ಧರ್ಮಸ್ಥಳ: ಮಳೆ ಬೀಳದೆ ಬರಗಾಲ ಬಂದಿದೆ ಎಂದು ಚಿಂತಿಸುವ ಬದಲು ಭೂಮಿಗೆ ಬಿದ್ದ ಜೀವಜಲದ ರಕ್ಷಣೆಗೆ ನಾವೆಲ್ಲ ಮುಂದಾಗಬೇಕಿದೆ. ನೀರಿನ ಮೂಲವನ್ನು ಸಂರಕ್ಷಣೆ ಮಾಡುವ ಕೆಲಸ ಅತ್ಯಂತ ಪುಣ್ಯದ ಕೆಲಸವಾಗಿದ್ದು ಜಲ ಮರುಪೂರಣದ ಕಾರ್ಯ ವ್ಯಾಪಕವಾಗಿ ನಡೆಯಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಧಾರವಾಡ ಜಿಲ್ಲೆಯ ಕೊಟಬಾಗಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಾಯಧನದೊಂದಿಗೆ ಹೂಳೆತ್ತಲಾದ ಕೆರೆಗೆ ಬಾಗಿನ ಅರ್ಪಿಸಿ ಶಾಲಾವನ ಉದ್ಘಾಟಿಸಿ, ಮಾತನಾಡುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ನಾವು ಎಂಬ ಪದ ಸಂಕುಚಿತಗೊಂಡು ಸ್ವಾರ್ಥ ಹೆಚ್ಚಾಗುತ್ತಿದೆ. ಬದಲಾಗಿ ನಮ್ಮ ಗ್ರಾಮ, ನಮ್ಮ ಕೆರೆ, ನಮ್ಮ ಪರಿಸರ ಇವೆಲ್ಲವುಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಭಾವನೆ ವೃದ್ಧಿಯಾಗಬೇಕಿದೆ. ಈ ಭಾಗದಲ್ಲಿ ಫಲವತ್ತಾದ ಭೂಮಿಯಿದೆ. ರೈತರ ಶ್ರಮದ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಆದರೆ ರೈತರ ಅತಿಯಾದ ಖರ್ಚಿನಿಂದಾಗಿ ಕೃಷಿ ನಷ್ಟದಾಯಕ ಎಂಬ ಮನೋಭಾವನೆ ಉಂಟಾಗಿದ್ದು ರೈತರು ಕೃಷಿಯಲ್ಲಿ ಉತ್ಪಾದನಾ ವೆಚ್ಚವನ್ನು ಕಡಿತಗೊಳಿಸಬೇಕು. ಇದಕ್ಕೆ ಪೂರಕವಾಗಿ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ತರಬೇತಿಗಳನ್ನು ಗ್ರಾಮ ಮಟ್ಟದಲ್ಲಿ ಆಯೋಜಿಸಲಾಗುತ್ತಿದ್ದು ಪ್ರಯೋಜನ ಪಡೆದುಕೊಳ್ಳಿ ಎಂದರು.
ಹೂಳೆತ್ತಲಾದ ಕೆರೆಯ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದ ಎಂ.ವಿ. ಮಂಜಣ್ಣನವರ್, ಪೂಜ್ಯರ ಧರ್ಮ ಕಾರ್ಯಗಳು ನಾಡಿನಾದ್ಯಂತ ನಡೆಯುತ್ತಿದ್ದು ಅವೆಲ್ಲವುಗಳಲ್ಲಿ ಜೀವಜಲದ ರಕ್ಷಣೆಗೆಒತ್ತು ನೀಡುತ್ತಿರುವುದು ಶ್ಲಾಘನೀಯ. ಇದು ನಮ್ಮೆಲ್ಲರ ಭಾಗ್ಯ ಎಂದರು.
ಸಮಾರಂಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್. ಎಚ್. ಮಂಜುನಾಥ್, ಪ್ರಾದೇಶಿಕ ನಿರ್ದೇಶಕ ಎನ್. ಜಯಶಂಕರ ಶರ್ಮ, ಕೊಟಬಾಗಿ ಗ್ರಾ.ಪಂ ಅಧ್ಯಕ್ಷೆ ವನಜಾಕ್ಷಿ, ತಾ.ಪಂ ಸದಸ್ಯ ರುದ್ರಗೌಡ ಪಾಟೀಲ್, ಸಚಿವ ವಿನಯ್ ಕುಲಕರ್ಣಿಯವರ ಆಪ್ತ ಸಹಾಯಕ ಪ್ರಶಾಂತ್ ಉಪಸ್ಥಿತರಿದ್ದರು.
ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಜಿಲ್ಲಾ ನಿರ್ದೇಶಕ ದಿನೇಶ್ ಎಂ. ಪ್ರಸ್ತಾವಿಸಿ, ಸ್ವಾಗತಿಸಿದರು. ಯೋಜನಾಧಿಕಾರಿ ಕುಸುಮಾಧರ ವಂದಿಸಿದರು. ನವಲಗುಂದ ಯೋಜನಾಧಿಕಾರಿ ಸತೀಶ್ ಎಚ್. ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.