ಬೆಳ್ತಂಗಡಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಕರೆ ನೀಡಿದ್ದ ಒಂದು ದಿನದ ಸಾಂಕೇತಿಕ ಮುಷ್ಕರಕ್ಕೆ ಬೆಳ್ತಂಗಡಿ ತಾಲೂಕಿನಲ್ಲಿ ಉತ್ತಮ ಬೆಂಬಲ ಕ್ಕೆ ವ್ಯಕ್ತವಾಗಿದೆ.
ತಾಲೂಕಿನ ಸರಕಾರಿ ಕಚೇರಿಗಳಲ್ಲಿ ಗುರುವಾರ ಯಾವುದೇ ಅಧಿಕಾರಿಗಳಾಗಲಿ, ನೌಕರರಾಗಲಿ ಕೆಲಸಕ್ಕೆ ಹಾಜರಾಗಲಿಲ್ಲ. ಮುಷ್ಕರದ ಬಗ್ಗೆ ತಿಳಿಯದೆ ಕಚೇರಿಗಳಿಗೆ ಬಂದ ಜನರು ಬರಿಗೈಯಲ್ಲಿ ಹಿಂದಿರುಗಬೇಕಾಯಿತು. ಎಲ್ಲ ಕಚೇರಿಗಳೂ ಬಾಗಿಲು ಮುಚ್ಚಿದ್ದವು. ಶಿಕ್ಷಕರು ಮುಷ್ಕರದಲ್ಲಿ ಭಾಗವಹಿಸಿದ್ದ ಹಿನ್ನಲೆಯಲ್ಲಿ ಶಾಲೆಗಳೂ ಸ್ಥಗಿತಗೊಂಡವು.
ಮುಷ್ಕರವನ್ನು ಬೆಂಬಲಿಸಿ ಸರಕಾರಿ ನೌಕರರು ಬೆಳ್ತಂಗಡಿ ತಾಲೂಕು ಕಚೇರಿಯ ಮುಂದೆ ಸಭೆ ನಡೆಸಿ ತಮ್ಮ ಪ್ರತಿಭಟನೆಯನ್ನು ವ್ಯಕ್ತ ಪಡಿಸಿದರು. ಬಳಿಕ ತಹಶೀಲ್ದಾರರ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ, ರಾಜ್ಯ ಸಂಘದ ಕಾರ್ಯದರ್ಶಿ ಜಯಕೀರ್ತಿ ಜೈನ್ ಅವರು, ಇದು ಸರಕಾರದ ವಿರುದ್ದದ ಪ್ರತಿಭಟನೆಯಲ್ಲ. ರಾಜ್ಯದಲ್ಲಿರುವ ವೇತನ ತಾರತಮ್ಯವನ್ನು ಹೋಗಲಾಡಿಸಬೇಕು ಹಾಗೂ ಇತರ ಬೇಡಿಕೆಗಳನ್ನು ಸರಕಾರದ ಮುಂದೆ ಮಂಡಿಸಿ ಗಮನ ಸೆಳೆಯುವ ಪ್ರಯತ್ನವಾಗಿದೆ ಎಂದರು.
ತಾಲೂಕಿನ ಎಲ್ಲ ನೌಕರರು ಒಂದು ದಿನದ ಸಾಂಕೇತಿಕ ಮುಷ್ಕರಕ್ಕೆ ಬೆಂಬಲ ನೀಡಿದ್ದು ಸರಕಾರ ಇನ್ನಾದರೂ ನೌಕರರ ಸಮಸ್ಯೆಗಳತ್ತ ಗಮನ ಹರಿಸಲಿ ಎಂದರು. ಮನವಿ ಸಲ್ಲಿಸಿದ ಸಂದರ್ಭದಲ್ಲಿದ ಸಂಘ ಗೌರವ ಅಧ್ಯಕ್ಷ ಸಿ. ಆರ್ ನರೇಂದ್ರ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.