ಎಡಪಂಥೀಯರು ಇಡೀ ದೇಶದಲ್ಲಿ ಕಡಿಮೆಯಾಗಿರಬಹುದು. ಆದರೆ ಅವರ ರಾಜಕೀಯ ಪ್ರೇರಿತ ಹಿಂಸಾಕೃತ್ಯಗಳು ಇನ್ನೂ ತಮ್ಮ ಗಣನೀಯ ಅಸ್ತಿತ್ವ ಇರುವ ಪಶ್ಚಿಮ ಬಂಗಾಳ ಹಾಗೂ ಕೇರಳದ ವಾತಾವರಣವನ್ನು ದೂಷಿತಗೊಳಿಸಿದೆ ಎಂದರೆ ತಪ್ಪಾಗಲಾರದು. ರಾಜಕೀಯ ಪ್ರೇರಿತ ಹಿಂಸೆಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಪ್ಪಲು ಸಾಧ್ಯವಿಲ್ಲ. ಎಡಪಂಥೀಯರು ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ಮೊದಲು ಕಾಂಗ್ರೆಸ್, ನಂತರ ಹುಟ್ಟಿಕೊಂಡ ತೃಣಮೂಲ ಕಾಂಗ್ರೆಸ್ ನ ಮೇಲೆ ತನ್ನ ಪ್ರಬಲ ಹೋರಾಟವನ್ನು ನೀಡಿದೆ. ಸಿಪಿಎಂ ಮತ್ತು ತೃಣಮೂಲ ಕಾಂಗ್ರೆಸ್ ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹೊಂದಿರುವ ಈ ಸಂದರ್ಭದಲ್ಲಿ ಎಡಪಂಥೀಯರ ಹಿಂಸಾಚಾರಗಳನ್ನು ನಾಶಪಡಿಸದೆ ಹೋದಲ್ಲಿ ಬಿಜೆಪಿಯೂ ರಕ್ತಪಾತದಿಂದ ಸಾಕಷ್ಟು ನಷ್ಟ ಅನುಭವಿಸಬೇಕೆಂಬುದರಲ್ಲಿ ಎಳ್ಳಷ್ಟೂ ಸಂಶಯ ಬೇಡ.
ಎಡಪಂಥೀಯರು 34 ವರ್ಷಗಳಷ್ಟು ಆಳ್ವಿಕೆಯಲ್ಲಿದ್ದ ಪಶ್ಚಿಮ ಬಂಗಾಳದಲ್ಲಿ ತಮ್ಮ ಹಿಂಸಾಚಾರದ ರಾಜಕೀಯವನ್ನು ವ್ಯಾಪಕವಾಗಿ ಬೆಳೆಸಿದ್ದಾರೆ. ಅಲ್ಲಿ ಈಗಷ್ಟೇ ಬಲಗೊಳ್ಳುತ್ತಿರುವ ಕಾಂಗ್ರೆಸ್ಸಿಗೆ ಎಡಪಂಥೀಯರ ಜೊತೆಗಿನ ಹೋರಾಟ ಅಷ್ಟು ಸುಲಭದ್ದಲ್ಲ. ಆದರೆ ಎಡಪಂಥೀಯರಿಗೆ ಸವಾಲೆಸೆದು ತೃಣಮೂಲ ಕಾಂಗ್ರೆಸ್ಸನ್ನು ಬಲಪಡಿಸಿಕೊಂಡ ಕೀರ್ತಿ ಅದರ ನಾಯಕಿ ಮಮತ ಬ್ಯಾನರ್ಜಿಗೆ ಸಲ್ಲಲೇಬೇಕು. ಆಕೆಯ ಪಕ್ಷದ ಅನೇಕ ಕಾರ್ಯಕರ್ತರ ಮೇಲೆ ಹಲ್ಲೆ ಹಾಗೂ ಅನೇಕರ ಸಾವು ಸಂಭವಿದ್ದಲ್ಲದೆ ಸ್ವತಃ ಮಮತಾ ಬ್ಯಾನರ್ಜಿ ಅವರ ಮೇಲೆ ಎಡಪಂಥೀಯರು ಹಲ್ಲೆ ನಡೆಸಿದ ಘಟನೆಗಳು ನಡೆದಿತ್ತು. ಆದರೆ ಕಮ್ಯುನಿಸ್ಟರ ಯಾವುದೇ ಕ್ರೌರ್ಯಕ್ಕೂ ಮಮತಾ ಬ್ಯಾನರ್ಜಿ ಧೃತಿಗೆಡಲಿಲ್ಲ. ಅವರ ಗೆಲುವಿಗೆ ಮುಖ್ಯ ಕಾರಣ ಎಡಪಂಥೀಯರ ಕ್ರೌರ್ಯಕ್ಕೆ ಅವರದೇ ಆದ ಭಾಷೆಯಲ್ಲಿ ಉತ್ತರಿಸಿದ್ದು. ಇದರಿಂದಾಗಿ ಕಮ್ಯುನಿಸ್ಟರ ಕ್ರೌರ್ಯದಿಂದ ರೋಸಿ ಹೋಗಿದ್ದ ಜನರಲ್ಲಿ ಒಂದಷ್ಟು ಆತ್ಮವಿಶ್ವಾಸ ತುಂಬಿತು. ಇದೀಗ ತೃಣಮೂಲ ಕಾಂಗ್ರೆಸ್ ಕಮ್ಯುನಿಸ್ಟರ ಹಿಂಸೆಯ ರಾಜಕೀಯವನ್ನು ಸಂಪೂರ್ಣವಾಗಿ ಹಿಂದಿಕ್ಕಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ಸಿನೆದುರು ಈಗ ಕಮ್ಯುನಿಸ್ಟರು ಈಗ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿಗೆ ತಲುಪಿದ್ದಾರೆ.
ಆದರೆ ಕೇರಳದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿದೆ. ಇಲ್ಲಿ ಕಾಂಗ್ರೆಸ್ಸಿನ ಯುನೈಟೆಡ್ ಡೆಮೊಕ್ರೆಟಿಕ್ ಫ್ರಂಟ್ (UDF) ಎಂಬ ಒಕ್ಕೂಟವು ಎಡಪಂಥೀಯರ ಲೆಫ್ಟ್ ಡೆಮೊಕ್ರೆಟಿಕ್ ಫ್ರಂಟ್ (LDF) ಎಂಬ ಎಡಪಂಥೀಯ ಒಕ್ಕೂಟಕ್ಕೆ ನೇರ ಹೋರಾಟವನ್ನು ನೀಡುತ್ತಿದೆ.ಪ್ರತಿ ಬಾರಿಯೂ ಇಲ್ಲಿನ ಸರಕಾರ ಒಂದು ಒಪ್ಪಂದದ ರೀತಿಯೋ ಎಂಬಂತೆ UDF ಮತ್ತು LDF ಗಳೊಳಗೆ ಅದಲು ಬದಲಾಗುತ್ತದೆ. ಕೇರಳದ ಜೊತೆ ಪಶ್ಚಿಮ ಬಂಗಾಳದಲ್ಲಿ ಕೂಡ ಬಿಜೆಪಿ ತನ್ನ ಆಗಮನದಿಂದ ಒಂದು ತ್ರಿಕೋನ ಸ್ಪರ್ಧೆಯನ್ನು ನೀಡಿದೆ. ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಮತ್ತು ತೃಣಮೂಲ ಕಾಂಗ್ರೆಸ್ ಗೆ ಸ್ಪರ್ಧೆ ನೀಡಿದರೆ ಕೇರಳದಲ್ಲಿ ಯುನೈಟೆಡ್ ಡೆಮೊಕ್ರೆಟಿಕ್ ಫ್ರಂಟ್ (UDF) ಮತ್ತು ಲೆಫ್ಟ್ ಡೆಮೊಕ್ರೆಟಿಕ್ ಫ್ರಂಟ್ (LDF) ಸ್ಪರ್ಧೆ ನೀಡುತ್ತಿದೆ.
ಬಿಹಾರವು ತನ್ನ ಆಡಳಿತ ವೈಖರಿಗೆ “ಜಂಗಲ್ ರಾಜ್” ಎಂಬ ಕುಖ್ಯಾತಿ ಪಡೆದಿದೆ. ಆದರೆ ನಾವು ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ದಿನನಿತ್ಯವೂ ಇದನ್ನೇ ನೋಡುತ್ತಿದ್ದೇವೆ. ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಅವರ ಆರ್ ಜೆ ಡಿ ಯ ಕಾರ್ಯಕರ್ತರ ಮೇಲಿನ ಆರೋಪವೇನೆಂದರೆ ಅವರು ಜನಸಾಮಾನ್ಯರಿಂದ ಹಿಡಿದು ಶ್ರೀಮಂತ ಉದ್ಯಮಿಗಳು ಹಾಗೂ ಮೇಲ್ಜಾತಿಯವರೆಂದು ಕರೆಯಲ್ಪಡುವವರ ಮೇಲೆ ಹಿಂಸೆ ನಡೆಸುತ್ತಾರೆ. ಆದರೆ ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ಸಿಪಿಎಂ, ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ನ ಕಾರ್ಯಕರ್ತರ ನಡುವೆ ರಾಜಕೀಯ ಪ್ರೇರಿತ ಹಿಂಸಾಚಾರ ನಡೆಯುತ್ತಿದೆ. ಇತ್ತೀಚೆಗೆ ಭಾಜಪ ಈ ಎರಡೂ ರಾಜ್ಯಗಳಲ್ಲಿ ತನ್ನ ಇರುವಿಕೆಯನ್ನು ತೋರಿಸಿದೆ. ಇಲ್ಲಿನ ವ್ಯವಸ್ಥಿತ ಹಾಗೂ ನಿರಂತರವಾದ ರಾಜಕೀಯ ಹಿಂಸಾಚಾರಕ್ಕೆ ಬಿಜೆಪಿ ಹಾಗೂ ಆರ್ ಎಸ್ ಎಸ್ ನ ಸಾಕಷ್ಟು ಕಾರ್ಯಕರ್ತರು ತಮ್ಮ ಜೀವದ ಬೆಲೆ ಕೊಡುತ್ತಿದ್ದಾರೆ. ಯಾಕೆಂದರೆ ದೇಶದಲ್ಲಿ ಎಲ್ಲೂ ಇಲ್ಲದ ಇಲ್ಲಿನ ಹಿಂಸಾಚಾರದ ರಾಜಕೀಯ ವ್ಯವಸ್ಥೆ ಇತ್ತೀಚೆಗೆ ಅಸ್ತಿತ್ವ ಪಡೆಯುತ್ತಿರುವ ಬಿಜೆಪಿಗೆ ಹೊಸ ಅನುಭವ. ಕೆಲವೊಂದು ಸಂದರ್ಭದಲ್ಲಿ ತನ್ನ ಮೇಲಿನ ಆಕ್ರಮಣಕ್ಕೆ ಪ್ರತ್ಯುತ್ತರ ನೀಡಿ ಎದುರಾಳಿಗಳನ್ನು ಬಗ್ಗು ಬಡಿದದ್ದೂ ಇದೆ. ಈಗ ಅನಿವಾರ್ಯವಾಗಿ ಇಲ್ಲಿರುವ ಪರಿಸ್ಥಿತಿಗೆ ಅನುಗುಣವಾಗಿ ಬಿಜೆಪಿ ಯೂ ತಮ್ಮನ್ನು ಈ ವಿಚಿತ್ರ ರಾಜಕೀಯ ವ್ಯವಸ್ಥೆಗೆ ಹೊಂದಿಸಿಕೊಳ್ಳುತ್ತಿದೆ.
ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಂಶದ ನಂತರ ನಡೆದ ಹಿಂಸಾಚಾರದ ಗಲಭೆಗಳಿಗೆ ಸಿಪಿಎಂ, ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ಯ ಕಾರ್ಯಕರ್ತರು ಒಳಗಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ರಾಜ್ಯ ಮಹಿಳಾ ಮೋರ್ಚಾದ ಅಧ್ಯಕ್ಷೆ ರೂಪಾ ಗಂಗೂಲಿಯವರ ಮೇಲೆ ಮೇ 22 ರಂದು ಕೊಲ್ಕತ್ತದ ಡೈಮಂಡ್ ಹಾರ್ಬರ್ ಎಂಬಲ್ಲಿ ತೃಣಮೂಲ ಕಾಂಗ್ರೆಸ್ಸಿನ ಕಾರ್ಯಕರ್ತರು ಆಕ್ರಮಣ ನಡೆಸಿದರು. ರೂಪಾ ಗಂಗೂಲಿಯವರು ಹೌರಾ (ಉತ್ತರ) ವಿಧಾನಸಭಾ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಲಕ್ಷ್ಮಿರತನ್ ಶುಕ್ಲಾ ಅವರ ವಿರುದ್ಧ ಸೋಲನ್ನೊಪ್ಪಿದ್ದರು. ಕಾಕ್ ದ್ವೀಪ್ ಎಂಬಲ್ಲಿಂದ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗಿ ಹಿಂದಿರುಗುವ ವೇಳೆ ಅವರ ಮೇಲೆ ನಡೆದ ಈ ಆಕ್ರಮಣದಲ್ಲಿ ಅವರ ತಲೆಗೆ ಗಾಯವಾಗಿತ್ತು. ಇದಷ್ಟೇ ಅಲ್ಲದೆ ಪಶ್ಚಿಮ ಬಂಗಾಳದಲ್ಲಿ ಇನ್ನೂ ಹಲವೆಡೆಗಳಲ್ಲಿ ಗಲಭೆಗಳು ನಡೆದವು. ಜಾಧವಪುರ್ ಎಂಬಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಸಿಪಿಎಂ ನ ಕಾರ್ಯಕರ್ತರ ಮೇಲೆ ಹಲ್ಲೆ ಹಾಗೂ ಅವರ ಹಲವಾರು ಮನೆಗಳಿಗೆ ಬೆಂಕಿಯನ್ನು ನೀಡಿದರು. ಬಂಕುರಾ ಜಿಲ್ಲೆಯ ಬಿಷ್ಣುಪುರ್ ಎಂಬಲ್ಲಿ ತೃಣಮೂಲ ಕಾಂಗ್ರೆಸ್ ಕಛೇರಿ ಮೇಲೆ ಸಿಪಿಎಂ ಕಾರ್ಯಕರ್ತರು ಧಾಳಿ ನಡೆಸಿ ಪುಡಿಮಾಡಿದ್ದರು.
ಕೇರಳದಲ್ಲೂ ಚುನಾವಣೆಯ ಫಲಿತಾಂಶದ ನಂತರ ಹಲವಾರು ಹಿಂಸೆಗಳು ನಡೆದುವು. ತ್ರಿಶ್ಶೂರಿನಲ್ಲಿ ಬಿಜೆಪಿ ಕಾರ್ಯಕರ್ತನ ಹಾಗೂ ಪಿಣರಾಯಿಯಲ್ಲಿ ಸಿಪಿಎಂ ಕಾರ್ಯಕರ್ತನ ಹತ್ಯೆ ನಡೆಯಿತು. ಈಗಿನ ಮುಖ್ಯಮಂತ್ರಿಯವರ ಸ್ವಗ್ರಾಮವಾದ ಪಿಣರಾಯಿಯಲ್ಲಿ ಸಿಪಿಎಂ ನ ಕಾರ್ಯಕರ್ತರು ಬಿಜೆಪಿ,ಆರ್ ಎಸ್ ಎಸ್ ಬೆಂಬಲಿಗರ ಮನೆ ವಾಹನಗಳ ಮೇಲೆ ಆಕ್ರಮಣ ನಡೆಸಿ ಧ್ವಂಸಗೊಳಿಸಿದರು. ಒಂದು ಮಾಹಿತಿ ಪ್ರಕಾರ ಕಣ್ಣೂರಿನಲ್ಲಿ ಸುಮಾರು 3 ಗಂಟೆಯ ಅವಧಿಯಲ್ಲಿ ಆರ್ ಎಸ್ ಎಸ್ ಹಾಗೂ ಬಿಜೆಪಿ ಸುಮಾರು 26 ಕಾರ್ಯಕರ್ತರು, 4 ಮಹಿಳಾ ಕಾರ್ಯಕರ್ತೆಯರು ಆಕ್ರಮಣಕ್ಕೊಳಗಾಗಿದ್ದರು. ಅಲ್ಲಿ ಸುಮಾರು 55 ಹಿಂಸಾತ್ಮಕ ನಡೆದಿದ್ದು ಅದರಲ್ಲಿ 15 ಮನೆ ಹಾಗೂ 6 ಅಂಗಡಿಗಳು ಹಾನಿಗೊಂಡಿದ್ದವು. ಇದಲ್ಲದೆ ಆಲಪ್ಪುರ ಜಿಲ್ಲೆಯ ಹರಿಪ್ಪಾಡ್ ನ ಆಯಪ್ಪರಂಬ್ ಎಂಬಲ್ಲಿ ಸಂಘದ ಶಾಖೆಗೆ ತೆರಳಿದ್ದ ಬಾಲಕರ ಸಿಪಿಎಂ ನವರು ಆಕ್ರಮಿಸಿ ಒಬ್ಬ ಬಾಲಕನಿಗೆ ಚಾಕುವಿನ ಗಾಯಗಳಾದುವು.
ಕಮ್ಯುನಿಸ್ಟರ ಈ ವ್ಯಾಪಕ ಹಿಂಸಾಚಾರದ ವಿರುದ್ಧ ಕೇಂದ್ರದ ಹಲವು ಮಂತ್ರಿಗಳ ನಿಯೋಗ ಈಗಾಗಲೇ ರಾಷ್ಟ್ರಪತಿಯವರನ್ನು ಭೇಟಿ ಮಾಡಿದೆ. ಈ ಎರಡು ರಾಜ್ಯಗಳಲ್ಲಿ ನಡೆಯುತ್ತಿರುವ ರಾಜಕೀಯ ಪ್ರೇರಿತ ಹಿಂಸೆ ನಿಲ್ಲುವಂತೆ ಮಾಡಬೇಕೆಂದು ರಾಷ್ಟ್ರಪತಿಯವರನ್ನು ಈ ನಿಯೋಗ ಕೋರಿದೆ. ಮೇ 29 ರಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾದಾಗ ಪ್ರಸಕ್ತ ಸರಕಾರವು ಕೇರಳದಲ್ಲಿರುವ ರಾಜಕೀಯ ಹಿಂಸಾಚಾರವನ್ನು ನಿಲ್ಲಿಸಲು ಬೇಕಾದ ಕ್ರಮ ಕೈಗೊಳ್ಳಲು ಕೇರಳದ ಮುಖ್ಯಮಂತ್ರಿಗೆ ಮೋದಿಯವರು ಸೂಚನೆ ನೀಡಿದ್ದಾರೆ. 14 ರಾಜ್ಯಗಳಲ್ಲಿ ಹಾಗೂ ಕೆಂದ್ರದಲ್ಲಿ ಸರಕಾರಲ್ಲಿರುವ ಬಿಜೆಪಿ ಯ ಸಾಮರ್ಥ್ಯವನ್ನು ಸಿಪಿಎಂ ಕಡೆಗಣಿಸುವುದು ಸರಿಯಲ್ಲ. ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ರಾಜಕೀಯ ಪ್ರೇರಿತ ಹಿಂಸಾಚಾರ ನಿಲ್ಲಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಂಸೆಗೆ ಸ್ಥಾನವಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಬೇಕಿದೆ. ಈ ನಿಟ್ಟಿನಲ್ಲಿ ರಾಜಕೀಯ ಪ್ರೇರಿತ ಹಿಂಸೆಯನ್ನು ತಡೆಯುವ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ವ್ಯಾಪಕವಾಗಿ ಬೆಳೆಯುವುದರಲ್ಲಿ ಸಂಶಯವೇ ಬೇಡ.
ಮೂಲ: ಕುಮಾರ್ ಶಕ್ತಿ ಶೇಖರ್
ಕನ್ನಡ ಅನುವಾದ : ಶಿವಕೃಷ್ಣ ಯನ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.