ಮಂಗಳೂರು: ಹಳೆಬಂದರು ಬಾಂಬು ಬಜಾರ್ನ ಡ್ರೈನೇಜ್ ಅವ್ಯವಸ್ಥೆಯ ವಿರುದ್ಧ ಬಂದರಿನ ಅಝೀಝುದ್ದೀನ್ ರಸ್ತೆಯಲ್ಲಿ ಬಾಂಬು ಬಜಾರ್ನ ತಲೆಹೊರೆ ಕಾರ್ಮಿಕರು ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ತಿಂಗಳ ಹಿಂದೆ ಡ್ರೈನೇಜ್ ಸಮಸ್ಯೆ ಪರಿಹಾರಕ್ಕಾಗಿ ಪ್ರತಿಭಟನೆ ನಡೆಸಲಾಗಿತ್ತು. ನಗರ ಪಾಲಿಕೆ ಅಧಿಕಾರಿಗಳು ಅಂದು 15 ದಿನಗಳ ಒಳಗಾಗಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ನಿನ್ನೆ ರಾತ್ರಿ ಸುರಿದ ಬಾರಿ ಮಳೆಗೆ ಡ್ರೈನೇಜ್ ನೀರು ರಸ್ತೆಯಲ್ಲಿ ಹರಿದ ಪರಿಣಾಮ ಇಲ್ಲಿನ ಕಾರ್ಮಿಕರಿಗೆ ಹಾಗೂ ಜನರಿಗೆ ತ್ಯಾಜ್ಯ ತುಂಬಿದ ರಸ್ತೆಯಲ್ಲಿ ಕೆಲಸ ಮಾಡುವುದು ಅಸಾಧ್ಯವಾಗಿತ್ತು. ನಗರ ಪಾಲಿಕೆ ಆಯುಕ್ತರಿಗೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಲು ಕೇಳಿಕೊಂಡಾಗ ಆಯುಕ್ತರು ಬೇಜಾಬ್ದಾರಿತನದಿಂದ ಹಾಗೂ ಉಡಾಫೆಯಿಂದ ಮಾತನಾಡಿದ ಹಿನ್ನೆಲೆಯಲ್ಲಿ ಬಂದರು ಶ್ರಮಿಕರ ಸಂಘ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದರು.
ಈ ಸಂದರ್ಭ ಮಾತನಾಡಿದ ಬಂದರು ಶ್ರಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ ಇಮ್ತಿಯಾಜ್ ಮಾತನಾಡಿ, ಬಾಂಬು ಬಜಾರ್ನ ಡ್ರೈನೇಜ್ ಸಮಸ್ಯೆಯ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದರಿಂದ ಡೆಂಗ್ಯೂ, ಮಲೇರಿಯಾದಂತಹ ರೋಗಗಳಿಗೆ ಜನರು ಒಳಗಾಗುತ್ತಿದ್ದಾರೆ. ಪಾಲಿಕೆ ಅಧಿಕಾರಿಗಳು ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿರುವ ಕ್ರಮವನ್ನು ಅವರು ಖಂಡಿಸಿದರು.
ಆಯುಕ್ತರು ಜನರ ಹಾಗೂ ಜನಪ್ರತಿನಿಧಿಗಳ ಮಾತಿಗೆ ಮನ್ನಣೆ ನೀಡುತ್ತಿಲ್ಲ. ಸಮಸ್ಯೆಯ ಗಂಭೀರತೆಯನ್ನು ಅರಿತುಕೊಳ್ಳದೆ ಜನರ ಜೊತೆ ಉಡಾಫೆಯಿಂದ ವರ್ತಿಸುತ್ತಿರುವ ಆಯುಕ್ತರನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪಿ.ಎಸ್. ವಿಲ್ಲಿವಿಲ್ಸನ್, ಒಣಮೀನು ವಿಭಾಗದ ಕಾರ್ಮಿಕರ ಮುಖಂಡರಾದ ಮಹಮ್ಮದ್ ಮೋನು, ಮೆಯ್ಯದ್ದಿ ಬೆಂಗ್ರೆ, ಹಸನ್ ಮೋನು, ಒಣಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ, ಕಾರ್ಯದರ್ಶಿ ಕೇಶವ, ಜಿಲ್ಲಾ ಹಮಾಲಿ ಕಾರ್ಮಿಕರ ಸಂಘದ ಮುಖಂಡರಾದ ರಫೀಕ್ ಹರೆಕಳ ಉಪಸ್ಥಿತರಿದ್ದರು.
ಶಾಸಕರ ಭರವಸೆ – ಪ್ರತಿಭಟನೆ ಹಿಂದಕ್ಕೆ
ಬಾಂಬು ಬಜಾರಿನ ಡ್ರೈನೇಜ್ ಸಮಸ್ಯೆ ಪರಿಹರಿಸುವ ಬಗ್ಗೆ ಶಾಸಕ ಜೆ.ಆರ್. ಲೋಬೋರವರು ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ಸ್ಥಳೀಯ ನಗರ ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್ರವರ ನೇತೃತ್ವದಲ್ಲಿ ಮಧ್ಯಾಹ್ನ 3:೦೦ ಗಂಟೆಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸುವ ಬಗ್ಗೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ರಸ್ತೆ ತಡೆ ಪ್ರತಿಭಟನೆ ಹಿಂಪಡೆಯಲಾಯಿತು. ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್ ರವರ ಸಮ್ಮುಖದಲ್ಲಿ ಸಭೆ ನಡೆಯಿತು. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜ ಶೇಖರ್ರವರು ಉಪಸ್ಥಿತರಿದ್ದರು. ಬಂದರು ಇಲಾಖೆ ಮತ್ತು ನಗರ ಪಾಲಿಕೆಯ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಪರಿಹರಿಸುವ ತೀರ್ಮಾನಕ್ಕೆ ಬರಲಾಯಿತು.
ಪೊಲೀಸರೊಂದಿಗೆ ಮಾತಿನ ಚಕಮಕಿ
ರಸ್ತೆ ತಡೆ ನಡೆಸುತ್ತಿರುವ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಬಂದಿಸುವ ಎಚ್ಚರಿಕೆ ನೀಡಿದಾಗ ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ಸಮಯದಲ್ಲಿ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರ ಕ್ರಮದ ವಿರುದ್ಧವೂ ದಿಕ್ಕಾರ ಕೂಗಲಾಯಿತು. ಸ್ಥಳದಲ್ಲಿ ಅವರನ್ನು ಬಿಡುಗಡೆಗೊಳಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.