ನಿಹಾರಿಕಾ ಜಡೇಜಾ ಮತ್ತು ಅಮತುಲ್ಲಾಹ ವಹನ್ವಾಲಾ ಕ್ಯಾನ್ಸರ್ ಪೀಡಿತ ಮಕ್ಕಳ ಮೊಗದಲ್ಲಿ ನಗುವನ್ನು ಅರಳಿಸುವ ಕಾಯಕದಲ್ಲಿ ಮಗ್ನರಾಗಿದ್ದಾರೆ. ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಮತ್ತು ಅದ್ಭುತವಾದುದು.
ಪ್ರತಿದಿನ 43 ಮಕ್ಕಳು ಕ್ಯಾನ್ಸರ್ ಚಿಕಿತ್ಸೆಗೊಳಪಡುತ್ತಾರೆ. ಪ್ರತಿವರ್ಷ 15,700 ಪೋಷಕರ ಕಿವಿಗಳಲ್ಲಿ ’ನಿಮ್ಮ ಮಗುವಿಗೆ ಕ್ಯಾನ್ಸರ್ ಇದೆ’ ಎಂಬ ಮಾತನ್ನು ವೈದ್ಯರು ಹಾಕುತ್ತಾರೆ. ಆಗಲೇ ಆ ಪೋಷಕರ, ಮಕ್ಕಳ ಬದುಕು ಕತ್ತಲ ಕೂಪಕ್ಕೆ ತಳ್ಳಲ್ಪಡುತ್ತದೆ. ಆರೋಗ್ಯ, ಸ್ನೇಹಿತರು, ಹಣ, ಶಾಲೆ ಹೀಗೆ ಒಂದೊಂದನ್ನೇ ಇವರು ಕಳೆದುಕೊಳ್ಳುತ್ತಾರೆ.
ಕಿಮೋಥೆರಪಿ, ಆಸ್ಪತ್ರೆ ಬಿಲ್, ತನ್ನ ಮಗುವಿನ ಕಮರುತ್ತಿರುವ ಶಿಕ್ಷಣ, ಕೃಷ ದೇಹ, ಬೋಳು ತಲೆ ಇವೆಲ್ಲವೂ ಹೆತ್ತವರನ್ನು ಜೀವಂತ ಸಮಾಧಿ ಮಾಡುತ್ತದೆ. ಬೋಳು ತಲೆ ಮಗುವಿನ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಶಾಲೆಗೆ ಹೋದರೆ ಇತರ ಮಕ್ಕಳು ವ್ಯಂಗ್ಯ ಮಾಡುತ್ತಾರೆ, ನಾನು ಕುರೂಪ ತರಹ ಕಾಣುತ್ತೇನೆ ಎಂಬಿತ್ಯಾದಿ ಭಯ ಕ್ಯಾನ್ಸರ್ ಪೀಡಿತ ಮಕ್ಕಳನ್ನು ಬಾಧಿಸುತ್ತದೆ. ಅವರ ಅರ್ಧ ಸಂತೋಷ ಇದರಿಂದಲೇ ಬತ್ತಿ ಹೋಗುತ್ತದೆ.
ಇಂತಹ ಮಕ್ಕಳ ಮೊಗದಲ್ಲಿ ಮತ್ತೆ ಸಂತೋಷವನ್ನು ತರಲೇ ಬೇಕು ಎಂಬ ಹಠಕ್ಕೆ ಬಿದ್ದ ನಿಹಾರಿಕಾ ಹಾಗೂ ಅಮತುಲ್ಲಾಹ ಎಂಬ ಸ್ನೇಹಿತೆಯರು ’ಹೇರ್ ಫಾರ್ ಹ್ಯಾಪಿನೆಸ್’ ಎಂಬ ವಿನೂತನ ಅಭಿಯಾನ ಆರಂಭಿಸಿದರು. ತಲೆಕೂದಲನ್ನು ದಾನ ಮಾಡುವಂತೆ ಜನರನ್ನು ಪ್ರೇರೆಪಿಸುವುದೇ ಇವರ ಮುಖ್ಯ ಉದ್ದೇಶವಾಗಿತ್ತು.
ಈ ಅಭಿಯಾನದ ಮೂಲಕ ಸಂಗ್ರಹವಾದ ಕೂದಲನ್ನು ಇವರು ಯುಕೆಯ ಲಿಟಲ್ ಪ್ರಿನ್ಸ್ಸ್ ಟ್ರಸ್ಟ್ಗೆ ಕಳುಹಿಸಿಕೊಡುತ್ತಾರೆ. ಈ ಟ್ರಸ್ಟ್ ವಿಗ್ಗಳನ್ನು ತಯಾರಿಸಿ ಅದನ್ನು ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಉಚಿತವಾಗಿ ಹಂಚುತ್ತದೆ.
ಸಮುದಾಯಗಳಿಗೆ, ಶಾಲೆಗಳಿಗೆ, ಸಲೂನ್ಗಳಿಗೆ ತೆರಳಿ ಇವರು ಅಭಿಯಾನದ ಅರಿವು ಮೂಡಿಸುತ್ತಾರೆ. ಎರಡು ಪ್ರತಿಷ್ಟಿತ ಸಲೂನ್ಗಳೊಂದಿಗೆ ಪಾಲುದಾರಿಕೆಯನ್ನೂ ಮಾಡಿಕೊಂಡಿದ್ದಾರೆ. ಅಭಿಯಾನದ ಯಶಸ್ವಿಗಾಗಿ ಇವರು ದೇಣಿಗೆಯನ್ನೂ ಸಂಗ್ರಹಿಸುತ್ತಾರೆ. ಈ ದೇಣಿಗೆಯನ್ನು ಟ್ರಸ್ಟ್ಗೆ ಕಳುಹಿಸುತ್ತಾರೆ.
ಕನ್ನಡಿಯಲ್ಲಿ ತನ್ನ ಮುಖ ನೋಡುವಾಗ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಕೀಳರಿಮೆ ಮೂಡದೇ ಇರಲಿ, ಎಲ್ಲರಂತೆ ಅವರ ಮೊಗದಲ್ಲೂ ಸುಂದರ ನಗು ಚೆಲ್ಲಲಿ ಎಂಬ ಆಶಯದಿಂದ ನಿಹಾರಿಕಾ ಮತ್ತು ಅಮಾತುಲ್ಲಹ ಅದ್ಭುತ ಕಾರ್ಯವನ್ನು ಮಾಡುತ್ತಿದ್ದಾರೆ. ನೇತ್ರದಾನ, ರಕ್ತದಾನದಂತೆ ಕೂದಲು ದಾನದ ಅರಿವು ಕೂಡ ಜನರಿಗೆ ಮೂಡಬೇಕಾಗಿದೆ. ಇದರಿಂದ ಕ್ಯಾನ್ಸರ್ನಿಂದ ಬೋಳು ತಲೆಯನ್ನು ಪಡೆಯುತ್ತಿರುವ ಅದೆಷ್ಟೋ ಜನರಿಗೆ ಅನುಕೂಲವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.