ನವದೆಹಲಿ : ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಸಲು ಕೇಂದ್ರ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಚಂಡೀಗಢದಲ್ಲಿ ಬೃಹತ್ ಯೋಗ ಸಮಾರಂಭ ನಡೆಯಲಿದ್ದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಸಮಾರಂಭದ ಪೂರ್ವ ತಯಾರಿಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಚಂಡೀಗಢದಲ್ಲಿ ಕ್ಯಾಪಿಟೋಲ್ ಕಾಂಪ್ಲೆಕ್ಸ್ನಲ್ಲಿ ನಡೆಯುವ ಸಮಾರಂಭದ ಪೂರ್ವ ತಯಾರಿಗಳ ಬಗ್ಗೆ ಬುಧವಾರ ಮೋದಿ ಆಯುಷ್ ಸಚಿವಾಲಯದ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು.
ಈ ವೇಳೆ ಸಕಲ ಸಿದ್ಧತೆಗಳ ಬಗ್ಗೆ ಮೋದಿಗೆ ಅಧಿಕಾರಿಗಳು ವಿವರಣೆ ನೀಡಿದ್ದಾರೆ.
ಸಮಾರಂಭ ನಡೆಯುವ ಜಾಗದಲ್ಲಿ 30,000 ಮಂದಿಗೆ ಮಾತ್ರ ಸ್ಥಳಾವಕಾಶ ಇದೆ. ಆದರೆ ನೋಂದಣಿ ಮಾಡಿದವರ ಸಂಖ್ಯೆ 1,20,000 ವನ್ನೂ ಮೀರಿದೆ. ಹೀಗಾಗಿ ಅಲ್ಲಿ ವಿಸ್ತೃತ ಆಯ್ಕೆ ನಡೆಯಲಿದೆ ಎಂದು ಆಯುಷ್ ಕಾರ್ಯದರ್ಶಿ ಅಜಿತ್ ಶರಣ್ ತಿಳಿಸಿದ್ದಾರೆ.
ಮೇ 14 ರಂದು ನೋಂದಣಿ ಆರಂಭವಾಗಿದ್ದು ಜೂನ್ 18 ರವರೆ ಇರಲಿದೆ. 96,000 ಮಂದಿ ಆನ್ಲೈನ್ ನೋಂದಣಿ ಮಾಡಿಕೊಂಡಿದ್ದಾರೆ. ರಿಹರ್ಸಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದವರನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ.
ಚಂಡೀಗಢದಲ್ಲಿ ಈಗಾಗಲೇ 180 ಯೋಗ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಬೃಹತ್ ಸಮಾರಂಭದಲ್ಲಿ ಭಾಗವಹಿಸುವವರಿಗೆ ಇಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ.
ಜೂನ್ 21 ರಂದು ರಜೆ ಘೋಷಿಸಲು ಬೇಡಿಕೆ ಬಂದಿಲ್ಲ ಎಂದು ಶರಣ್ ತಿಳಿಸಿದ್ದಾರೆ. ಬೆಳಿಗ್ಗೆ 8 ಗಂಟೆಯೊಳಗೆ ಯೋಗ ಕಾರ್ಯಕ್ರಮ ಮುಕ್ತಾಯವಾಗಲಿದೆ. ಹೀಗಾಗಿ ಕಚೇರಿ ಶಾಲಾ ಕಾಲೇಜುಗಳಿಗೆ ತೆರಳುವವರಿಗೆ ಯಾವುದೇ ತೊಂದರೆ ಇರುವುದಿಲ್ಲ.
ಯೋಗದಿನಂದು ರಜೆ ನೀಡಲು ಬೇಡಿಕೆ ಬಂದರೆ, ಮೋದಿ ಅವರ ಅನುಮತಿ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಆಯುಷ್ ಸಚಿವ ಶ್ರೀಪಾದ್ ನಾಯಕ್ ಕಳೆದ ವಾರ ತಿಳಿಸಿದ್ದರು.
ಜೂನ್ 21 ರಂದು ಚಂಡೀಗಢದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.