ನವದೆಹಲಿ: ಎಎಪಿ ಸಮಾವೇಶದಲ್ಲಿ ರೈತ ಗಜೇಂದ್ರ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬಗ್ಗೆ ಕೊನೆಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೌನ ಮುರಿದಿದ್ದಾರೆ. ಘಟನೆ ನಡೆದ ಬಳಿಕವೂ ಭಾಷಣ ಮುಂದುವರೆಸಿದ್ದಕ್ಕಾಗಿ ಕ್ಷಮೆಯಾಚನೆ ಮಾಡಿದ್ದಾರೆ.
‘ವೇದಿಕೆಯಿಂದ ಮರ ತುಂಬಾ ದೂರದಲ್ಲಿತ್ತು. ಮರದ ಹತ್ತಿರ ಏನು ನಡೆಯುತ್ತಿದೆ ಎಂಬುದು ನಮಗೆ ಕಾಣಿಸುತ್ತಿರಲಿಲ್ಲ, ಜನ ಒಂದೇ ಕಡೆ ಓಡುವ ಭೀತಿಯಿಂದಾಗಿ ನಮಗೆ ಯಾವುದೇ ಘೋಷಣೆ ಮಾಡಲೂ ಸಾಧ್ಯವಾಗಲಿಲ್ಲ. ಆ ಮರದ ಕೆಳಗಡೆ ಕೆಲ ಅತಿಥಿ ಶಿಕ್ಷಕರು ಮತ್ತು ಎಎಪಿ ಕಾರ್ಯಕರ್ತರು ಇದ್ದರು. ಅವರಿಗೆ ಅಲ್ಲಿ ಏನೋ ಆಗಿದೆ ಎಂಬುದು ತಿಳಿದಿತ್ತು. ಆದರೆ ಯಾರೊಬ್ಬರೂ ವ್ಯಕ್ತಿಯೊಬ್ಬ ಸುಸೈಡ್ ಮಾಡಿಕೊಂಡಿದ್ದಾನೆ ಎಂದು ಅಂದುಕೊಂಡಿರಲಿಲ್ಲ’ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಅಲ್ಲದೇ ‘ಆತ್ಮಹತ್ಯೆ ಘಟನೆ ನಡೆದ ಬಳಿಕವೂ ಭಾಷಣ ಮುಂದುವರೆಸಿದ್ದಕ್ಕೆ ಕ್ಷಮೆಯಾಚಿಸುತ್ತೇನೆ. ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ. ನಾನು ಅಲ್ಲಿದ್ದೂ ಕೂಡಾ ಏನೂ ಮಾಡಲಿಲ್ಲವಲ್ಲ ಎಂಬ ನೋವಿನಿಂದ ನನಗೆ ನಿದ್ರೆಯೂ ಬರುತ್ತಿಲ್ಲ’ ಎಂದು ಅವರು ಹೇಳಿದ್ದಾರೆ.
‘ಪ್ರಕರಣದ ಬಗ್ಗೆ ರಾಜಕೀಯ ಟೀಕೆಗಳನ್ನು ಮಾಡುವುದನ್ನು ನಿಲ್ಲಿಸಿ. ಇದರಿಂದ ರೈತ ಸಮಸ್ಯೆಗೆ ಪರಿಹಾರ ಸಿಗೋಲ್ಲ. ನಾನು ಆ ಬಗ್ಗೆ ಮಾತನಾಡಿದರೆ ಜನ ರಾಜಕೀಯ ಮಾಡುತ್ತಿದ್ದಾನೆ ಎಂದು ಅಂದುಕೊಳ್ಳುತ್ತಾರೆ, ಮಾತನಾಡದೇ ಇದ್ದರೂ ಪ್ರಶ್ನಿಸುತ್ತಾರೆ’ ಎಂದು ನೋವು ತೋಡಿಕೊಂಡಿದ್ದಾರೆ.
ಮೃತ ರೈತ ಗಜೇಂದ್ರ ಸಿಂಗ್ ಅವರ ಕುಟುಂಬಕ್ಕೆ ಎಎಪಿ ವತಿಯಿಂದ ಈಗಾಗಲೇ 10 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.