ತಿರುವನಂತಪುರಂ : ಬಿಜೆಪಿಗೆ ಟಾಂಗ್ ನೀಡುವ ಸಲುವಾಗಿ ಕೇರಳದ ಆಡಳಿತಾರೂಢ ಸಿಪಿಐ(ಎಂ) ಪಕ್ಷ ತನ್ನ ರಾಜ್ಯದಾದ್ಯಂತ ಜೂನ್ 21 ರ ಅಂತಾರಾಷ್ಟ್ರೀಯ ಯೋಗ ದಿನದಂದು ಯೋಗ ಕಾರ್ಯಕ್ರಮಗಳನ್ನು ಆಯೋಜಿಸಲು ಮುಂದಾಗಿದೆ.
ಮೋದಿ ಚಂಡೀಗಢದಲ್ಲಿ ಬೃಹತ್ ಯೋಗ ಸಮಾರಂಭವನ್ನು ಏರ್ಪಡಿಸಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದರೂ, ಕಮ್ಯುನಿಸ್ಟರಿಗೆ ತಮ್ಮ ದೇಹಗಳನ್ನು ಬಾಗಿಸಿ ಯೋಗ ಮಾಡುವ ಯಾವುದೇ ಮೂಡ್ ಇಲ್ಲ. ಆದರೂ ಬಿಜೆಪಿಯ ಅಬ್ಬರಕ್ಕೆ ಬ್ರೇಕ್ ಹಾಕುವ ಸಲುವಾಗಿ ಯೋಗ ಸಮಾರಂಭವನ್ನು ಆಚರಿಸಲು ಮುಂದಾಗಿದ್ದಾರೆ.
ಧಾರ್ಮಿಕ ಆಚರಣೆಗಳ ವಿರೋಧಿಗಳೆಂದೇ ಕರೆಯಲ್ಪಡುವ ಕಮ್ಯುನಿಸ್ಟರು ಕಳೆದ ಬಾರಿ ಗಣೇಶೋತ್ಸವ, ಕೃಷ್ಣಾಷ್ಟಮಿಯನ್ನು ಆಚರಿಸಿದ್ದರು. ಅಲ್ಲದೆ ಐಯ್ಯಪ್ಪ ಭಕ್ತಾದಿಗಳಿಗೆ ವಿಶ್ರಾಂತಿ ಕೇಂದ್ರಗಳನ್ನು ಸ್ಥಾಪಿಸಿ ಎಲ್ಲರ ಅಚ್ಚರಿಗೆ ಕಾರಣವಾಗಿದ್ದರು.
ಇದೆಲ್ಲಾ ಆಸ್ತಿಕರನ್ನು ತಮ್ಮ ಪಕ್ಷದತ್ತ ಸೆಳೆಯಲು ಅವರು ಮಾಡಿದ ಪ್ರಯತ್ನಗಳಷ್ಟೇ.
ಆದರೆ ಇದೀಗ ಯೋಗ ದಿನಾಚರಣೆಯನ್ನು ಆಚರಿಸಲು ಮುಂದಾಗಿರುವ ಅವರ ಕ್ರಮ ಬಿಜೆಪಿಗೆ ಟಾಂಗ್ ನೀಡಲೇ ಹೊರತು ಬೇರೇನೂ ಅಲ್ಲ.
ಇತ್ತೀಚಿನ ಚುನಾವಣೆಯಲ್ಲಿ ಕೇರಳದಲ್ಲಿ ಬಿಜೆಪಿ ಅರಳುತ್ತಿದೆ ಎಂಬ ಅಂಶ ಸ್ಪಷ್ಟವಾಗಿದೆ. ಹೀಗಾಗಿ ಯೋಗ, ಧಾರ್ಮಿಕತೆಯಂತಹ ಕರಸತ್ತುಗಳನ್ನು ಮಾಡುವುದು ನಾಸ್ತಿಕ ಕಮ್ಯುನಿಸ್ಟರಿಗೆ ಅನಿವಾರ್ಯವಾಗಿದೆ.
ಈ ಹಿಂದೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿಯವರು ಯೋಗ ಶೈಲಿಗಳು ನಾಯಿಯ ಚಲನವಲನಗಳನ್ನು ಹೋಲುತ್ತವೆ ಎಂಬ ಕೀಳುಮಟ್ಟದ ಹೇಳಿಕೆಯನ್ನು ನೀಡಿದ್ದರು. ಆದರೆ ಇದೀಗ ಅವರ ಪಕ್ಷದ ಕಾರ್ಯಕರ್ತರುಗಳು ಪ್ರಾಚೀನ ಯೋಗ ವಿದ್ಯೆಯ ಪ್ರಾಮುಖ್ಯತೆಯನ್ನು ರಾಜಕೀಯ ಕಾರಣಕ್ಕಾದರೂ ಅರಿತುಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂದೆನಿಸುತ್ತದೆ.
ತಿರುವನಂತಪುರಂನಲ್ಲಿ 500 ತರಬೇತಿ ಕೇಂದ್ರಗಳನ್ನು ಹೊಂದಿದ ಪಕ್ಷದ ಕಾರ್ಯಕರ್ತರು 2 ಗಂಟೆಗಳ ಯೋಗ ಪ್ರದರ್ಶನ ಮಾಡಲಿದ್ದಾರೆ ಎನ್ನಲಾಗಿದೆ. ಜಿಲ್ಲಾ ಮಟ್ಟದ ಪಕ್ಷದ ಕಚೇರಿಗಳಲ್ಲಿ ಯೋಗ ಕಾರ್ಯಕ್ರಮ ನಡೆಯಲಿದೆ.
ಸಿಪಿಎಂ ಪೆರವೂರಿನಲ್ಲಿ ಮಾರ್ಷಲ್ ಆರ್ಟ್ಸ್ ಅಕಾಡೆಮಿಯನ್ನು ಹೊಂದಿದೆ. ಅಲ್ಲಿ ಸೆಕ್ಯುಲರ್ ಯೋಗ ಎಂಬ ಹೆಸರಿನಲ್ಲಿ ಯೋಗವನ್ನು ಕಲಿಸಲಾಗುತ್ತಿದೆ. ಯೋಗದ ಮಂತ್ರಗಳ ಉಚ್ಚಾರಣೆ ಬದಲು ಇತರ ಸಂಗೀತವನ್ನು ಜೋಡಿಸಲಾಗುತ್ತಿದೆ. ಈ ಅಕಾಡೆಮಿ ತರಗತಿ ಈ ಮೊದಲು ಉಚಿತವಾಗಿದ್ದು, ಇದೀಗ 8 ಕ್ಲಾಸ್ಗಳಿಗೆ 500 ರೂ. ನೀಡಬೇಕಾಗಿದೆ.
ಒಟ್ಟಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಕಮ್ಯುನಿಸ್ಟರು ಕೂಡಾ ಆಚರಿಸುತ್ತಿರುವುದು ಈ ಬಾರಿಯ ವಿಶೇಷ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.