್ಲಿ ಇಬ್ಬರು ಪೊಲೀಸ್ ಅಕಾರಿಗಳ ಆತ್ಮಹತ್ಯೆ, ಮತ್ತೊಬ್ಬರ ಅಕಾಲಿಕ ರಾಜೀನಾಮೆಗೆ ಕಾರಣ ವ್ಯವಸ್ಥೆಗೆ ಹೊಂದಿಕೊಳ್ಳುವುದು ಅವರಿಂದ ಸಾಧ್ಯವಾಗಲಿಲ್ಲ ಎನ್ನುವುದು ಒಂದು ಕಡೆಯ ವಾದ. ಆದರೆ ಅದೇ ವ್ಯವಸ್ಥೆಯನ್ನು ಸರಿಪಡಿಸಲು ಬೇಕಾದ ಗಟ್ಟಿತನ, ಸ್ಥೈರ್ಯ ಕೂಡಾ ಅವರಲ್ಲಿ ಇರಲಿಲ್ಲವೆಂಬುದು ಅಷ್ಟೇ ಸತ್ಯ. ಈಗಲೂ ಇವರ ನಿಷ್ಠೆಯ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ಗುಣಗಾನ ಕೇಳಿಬರುತ್ತಿದೆ. ಆದರೆ ಇವರಂತೆಯೇ ಪ್ರಾಮಾಣಕತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ, ಅದೇ ವೇಳೆ ಮೇಲಕಾರಿಗಳ ಕಿರುಕುಳ, ರಾಜಕೀಯ ಒತ್ತಡಗಳನ್ನು ಸಹಿಸುತ್ತಿರುವ ಅಕಾರಿಗಳು ಕೆಲಸ ಮಾಡುತ್ತಿಲ್ಲವೆ? ವ್ಯವಸ್ಥೆಯಲ್ಲಿನ ದೋಷಗಳನ್ನು ಮೆಟ್ಟಿನಿಂತು ಕೆಲಸ ಮಾಡಬಲ್ಲ ಸಾಮರ್ಥ್ಯವನ್ನು ಅವರು ಬೆಳೆಸಿಕೊಂಡಿಲ್ಲವೆ? ಐಎಎಸ್, ಐಪಿಎಸ್ ಹಂತದ ಅಕಾರಿಗಳಿಗೆ ಅವರು ನೇಮಕಾತಿಯಾದಾಗಲೇ ಅದೊಂದು ಒತ್ತಡದ ಹುದ್ದೆ ಎನ್ನುವ ಅರಿವು ಇದ್ದೇ ಇರುತ್ತದೆ. ಜಿಲ್ಲಾಕಾರಿ, ಉಪವಿಭಾಗಾಕಾರಿ, ಪೊಲೀಸ್ ಅಕಾರಿಯಾದವರಿಗೆ ಪ್ರತಿನಿತ್ಯವೂ ಸವಾಲುಗಳು, ಸಮಸ್ಯೆಗಳು ಕಾದಿರುತ್ತವೆ. ಅವುಗಳನ್ನು ಜಾಣತನದಿಂದ, ವಿವೇಕದಿಂದ ನಿಭಾಯಿಸುವುದರಲ್ಲೇ ಅವರ ಅರ್ಹತೆ, ಸಾಮರ್ಥ್ಯ ಅಡಗಿದೆ. ಕೆಲವು ಅಕಾರಿಗಳಲ್ಲಿ ಅಂತಹ ಜಾಣತನವಾಗಲೀ, ವಿವೇಕವಾಗಲೀ ಇರುವುದಿಲ್ಲ ಎನ್ನುವ ಕಾರಣಕ್ಕಾಗಿಯೇ ಮಾನಸಿಕ ಖಿನ್ನತೆಗೊಳಗಾಗಿ ಅಥವಾ ಮೇಲಕಾರಿಗಳ ಇಲ್ಲವೇ ರಾಜಕೀಯ ಕಿರುಕುಳ ಸಹಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೇ ಸ್ಪಷ್ಟ.
ಇತ್ತೀಚೆಗೆ ತನ್ನ ಹುದ್ದೆಗೆ ರಾಜೀನಾಮೆ ನೀಡಿದ ಡಿವೈಎಸ್ಪಿ ಅನುಪಮಾ ಶೆಣೈ ತನಗೆ ಸ್ಥಳೀಯ ರಾಜಕಾರಣಿಯಿಂದ ಕರ್ತವ್ಯ ನಿರ್ವಹಣೆಗೆ ಅಡ್ಡಿಯಾಗಿದೆ ಎಂದು ಕಾರಣ ನೀಡಿದರು. ರಾಜೀನಾಮೆ ಕೊಟ್ಟ ಬಳಿಕ ಆ ಮಹಿಳಾ ಅಕಾರಿಯನ್ನು ಹುಡುಕುವುದೇ ಇತರೇ ಅಕಾರಿಗಳ ಕೆಲಸವಾಗಿತ್ತು. ಅದೇ ವೇಳೆ ಆಕೆಯ ಫೇಸ್ಬುಕ್ನಲ್ಲಿ ಪ್ರಕಟಗೊಂಡ ವಿಚಾರಗಳು ಆಕೆಯದೇ ಅಲ್ಲವೇ ಎಂಬುದಕ್ಕೆ ಅನುಪಮಾ ಶೆಣೈ ಏನೂ ಹೇಳಲೇ ಇಲ್ಲ. ಸಮಾಜದ ಬಗ್ಗೆ ಅಷ್ಟರ ಮಟ್ಟಿಗೆ ಆಕೆ ಬೇಜವಾಬ್ದಾರಿ ಪ್ರದರ್ಶಿಸಿದ್ದರು. ಇಂತಹ ಅಕಾರಿಗಳು ತಮ್ಮ ಬಳಿ ಬರುವ ಅಮಾಯಕ ಜನರಿಗೆ ಯಾವ ರೀತಿಯ ಸರ್ಕಾರಿ ಸೇವೆ ಒದಗಿಸಬಲ್ಲರು?
ಈಗೇನಾಗಿದೆ ಎಂದರೆ, ಸಣ್ಣಪುಟ್ಟ ಕಾರಣಗಳಿಗೂ ಆತ್ಮಹತ್ಯೆಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಬಾರದೇಕೆ ಎಂಬ ಜಿಜ್ಞಾಸೆಯನ್ನು ಇತ್ತೀಚಿನ ಆತ್ಮಹತ್ಯೆ ಪ್ರಕರಣಗಳು ಹುಟ್ಟುಹಾಕಿವೆ. ರಾಜಕೀಯ ಪಕ್ಷದ ಕಾರ್ಯಕರ್ತನೊಬ್ಬ ತನ್ನ ನಾಯಕನ ವಿರುದ್ಧದ ಹತಾಶೆಯನ್ನು , ಪತ್ನಿಯೊಬ್ಬಳು ಪತಿಯ ಮೇಲಿನ ಬೇಸರವನ್ನು, ಮಗುವೊಂದು ತಾಯಿ ಮೇಲಿನ ಸಹಜ ಸಿಟ್ಟನ್ನು ಮಾದ್ಯಮಗಳ ಮುಂದೆ ಆ ಕ್ಷಣದ ಹತಾಶೆಗೆ ಆರೋಪ ಹೊರಿಸಿ, ಅತಿರೇಕದ ನಿರ್ಧಾರ ತೆಗೆದುಕೊಂಡು ಬಿಟ್ಟರೆ ಅದರಿಂದ ಅಮಾಯಕರ ತೇಜೋವಧೆಗೆ ಕಾರಣವಾಗುವುದಿಲ್ಲವೆ? ನೌಕರನೊಬ್ಬ ತನ್ನ ಬಾಸ್ ಮೇಲಿರುವ ಕೋಪವನ್ನು ತೀರಿಸಿಕೊಳ್ಳಲು ಆತ್ಮಹತ್ಯೆಗೆ ಮುಂದಾಗುವುದು ಎಷ್ಟರ ಮಟ್ಟಿಗೆ ಸಮಂಜಸ? ಶಾಲೆಯಲ್ಲಿ ಮಗುವಿಗೆ ಶಿಕ್ಷಕ ಹೇಳುವ ಪಾಠವನ್ನು ಕಿರುಕುಳ ಎಂದು ಪರಿಭಾವಿಸಿ ಬಿಟ್ಟರೆ ಭವಿಷ್ಯದ ನಾಗರಿಕರನ್ನು ರೂಪಿಸುವ ಕಷ್ಟವನ್ನು ಆ ಶಿಕ್ಷಕ ತೆಗೆದುಕೊಳ್ಳುವುದು ಹೇಗೆ?
ಸರ್ಕಾರಿ ಅಥವಾ ಖಾಸಗಿ ಕ್ಷೇತ್ರದ ಯಾವುದೇ ಸಂಸ್ಥೆಗಳಲ್ಲಿ, ಯಾವುದೇ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ನಾನಾ ಬಗೆಯ ಅಡಚಣೆಗಳು ಉಂಟಾಗುವುದು ಹೊಸತೇನಲ್ಲ. ಮಾಧಮಗಳ ಕಾರ್ಯಾಲಯದಿಂದ ಹಿಡಿದು ಮಲ್ಟಿ ನ್ಯಾಷನಲ್ ಕಂಪನಿಗಳ ಉದ್ಯೋಗದವರೆಗೆ ಇಂತಹ ತೊಂದರೆಗಳು, ಕಿರುಕುಳಗಳು ಇದ್ದೇ ಇರುತ್ತವೆ. ಅವುಗಳನ್ನು ಒಂದು ಬಗೆಯ ಸವಾಲೆಂದು ಬಗೆದು ಮುನ್ನುಗ್ಗಿದರೆ ಅಂತಹ ಉದ್ಯೋಗಿಗೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಖಂಡಿತ ಉಂಟಾಗದು. ಬಹಳ ಹಿಂದಿನ ಘಟನೆಯೊಂದು ನನಗೆ ನೆನಪಾಗುತ್ತಿದೆ. ಬಸವಾನಿ ನಂಜುಂಡಯ್ಯ ಮಾಸ್ಟರ್ ಎಂಬ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರೊಬ್ಬರಿದ್ದರು. ಅವರು ಆರೆಸ್ಸೆಸ್ನ ಕಾರ್ಯಕರ್ತರಾಗಿದ್ದರು. ಅದೇ ಕಾರಣಕ್ಕೆ ಅವರನ್ನು ಶಿಕ್ಷಣ ಇಲಾಖೆ ಪದೇಪದೇ ವರ್ಗಾವಣೆ ಮಾಡುತ್ತಿತ್ತು. ಮಲೆನಾಡಿನವರಾದ ಅವರಿಗೆ ಬಯಲುಸೀಮೆಯ ಶಾಲೆಗಳಿಗೆ ವರ್ಗಾವಣೆ ಶಿಕ್ಷೆ ! ಇದರಿಂದ ನಂಜುಂಡಯ್ಯನವರಿಗೆ ಸಾಕಷ್ಟು ತೊಂದರೆಯೂ ಆಗುತ್ತಿತ್ತು. ಆದರೆ ನಂಜುಂಡಯ್ಯ ಸಂಘದ ಕಾರ್ಯಕರ್ತರಾಗಿದ್ದರಿಂದ ಈ ವರ್ಗಾವಣೆಯ ‘ಶಿಕ್ಷೆ’ಗೆ ಹೆದರಲಿಲ್ಲ. ತಾನು ಹೋದ ಕಡೆಯಲ್ಲೆಲ್ಲ ಸಂಘದ ಶಾಖೆಗಳನ್ನು ಆರಂಭಿಸಿ ಸಾಕಷ್ಟು ಯುವಕರಿಗೆ ಸಂಘದ ದೀಕ್ಷೆ ನೀಡಿದರು. ಶಿಕ್ಷಣ ಇಲಾಖೆಗೆ ಇದು ಅರಿವಾಗುತ್ತಿದ್ದಂತೆ, ಅವರ ಅಕಾಲಿಕ ವರ್ಗಾವಣೆಗೆ ಕಡಿವಾಣ ಬಿತ್ತು. ನಂಜುಂಡಯ್ಯ ಮಾಸ್ಟರ್ ಸವಾಲನ್ನೇ ಸಮಾಜ ಕಾರ್ಯಕ್ಕೆ ಸದವಕಾಶವನ್ನಾಗಿ ಬಳಸಿಕೊಂಡರು. ಸ್ವಂತಕ್ಕೆ ಸ್ವಲ್ಪಮಟ್ಟಿಗೆ ತೊಂದರೆಯಾದರೂ ಅದನ್ನು ಸಹಿಸಿಕೊಂಡರು. ಇಂತಹ ಸ್ಥೈರ್ಯವನ್ನು ನಮ್ಮ ಸರ್ಕಾರಿ ಅಕಾರಿಗಳು ಯಾಕೆ ತೋರಬಾರದು?
ಸರ್ಕಾರಿ ಅಕಾರಿಗಳಿಗೆ ಸವಾಲುಗಳು ಸದಾ ಇದ್ದದ್ದೇ. ಅವುಗಳನ್ನು ಹೇಗೆ ನಿಭಾಯಿಸಬೇಕು ಎಂಬುದರಲ್ಲೇ ಅವರ ಸಾಮರ್ಥ್ಯ ಅಡಗಿದೆ. ಸವಾಲುಗಳಿಗೆ ವಿಮುಖರಾಗಿ ದೂರಸರಿದರೆ ಅಥವಾ ಆತ್ಮಹತ್ಯೆಯಂತಹ ಕ್ಷುಲ್ಲಕ ದಾರಿ ಹಿಡಿದರೆ ಸಮಾಜಕ್ಕೆ ಅವರು ರವಾನಿಸುವ ಸಂದೇಶವಾದರೂ ಎಂತಹದು? ಈ ಬಗ್ಗೆ ನಮ್ಮ ಸರ್ಕಾರಿ ಅಕಾರಿಗಳು ಗಂಭೀರವಾಗಿ ಆಲೋಚಿಸಬೇಕಾಗಿದೆ. ಅಕಾರಿಗಳಿಗೆ ತಮ್ಮ ಇಲಾಖೆಯಲ್ಲಿನ ಜನಸೇವೆ ಮುಖ್ಯವಾಗಬೇಕೇ ಹೊರತು ತಾವು ಕೆಲಸ ಮಾಡುವ ಜಿಲ್ಲೆಯ ರಾಜಕಾರಣಿಗಳು, ಪುಢಾರಿಗಳಲ್ಲ. ರಾಜಕಾರಣಿಗಳು, ಪುಢಾರಿಗಳು ಇಂದು ಅಕಾರಕ್ಕೆ ಏರುತ್ತಾರೆ. ಐದು ವರ್ಷಗಳ ಬಳಿಕ ಮತ್ತೆ ಅಕಾರದಿಂದ ಇಳಿಯುತ್ತಾರೆ. ಆಮೇಲೆ ಅವರನ್ನು ಮೂಸುವವರೇ ಇರುವುದಿಲ್ಲ. ಸರ್ಕಾರಿ ಅಕಾರಿಗಳು ಮಾತ್ರ ಹಾಗಲ್ಲ. ನಿವೃತ್ತಿಯ ತನಕವೂ ಅವರಿಗೆ ಸೇವೆ ಸಲ್ಲಿಸುವ ಅವಕಾಶವಿರುತ್ತದೆ. ವೃತ್ತಿಪರ ಬದುಕನ್ನು ನಿಷ್ಕಲ್ಮಶವಾಗಿ ಇಟ್ಟುಕೊಂಡರೆ, ಕಪ್ಪು ಚುಕ್ಕಿ ಅಂಟಿಸಿಕೊಳ್ಳದಿದ್ದರೆ ಅವರು ಯಾರಿಗೂ ತಲೆಬಾಗಬೇಕಾದ ಅಗತ್ಯವಿರುವುದಿಲ್ಲ. ಜತೆಗೆ ಮಾನಸಿಕ ಆರೋಗ್ಯವನ್ನು ನೆಟ್ಟಗಿಟ್ಟುಕೊಂಡರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಅಗತ್ಯವೂ ಬರುವುದಿಲ್ಲ. ಹಿರಿಯ ಸಾಹಿತಿ ಡಿವಿಜಿಯವರ ‘ಮಂಕುತಿಮ್ಮನ ಕಗ್ಗ’ದಲ್ಲಿ ಇಂಥವರಿಗಾಗಿಯೇ ಒಂದು ಕಗ್ಗವಿದೆ :
ಹೋರಾಡು ಬೀಳ್ವನ್ನಮೊಬ್ಬಂಟಿಯಾದೊಡಂ|
ರಪಥವನೆ ಬೆದಕು ಸಕಲಸಮಯದೊಳಂ||
ದೂರದಲಿ ಗೊಣಗುತ್ತ ಬಾಳ್ವ ಬಾಳ್ಗೇನು ಬೆಲೆ?
ಹೋರಿ ಸತ್ತ್ವವ ಮೆರಸು – ಮಂಕುತಿಮ್ಮ ||
(ನೀನು ಒಬ್ಬನೇ ಕೆಳಕ್ಕೆ ಬಿದ್ದರೂ ಕಾದಾಡು. ಯಾವಾಗಲೂ ಧೈರ್ಯಶಾಲಿಯ ಮಾರ್ಗವನ್ನೇ ಹುಡುಕು. ಎಲ್ಲಿಯೋ ದೂರದಲ್ಲಿ ಗೊಣಗುತ್ತ ಬಾಳುವ ಬಾಳಿಗೆ ಏನೂ ಬೆಲೆ ಇಲ್ಲ. ಕಾದಾಡಿ ನಿನ್ನ ಶಕ್ತಿಯನ್ನು ಪ್ರದರ್ಶಿಸು)
ಎಂತಹದೇ ಸಮಸ್ಯೆ ಬರಲಿ, ಅದಕ್ಕೆ ಆತ್ಮಹತ್ಯೆ ಖಂಡಿತ ಅಂತಿಮ ಪರಿಹಾರವಲ್ಲ. ನಾವು ಸತ್ತುಹೋದರೆ ಎಲ್ಲಾ ಸಮಸ್ಯೆಗಳೂ ಅಲ್ಲಿಗೇ ಮುಗಿದುಹೋಗುವುದಿಲ್ಲ. ನಮ್ಮ ಸಾವಿನಿಂದ ಆ ಸಮಸ್ಯೆಗಳು ಇನ್ನಷ್ಟು ಉಲ್ಬಣಿಸಬಹುದು. ಬೇರೆಯವರಿಗೆ ಅವು ಸಮಸ್ಯೆಗಳಾಗಿ ಕಾಡಲೂಬಹುದು. ಹಾಗಾಗಬೇಕೆ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.