ಬೆಳ್ತಂಗಡಿ : ಸರಕಾರಿ ಶಾಲೆಗಳೆಂದರೆ ಮೂಗುಮುರಿಯುತ್ತಿರುವ ಇಂದಿನ ಸನ್ನಿವೇಶದಲ್ಲಿ ತಾಲೂಕಿನ ಗುರುವಾಯನಕರೆ ಸರಕಾರಿ ಪ್ರೌಢಶಾಲೆ ಸತತವಾಗಿ ಕಳೆದ 5 ವರ್ಷಗಳಿಂದ ಗಮನ ಸೆಳೆಯುತ್ತಾ ಬಂದಿದೆ.
ಸರಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರಕುವುದಿಲ್ಲ, ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ ಎಂಬ ದೂರು ಒಂದೆಡೆಯಾದರೆ ಮೂಲಭೂತ ಸೌಕರ್ಯದ ಕೊರತೆಯ ನಡುವೆಯೂ ಸರಕಾರಿ ಪ್ರೌಢಶಾಲೆಯೊಂದು ಸತತವಾಗಿ ಐದು ವರ್ಷಗಳಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶವನ್ನು ಪಡೆದುಕೊಂಡು ರಾಜ್ಯಕ್ಕೆ ಮಾದರಿಯಾಗಿ ಮುನ್ನಡೆಯುತ್ತಿರುವ ಗುರುವಾಯನಕೆರೆ ಸರಕಾರಿ ಪ್ರೌಢ ಶಾಲೆಯ ಸಾಧನೆ ಅನನ್ಯ.
ಕುವೆಟ್ಟುಗ್ರಾಮ ಪಂಚಾಯತಿ ವ್ಯಾಪ್ತಿಯ ಗುರುವಾಯನಕೆರೆ ಪೇಟೆಯ ಸನಿಹ ಗುಡ್ಡದ ಮೇಲಿರುವ ಕೇವಲ ತಾತ್ಕಾಲಿಕ ಅಥವಾ ಸುಲಭದಲ್ಲಿ ಸಿಗುವ ಯಶಸ್ಸಿಗೆ ಮರುಳಾಗದಿರಿ. ಶಾಶ್ವತ ಯಶಸ್ಸು ಪಡೆಯಲು ಸದಾ ನಿಷ್ಠೆಯಿಂದ ಪ್ರಯತ್ನ ಮಾಡಬೇಕು ಎಂಬ ಗೋಡೆ ಬರಹ ಕಾಣಸಿಗುವ ಪುಟ್ಟ ಶಾಲೆಯ ಸಾಧನೆಗಳು ಒಂದೆರಡಲ್ಲ. ತಾಲೂಕಿನ ಏಕೈಕ ಐ.ಪಿ.ಎಸ್ ಅಧಿಕಾರಿಯೂ ಇದೇ ಶಾಲೆಯಿಂದ ಬಂದಿರುವವರಾಗಿದ್ದಾರೆ ಎಂದರೆ ಅದು ಗುರುವಾಯನಕೆರೆ ಸರಕಾರಿ ಪ್ರೌಢಶಾಲೆಯಿಂದ.
ಈ ಶಾಲೆಗೆ ಬರುವವರು ಯಾರೂ ಶ್ರೀಮಂತರ ಮನೆಯ ಮಕ್ಕಳಲ್ಲ, ಮೂರು ಹೊತ್ತಿನ ಊಟಕ್ಕೂ ಪರದಾಡುವ ಬಡಕೂಲಿ ಕಾರ್ಮಿಕರ ಮಕ್ಕಳೇ ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದಎಲ್ಲ ಮಕ್ಕಳೂ ಬಿಪಿಎಲ್ ಕುಟುಂಬಗಳಿಂದ ಬಂದವರೇ ಆಗಿದ್ದರು. ಟ್ಯೂಶನ್ ವಿಚಾರ ಇಲ್ಲಿನ ಮಕ್ಕಳಿಗೆ ಗೊತ್ತೇ ಇಲ್ಲ ಮನೆಯಲ್ಲಿಯೇ ಹೇಳಿಕೊಡುವವರು ಇಲ್ಲ ಆದರೂ ಈ ಶಾಲೆಯ ಮಕ್ಕಳ ಸಾಧನೆ ಯಾವ ಖಾಸಗೀ ಶಾಲೆಯನ್ನೂ ಮೀರಿಸುವಂತಿದೆ.
ಗುರುವಾಯನಕೆರೆ ಶಾಲೆ ಮೊದಲಿನಿಂದಲೂ ಉತ್ತಮ ಫಲಿತಾಂಶವನ್ನು ದಾಖಲಿಸುತ್ತಾ ಬರುತ್ತಿತ್ತು. 2012ರ ಬಳಿಕ ಸತತವಾಗಿ ಶೇ.100 ಪಲಿತಾಂಶ ಬರುತ್ತಿದೆ. ಈ ವರ್ಷ ಇಲ್ಲಿ 89 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ ಇಬ್ಬರು 600 ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿದ್ದರೆ, 37 ಮಂದಿ 500 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿಯೇ ಉತ್ತೀರ್ಣರಾಗಿದ್ದಾರೆ.
ಈ ಶಾಲೆಗೆ ಸಮೀಪದ ಹಳ್ಳಿಗಳಿಂದ ವಿದ್ಯಾರ್ಥಿಗಳು ಎಂಟನೇ ತರಗತಿಗೆ ಬರುತ್ತಾರೆ ಬರುವ ಎಲ್ಲರಿಗೂ ಇಲ್ಲಿ ಕಲಿಯುವ ಅವಕಾಶವನ್ನು ನೀಡಲಾಗುತ್ತದೆ. ಬರುವ ವಿದ್ಯಾರ್ಥಿಗಳನ್ನು ಉತ್ತಮ ರೀತಿಯಲ್ಲಿ ಕಲಿಸಿ ಅಂತಿಮ ಪರೀಕ್ಷೆಗೆ ಸಿದ್ದಗೊಳಿಸುವ ಕಾರ್ಯವನ್ನುಇಲ್ಲಿನ ಶಿಕ್ಷಕರು ಮಾಡುತ್ತಿದ್ದಾರೆ. ಶಿಕ್ಷಕರ ನಿರಂತರ ಪ್ರಯತ್ನದ ಫಲವಾಗಿಯೇ ಶಾಲೆ ಉತ್ತಮ ಫಲಿತಾಂಶವನ್ನು ಪಡೆಯುತ್ತಿದೆ.
ಸಾಧನೆಯ ಹಿಂದೆ ಶಿಕ್ಷಕರ ಪಾತ್ರ : ಶಾಲೆಯ ಶಿಕ್ಷಕರು ಕೇವಲ ಶಾಲಾ ಅವಧಿಯಕಾರ್ಯಕ್ಕೆ ಮಾತ್ರ ಎಂದೂ ಸೀಮಿತರಾದವರಲ್ಲ ಶಾಲೆಗೆ ಬರುವ ಪ್ರತಿಯೊಂದು ಮಗುವಿನ ಹಿನ್ನಲೆಯನ್ನೂ ತಿಳಿದುಕೊಂಡು ಅವರ ಮನೆಗಳಿಗೆ ತೆರಳಿ ಪೋಷಕರ ಸಮಸ್ಯೆಗಳನ್ನೂ ತಿಳಿದುಕೊಂಡು ಆಯಾ ಮಕ್ಕಳಿಗೆ ಬೇಕಾದ ಹಾಗೆ ನೆರವಾಗುವ ಅವರಲ್ಲಿ ದೈರ್ಯ ತುಂಬುವ ಕಾರ್ಯವನ್ನು ಮಾಡುತ್ತಲೇ ಮಕ್ಕಳನ್ನು ಬೆಳೆಸುತ್ತಾರೆ. ಪ್ರತಿಯೊಂಬ್ಬ ವಿದ್ಯಾರ್ಥಿಯೂ ಬೆಳಿಗ್ಗೆ ಐದು ಗಂಟೆಗೆ ಎದ್ದು ಓದುವಂತೆ ನೋಡಿಕೊಳ್ಳುತ್ತಾರೆ. ಬೆಳಿಗ್ಗೆ ಎದ್ದ ವಿದ್ಯಾರ್ಥಿಗಳು ಶಿಕ್ಷರ ದೂರವಾಣಿಗೆ ಮಿಸ್ಕಾಲ್ ನೀಡಿತಾವು ಓದಲು ಆರಂಬಿಸಿದ್ದೇವೆ ಎಂಬ ಸೂಚನೆಯನ್ನು ನೀಡುತ್ತಾರೆ. ಆಗಾಗ ನಡೆಯುತ್ತಿರುವ ಪೋಷಕರ ಸಭೆಗಳಿಗೆ ಎಲ್ಲ ಪೋಷಕರೂ ಭಾಗವಹಿಸುತ್ತಾರೆ. ಮಕ್ಕಳ ಹಾಜರಾತಿಯ ಬಗ್ಗೆಯೂ ಹೆಚ್ಚಿನಜಾಗ್ರತೆ ವಹಿಸುತ್ತಾರೆ ಗೈರು ಹಾಜರಾದರೆ ಆಗಲೆ ಮನೆಯವರನ್ನು ಸಂಪರ್ಕಿಸುವ ಕಾರ್ಯ ಮಾಡುತ್ತಾರೆ. ಬೆಳಿಗ್ಗೆ ಒಂಬತ್ತುಗಂಟೆಯಿಂದ ಸಂಜೆ ಐದರವರೆಗೆ ಶಿಕ್ಷಕರು ಮಕ್ಕಳು ಶಾಲೆಯಲ್ಲಿದ್ದು ಕಲಿಕೆಯ ಕಾರ್ಯ ಮಾಡುತ್ತಾರೆ. ಬಹುತೇಕ ರಜಾ ದಿನಗಳಲ್ಲಿ ಹಾಗೂ ಅಕ್ಟೋಬರ್ ರಜೆಯಲ್ಲಿಯೂ ತರಗತಿಗಳು ನಡೆಯುತ್ತಿರುತ್ತದೆ. ಶಿಕ್ಷಕರು ಅಡುಗೆಯವರೂ ರಜಾದಿನಗಳೆನ್ನದೆ ಶಾಲೆಗೆ ಬರುತ್ತಾರೆ.
ಆಧುನಿಕ ಶಿಕ್ಷಣದಲ್ಲೂ ಸೈ : ದಾನಿಗಳು, ಸಂಸ್ಥೆಗಳು, ಇಲಾಖೆ ನೀಡಿದ ಕಂಪ್ಯೂಟರ್ಗಳು ಈಗಲೂ ಉತ್ತಮವಾಗಿದೆ. ಎಷ್ಟೋ ಶಾಲೆಗಳಿಗೆ ಕಂಪ್ಯೂಟರ್ ನೀಡಿದ್ದರೂ ನಿರ್ವಹಣೆ ಇಲ್ಲದೆ ಮೂಲೆ ಸೇರಿದೆ. ಆದರೆ ಇಲ್ಲಿಯ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ.
ಚಿತ್ರಗಳ ಚಿತ್ತಾರದ ಶಾಲೆ : ಶಾಲೆಗಳ ಗೋಡೆಗಳಲ್ಲಿ ದಾರ್ಶನಿಕರ ಚಿತ್ರಗಳು, ಬದುಕಿನ ಮೌಲ್ಯಗಳನ್ನು ತಿಳಿಸುವ ನುಡಿ ಬರಹಗಳನ್ನು ಕಾಣಬಹುದಾಗಿದೆ. ಕಲಾ ಶಿಕ್ಷಕ ವಿ.ಕೆ. ವಿಟ್ಲ ಅವರ ಚಿತ್ರಗಳು ರಾರಾಜಿಸುತ್ತಿದೆ. ಕ್ಲಾಸ್ ರೂಂಗಳು ಕಲಾಗುಡಿಯಾಗಿದೆ. ಪಾಠ ಕೇಳಿಸಿಕೊಳ್ಳವ ವಿದ್ಯಾರ್ಥಿಗಳಿಗೆ ಇಂತಹ ವಾತಾವರಣ ಇನ್ನಷ್ಟು ಶಾಂತಚಿತ್ತತೆಯನ್ನು ಕಲ್ಪಿಸಿದೆ.
ಸಹಕಾರ : ಶಾಲಾಭಿವೃದ್ಧಿ ಸಮಿತಿಯ ಸಹಕಾರ ಶಾಲೆಯ ಶಿಕ್ಷಕರನ್ನು ಸ್ಥೈರ್ಯವನ್ನು ಗಟ್ಟಿಗೊಳಿಸಿದೆ. ವಿದ್ಯಾರ್ಥಿಗಳನ್ನು ನೈತಿಕ ಶಿಕ್ಷಣದ ಮೂಲಕ ತಯಾರುಗೊಳಿಸುವ ಶಾಲೆಗೆ ಸಮಿತಿಯವರ ಕೊಡುಗೆ ಅಪಾರ. ಸ್ಥಳೀಯರು ಯಾರೂ ಶಾಲೆಗೆ ಯಾವುದಕ್ಕೂ ಕಡಿಮೆ ಮಾಡಿದವರಲ್ಲ. ಶಾಲೆಯ ಎಲ್ಲ ಅಗತ್ಯಗಳಿಗೂ ಮುಂದೆ ನಿಂತು ಬೆಂಬಲಿಸುವ ಸ್ಥಳೀಯರಾದ ರಮೇಶ್ ಬಂಗೇರ, ಅಲ್ಫೋನ್ಸ್ ಫ್ರಾಂಕೋ, ಅಬ್ದುಲ್ ಲತ್ತೀಫ್, ಹೀಗೆಊರಿನ ಹಲವರುದಾನಿಗಳು ಮಕ್ಕಳಿಗೆ ಸದಾ ಪ್ರೋತ್ಸಾಹಕರಾಗಿದ್ದಾರೆ.
ಶಾಸಕ ಕೆ ವಸಂತಬಂಗೇರ ಅವರಿಗೂ ಈ ಶಾಲೆ ಅಚ್ಚು ಮೆಚ್ಚಿನದು. ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕರಾಗಿ ಅವರು ಸದಾ ಶಾಲೆಯ ಬೆಂಬಲಕ್ಕೆ ನಿಂತಿದ್ದಾರೆ. ಮಾಜಿ ಜಿಪಂ ಅಧ್ಯಕ್ಷ ಕೊರಗಪ್ಪ ನಾಯ್ಕ್, ಮಾಜಿ ಜಿಪಂ ಸದಸ್ಯೆ ತುಳಸಿ ಹಾರಬೆ, ಹಾಲಿ ಜಿಪಂ ಸದಸ್ಯೆ ಮಮತಾ ಶೆಟ್ಟಿ, ಕುವೆಟ್ಟು ಗ್ರಾಪಂ ಆಡಳಿತ ಹೀಗೆ ಜನಪ್ರತಿನಿಧಿಗಳು ತಮ್ಮ ಸಹಕಾರ ಅನುದಾನ ನೀಡಿ ಪ್ರೋತ್ಸಾಹಿಸಿದ್ದಾರೆ. ಇವರೆಲ್ಲರ ನೆರವಿನಿಂದ ಶಾಲೆ ಮಾದರಿಯಾಗಿ ಮುಂದುವರಿಯುತ್ತಿದೆ.
ಬೇಡಿಕೆಗಳು : ಸರಕಾರಿ ಶಾಲೆ ಎಂದಾಕ್ಷಣ ಕೊರತೆ ಇರುವಂತದ್ದೆ. ಎಲ್ಲರೂ ಎಲ್ಲ ರೀತಿಯ ಸಹಕಾರಗಳನ್ನು ಮಾಡುತ್ತಿದ್ದರೂ ಈ ಶಾಲೆಗೆ ಇನ್ನೂ ಹಲವು ಬೇಡಿಕೆಗಳಿವೆ. ಸುಮಾರು ಎಂಟು ಎಕ್ರೆ ಜಾಗವಿದ್ದರೂ ಕ್ರೀಡಾಂಗಣವಿಲ್ಲ. ಅದೇ ರೀತಿ ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಸಭಾಂಗಣವಿಲ್ಲ, ಪುಸ್ತಕಗಳು ಬೇಕಾದಷ್ಟಿದ್ದರೂ ವಾಚನಾಲಯದ ಕಟ್ಟಡವಿಲ್ಲ, ಇದೆಲ್ಲವನನ್ನೂ ಈಡೇರಿಸುವ ಮೂಲಕ ಶಾಲೆಯ ಇನ್ನಷ್ಟು ಪ್ರಗತಿಗೆ ಸರಕಾರ ಶ್ರಮಿಸಬೇಕಾಗಿದೆ ಎಂಬುದು ಇಲ್ಲಿನ ಜನರ ಒತ್ತಾಯವಾಗಿದೆ.
ಸರಕಾರಿ ಶಾಲೆಯನ್ನು ಮಾದರಿಯಾಗಿ ರೂಪಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ. ಶಿಕ್ಷಕರು, ಪೋಷಕರು, ಶಾಲಾಭಿವೃದ್ದಿ ಸಮಿತಿ, ಇಲಾಖಾಧಿಕಾರಿಗಳ ಹಾಗೂ ಮಕ್ಕಳ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ. ಕಲಿಕೆಯಲ್ಲಿ ಹಿಂದಿದ್ದವರೂ ಶಾಲೆಗೆ ಬರುತ್ತಾರೆ. ಅವರನ್ನು ಗುರುತಿಸಿ ಬೆಂಬಲಿಸುತ್ತೇವೆ. ಇಡೀ ವರ್ಷಕ್ಕೆ ಬೇಕಾದ ಒಂದು ಕಾರ್ಯತಂತ್ರವನ್ನು ರೂಪಿಸಿ ಅದನ್ನು ಜಾರಿಗೆತರುತ್ತೇವೆ.–ಪ್ರಶಾಂತ್ಎಲ್, ಪ್ರಭಾರ ಮುಖ್ಯೋಪಾಧ್ಯಾಯರು.
ಶಾಲೆಯಲ್ಲಿ ಶಿಕ್ಷಕರು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ, ರಜಾದಿನಗಳಲ್ಲಿ ಯೂತಮ್ಮ ಕೆಲಸಗಳನ್ನು ಬಿಟ್ಟು ಶಾಲೆಗೆ ಬಂದು ಪಾಠ ಹೇಳುತ್ತಾರೆ. ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಪರೀಕ್ಷೆಯ ಸಮಯದಲ್ಲಿ ಧೈರ್ಯತುಂಬಿ ಮುನ್ನಡೆಸುತ್ತಾರೆ.ಅದರಿಂದಾಗಿನಾವುಉತ್ತಮ ಸಾಧನೆ ಮಾಡುವಂತಾಗಿದೆ.ಶ್ವೇತಾ, ಈ ಬಾರಿ ಅತಿ ಹೆಚ್ಚು (608) ಅಂಕ ಪಡೆದ ವಿದ್ಯಾರ್ಥಿನಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.