ಸಾಧಕ ಮಹಿಳೆಯರನ್ನು ಪರಿಚಯಿಸುವ ಅಗತ್ಯವಿರುವುದಿಲ್ಲ, ಅವರು ಮಾಡಿದ ಕಾರ್ಯ, ಸಾಧನೆಗಳೇ ಅವರ ಪರಿಚಯವನ್ನು ಸಾರಿ ಸಾರಿ ಹೇಳುತ್ತವೆ. ಕತ್ತಲ ಕೂಪದಲ್ಲಿ ಕಳೆದುಹೋಗುವ ಭೀತಿಯಲ್ಲಿ ತನ್ನೆಲ್ಲಾ ಸಾಮರ್ಥ್ಯವನ್ನು ಬಳಸಿ ಬೆಳಕಿನತ್ತ ಹೊರಳುವ ಮಹಿಳೆ ಸಮಾಜಕ್ಕೆ ಸ್ಫೂರ್ತಿಯ ಸೆಲೆಯಾಗುತ್ತಾಳೆ.
ಅಂತಹ ಮಹಿಳೆಯರ ಸಾಲಿನಲ್ಲಿ ನಿಂತವಳೇ ಕಲ್ಪನಾ ಸರೋಜ್, ಆಕೆ ಸ್ವನಿರ್ಮಿತ ಮಹಿಳೆ, ಭೂತಕಾಲದ ಭೂತಗಳು ತನ್ನ ಭವಿಷ್ಯದ ಕನಸನ್ನು ಕಮರಿಸದಂತೆ ಎಚ್ಚರವಹಿಸಿದಾಕೆ. ದೌರ್ಜನ್ಯ ಮತ್ತು ಅವಮಾನದ ನಡುವೆಯೇ ಬೆಳಕು ಹುಡುಕಿ ಯಶಸ್ವಿಯಾದವಳು. ಆಕೆಯ ಜೀವನಗಾಥೆ ’ಸ್ಲಂ ಡಾಗ್ ಮಿಲಿಯನೇರ್’ ಮಾತಿಗೆ ಪಕ್ಕಾ ಹೋಲಿಕೆಯಾಗುತ್ತದೆ.
ವಿದರ್ಭದ ದಲಿತ ಕುಟುಂಬದಲ್ಲಿ ಜನಿಸಿದ ಕಲ್ಪನಾ, 12ನೇ ವಯಸ್ಸಿಗೆ ಮದುವೆಯಾಗಿ ಮುಂಬಯಿಯ ಸ್ಲಂನಲ್ಲಿ ಪತಿಯೊಂದಿಗೆ ವಾಸವಾಗಿದ್ದವಳು. ಪತಿಯ ಮನೆಯವರ ನಿರಂತರ ದೌರ್ಜನ್ಯ, ಅವಮಾನ ತಾಳಲಾರದೆ ಮನೆಬಿಟ್ಟವಳು. ಬಳಿಕ ತನ್ನ ರಕ್ಷಕ ತಂದೆಯ ಜೊತೆಗೆ ತವರು ಸೇರಿದಳು.
ಆದರೆ ಗ್ರಾಮಸ್ಥರ ಚುಚ್ಚು ನುಡಿಗಳಿಂದ ಬೇಸತ್ತು 16ನೇ ವಯಸ್ಸಿನಲ್ಲಿ ಆತ್ಮಹತ್ಯೆಗೂ ಕಲ್ಪನಾ ಪ್ರಯತ್ನಿಸಿದ್ದಾಳೆ. ಆದರೆ ಅದೃಷ್ಟವಶಾತ್ ಪಾರಾಗಿದ್ದಾಳೆ. ಬಳಿಕ ಮತ್ತೆ ಮುಂಬಯಿಗೆ ವಾಪಾಸ್ ಬಂದು ತನ್ನ ಮಾವನ ಮನೆಯಲ್ಲಿ ನೆಲೆಸಿದಳು.
ಅಲ್ಲಿ ಗಾರ್ಮೆಂಟ್ವೊಂದರಲ್ಲಿ ಉದ್ಯೋಗಕ್ಕೆ ಸೇರಿದ ಕಲ್ಪನಾಳ ಬದುಕು ಬಳಿಕ ಬದಲಾವಣೆಯತ್ತ ಹೊರಳಿತು. ಸರ್ಕಾರಿ ಸಾಲ ತೆಗೆದು ತನ್ನದೇ ಆದ ಟೈಲರಿಂಗ್ ಮತ್ತು ಫರ್ನಿಚರ್ ಶಾಪ್ ತೆರೆದ ಈಕೆ ಯಶಸ್ಸಿನ ಒಂದೊಂದೆ ಮೆಟ್ಟಿಲುಗಳನ್ನು ಏರಿದಳು.
ಅಷ್ಟೇ ಅಲ್ಲ ಫಿಲ್ಮ್ ಮೇಕಿಂಗ್ಗೂ ಹಣ ಹಾಕಿದಳು. ಹಿಂದಿ, ಇಂಗ್ಲೀಷ್, ತೆಲುಗಿಗೆ ಡಬ್ ಆದ ಕೈರಾಂಲಂಜಿ ಸಿನಿಮಾಗೆ ಈಕೆ ಹಣ ಹಾಕಿದಳು. ಬಳಿಕ ಉದ್ಯಮದಲ್ಲಿ ಉತ್ತುಂಗಕ್ಕೆ ಏರಿದ ಈಕೆ ಹಲವಾರು ಉದ್ಯಮಗಳ ಒಡತಿಯಾದಳು. ಅಷ್ಟೇ ಅಲ್ಲ ಭಾರತೀಯ ಮಹಿಳಾ ಬ್ಯಾಂಕ್ನ ನಿರ್ದೇಶಕಿಯಾಗಿ ಭಾರತ ಸರ್ಕಾರದಿಂದ ನಿಯೋಜಿತಗೊಂಡಳು.
ಈಕೆಯ ಎಲ್ಲಾ ಸಾಧನೆ, ಕೊಡುಗೆಗಳನ್ನು ಗಮನಿಸಿ 2014 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.