ಬೈಂದೂರು : ಹಳೆಯ ದ್ವೇಷದ ನೆಪದಲ್ಲಿ ಸಹೋದರರಿಬ್ಬರು ಮದುವೆಯ ಮನೆಯಾದ ಸ್ವಂತ ಚಿಕ್ಕಮ್ಮನ ಮನೆಗೇ ಬೆಂಕಿಯಿಟ್ಟ ಘಟನೆ ಬೈಂದೂರು ತಗ್ಗರ್ಸೆ ಸಮೀಪದ ನೆಲ್ಯಾಡಿ ಅರಳೀಕಟ್ಟೆ ಎಂಬಲ್ಲಿ ನಡೆದಿದೆ. ಅದೇ ಖುಷಿಯಲ್ಲಿ ಬಿಜೂರಿನ ಬಾರೊಂದರಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಇಬ್ಬರು ಆರೋಪಿಗಳು ಸೇರಿದಂತೆ ಅವರಿಗೆ ಕುಮ್ಮಕ್ಕು ನೀಡಿದ ಅವರ ಸೋದರ ಮಾವನನ್ನು ಬೈಂದೂರು ಪೋಲೀಸರು ಬಂಧಿಸಿದ ಘಟನೆಯೂ ನಡೆದಿದೆ. ಬಂಧಿತ ಆರೋಪಿಗಳನ್ನು ನೆಲ್ಯಾಡಿ ಅರಳೀಕಟ್ಟೆ ನಿವಾಸಿಗಳಾದ ರಾಜೇಶ್ ಶೆಟ್ಟಿ ಯಾನೇ ರಾಜೇಂದ್ರ (32), ರಾಘವೇಂದ್ರ ಶೆಟ್ಟಿ(30) ಹಾಗೂ ಆತನ ಮಾವ ರಂಗಯ್ಯ(75) ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಅರಳೀಕಟ್ಟೆಯಲ್ಲಿ ಮೂರ್ನಾಲ್ಕು ದಾಯಾದಿಗಳ ಮನೆಯಿದೆ. ಅದರಲ್ಲಿ ನಾಗಮ್ಮ ಶೆಡ್ತಿ ಹಾಗೂ ಸುಶೀಲಮ್ಮ ಶೆಡ್ತಿ ಎಂಬುವರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರ ಮನೆ ಪಕ್ಕದಲ್ಲಿ ಆರೋಪಿಗಳಾದ ರಾಜೇಂದ್ರ ಶೆಟ್ಟಿ ಹಾಗೂ ಆತನ ಸಹೋದರ ರಾಘವೇಂದ್ರ ಶೆಟ್ಟಿ ವಾಸಿಸುತ್ತಿದ್ದಾರೆ. ಸುಮಾರು ಮೂವತ್ತು ವರ್ಷಗಳಿಂದ ಈ ಎರಡೂ ಮನೆಯವರ ನಡುವೆ ರಸ್ತೆಗೆ ಸಂಬಂಧಿಸಿ ಆಗಾಗ ಜಗಳವಾಗುತ್ತಿತ್ತನ್ನಲಾಗಿದೆ. ಏಪ್ರಿಲ್ 22ರಂದು ಸುಶೀಲ ಶೆಡ್ತಿಯವರ ಮಗ ಸುಭಾಶ್ಚಂದ್ರ ಶೆಟ್ಟಿ ಎಂಬುವರಿಗೆ ಉಪ್ಪುಂದದ ಯುವತಿಯೊಂದಿಗೆ ಕಟ್ಬೆಲ್ತೂರಿನ ರಾಮ ಲಕ್ಷ್ಮಣ ಸಭಾಗೃಹದಲ್ಲಿ ಬುಧವಾರ ಮದುವೆ ಕಾರ್ಯಕ್ರಮ ನಡೆದಿತ್ತು.
ಈ ಸಂದರ್ಭ ಕಾವೇರಿ ಮೊಗವೀರ ಎಂಬುವರನ್ನು ಮನೆಯಲ್ಲಿ ನಿಲ್ಲಿಸಿ ಎಲ್ಲರೂ ಮದುವೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ್ದ ಆರೋಪಿಗಳಾದ ರಾಜೇಶ್ ಹಾಗೂ ರಾಘವೇಂದ್ರ ಇಬ್ಬರು ಅಕ್ರಮವಾಗಿ ಮನೆಯಂಗಳಕ್ಕೆ ಬಂದು ಮನೆಯಲ್ಲಿದ್ದ ಕಾವೇರಿ ಮೊಗವೀರರನ್ನು ಗದರಿಸಿ ಕೊಲೆ ಬೆದರಿಕೆ ಹಾಕಿ ಮನೆಯ ಬಾಗಿಲು ಒಡೆದು ಒಳನುಗ್ಗಿ ಮನೆಯಲ್ಲಿದ್ದ ಸೊತ್ತುಗಳನ್ನು ಹಾನಿ ಮಾಡಿ ನಂತರ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಈ ಸಂದರ್ಭ ಗಡಿಬಿಡಿಗೊಂಡ ಕಾವೇರಿ ಮೊಗವೀರ ಬೊಬ್ಬೆ ಹೊಡೆದಿದ್ದಾರೆ.
ತಕ್ಷಣ ಸ್ಥಳೀಯರು ಓಡಿ ಬಂದು ಬೆಂಕಿ ನಂದಿಸಿದ್ದಾರಾದರೂ ಮನೆಯೊಳಗಿದ್ದ ಟಿವಿ, ಮಂಚ, ಪೀಟೋಪಕರಣಗಳು, ದೇವರ ಫೋಟೋಗಳು, ಸಂಪೂರ್ಣ ಸುಟ್ಟು ಹೋಗಿದ್ದು ಸುಮಾರು ಎರಡು ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮದುವೆಯಾಗಿ ಗಂಡನ ಮನೆಯ ಹೊಸ್ತಿಲ ತುಳಿಯಲೆಂದು ಬಂದ ನವವಧು ಅಲ್ಲಿನ ವಿಷಯ ಕೇಳಿ ದಿಗ್ಬ್ರಾಂತಗೊಂಡು ಗಂಡನೊಂದಿಗೆ ತವರಿಗೆ ವಾಪಾಸಾಗಿರುವ ವರದಿಯಾಗಿದೆ. ಕುಶಲ ಶೆಟ್ಟಿ ಎಂಬುವವರು ನೀಡಿದ ದೂರಿನನ್ವಯ ಬೈಂದೂರು ಪೋಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಆರೋಪಿಗಳ ಬಂಧನ : ಕೃತ್ಯ ನಡೆಸಿದ ಖುಷಿಯಲ್ಲಿ ಆರೋಪಿಗಳು ಬಿಜೂರಿನ ಬಾರೊಂದರಲ್ಲಿ ಮದ್ಯ ಸೇವನೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಪಡೆದ ಬೈಂದೂರು ಪೊಲೀಸರು ಆರೋಪಿಗಳಿಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇದೇ ಸಂದರ್ಭ ಆರೋಪಿಗಳಿಗೆ ಕಳೆದ ಕೆಲವು ವರ್ಷಗಳಿಂದ ದ್ವೇಷ ಸಾಧನೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಆರೋಪಿಗಳ ಸೋದರ ಮಾವ ರಂಗಯ್ಯ ಎಂಬಾತನನ್ನೂ ವಶಕ್ಕೆ ಪಡೆದಿದ್ದಾರೆ.
ಕ್ರಿಮಿನಲ್ಗಳು: ಮನೆಗೆ ಬೆಂಕಿ ಇಟ್ಟ ಆರೋಪದಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಆರೋಪಿಗಳು ಈ ಹಿಂದೆ ಹಲವು ದಾಂಧಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂದೂವರೆ ತಿಂಗಳ ಹಿಂದೆ ಸಾರ್ವಜನಿಕರಿಗೆ ಕತ್ತಿ ತೋರಿಸಿ ಬೆದರಿಕೆ ಹಾಕಿ ದಾಂಧಲೆ ನಡೆಸಿದ್ದ ಆರೋಪದಲ್ಲಿ ಪ್ರಕರಣ ದಾಖಲಾಗಿದ್ದು, ಹತ್ತು ದಿನಗಳ ಕಾಲ ಜೈಲುವಾಸ ಅನುಭವಿಸಿದ್ದರು. ಅಲ್ಲದೇ ಜನವರಿ ತಿಂಗಳಲ್ಲಿ ನೆಲ್ಯಾಡಿಯ ದೇವಸ್ಥಾನವೊಂದಕ್ಕೆ ರಾತ್ರೋ ರಾತ್ರಿ ಬೀಗ ಜಡಿದು ದಾಂಧಲೆ ನಡೆಸಿದ್ದರು ಎನ್ನಲಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.