ಬೆಂಗಳೂರಿನ ಸಾರಕ್ಕಿ ಕೆರೆಯ ಹೆಸರನ್ನು ಬೆಂಗಳೂರಿನ ನಿವಾಸಿಗಳೇ ನೆಟ್ಟಗೆ ಕೇಳಿರಲಿಲ್ಲ. ಆದರೆ ಈಗ ಅವರಷ್ಟೇ ಅಲ್ಲ, ಇಡೀ ರಾಜ್ಯದ ಜನತೆಯ ಕಿವಿಗಳಿಗೆ ಆ ಹೆಸರು ತಲುಪಿದೆ. ಸಾರಕ್ಕಿ ಕೆರೆಯ ಹೆಸರು ಮಾತ್ರವಲ್ಲ, ಸಾರಕ್ಕಿ ಕೆರೆ ಒತ್ತುವರಿ ಜಾಗದಲ್ಲಿ ಮನೆ ಕಟ್ಟಿಕೊಂಡು ಈಗ ಬೀದಿಪಾಲಾಗಿರುವ ಅದೆಷ್ಟೋ ಅಮಾಯಕರ ಆಕ್ರಂದನ ಕೂಡ ರಾಜ್ಯದ ಜನತೆಯ ಕಿವಿಗಳಿಗೆ ಕೇಳಿಸಿದೆ. ಸಾರಕ್ಕಿ ಕೆರೆಯ ಏರಿಯ ಮೇಲೆ ತೆರಳುವಾಗ ಈಗ ಕೇಳಿಬರುತ್ತಿರುವುದು – ಮನೆ ಕಳೆದುಕೊಂಡ ಅಮಾಯಕರ ದೀರ್ಘ ನಿಟ್ಟುಸಿರು, ಹತಾಶೆಯ ಕೂಗು, ಮುಂದೇನು ಎಂಬ ಆರ್ತನಾದ.
ಕೆರೆ ಒತ್ತುವರಿ ಮಾಡಿ ಮನೆ ಕಟ್ಟಿಕೊಳ್ಳುವುದು ಖಂಡಿತ ನ್ಯಾಯಸಮ್ಮತವಲ್ಲ. ಅದು ಕಾನೂನುಬಾಹಿರ. ಆದರೆ ಈಗಿನ ಕಾರ್ಯಾಚರಣೆಯಿಂದ ಬೀದಿಗೆ ಬಿದ್ದಿರುವವರು ಖಂಡಿತ ಅಂತಹ ಕಾನೂನುಬಾಹಿರ ಕೃತ್ಯವೆಸಗಿಲ್ಲ. ಏಕೆಂದರೆ, ಇವರೆಲ್ಲ ಕೆರೆ ಒತ್ತುವರಿ ಮಾಡಿದ ಮೂಲ ಮಾಲೀಕರಿಂದ ನಿವೇಶನ ಪಡೆದು ಮನೆ ಕಟ್ಟಿಕೊಂಡಿರುವ ಅಮಾಯಕರು. ಹಲವಾರು ವರ್ಷಗಳಿಂದ ಬಿಬಿಎಂಪಿಗೆ ಕ್ರಮಬದ್ಧವಾಗಿ ತೆರಿಗೆ ಪಾವತಿಸಿದ್ದಾರೆ. ಮನೆ ಕಟ್ಟುವಾಗ ಬ್ಯಾಂಕಿನಿಂದ ಸಾಲ ಪಡೆದುಕೊಳ್ಳಲು, ವಿದ್ಯುತ್ ಸೌಲಭ್ಯ ಪಡೆಯುವುದಕ್ಕೆ ಸೂಕ್ತ ದಾಖಲೆ ಒದಗಿಸಿದ್ದಾರೆ. ಇಷ್ಟೆಲ್ಲ ಮಾಡಿರುವಾಗ, ಇದು ತಮ್ಮದೇ ಮನೆ ಎಂಬ ಹೆಮ್ಮೆ ಅವರಲ್ಲಿದ್ದುದು ಸಹಜ. ಆದರೆ ಇದಕ್ಕಿದ್ದಂತೆ ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸರು ಆಗಮಿಸಿ, ಜೆಸಿಬಿಗಳ ಮೂಲಕ ಮನೆಗಳನ್ನು ಹೇಳ ಹೆಸರಿಲ್ಲದಂತೆ ನೆಲಸಮ ಮಾಡಿದರೆ ಏನಾಗಬಹುದು? ಹತಾಶೆ, ನೋವು, ಆರ್ತನಾದ… ಇವಲ್ಲದೆ ಮತ್ತೇನು?
ಇದೀಗ ಒತ್ತುವರಿ ತೆರವಿಗೆ ಸಾಕ್ಷಿಯಾಗಿರುವ ಸಾರಕ್ಕಿ ಕೆರೆಯ ಮೂಲ ವಿಸ್ತೀರ್ಣ 82 ಎಕರೆ 24 ಗುಂಟೆ. ಹಲವು ವರ್ಷಗಳಿಂದ ಭೂಗಳ್ಳರು, ಅಧಿಕಾರಿಗಳು ಮತ್ತು ರಾಜಕಾರಣಿಗಳ ಅಪವಿತ್ರ ಮೈತ್ರಿಯ ನಡುವೆ ಸಿಲುಕಿ ಸವೆಯುತ್ತಾ ಬಂದ ಕೆರೆ ಈಗ ಉಳಿದಿದ್ದು ಅರ್ಧದಷ್ಟು ಭಾಗ ಮಾತ್ರ. ಕೆರೆ ಉಳಿವಿಗಾಗಿ ಜನಾಂದೋಲನ ನಡೆದದ್ದೂ ಇದೆ. 1993 ರಿಂದ ಇಲ್ಲಿಯ ತನಕ ನಾಲ್ಕು ಬಾರಿ ಸರ್ವೇಗೆ ಒಳಪಟ್ಟಿತ್ತು ಈ ಕೆರೆ. ಕೊನೆಗೆ 2014 ಆಗಸ್ಟ್ 5 ರಂದು ರಾಜ್ಯ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠ ಒತ್ತುವರಿ ತೆರವು ಕಾರ್ಯಾಚರಣೆಗೆ ಆದೇಶ ನೀಡಿತ್ತು. ಈ ಆದೇಶದ ಅನುಸಾರ ವಿಶೇಷ ಜಿಲ್ಲಾಧಿಕಾರಿ ಶಂಕರ್ ನೇತೃತ್ವ ತಂಡ ತರಾತುರಿಯಲ್ಲಿ ಒತ್ತುವರಿ ನೆಲಸಮ ಕಾರ್ಯ ನಡೆಸಿತು. ಕೋರ್ಟಿನ ಆದೇಶ ಪಾಲನೆಯಾಗಬೇಕಾದುದೇನೋ ಸರಿ. ಆದರೆ ಆದೇಶ ಪಾಲನೆಗೆ ಮುನ್ನ ಒಂದಿಷ್ಟು ವಿವೇಚನೆ, ಮಾನವೀಯ ಕಾಳಜಿ ಪ್ರದರ್ಶಿಸಿದ್ದರೆ ಅದು ನಿಜಕ್ಕೂ ಶ್ಲಾಘನೆಗೆ ಅರ್ಹವಾಗುತ್ತಿತ್ತು. ಸಾರಕ್ಕಿ ಕೆರೆ ಪ್ರದೇಶದಲ್ಲಿ 30-40 ವರ್ಷಗಳಿಂದ ವಾಸವಾಗಿರುವವರು ಇದ್ದರು ಅವರ ಬಳಿ ಮನೆಗೆ ಸಂಬಂಧಿಸಿದ ಎಲ್ಲ ಅಧಿಕೃತ ದಾಖಲೆಗಳು ಇದ್ದರೂ ಅವರ ಮನೆಗಳನ್ನು ಕೆಡವಿ ಹಾಕಲಾಗಿದೆ. ನಿಜವಾಗಿ ಕೋರ್ಟ್ ಹಾಗೂ ಸರ್ಕಾರ ಮಾಡಬೇಕಾಗಿದ್ದುದು ಈಗಿರುವ ಮನೆಗಳನ್ನಷ್ಟೇ ಕೆಡವಿ ಹಾಕುವುದಲ್ಲ, ಬದಲಿಗೆ ಕೆರೆ ಒತ್ತುವರಿ ಮಾಡಿ, ಆ ಜಾಗ ಮಾರಿದ ಮೂಲ ಮಾಲೀಕರು ಯಾರೆಂಬುದನ್ನು ಪತ್ತೆ ಹಚ್ಚಬೇಕಾಗಿತ್ತು. ಅಂಥವರನ್ನು ಬಂಧಿಸಿ, ವಿಚಾರಣೆ ನಡೆಸಬೇಕಾಗಿತ್ತು. ಈಗ ಮನೆ ಕಳೆದುಕೊಂಡಿರುವವರು ನಿಜವಾಗಿ ಕೆರೆ ಒತ್ತುವರಿ ಮಾಡಿದವರಲ್ಲ. ಒತ್ತುವರಿ ಮಾಡಿದವರೇ ಬೇರೆ. ಈಗ ವಾಸವಾಗಿರುವವರೇ ಬೇರೆ. ನಿಜವಾಗಿಯೂ ಶಿಕ್ಷೆಯಾಗಬೇಕಾದುದು ಒತ್ತುವರಿ ಮಾಡಿದ್ದ ಮೂಲ ಮಾಲೀಕರಿಗೆ. ಈಗಾಗುತ್ತಿರುವುದು ಮಾತ್ರ ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆ!
ತಮಾಷೆಯೆಂದರೆ ಕೆರೆ ಒತ್ತುವರಿ ಜಾಗದಲ್ಲಿ ದೊಡ್ಡ ದೊಡ್ಡ ಹಲವಾರು ಅಂತಸ್ತುಗಳ ಕಟ್ಟಡ ಕಟ್ಟಿದ ಶ್ರೀಮಂತರು ಕಂಗಾಲಾಗಿಲ್ಲ. ಅವರೆಲ್ಲ ತಕ್ಷಣ ಅದೇ ಹೈಕೋರ್ಟಿಗೆ ಎಡತಾಕಿ ತಡೆಯಾಜ್ಞೆ ತಂದು ತಮ್ಮ ಕಟ್ಟಡ ಉಳಿಸಿಕೊಂಡಿದ್ದಾರೆ. ಹಾಗೆ ಮಾಡಲು ಅವರು ಸಾಕಷ್ಟು ಹಣ ಖರ್ಚು ಮಾಡಿದ್ದಾರೆ ಎನ್ನವುದು ರಹಸ್ಯವಲ್ಲ. ಆದರೆ ಖರ್ಚು ಮಾಡಲು ಅಷ್ಟೊಂದು ಹಣವೇ ಇಲ್ಲದ ಬಡವರು ಹಾಗೂ ಮಧ್ಯಮ ವರ್ಗದವರ ಕಟ್ಟಡಗಳು ಸಂಪೂರ್ಣ ನೆಲಸಮಗೊಂಡಿವೆ. ಇಲ್ಲಿ ಒಂದು ಪ್ರಶ್ನೆಗೆ ಮಾತ್ರ ಸೂಕ್ತ ಉತ್ತರ ದೊರಕುತ್ತಿಲ್ಲ. ಕೆರೆ ಒತ್ತುವರಿ ಮಾಡಿ, ಅಕ್ರಮವಾಗಿ ಕಟ್ಟಿದ ಮನೆಗಳನ್ನು ನೆಲಸಮಗೊಳಿಸಲು ಆದೇಶ ನೀಡಿದ್ದು ಹೈಕೋರ್ಟ್. ಈಗ ಶ್ರೀಮಂತರಿಗೆ ಸೇರಿದ ಕೆಲವು ಕಟ್ಟಡಗಳನ್ನು ಉರುಳಿಸದಂತೆ ತಡೆಯಾಜ್ಞೆ ನೀಡಿರುವುದು ಕೂಡ ಅದೇ ಹೈಕೋರ್ಟ್. ಒತ್ತುವರಿ ಕಟ್ಟಡಗಳ ನಿರ್ನಾಮಕ್ಕೆ ಆದೇಶ ನೀಡಿದ ಬಳಿಕ ಅದು ಪಾಲನೆಯಾಗಬೇಕಲ್ಲವೆ? ಈಗ ಕೋರ್ಟೇ ತಡೆಯಾಜ್ಞೆ ತಂದಿರುವುದು ತನ್ನದೇ ಆದೇಶದ ಪಾಲನೆಗೆ ತಾನೇ ಅಡ್ಡಿಪಡಿಸಿದಂತಾಗಲಿಲ್ಲವೆ? ಇದೊಂದು ನ್ಯಾಯಾಂಗಕ್ಕೆ ಸಂಬಂಧಿಸಿದ ಬಲು ಸೂಕ್ಷ್ಮ ವಿಚಾರ. ಹಣವಿದ್ದವರು ತಡೆಯಾಜ್ಞೆ ತರುತ್ತಾರೆ. ತಮ್ಮ ಮನೆ, ಕಟ್ಟಡ ಉಳಿಸಿಕೊಳ್ಳುತ್ತಾರೆ. ಹಣವಿಲ್ಲದವರು ಮಾತ್ರ ಅಸಹಾಯಕರಾಗಿ ಮನೆ ಕಳೆದುಕೊಂಡು ಬೀದಿಗೆ ಬೀಳುತ್ತಾರೆ. ನ್ಯಾಯದಾನದ ಈ ಪರಿ ಎಂತಹ ವಿಚಿತ್ರ! ಪ್ರಜೆಗಳ ರಕ್ಷಣೆ ಮಾಡಬೇಕಾದ ಪ್ರಜಾತಂತ್ರ ವ್ಯವಸ್ಥೆ ಹೇಗೆ ಕೈ ಕಾಲು ಮುರಿದುಕೊಂಡು ಅಸಹಾಯಕವಾಗಿ ಬಿದ್ದಿದೆ ಎಂಬುದು ಇದರಿಂದ ವೇದ್ಯವಾಗುವುದಿಲ್ಲವೆ?
ಕಾರ್ಯಾಚರಣೆ ಪ್ರಾರಂಭವಾಗುವ ಮೊದಲೇ ಅಲ್ಲಿರುವ ಎಲ್ಲ ಕಟ್ಟಡಗಳನ್ನು ಸರ್ವೇ ಮಾಡಿ, ಯಾರು ಒತ್ತುವರಿಗೆ ನೇರ ಕಾರಣ, ಯಾರು ಇನ್ನೊಬ್ಬರ ಮೋಸಕ್ಕೆ ಬಲಿಯಾಗಿದ್ದಾರೆ ಎಂಬುದನ್ನು ದಾಖಲಿಸಬೇಕಿತ್ತು. ಮೊದಲು ಮೂಲ ಒತ್ತುವರಿದಾರರನ್ನು ಗುರುತಿಸಿ, ಅವರ ಮೇಲೆ ಎಫ್ಐಆರ್ ದಾಖಲಿಸಬೇಕಿತ್ತು. ಅನಂತರ ಮನೆ ಕಳೆದುಕೊಳ್ಳುವವರಿಗೆ ಎಲ್ಲಿ ಯಾವ ಬಗೆಯ ಪುನರ್ವಸತಿ ಕಲ್ಪಿಸಲಾಗುತ್ತದೆ ಎಂಬುದನ್ನು ನಿರ್ಧರಿಸಿ ತೆರವು ಕಾರ್ಯಾಚರಣೆ ಪ್ರಾರಂಭಿಸಬೇಕಾಗಿತ್ತು. ಆದರೆ ಇಂತಹ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ, ದಿಢೀರನೆ ಬಡ ಹಾಗೂ ಮಧ್ಯಮ ವರ್ಗದವರ ಮನೆಗಳನ್ನು ಕೆಡವಿ ಹಾಕಿ ಅವರನ್ನು ಬೀದಿಪಾಲು ಮಾಡಿದ್ದು ಯಾವ ನ್ಯಾಯ? ಒತ್ತುವರಿ ಪ್ರದೇಶದಲ್ಲಿ ಮನೆ ಕಟ್ಟಿಕೊಳ್ಳಲು ಸೂಕ್ತ ದಾಖಲೆಗಳನ್ನು ಒದಗಿಸಿದವರು ಇದೇ ಕಂದಾಯ ಇಲಾಖೆಯವರಲ್ಲವೆ? ಅಧಿಕಾರಿಗಳ ‘ಕೃಪೆ’ ಇಲ್ಲದೇ ಮನೆಗಳನ್ನು ಕಟ್ಟಲು ಬೆಂಗಳೂರೆಂಬ ಬೆಂಗಳೂರಿನಲ್ಲಿ ಸಾಧ್ಯವೆ? ಹೀಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನೀಡಿದ ಆ ಅಧಿಕಾರಿಗಳಿಗೆ ಶಿಕ್ಷೆಯಾಗುವುದು ಬೇಡವೆ? ಇಂತಹ ಹಲವು ಜ್ವಲಂತ ಪ್ರಶ್ನೆಗಳು ಈಗ ಅವಶೇಷಗಳ ಅಡಿಯಲ್ಲಿ ಹೂತುಹೋಗಿವೆ.
ಇವತ್ತು ಸಿಲಿಕಾನ್ಸಿಟಿ ಎಂದೆನಿಸಿಕೊಂಡಿರುವ ಬೆಂಗಳೂರು ಬಹಳ ಹಿಂದೆ ಕೆರೆ ಕುಂಟೆಗಳ ಊರು ಆಗಿತ್ತು. ಕೆಂಪೇಗೌಡರ ಕಾಲದಲ್ಲೇ ಸುಮಾರು 300 ಕೆರೆಗಳಿದ್ದವೆಂದು ಇತಿಹಾಸ ಹೇಳುತ್ತದೆ. ಕಾಲಾನುಕ್ರಮದಲ್ಲಿ ಹಲವಾರು ಕೆರೆಗಳು ಕಣ್ಮರೆಯಾದವು. ಈ ಕಣ್ಮರೆಗೆ ಕರಾಳ ಇತಿಹಾಸ ಇದೆ. ವಿವಿಧ ಕಾರಣಗಳಿಗಾಗಿ ಕೆರೆ ಒತ್ತುವರಿ 1970 ರ ದಶಕಕ್ಕಿಂತಲೂ ಮುಂಚಿನಿಂದ ನಡೆಯುತ್ತಲೇ ಇದೆ. ಕೆರೆ ಕಬಳಿಸಿದ್ದು ಯಾರೋ ಕೆಲವು ರಿಯಲ್ಎಸ್ಟೇಟ್ ಕುಳಗಳಷ್ಟೇ ಅಲ್ಲ , ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು, ರಾಜಕಾರಣಿಗಳು… ಹೀಗೆ ಎಲ್ಲರೂ ಖಳನಾಯಕರೇ. ಸ್ವತಃ ಸರ್ಕಾರ ಕೂಡ ಕೆರೆಗಳನ್ನು ಕಬಳಿಸಿದೆ. ಆದರೆ ಈಗ ಸಿಕ್ಕಿಬೀಳುತ್ತಿರುವವರು ಮಾತ್ರ ದಾಖಲೆ ತಿದ್ದುಪಡಿಯ ಗೋಲ್ಮಾಲ್ ಅರಿಯದ ಅಮಾಯಕ ಜೀವಿಗಳು.
30 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಇದ್ದದ್ದು ಸುಮಾರು 50 ಕೆರೆಗಳು. ಈಗ ಉಳಿದಿರುವುದು ಕೆಲವೇ ಕೆಲವು ಬೆರಳೆಣಿಕೆಯ ಕೆರೆಗಳು. ಹಲಸೂರು ಕೆರೆ, ಹೆಬ್ಬಾಳ ಕೆರೆ, ಸ್ಯಾಂಕಿ ಕೆರೆ… ಕೆಲವನ್ನು ಮಾತ್ರ ಈಗ ಹೆಸರಿಸಬಹುದು. ಬಹಳ ಹಿಂದೆ ಇದ್ದ ಸಂಪಿಗೆ ಕೆರೆ ಈಗ ಕಂಠೀರವ ಕ್ರೀಡಾಂಗಣವಾಗಿ ಮಾರ್ಪಟ್ಟಿದೆ. ಧರ್ಮಾಂಬುಧಿ ಕೆರೆ ಸುಭಾಷ್ನಗರವಾಗಿ, ಅನಂತರ ಕೆಂಪೇಗೌಡ ಬಸ್ನಿಲ್ದಾಣವಾಗಿ ಮಾರ್ಪಟ್ಟು ಎಷ್ಟೋ ಕಾಲವಾಗಿದೆ. ಚೆಲ್ಲಘಟ್ಟ ಕೆರೆ ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ಆಗಿದೆ. ಕೋರಮಂಗಲ ಕೆರೆಯಲ್ಲಿ ನ್ಯಾಷನಲ್ ಗೇಮ್ಸ್ ಕಾಂಪ್ಲೆಕ್ಸ್ ಎದ್ದು ನಿಂತಿದೆ. ಅಕ್ಕಿತಿಮ್ಮನಹಳ್ಳಿ ಕೆರೆ ಹಾಕಿ ಸ್ಟೇಡಿಯಂ ಆಗಿದೆ. ಇನ್ನು ಕಾಡುಗೊಂಡನ ಕೆರೆ ಅಂಬೇಡ್ಕರ್ ಮೆಡಿಕಲ್ ಕಾಲೇಜಿಗೆ ಅವಕಾಶ ನೀಡಿದೆ. ಮಿಲ್ಲರ್ ಕೆರೆಯಲ್ಲಿ ಗುರುನಾನಾಕ್ ಭವನ ರಾರಾಜಿಸಿದೆ. ದೊಮ್ಮಲೂರು ಕೆರೆ, ಹೆಣ್ಣೂರು ಕೆರೆಗಳನ್ನು ಬಿಡಿಎ ವಶಪಡಿಸಿಕೊಂಡು ಅಲ್ಲಿ ಬಡಾವಣೆಗಳನ್ನು ನಿರ್ಮಿಸಿದೆ. ಕುರುಬರಹಳ್ಳಿ ಕೆರೆ, ಕೋಡಿಹಳ್ಳಿ ಕೆರೆ, ಮಾರೇನಹಳ್ಳಿ ಕೆರೆ, ಸಿನಿವೈಗಲು ಕೆರೆ, ಸುಭಾಷ್ನಗರ ಕೆರೆಗಳಲ್ಲಿ ಖಾಸಗಿ ಬಡಾವಣೆಗಳು ತಲೆಯೆತ್ತಿ ನಿಂತಿವೆ. ನಾಗಶೆಟ್ಟಿಹಳ್ಳಿ ಕೆರೆಯಂತೂ ಬಾಹ್ಯಾಕಾಶ ಇಲಾಖೆಗೆ ಆಶ್ರಯ ನೀಡಿದೆ. ಈಗ ಪ್ರತಿಷ್ಠಿತರ ಬಡಾವಣೆ ಎನಿಸಿಕೊಂಡಿರುವ ಬಸವನಗುಡಿ ಎದ್ದು ನಿಂತಿರುವುದೇ ಬೆಂಗಳೂರಿಗೆ ದೊಡ್ಡ ಕೆರೆ ಎನಿಸಿಕೊಂಡ ಕಾರಂಜಿ ಕೆರೆಯ ಅಂಗಳದ ಮೇಲೆ. ಹೀಗೆ ಖಾಸಗಿಯವರಷ್ಟೇ ಅಲ್ಲ, ಸರ್ಕಾರ ಕೂಡ ಕೆರೆಗಳನ್ನು ಒತ್ತುವರಿ ಮಾಡಿ ತನಗೆ ಬೇಕಾದಂತೆ ಅಲ್ಲಿ ಬಡಾವಣೆ ನಿರ್ಮಿಸಿರುವುದು ಈಗ ಇತಿಹಾಸ.
ಸರ್ಕಾರಿ ಅಧಿಕಾರಿಗಳು ಮತ್ತು ಭೂಗಳ್ಳರ ನಡುವಿನ ಅನೈತಿಕ, ಅಪವಿತ್ರ ಮೈತ್ರಿಯ ಪರಿಣಾಮವೇ ಒತ್ತುವರಿ ಎಂಬ ಕರಾಳ ವಿದ್ಯಮಾನ. ಇದೊಂದು ದೊಡ್ಡ ಮಾಫಿಯಾ. ಕಾಯ್ದೆಯ ಅಸ್ತ್ರ ಕೂಡ ಇದನ್ನು ಮಟ್ಟ ಹಾಕಲು ಸಾಧ್ಯವಾಗದಷ್ಟು ಮಟ್ಟಿಗೆ ಭಯಾನಕ ಸ್ವರೂಪ ತಳೆದಿದೆ. ನಿವೃತ್ತ ಐಎಎಸ್ ಅಧಿಕಾರಿ ಬಾಲಸುಬ್ರಮಣಿಯನ್ ಸಮಿತಿ ವರದಿ ಪ್ರಕಾರ, ಬೆಂಗಳೂರು ಒಂದರಲ್ಲೇ 1.03 ಲಕ್ಷ ಕೋಟಿ ರೂ. ಮೌಲ್ಯದ 41,303 ಎಕರೆ ಭೂಮಿ ಒತ್ತುವರಿಯಾಗಿದೆ. ಇಡೀ ರಾಜ್ಯದಲ್ಲಿ ಒಟ್ಟು ಒತ್ತುವರಿಯಾದ ಭೂಮಿ 11.07 ಲಕ್ಷ ಎಕರೆ. ಇದರಲ್ಲಿ ಇದುವರೆಗೆ ತೆರವುಗೊಳಿಸಲಾಗಿದ್ದು ಕೇವಲ 10 ಸಾವಿರ ಎಕರೆ ಮಾತ್ರ. ಸರ್ಕಾರವೇ ಹೈಕೋರ್ಟ್ಗೆ ಹೀಗೆಂದು ಪ್ರಮಾಣಪತ್ರ ಸಲ್ಲಿಸಿದೆ.
ರಾಜಧಾನಿ ಬೆಂಗಳೂರಿನ ಜನಸಂಖ್ಯೆ 1 ಕೋಟಿಗೆ ತಲುಪಿದೆ. ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಆದರೆ 30 ವರ್ಷಗಳ ಹಿಂದಿದ್ದ 50 ಕೆರೆಗಳನ್ನಾದರೂ ಉಳಿಸಿಕೊಂಡಿದ್ದರೆ ಈಗ ಕುಡಿಯುವ ನೀರಿಗೆ ತತ್ವಾರ ಉಂಟಾಗುತ್ತಿರಲಿಲ್ಲ. ಬೆಂಗಳೂರಿನ ಉಷ್ಣಾಂಶ 30 ಡಿಗ್ರಿಗಿಂತ ಹೆಚ್ಚು ಏರುತ್ತಿರಲಿಲ್ಲ. ಈಗ ಇವನ್ನೆಲ್ಲ ನೆನಪಿಸಿಕೊಂಡು ಪ್ರಯೋಜನವಿಲ್ಲ. ಬೆಂಗಳೂರಿನ ಇಂದಿನ ಈ ದುಸ್ಥಿತಿಗೆ ಭೂಗಳ್ಳರ, ಅಧಿಕಾರಿಗಳ, ರಾಜಕಾರಣಿಗಳ ಸ್ವಯಂಕೃತಾಪರಾಧವೇ ಕಾರಣ. ಜತೆಗೆ ವಿವೇಚನಾರಹಿತ, ಸ್ವಾರ್ಥಿ, ಕೆಟ್ಟ ಆಡಳಿತ ವ್ಯವಸ್ಥೆ ಇನ್ನೊಂದು ಕಾರಣ. ಕೆಟ್ಟು ಕೆರಹಿಡಿದು ಹೋದ ಬೆಂಗಳೂರನ್ನು ಈಗ ರಿಪೇರಿ ಮಾಡಲು ಹೊರಟರೆ ಅದು ಸರಿಯಾಗಲು ಸಾಧ್ಯವೆ? ಸಾರಕ್ಕಿ ಕೆರೆ ಒತ್ತುವರಿ ತೆರವು ಮಾಡಿದರೆ, ಮುಂದೆ ಹೊಸಕೆರೆ ಹಳ್ಳಿ ಕೆರೆ, ಇಟ್ಟಮಡುಕೆರೆ ಒತ್ತುವರಿ ತೆರವು ಅರ್ಧಂಬರ್ಧ ಮಾಡಿಬಿಟ್ಟರೆ ಬೆಂಗಳೂರು ಮತ್ತೆ ಕೆಂಪೇಗೌಡರ ಸಮೃದ್ಧಿಯ ಕಾಲಕ್ಕೆ ಮರಳಬಹುದೆಂಬ ಭ್ರಮೆ ಏಕೆ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.