ಪಾಕಿಸ್ಥಾನ ವಿರುದ್ಧದ ಹೋರಾಟದಲ್ಲಿ ಭಾರತಾಂಬೆಗಾಗಿ ಅಪ್ರತಿಮ ತ್ಯಾಗವನ್ನು ಮಾಡಿ ಭಾರತೀಯರ ಹೃದಯದಲ್ಲಿ ಅಮರಾಮರರಾಗಿರುವವರು ಕ್ಯಾಪ್ಟನ್ ವಿಕ್ರಮ್ ಬಾತ್ರಾ. ಶೇರ್ ಷಾ ಎಂದು ಅವರನ್ನು ಹೆಮ್ಮೆಯಿಂದ ಕರೆಯಲಾಗುತ್ತದೆ. ಅವರು ಸೆಪ್ಟೆಂಬರ್ 9, 1974 ರಂದು ಭಾರತದ ಹಿಮಾಚಲ ಪ್ರದೇಶದ ಪಾಲಂಪುರದಲ್ಲಿ ಜನಿಸಿದರು. ಅವರು ಸರ್ಕಾರಿ ಶಾಲೆಯ ಪ್ರಾಂಶುಪಾಲರಾದ ಗಿರ್ಧಾರಿ ಲಾಲ್ ಬಾತ್ರಾ ಮತ್ತು ಶಾಲಾ ಶಿಕ್ಷಕ ಕಮಲ್ ಕಾಂತ ಬಾತ್ರಾ ಅವರ ಮೂರನೇ ಮಗು ಆಗಿ ಜನಿಸಿದರು. 199ರ ಕಾರ್ಗಿಲ್ ಯುದ್ಧದಲ್ಲಿ ಅವರು ಶತ್ರುಗಳನ್ನು ಚೆಂಡಾಡಿ ತಾಯಿ ಭಾರತಿಗಾಗಿ ಅಪ್ರತಿಮ ಬಲಿದಾನಗೈದರು. ಮರಣೋತ್ತರ ಪರಮ ವೀರ ಚಕ್ರ ಪ್ರಶಸ್ತಿಯಿಂದ ಅವರು ಗೌರವಿಸಲ್ಪಟ್ಟಿದ್ದಾರೆ.
ಕಾರ್ಗಿಲ್ ಯುದ್ಧದಲ್ಲಿ ತೊಲೊಲಿಂಗ್ ವಿಮೋಚನೆ ಮಾಡಿದ ನಂತರ ಮುಂದಿದ್ದ ಇನ್ನೊಂದು ದೊಡ್ಡ ಜವಾಬ್ದಾರಿ ಪಾಯಿಂಟ್ 5140 ಶಿಖರ ವಶಪಡಿಸಿಕೊಳ್ಳುವುದು. ಈ ಕಾರ್ಯಾಚರಣೆಯ ಹೊಣೆ ನೀಡಿದ್ದು ಕ್ಯಾಪ್ಟನ್ ವಿಕ್ರಮ್ ಬಾತ್ರಾಗೆ. ಜೂನ್ 20 ರ ರಾತ್ರಿ ಕಾರ್ಯಾಚರಣೆ ಆರಂಭ. ಬೆಟ್ಟ ಹತ್ತುತ್ತಿದ್ದಂತೆ ಹದಿನಾರು ಸಾವಿರ ಎತ್ತರದಿಂದ ವೈರಿಯ ಸಂದೇಶ ಕೇಳಿ ಬಂತು: “ಶೆರ್ ಷಾ! ಊಪರ್ ಆಗಯೆ ಹೊ, ಅಬ್ ವಾಪಸ್ ನಹಿ ಜಾ ಸಕೋಗೆ” (ಶೇರ್ ಷಾ ಮೇಲೆ ಬಂದಿದ್ಯಾ,ಇನ್ನು ಕೆಳಗೆ ಹೋಗಲಾರೆ) ಎಂದು. ಶೇರ್ ಷಾ ಅದಕ್ಕೆ ಕೆಚ್ಚಿನ ಉತ್ತರ ನೀಡಿದ ” ಎಕ್ ಘಂಟೆ ಮೇ ದೆಖ್ತೆ ಹೈ ಕೌನ್ ಊಪರ್ ರಹೆಗ (ಇನ್ನೊಂದು ಘಂಟೆಯಲ್ಲಿ ನೋಡೋಣ ಯಾರು ಮೇಲಿರುತ್ತಾರೆ ಅಂತಾ)
ಅಷ್ಟೊತ್ತಿಗೆ ರಾತ್ರಿ 3.30 ರ ವೇಳೆಗೆ, ಕ್ಯಾಪ್ಟನ್ ಬಾತ್ರ ಮತ್ತು ಅವರ ಸಂಗಡಿಗರು ಶಿಖರ ಏರಿದ್ದರು. ಎದುರಲಿದ್ದ ಬಂಕರ್ ಸ್ಪೋಟಗೊಂಡಿತು. ಶಿಖರ ತಲುಪಿದ ಕೂಡಲೇ ವಿಕ್ರಮ್ ಹೇಳಿದ್ದೇನು ಗೊತ್ತೇ? ಪೆಪ್ಸಿ ಕಂಪೆನಿಯ “ಯೇ ದಿಲ್ ಮಾಂಗೇ ಮೋರ್” ಈ ಹೃದಯ ಇನ್ನಷ್ಟು ಬಯಸುತ್ತದೆ ಎಂದು. ಆ ದಿನ ಟಿವಿಯಲ್ಲಿ ಅವರದ್ದೇ ಸುದ್ದಿ. ಅವರ ಸಂದರ್ಶನ ಮನೆ ಮಾತಾಗಿ ಹೋಯಿತು. ಕ್ಯಾಪ್ಟನ್ ಬಾತ್ರಾ ದೇಶದ ಹೀರೋ ಆಗಿ ಎಲ್ಲೆಡೆ ಮಿಂಚಿದರು.
ಭಾರತಕ್ಕೆ ಮತ್ತೊಂದು ಮಹತ್ತರ ಕಾರ್ಯ ಕಣ್ಣೆದುರಿತ್ತು. ಅದು ಅದು ದ್ರಾಸ್ ಪ್ರದೇಶದ ಗುಡ್ಡಗಳನ್ನು ಮುಕ್ತಗೊಳಿಸುವುದು. ಮಂಜು ಮುಸುಕಿರುವ ವಾತಾವರ್ಣದಲ್ಲಿ ಕಡಿದಾದ ಶಿಖರವನ್ನೇರುವುದು ಸಾಮಾನ್ಯದ ಮಾತಲ್ಲ. ಶೇರ್ ಷಾ ಏರಲಿದ್ದಾನೆ ಎಂಬ ಮಾತು ಶತ್ರುಗಳಿಗೂ ತಿಳಿಯಿತು.
ಜುಲೈ 7ರ ರಾತ್ರಿ ವಿಕ್ರಮ್ ಮತ್ತು ಇನ್ನೊಬ್ಬ ಯುವ ಸೇನಾಧಿಕಾರಿ ಅನುಜ್ ನಾಯರ್ ಶತ್ರುಗಳ ಮೇಲೆ ದಾಳಿ ಆರಂಭಿಸಿದರು. ಶಿಖರದ ಪ್ರತಿ ಹಂತದಲ್ಲಿಯೂ ಇದ್ದ ಶತ್ರುಗಳ ಬಂಕರ್ಗಳನ್ನು ನಾಶ ಪಡಿಸುತ್ತಲೇ ಸಾಗಿದರು.
ಅಂತಿಮ ವಿಜಯ ಇನ್ನೇನು ಬಂತು ಅನ್ನುವಷ್ಟರಲ್ಲಿ, ಶತ್ರುಗಳ ಸ್ಪೋಟದಲ್ಲಿ ಅನುಜ್ ಕಾಲುಗಳು ತೀವ್ರ ಗಾಯಗೊಂಡವು. ಆತನನ್ನು ಎತ್ತಿಕೊಂಡು ಬರುವೆ ಎಂದು ಸುಬೇದಾರ್ ಒಬ್ಬರು ಹೇಳಿದರೂ ವಿಕ್ರಮ್ ಕೇಳಲಿಲ್ಲ. ಸ್ವತಃ ಆತನೇ ಅನುಜ್ನನ್ನು ತನ್ನ ಹೆಗಲ ಮೇಲೆ ಹೊತ್ತು ಮುಂದೆ ಸಾಗಿದ. ಎದುರಿನಿಂದ ಬಂದ ಗುಂಡೊಂದು ಎದೆಯನ್ನೇ ಹೊಕ್ಕಿತು. ಇನ್ನೊಂದು ಗುಂಡು ಸೊಂಟವನ್ನೇ ಸೀಳಿತು. ಆದರೂ ನೆಲಕ್ಕುರುಳುವ ಮುನ್ನ ಆತನ ಬಂದೂಕು ಐವರು ಭಯೋತ್ಪಾದಕರನ್ನು ಕೊಂದಿತು. ಬೆಳಕು ಹರಿಯುವಷ್ಟರಲ್ಲಿ ಶಿಖರವೇನೋ ನಮ್ಮ ಕೈವಶವಾಯಿತು. ಆದರೆ ವಿಕ್ರಮ್ ಮತ್ತು ಅನುಜ್ ಹುತಾತ್ಮರಾಗಿದ್ದರು. ಅವರ ಈ ಧೀರ ಸಾಹಸಕ್ಕೆ ಪರಮ ವೀರ ಚಕ್ರ ನೀಡಿ ಅವರ ತ್ಯಾಗ ಬಲಿದಾನವನ್ನು ಭಾರತ ಸರ್ಕಾರ ಗೌರವಿಸಿತು. ವಿಕ್ರಮ್ ಹೇಳಿದ ಮಾತು “Either i will come back after hoisting the tricolour or i will come back wrapped in it. But, i will be back for sure” ಎಂದ ಮಾತು ಅಕ್ಷರಶಃ ನಿಜವಾಯಿತು.
ಇಂದು ಕ್ಯಾಪ್ಟನ್ ವಿಕ್ರಮ್ ಬಾತ್ರ ಹುತಾತ್ಮರಾದ ದಿನ. ಅವರು ನೀಡಿದ ಸೇವೆ, ತೋರಿಸಿದ ಪರಾಕ್ರಮ, ಮಾಡಿದ ತ್ಯಾಗ ಪ್ರತಿ ದೇಶಭಕ್ತ ಭಾರತೀಯನ ಹೃದಯದಲ್ಲಿ ರಾಷ್ಟ್ರಭಕ್ತಿಯ ಕಿಚ್ಚು ಹೊತ್ತಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.