News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 23rd November 2024


×
Home About Us Advertise With s Contact Us

ಬಸವಣ್ಣನ ವಚನಗಳಲ್ಲಿ ವಿವಿಧ ಸಂದೇಶಗಳು

12ನೇ ಶತಮಾನದಲ್ಲಿ ರಾಜಸತ್ತೆಯ ಬಗ್ಗೆ ರಾಜರುಗಳು, ಮತಸತ್ತೆಯ ಬಗ್ಗೆ ಧರ್ಮಗಳು ಪರಸ್ಪರ ಸಂಘರ್ಷಕ್ಕೆ ನಿಂತಾಗ ಜನಪರ ಆಂದೋಲನವಾಗಿ ಆತ್ಮೋದ್ಧಾರದ ತತ್ವಗಳನ್ನು ಪ್ರತಿಪಾದಿಸುತ್ತ ಸಮಾಜೋದ್ಧಾರದ ಉಪೇಕ್ಷೆಗಳು ಬೆಳೆದು ಶೋಷಣೆ ವರ್ಧಿಸಿದಾಗಲೇ ಕರ್ನಾಟಕದಲ್ಲೊಂದು ಕ್ರಾಂತಿಯುಂಟಾಯಿತು. ಅದೇ ಶಿವಶರಣರ ಕ್ರಾಂತಿ, ಆಡು ನುಡಿ ಭಾಷೆಯಲ್ಲಿ ಪಸರಿಸಿದ್ದೇ ವಚನ ಸಾಹಿತ್ಯದ ಸಂಪತ್ತು. ವಚನ ಸಾಹಿತ್ಯ ಕರ್ನಾಟಕದ ಬಹು ದೊಡ್ಡ ಸಾಂಸ್ಕೃತಿಕ ಭಂಡಾರ.

ಶಿವಶರಣರು ಎಂದಾಗ ಮುಖ್ಯವಾಗಿ ಕ್ರಾಂತಿಯೋಗಿ ಬಸವಣ್ಣ ನೆನಪಾಗುತ್ತಾರೆ. ಬಸವಣ್ಣ ಜಗತ್ತು ಕಂಡ ಅಪರೂಪದ ವ್ಯಕ್ತಿ ಮಾತ್ರವಲ್ಲ. ಸಮಗ್ರ ಯುಗಪುರುಷನಾಗಿದ್ದಾನೆ. ಬಸವಣ್ಣನ ವಚನಗಳಲ್ಲಿ ಬರುವ ಸಂದೇಶಗಳು ಜಗತ್ತಿನ ಯಾವುದೇ ಸಂದೇಶಗಳಿಗಿಂತ ಕಡಿಮೆಯೇನಲ್ಲ.

ಕಲಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ
ಮುನಿಯ ಬೇಡ, ಅನ್ಯರಿಗೆ ಅಸಹ್ಯ ಪಡಬೇಡ,
ತನ್ನ ಬಣ್ಣಿಸಬೇಡ, ಇದಿಕ ಹಳಿಯಲು ಬೇಡ,
ಇದೇ ಅಂತರಂಗದ ಶುದ್ಧಿ, ಇದೇ ಬಹಿರಂಗದ ಶುದ್ಧಿ,
ಇದೇ ನಮ್ಮ ಕೂಡಲ ಸಂಗಮ ದೇವರನೊಲಿಸುವ ಪರಿ.

ಕಳ್ಳತನ, ಕೊಲೆ, ಸುಳ್ಳು ಹೇಳುವುದು, ಅನ್ಯರ ಮೇಲೆ ಸಿಟ್ಟಾಗುವುದು, ಅಸಹ್ಯ ಪಡುವುದು, ತನ್ನನ್ನು ತಾನು ವರ್ಣಿಸಿಕೊಳ್ಳುವುದು, ಇತರರನ್ನು ಜರೆಯುವುದು ಬೇಡ. ಇವೆಲ್ಲವನ್ನು ನಾವು ಬಿಟ್ಟಾಗ ಇದೇ ನಮ್ಮ ಅಂತರಂಗ ಮತ್ತು ಬಹಿರಂಗವನ್ನು ಶುದ್ಧಿಗೊಳಿಸುತ್ತವೆ. ಇದೇ ಬದುಕಿನಿಂದ ನಾವು ದೇವರನ್ನು ಒಲಿಸಿಕೊಳ್ಳುವ ಕ್ರಮ ಎಂದಾಗ ಎಂತಹ ಉನ್ನತ ಸಂದೇಶವನ್ನು ಬಸವಣ್ಣ ಜಗತ್ತಿಗೆ ನೀಡಿದ್ದಾನೆಂದು ತಿಳಿದು ಬರುತ್ತದೆ.

ದಯವಿಲ್ಲದ ಧರ್ಮವದೇವುದಯ್ಯ?
ದಯೆಯೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ.
ದಯವೇ ಧರ್ಮದ ಮೂಲವಯ್ಯಾ,
ಕೂಡಲ ಸಂಗಯ್ಯನಂತೆಲ್ಲದೊಲ್ಲನಯ್ಯಾ.

ಎಂಬ ವಚನದ ಭಾವವು ಜಗತ್ತಿನ ದಾರ್ಶನಿಕರು ನೀಡಿದ ಸಂದೇಶದಂತಿದೆ. ಹೊಡಿ-ಬಡಿ-ಕೊಲ್ಲು ಎನ್ನುವ ಧರ್ಮ ಇದನ್ನು ಮನಗಾಣಬೇಕಾಗಿದೆ. ದಯವೇ ಇಲ್ಲದ ಧರ್ಮ ಯಾವುದು? (ಅಂತಹ ಧರ್ಮಕ್ಕೆ ಧಿಕ್ಕಾರ) ಸರ್ವ ಪ್ರಾಣಿಗಳೇ- ಎಲ್ಲರಲ್ಲೂ ದಯವೇ ಬೇಕು, ಧರ್ಮದ ಮೂಲವೇ ದಯೆ. ದಯೆ ಇಲ್ಲದೊಡೆ ಕೂಡಲ ಸಂಗಮ ದೇವನು ಒಪ್ಪನು ಎನ್ನುತ್ತಾರೆ.

ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರೋ
ಸತ್ಯವ ನುಡಿಯುವುದೇ ದೇವಲೋಕ, ಮಿಥ್ಯವ ನುಡಿಯುವುದೇ ಮರ್ಥ್ಯಲೋಕ
ಆಚಾರವೇ ಸ್ವರ್ಗ- ಅನಾಚಾರವೇ ನರಕ,
ಕೂಡಲ ಸಂಗಮ ದೇವಾ ನೀನೇ ಪ್ರಮಾಣು.

ಸ್ವರ್ಗಲೋಕದಲ್ಲಿ ಸಂತೋಷಪಡಲಿರುವ ಈ ಜನರ ಕಲ್ಪನೆಗೆ ಸ್ವರ್ಗನರಕದ ಬಗ್ಗೆ ಸತ್ಯವೇ ಸ್ವರ್ಗ, ಸುಳ್ಳೇ ನರಕ, ಆಚಾರವೇ ಸ್ವರ್ಗ, ಅನಾಚಾರವೇ ನರಕ ಇದಕ್ಕೆ ಕೂಡಲ ಸಂಗಮ ದೇವನೇ ಸಾಕ್ಷಿ ಎನ್ನುತ್ತಾರೆ. ಸ್ವರ್ಗದ ಆಸೆಯಿಂದ ಸಂಪಾದನೆಗಾಗಿ ದೇವಸ್ಥಾನ ಕಟ್ಟಿಸುವುದು, ಢಾಂಭಿಕತನದ ಸೋಗಲಾಡಿ ಭಕ್ತರಿಗಾಗಿ ಎನ್ನುತ್ತಾರೆ.

ಉಳ್ಳವರು ಶಿವಾಲಯವ ಮಾಡಿಹರು,
ನಾನೇನ ಮಾಡುವೆನು ಬಡವನಯ್ಯ.
ಎನ್ನ ಕಾಲೇ ಕಂಬ,
ದೇಹವೇ ದೇಗುಲ,
ಶಿರ ಹೊನ್ನ ಕಲಶವಯ್ಯಾ.
ಕೂಡಲ ಸಂಗಮ ದೇವಾ ಕೇಳಯ್ಯಾ
ಸ್ಥಾವರಕ್ಕೆ ಅಳೆಯುಂಟು, ಜಂಗಮಕ್ಕಳಿವಿಲ್ಲ.

ಹಣವಿದ್ದವರು ದೇವಸ್ಥಾನ ಕಟ್ಟಿಸುತ್ತಾರೆ, ಬಡವನಾದ ನಾನೇನು ಮಾಡಲಿ, ಎನ್ನ ಕಾಲು ಕಂಬವಾಗಿ, ದೇಹ ದೇಗುಲವಾಗಿ, ತಲೆಯೇ ದೇವಸ್ಥಾನದ ಹೊನ್ನ ಕಳಸವಾಗಿ, ಓ ದೇವರೇ ಕೇಳು, ಭೌತಿಕವಾದ ಕಲ್ಲು ಮಣ್ಣಿಂದ ಕೂಡಿದ ಈ ದೇವರ ಸ್ಥಾವರ ಕಾಲಾನುಕಾಲಕ್ಕೆ ನಶಿಸಿ ಹೋಗುತ್ತದೆ. ಆದರೆ ಆತ್ಮಜ್ಞಾನದ ಈ ಜಂಗಮ ಆತ್ಮಕ್ಕೆ ಎಂದೂ ಅಳಿವಿಲ್ಲ ಎನ್ನುತ್ತಾರೆ. ಎಂತಹ ಎಂತಹ ಸುಂದರ ಭಾವನಾತ್ಮಕ ಸಂದೇಶ ಆತ್ಮೋದ್ಧಾರದ ಸಾರ. ಕಾಮಿನಿ-ಕಾಂಚನ- ಧನ- ಕನಕ-ಪದವಿ ಸ್ಥಾನ ಮಾನಗಳ ಬೇಡವೆನ್ನುವ ಬಸವಣ್ಣ ತನ್ನ ವಚನದಲ್ಲಿ

ಬ್ರಹ್ಮ ಪದವಿಯನೊಲ್ಲೆ, ವಿಷ್ಣುಪದವಿಯನೊಲ್ಲೆ,
ರುದ್ರ ಪದವಿಯನೊಲ್ಲೆ.
ನಾನು ಮತ್ತಾವ ಪದವಿಯ ನೊಲ್ಲೆನಯ್ಯ.
ಕೂಡಲ ಸಂಗಮ ದೇವಾ, ನಿಮ್ಮ ಸದ್ಭಕ್ತರ
ಪಾದವನರಿದಿಪ್ಪ ಮಹಾ ಪದವಿಯೇ ಕರುಣಿಸಯ್ಯ.

ಎನ್ನುತ್ತಾರೆ. ತನಗೇನೂ ಬೇಡ. ಪದವಿ ಬೇಡ, ಸದ್ಭಕ್ತರ ಪಾದಸೇವೆಯ ಮಹಾ ಪದವಿ ಕರುಣಿಸೆಂದು ದೇವರನ್ನು ಪ್ರಾರ್ಥಿಸಿಕೊಳ್ಳುತ್ತಾರೆ. ಈ ಸಮಾಜದಲ್ಲಿ ಓಲೈಕೆ ಮಾಡುವವರು ಬಹಳಷ್ಟು ಮಂದಿ.

ನರಮಾನವರ ಓಲೈಕೆ ಯಾಕೆ ಬೇಕು? ಈ ಜೀವಕ್ಕೆ ದೇವರ ಒಲುಮೆ ಬೇಕು. ಓಲೈಕೆ ಬೇಕು.

ನೀನೊಲಿದೊಡೆ ಕೊರಗು ಕೊನರೂದಯ್ಯಾ,
ನೀನೊಲಿದೊಡೆ ಬರಡು ಹಯನಹುದಯ್ಯಾ,
ನೀನೊಲಿದೊಡೆ ವಿಷವೆಲ್ಲಾ ಅಮೃತವಹುದಯ್ಯಾ,
ಇದಿರಲ್ಲಿರ್ಪುವು ಕೂಡಲ ಸಂಗಮ ದೇವಾ.

ಭಗವಂತನೊಲಿದೊಡೆ ಒಣಗಿದ ಮರ ಚಿಗುರೊಡೆದು ಚಿಗುರೀತು. ಬರಡು ದನ- ಎಮ್ಮೆಗಳು ಕರು ಹಾಕಿ ಹಾಲು ನೀಡೀತು, ವಿಷ ಅಮೃತವಾದೀತು ನಮಗೆ ಬೇಕಾದ ಎಲ್ಲಾ ವಸ್ತುಗಳು ಎದುರಿಗೇ ಸಿಕ್ಕೀತು ದೇವರೇ ನಿನ್ನೊಲುಮೆ ಬೇಕೆನ್ನುತ್ತಾರೆ.

ಸಮಾಜದ ವಿಮರ್ಶೆಗಳ ಬಗ್ಗೆ ಬಸವಣ್ಣನ ವಚನಗಳಲ್ಲಿ ಬಲುದೊಡ್ಡ ಅಂಶಗಳಿವೆ. ಇಲ್ಲಿ ಸಮಾಜ ವಿಜ್ಞಾನಿಯ ವೈಜ್ಞಾನಿಕತೆ ಎದ್ದು ಕಾಣುತ್ತದೆ. ಡಾಂಭಿಕತನದ- ಮಾನವೀಯತೆಯಿಲ್ಲದವರ ಬಗ್ಗೆ

ಕಲ್ಲು ನಾಗರವ ಕಂಡೊಡೆ ಹಾಲನೆರೆಯೆಂಬರು,
ದಿಟದ ನಾಗರವ ಕಂಡೊಡೆ ಕೊಲ್ಲೆಂಬರಯ್ಯಾ.
ಉಂಬ ಜಂಗಮ ಬಂದಡೆ ನಡೆಯೆಂಬರು,
ಉಣದ ಲಿಂಗಕ್ಕೆ ಬೊನವ ಹಿಂಡಿಯೆಂಬರಯ್ಯಾ.

ಎಂತಹ ವಿಮರ್ಶೆ ಇದು. ಇಂದಿನ ಕಾಂಕ್ರಿಟ್ ನಾಡಿನಲ್ಲಿ ಕಲ್ಲು ನಾಗವನ್ನು ಪ್ರತಿಷ್ಠಾಪಿಸಿ, ಅಲ್ಲಿಗೇನಾದರೂ ನಿಜವಾದ ನಾಗರ ಹಾವು ಬಂದರೆ ಕೊಲ್ಲುತ್ತಾರೆ. ಮೃಷ್ಯಾನ್ನ ಪರಮಾನ್ನವನ್ನು ಉಣದ ಕಲ್ಲು ದೇವರಿಗೆ ಅರ್ಪಿಸುವ ಇವರು ಹಸಿದು ಬಂದವರಿಗೆ ಮುಂದಿನ ಮನೆಗೆ ಹೋಗಪ್ಪ ಎನ್ನುವರು. ಇದೆಂತಹ ಸಮಾಜದಲ್ಲಿರುವವರ ಆಚಾರ? ಬಸವಣ್ಣ ಇದನ್ನು ಖಂಡಿಸುತ್ತಾರೆ.

ಬಸವಣ್ಣ ನಮಗೆ ಮಾರ್ಗದರ್ಶನ ಮಾಡುವುದೇನೆಂದರೆ ಬದುಕಿನಲಿ ಸಜ್ಜನರ ಸಹವಾಸ ಬೇಕಂತೆ, ಒಂದನ್ನು ಹಿಡಿ- ಒಂದನ್ನು ಬಿಡು ಎನ್ನುತ್ತಾರೆ. ಸಾರ ಸಜ್ಜನರ ಸಂಗ ಲೇಸು ಕಂಡಯ್ಯ.. ದೂರ ದುರ್ಜನರ ಸಂಗವದು ಭಂಗವಯ್ಯಾ. ಎನ್ನುತ್ತಾ, ಸಜ್ಜನರ ಸಂಗ ಹಿಡಿ ದುರ್ಜನರ ಸಂಗ ಬಿಡು ಎನ್ನುತ್ತಾ, ಪರುಕಮಣಿ ಮುಬ್ಬಿದ ಕಬ್ಬಿಣ ಚಿನ್ನವಾಗದೇ ಪುನಃ ಕಬ್ಬಿಣವಾಗದು.

ವರ್ಣಾಶ್ರಮದ ಬಗ್ಗೆ ಬಸವಣ್ಣನ ವಚನಗಳಲ್ಲಿ ಸ್ಪಷ್ಟತೆಯಿದೆ.

ಕೊಲುವವನೇ ಮಾದಿಗ
ಹೊಲಸು ತಿಂಬವನೇ ಹೊಲೆಯ.
ಸಕಲ ಜೀವಾತ್ಮರಿಗೆ ಲೇಸನೆ ಬಯಸುವ
ನಮ್ಮ ಕೂಡಲ ಸಂಗಮ ಶರಣರೇ ಕುಲಜರು.

ಜಾತಿ ಹುಟ್ಟಿನಿಂದಲ್ಲಾ, ಕಾಯಕದ ಆಚರಣೆಯೆಂದು ತಿಳಿಸುತ್ತಾರೆ. ಸಾಮಾಜಿಕ ಸಮಾನತೆ, ಆರ್ಥಿಕ ಸಮಾನತೆಯನ್ನು ಬಸವಣ್ಣ ಎತ್ತಿ ಹಿಡಿಯುತ್ತಾನೆ. ರಾಜ ಬಿಜ್ಜಳನ ಆಸ್ಥಾನದಲ್ಲಿ ಆರ್ಥಿಕ ಮಂತ್ರಿಯಾಗಿದ್ದ ಭಡಾರಿ ಬಸವಣ್ಣ ರಾಜ್ಯದ ಆರ್ಥಿಕ ಆದಾಯ ಪ್ರಜೆಗಳಿಗೆ ಮೀಸಲು, ಎಂದು ತಿಳಿದು ಆನುಂ ಬಿಜ್ಜಳಿಗೆ ಅಂಜುವೆನೆ ಎನ್ನುತ್ತಾರೆ.

ಇಂದಿನ ಶಾಸಕ- ಮಂತ್ರಿ ಮಹೋದಯರು, ಮಾಸಿಕವಾಗಿ ಲಕ್ಷಾಂತರ ರೂ. ಸಂಬಳವನ್ನು ಪಡೆದು ನಂತರ ದಿನಗಳಲ್ಲಿ ಪಿಂಚಣಿಯನ್ನು ಪಡೆಯುತ್ತಾರೆ. ಕುಟುಂಬ ಸಮೇತ ವಿಶೇಷ ಯಾತ್ರೆಗೆ ತೆರಳುತ್ತಾ, ಜನಸಾಮಾನ್ಯರಿಂದ ಸಂಗ್ರಹಿಸಿದ ತೆರಿಗೆಯಿಂದ ಐಷಾರಾಮಿ ಜೀವನ ನಡೆಸುತ್ತಾರೆ. ಆದರೆ ಬಸವಣ್ಣ ತನ್ನ ಮಂತ್ರಿ ಪದವಿಯನ್ನೇ ತ್ಯಜಿಸುತ್ತಾನೆ. ತನಗೆ ಬೇಕು, ತನ್ನ ಸಂತತಿಗೆ ನಾಳೆಗೆ ಬೇಕೆಂದು ಕಪ್ಪು ಹಣ ಸಂಗ್ರಹಿಸುವ ಈಗಿನ ಮಂತ್ರಿಗಳು ಈ ವಚನವನ್ನು ಒಮ್ಮೆ ಗಮನಿಸಬೇಕು.

ಹೊನ್ನಿನೊಳಗೊಂದೊರೆಯ,
ಸೀರೆಯೊಳಗೊಂದೆಳೆಯ,
ಇಂದಿಂಗೆ- ನಾಳಿಂಗೆ ಬೇಕೆಂದ ನಾದೆಡೆ
ನಿಮ್ಮಾಣೆ- ನಿಮ್ಮ ಪ್ರಮರ್ಥಂಣೆ
ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ
ಕೂಡಲ ಸಂಗಮ ದೇವಾ.

ಚಿನ್ನದ ಒಂದು ಗೆರೆ, ಸೀರೆಯ ಒಂದು ಎಳೆ ಇವತ್ತಿಗೆ ಅಥವಾ ನಾಳೆಗೆಂದು ನಾನು ಸಂಗ್ರಹಿಸಿಲ್ಲ ನಿಮ್ಮ ಶರಣ (ಜನಸಾಮಾನ್ಯ)ನಿಗಲ್ಲದೇ ಬೇರೆನು ತಿಳಿಯೆನೆನುತ್ತಾರೆ.

ಕ್ರಾಂತಿಯೋಗಿ ಬಸವಣ್ಣನಿಂದಾಗಿ 12ನೇ ಶತಮಾನದಲ್ಲಿ ವ್ಯಕ್ತಿಸ್ವಾತಂತ್ರ್ಯ, ಅಭಿಪ್ರಾಯ ಸ್ವಾತಂತ್ರ್ಯ ಗಳಿಸುವ ಸಂಘರ್ಷವಾಗಿ, ವರ್ಣಭೇದ, ವರ್ಗಭೇದ ಹಾಗೂ ಲಿಂಗಭೇದ ನಿರಾಕರಣೆ ವಿಚಾರಗಳು ಸ್ಫೋಟಗೊಳ್ಳುತ್ತವೆ. ವಚನ ಸಾಹಿತ್ಯದಲ್ಲಿ ಮುತ್ತು ಮಾಣಿಕ್ಯದಂತಹ ಸಂದೇಶಗಳು ಸಿಗುತ್ತವೆ. ವಚನ ಸಾಹಿತ್ಯ ಅಪೂರ್ವವಾದದ್ದು.

ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ಮೇಯಿತು.
ಕೊಂದಹರೆಂಬುದ ನರಿಯದೆ
ಬೆಂದ ಒಡಲ ಹೊರವುತ್ತಲದೆ.
ಅಂದಂದೆ ಹುಟ್ಟಿತ್ತು, ಅಂದಂದೆ ಹೊಂದಿತ್ತು.
ಕೊಂದವರು ಅವರೇ ಕೂಡಲ ಸಂಗಮದೇವಾ.

ಹಾವಿನ ಬಾಯ ಕಪ್ಪೆ ಹಸಿರು,
ಹಾರುವ ನೋಣಕ್ಕೆ ಆಸೆ ಮಾಡುವಂತೆ,
ಶೂಲವನೇರುವ ಕಳ್ಳನು ಹಾಲು ತುಪ್ಪವ ಕುಡಿದು
ಮೇಲೇಸು ಕಾಲವ ಬದುಕುವನೋ?
ಕೆಡುವೋಡಲನಚ್ಚಿ , ಕಡು ಹುಸಿಯನೆ ನುಡಿದು ಒಡಲಹೊರೆವರ
ಕೂಡಲ ಸಂಗಮ ದೇವಯ್ಯನೊಲ್ಲ, ಕಾಣಿರಣ್ಣಾ.

ಹಬ್ಬದಲ್ಲಿ ಪ್ರಾಣಿಬಲಿ ಕೊಡಲು ತಂಡ ಕುರಿ ತನ್ನ ಹೊಟ್ಟೆ ಹಸಿವಿಗೆ ತಳಿರು ತೋರಣವನ್ನು ತಿನ್ನುತ್ತದೆ ಹುಟ್ಟು ಸಾವಿನ ಬಗ್ಗೆ ತಿಳಿಯದು. ಪ್ರಾಣಿ ಬಲಿ ಕೊಡುವರು ಬದುಕಿ ಉಳಿತಾರೆಯೆ? ಸಾವು ಶಾಶ್ವತ ವಲ್ಲವೇ.

ಹಸಿದ ಹಾವು ಕಪ್ಪೆಯನ್ನು ನಂಗುತ್ತದೆ, ಅದೇ ಕಪ್ಪೇ ತಾನು ಹಾವಿನ ಬಾಯಲ್ಲಿದ್ದು ತನ್ನ ಸಾವನ್ನು ತಿಳಿಯದೆ ತನ್ನ ಹಸಿವಿಗಾಗಿ ಹಾರುವ ನೋಣಕ್ಕಾಗಿ ಆಸೆ ಮಾಡುತ್ತೆ. ಗಲ್ಲು ಶಿಕ್ಷೆಗೊಳಗಾದ ಖೈದಿ ಜೈಲಿನಲ್ಲಿ ಹಾಲುತುಪ್ಪ ಸವಿದು ಇನ್ನಷ್ಟುಕಾಲ ಬದುಕ ಬಯಸ್ಸುತ್ತಾನೆ. ಕೆಟ್ಟ ಹೊಟ್ಟೆಯ ನಂಬಿ, ಹಸಿ-ಹಸಿ ಸುಳ್ಳನ್ನು ಹೇಳುತ್ತದೆ. ಹೋಟ್ಟೆ ಪಾಡಿಗಾಗಿ ಜೀವಿಸುವವರನ್ನು ದೇವರು ತನ್ನ ಬಳಿ ಸೇರಿಸಲಾರ ಜೀವದಾಸೆ- ಹೂಟ್ಟೆಪಾಡಿಗಾಗಿ ಜೀವನಸಾಗಿಸುವವರ ಭಕ್ತರಲ್ಲ ಅವರನ್ನು ದೇವರು ಸ್ವೀಕರಿಸಲಾರ ಎನ್ನು ವಚನಗಳಲ್ಲಿ ಕಂದು ಬರುತ್ತದೆ.

ಹೀಗೆ ತನ್ನ ಭಾವನೆಗಳನ್ನು ಕಲಾತ್ಮಕವಾಗಿ ಸಲಹ ಹೊರಟವನು ಬಸವಣ್ಣ ಆತ ಶರಣರ ಬದುಕನ್ನು ಕಲಾತ್ಮಕಗೋಳಿಸಲು ಹೋರಾಡಿದ ಸಂತನಾಗಿದ್ದಾನೆ. ನೋವು ವಿಷಾದ, ಪ್ರೀತಿ, ಕರುಣಸಿಟ್ಟುಗಳನ್ನು ಸಮಾಜ ವಿಮರ್ಶೆಗೆ ಬಡ್ಡುತ್ತಾನೆ. ದಯವೇ ಧರ್ಮದ ಮೂಲವಯ್ಯ. ಸತ್ಯವ ನುಡಿವುದೇ ಸ್ವರ್ಗವೆನ್ನುವ ಜಗಜ್ಯೋತಿ. ಭಕ್ತಿಭಂಡಾರಿ ಬಸವಣ್ಣ ವಿಶ್ವದ ಶ್ರೇಷ್ಠ ಸಂತರಲ್ಲಿ ಒಬ್ಬರಾಗಿದ್ದಾರೆಂದರೆ ತಪ್ಪಾಗಲಾರದು.

✍✍ ಎಂ.ವಿಶ್ವನಾಥ ಶೆಟ್ಟಿ

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top