ಮಂಗಳೂರು : ರಾಷ್ಟ್ರೀಯ ಸೇವಾ ಯೋಜನೆ ನಿಟ್ಟೆ ವಿಶ್ವವಿದ್ಯಾಲಯ ಇವರ ವತಿಯಿಂದ ಕ್ಷೇಮ ಆಸ್ಪತ್ರೆ ದೇರಳಕಟ್ಟೆ ಇದರ ನುರಿತ ವೈದ್ಯರ ಸಹಕಾರದೊಂದಿಗೆ ಜಿಲ್ಲಾ ಗೃಹರಕ್ಷಕದಳ, ದ.ಕ. ಜಿಲ್ಲೆ, ಇಲ್ಲಿಯ ಗೃಹರಕ್ಷಕರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು. ಈ ಶಿಬಿರವನ್ನು ಖ್ಯಾತ ಹೃದ್ರೋಗ ತಜ್ಞ ಕ್ಷೇಮ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ: ಸುಬ್ರಹ್ಮಣ್ಯ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.
. ಈ ಸಮಾರಂಭದಲ್ಲಿ ದ.ಕ. ಜಿಲ್ಲಾ ರೆಡ್ ಕ್ರಾಸ್ ಘಟಕದ ಆರೋಗ್ಯ ವಿಭಾಗದ ಸಭಾಪತಿ ಶ್ರೀ. ಅಜಯ್ ಕುಮಾರ್, ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ಮತ್ತು ನಿಟ್ಟೆ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ: ಮುರಳಿ ಮೋಹನ ಚೂಂತಾರು ಮತ್ತು ಡೆಪ್ಯೂಟಿ ಕಮಾಂಡೆಂಟ್, ಶ್ರೀ. ವಿ. ಪುರುಷೋತ್ತಮ ಉಪಸ್ಥಿತರಿದ್ದರು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಡಾ: ಸುಬ್ರಹ್ಮಣ್ಯ ಇವರು ಈಗಿನ ಜನರು ತಮ್ಮ ಜೀವನ ಶೈಲಿ, ಆಹಾರ ಪದ್ಧತಿ ಮತ್ತು ಧೂಮಪಾನ ಮದ್ಯಪಾನ ಮುಂತಾದ ದುಶ್ಚಟಗಳಿಂದಾಗಿ ಹೆಚ್ಚು ಹೆಚ್ಚು ರಕ್ತದೊತ್ತಡ, ಮಧುಮೇಹ ಮುಂತಾದ ರೋಗಗಳಿಗೆ ತುತ್ತಾಗಿ ಹೃದಯ ರೋಗಗಳಿಗೂ ತುತ್ತಾಗುತ್ತಿರುವುದು ವಿಷಾದನೀಯ ವಿಚಾರ ಎಂದರು. ಜನರು ಒತ್ತಡದ ಜೀವನದಿಂದಾಗಿ ಮತ್ತು ಅಸುರಕ್ಷಿತ ಆಹಾರದಿಂದಾಗಿ ರೋಗಕ್ಕೆ ತುತ್ತಾಗುತ್ತಿದ್ದಾರೆ. ಜನರು ತಮ್ಮ ದೈನಂದಿನ ವ್ಯಾಯಾಮ, ನಿಯಮಿತ ಆಹಾರ, ದೈಹಿಕ ಕಸರತ್ತು ಮತ್ತು ಒತ್ತಡವಿಲ್ಲದ ಜೀವನ ಶೈಲಿಯಿಂದ ನೂರು ಕಾಲ ಬದುಕಬಹುದು. ಹಾಗೂ ಹೆಚ್ಚಿನ ಹೃದಯ ರೋಗಗಳನ್ನು ತಡೆಗಟ್ಟಬಹುದು ಎಂದು ಕರೆ ನೀಡಿದರು.
ಯುವ ಜನತೆ ತಮ್ಮ ಜೀವನ ಶೈಲಿ ಬದಲಿಸುವುದು ಅನಿವಾರ್ಯವಾಗಿದೆ. ಈಗಿನ ೩೦-೪೦ ಹರೆಯದಲ್ಲಿಯೇ ಯುವಜನತೆ ಹೃದಯಾಘಾತಕ್ಕೆ ತುತ್ತಾಗುವುದು ಬಹಳ ದೌರ್ಭಾಗ್ಯದ ವಿಚಾರ ಎಂದರು. ಈ ಶಿಬಿರದಲ್ಲಿ ಸುಮಾರು ೧೦೦ ಕ್ಕೂ ಹೆಚ್ಚು ಗೃಹರಕ್ಷಕರು ಭಾಗವಹಿಸಿ ಪ್ರಯೋಜನ ಪಡೆದರು. ಶ್ರೀ. ವಿ. ಪುರುಷೋತ್ತಮ ಅವರು ಸಭಾ ಕಾರ್ಯಕ್ರಮ ನಿರ್ವಹಿಸಿದರು ಮತ್ತು ಡಾ: ಮುರಲೀ ಮೋಹನ ಚುಂತಾರು ಇವರು ವಂದನಾರ್ಪಣೆ ಮಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.