ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಪಡೆದ ದೆಹಲಿಯ ವಿದ್ಯಾರ್ಥಿನಿ ಟೀನಾ ದಬಿ ಅವರು ಹರಿಯಾಣದ ಮಹಿಳೆಯರನ್ನು ಸಬಲೀಕರಣ ಮಾಡುವ ಮಹದಾಸೆಯನ್ನು ಹೊತ್ತಿದ್ದಾರೆ.
ಸವಾಲಿರುವ ರಾಜ್ಯದಲ್ಲಿ ಕೆಲಸ ಮಾಡಲು ಬಯಸುತ್ತೇನೆ. ಹೀಗಾಗಿ ನನ್ನ ಆಯ್ಕೆ ಹರಿಯಾಣ. ಅಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಇದೆ, ಶಿಕ್ಷಣವೂ ಇವರಿಂದ ಬಲು ದೂರ. ಹೀಗಾಗಿ ಅಲ್ಲಿನ ಮಹಿಳೆಯರ ಸಬಲೀಕರಣ ಮಾಡಬೇಕು, ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಳಕ್ಕೆ ಕೊಡುಗೆ ನೀಡಬೇಕು ಎಂಬುದು ನನ್ನ ಗುರಿ ಎಂದು ಟೀನಾ ಹೇಳುತ್ತಾರೆ.
22 ವರ್ಷದ ಟೀನಾ ಅವರು ಲೇಡಿ ಶ್ರೀರಾಮ್ ಕಾಲೇಜಿನಲ್ಲಿ ಪದವಿ ಪಡೆದವರು. 2015ರ ನಾಗರಿಕ ಸೇವಾ ಪರೀಕ್ಷೆ ಬರೆದು ಮೊದಲ ಪ್ರಯತ್ನದಲ್ಲೇ ದೇಶಕ್ಕೆ ಪ್ರಥಮ ರ್ಯಾಂಕನ್ನು ಪಡೆದುಕೊಂಡಿದ್ದಾರೆ.
ನನ್ನ ತಾಯಿಯೇ ನನಗೆ ರೋಲ್ ಮಾಡೆಲ್ ಎನ್ನುವ ಟೀನಾ, ತಾಯಿಯ ಆಸೆಯಂತೆ ರಾಜ್ಯಶಾಸ್ತ್ರವನ್ನು ಅಧ್ಯಯನ ಮಾಡಿದವರು. ಇದು ನನ್ನ ಅಚ್ಚುಮೆಚ್ಚಿನ ವಿಷಯವಾಗಿತ್ತು, ಅದರಲ್ಲೇ ಇದೀಗ ನಾನು ಮುಂದೆ ಬಂದಿದ್ದೇನೆ ಎನ್ನುತ್ತಾರೆ ಅವರು. ಇವರ ತಾಯಿ ಇಂಡಿಯನ್ ಎಂಜಿನಿಯರಿಂಗ್ ಸರ್ವಿಸ್ನ ಮಾಜಿ ಅಧಿಕಾರಿ, ಸ್ವಯಂ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ.
ಮಗಳ ಬಗ್ಗೆ ಅತೀವ ಹೆಮ್ಮೆ ಪಟ್ಟುಕೊಳ್ಳುವ ಅವರು ತಮ್ಮ ಡ್ರೆಸ್ನಲ್ಲಿ ’ಮೈ ಡಾಟರ್ ಮೈ ಹೀರೋ’ ಎಂಬ ಬ್ಯಾಡ್ಜ್ ಹಾಕಿಕೊಂಡಿದ್ದಾರೆ.
ಇವರ ತಂದೆ ಜಸ್ವಂತ್ ಇಂಡಿಯನ್ ಟೆಲಿಕಾಂ ಸರ್ವಿಸ್ ಅಧಿಕಾರಿ, ಟೀನಾ ಪ್ರಥಮ ರ್ಯಾಂಕ್ ಪಡೆದಿದ್ದು ನನ್ನ ಜೀವನದಲ್ಲೇ ಅತೀದೊಡ್ಡ ಸಂತಸದ ಕ್ಷಣ ಎಂದು ಅವರು ವಿವರಿಸುತ್ತಾರೆ.
ಆಡಳಿತದಲ್ಲಿ ಮಹಿಳೆಯರಿಗೆ ಕಾರ್ಯನಿರ್ವಹಿಸಲು ಹೆಚ್ಚಿನ ಅವಕಾಶವನ್ನು ನೀಡಬೇಕು, ಮಹಿಳಾ ಸಬಲೀಕರಣ ಅತೀ ಮುಖ್ಯವಾದುದು. ನನ್ನನ್ನು ನನ್ನ ತಾಯಿ ಸಲಹಿದ ರೀತಿಯನ್ನು ನೋಡುತ್ತಲೇ ಬೆಳೆದೆ. ಅದರಿಂದಲೇ ನಾನಿಂದು ಟಾಪರ್ ಆಗಿ ಹೊರಹೊಮ್ಮಿದ್ದೇನೆ ಎಂದು ಟೀನಾ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.