ಬೆಂಗಳೂರು : ತಲಸ್ಸೆಮಿಯಾ ಬಾಧಿತರನ್ನು ಅಂಗವಿಕಲ (ದಿವ್ಯಾಂಗ)ರೆಂದು ಘೋಷಿಸಿ, ಅವರಿಗೆ ಅಗತ್ಯ ನೆರವು ನೀಡಬೇಕು ಎಂದು ರಾಷ್ಟ್ರೋತ್ಥಾನ ಪರಿಷತ್ನಲ್ಲಿ ನಡೆದ ವಿಶ್ವ ತಲಸ್ಸೆಮಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ತಲಸ್ಸೆಮಿಯಾ ಬಾಧಿತ ಮಕ್ಕಳ ಪೋಷಕರು ಸರ್ಕಾರವನ್ನು ಆಗ್ರಹಿಸಿದರು.
ವಿಶ್ವ ತಲಸ್ಸೆಮಿಯಾ ದಿನಾಚರಣೆಯ ಅಂಗವಾಗಿ ಮೇ 8 ರಂದು ರಾಷ್ಟ್ರೋತ್ಥಾನ ಪರಿಷತ್ನ ಸೇವಾ ಪ್ರಕಲ್ಪವಾದ ‘ಸಂರಕ್ಷಾ- ತಲಸ್ಸೆಮಿಯಾ ಆರೈಕಾ ಕೆಂದ್ರ’ದ ವತಿಯಿಂದ ವಿಶ್ವ ತಲಸ್ಸೆಮಿಯಾ ದಿನಾಚರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಅನುಭವವನ್ನು ಹಂಚಿಕೊಂಡ ಪೋಷಕರು,ಒಬ್ಬ ವ್ಯಕ್ತಿಯ ದೇಹದ ಒಂದು ಭಾಗ ಸರಿಯಾಗಿ ಕೆಲಸ ಮಾಡಿದಿದ್ದಲ್ಲಿ ಅವರನ್ನು ಅಂಗವಿಕಲರು ಎಂದು ಪರಿಗಣಿಸಲಾಗುತ್ತದೆ. ತಲಸ್ಸೆಮಿಯಾದಿಂದ ಬಳಲುತ್ತಿರುವವರ ದೇಹದಲ್ಲಿ ಗುಣಮಟ್ಟದ ರಕ್ತ ಉತ್ಪತ್ತಿಯಾಗುವುದಿಲ್ಲ. ಹೀಗಾಗಿ ಅವರನ್ನು ಕೂಡಾ ಅಂಗವಿಕಲರೆಂದು ಪರಿಗಣಿಸಿ, ಅಗತ್ಯ ನೆರವು ನೀಡಬೇಕು. ಜೊತೆಗೆ ಸರ್ಕಾರ ಅವರಿಗೆ ಉಚಿತ ಶಿಕ್ಷಣ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಿಂಡಿಕೇಟ್ ಬ್ಯಾಂಕ್ನ ಅಸಿಸ್ಟೆಂಟ್ ಮ್ಯಾನೇಜರ್ ಡಾ|| ಮೋಹನ್ ರಾವ್ ಕೆ. ಅವರು, ತಲಸ್ಸೆಮಿಯಾ ಬಾಧಿತ ಮಕ್ಕಳಿಗೆ ಉಚಿತ ರಕ್ತ ವಿತರಣೆ, ರಕ್ತಪೂರಣ (blood transfusion) ಸೇರಿದಂತೆ ಅಗತ್ಯ ಆರೈಕೆ ಸೇರಿದಂತೆ ಎಲ್ಲವನ್ನೂ ಉಚಿತವಾಗಿ ನೀಡುತ್ತಿರುವ ರಾಷ್ಟ್ರೋತ್ಥಾನದ ಈ ಸೇವಾಕಾರ್ಯ ಶ್ಲಾಘನೀಯವಾದುದು. ನನ್ನನ್ನು ಸೇರಿದಂತೆ ಸಮಾಜದ ಅಧಿಕ ಭಾಗದ ಜನರಿಗೆ ಈ ರೋಗದ ಬಗ್ಗೆ ಅರಿವೇ ಇಲ್ಲ. ಎಳೆಯ ವಯಸ್ಸಿನಲ್ಲಿ ಮಕ್ಕಳಿಗೆ ಅನುಮಂಶಿಕವಾಗಿ ಬರುವ ಈ ರೋಗ ಕುಟುಂಬದ ನೆಮ್ಮದಿಯನ್ನೇ ಕೆಡಿಸುತ್ತದೆ. ಇಂತಹ ಮಗುವಿಗೆ ಅಗತ್ಯವಾದ ಎಲ್ಲ ಆರೈಕೆಯನ್ನು ನಿರಂತರವಾಗಿ ಉಚಿತವಾಗಿ ಹಾಗೂ ಎಲ್ಲವನ್ನೂ ಒಂದೇ ಸ್ಥಳದಲ್ಲಿ ನೀಡುತ್ತಿರುವ ರಾಷ್ಟ್ರೋತ್ಥಾನ ಪರಿಷತ್ನ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸಬೇಕಾದ ಅಗತ್ಯವಿದೆ ಎಂದರು.
ರಾಷ್ಟ್ರೋತ್ಥಾನ ಪರಿಷತ್ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆಯವರು ಮಾತನಾಡಿ, ಇದು ನಮಗೆ ಸೇವೆಮಾಡಲು ಒದಗಿದ ಅವಕಾಶ. ಸಮಾಜದ ನೊಂದವರ ನೋವಿಗೆ ಸ್ಪಂದಿಸಲು ದೇವರು ನಮಗೆ ನೀಡಿದ ಅವಕಾಶ ಎಂದು ಭಾವಿಸಿ ರಾಷ್ಟ್ರೋತ್ಥಾನ ಪರಿಷತ್ ಇಂತಹ ಕೆಲಸವನ್ನು ಮಾಡುತ್ತಿದ್ದೇವೆ. ಇದೀಗ ನಮ್ಮಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು ಸೇರಿದಂತೆ ಸುಮಾರು210 ಮಂದಿ ತಲಸ್ಸೆಮಿಯಾ ಮಕ್ಕಳಿಗೆ ನಾವು ಉಚಿತವಾಗಿ ಆರೈಕೆ ನೀಡಲಾಗುತ್ತಿದೆ. ಮಕ್ಕಳ ಆರೋಗ್ಯದಲ್ಲಿ ಹಾಗೂ ಅವರ ಮಾನಸಿಕ-ದೈಹಿಕ ಬೆಳವಣಿಗೆಯಲ್ಲಿ ಗಣನೀಯ ಸುಧಾರಣೆಗಳಾಗಿದೆ ಎಂದು ಅವರು ತಿಳಿಸಿದರು.
ಸಂರಕ್ಷಾದ ವೈದ್ಯಾಧಿಕಾರಿ ಡಾ|| ರೇಷ್ಮಾ ಅವರು ಇಲ್ಲಿ ತಲೆಸ್ಸಿಮಿಯಾ ಮಕ್ಕಳಿಗೆ ರಕ್ತತಪಾಸಣೆ, ರಕ್ತಪೂರಣ ಮಾಡುವುದಲ್ಲದೇ ಫೋಲಿಕ್ ಆಸಿಡ್, ಕ್ಯಾಲ್ಸಿಯಂ ಮತ್ತು ಬಿ-ಕಾಂಪ್ಲೆಕ್ಸ್ನಂತಹ ಔಷಧಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಜೊತೆಗೆ ಪೋಷಕರಲ್ಲಿಯೂ ಜಾಗೃತಿ ಮೂಡಿಸಲಾಗುತ್ತಿದೆ. ಇದರಿಂದಾಗಿ ಇದೀಗ ಬಹುತೇಕ ಎಲ್ಲ ಮಕ್ಕಳಲ್ಲೂ ಆರೋಗ್ಯದಲ್ಲಿ ಸ್ಥಿರತೆಯ ಚಿಹ್ನೆಗಳು ಕಂಡುಬರುತ್ತಿವೆ. ಆರಂಭದಲ್ಲಿ, ‘ಸಂರಕ್ಷಾ’ ಆರೈಕೆ ಕೇಂದ್ರಕ್ಕೆ ಸೇರಿಕೊಳ್ಳುವಾಗ, ಕೇವಲ 3.8gm/dl ಹಿಮೊಗ್ಲೊಬಿನ್ ಇದ್ದ ಹಲವು ಮಕ್ಕಳ ಹಿಮೋಗ್ಲೋಬಿನ್ ಪ್ರಮಾಣ ಈಗ 10-11gm/dlಗೆ ಏರಿಕೆ ಆಗಿರುವುದು ಕಂಡುಬಂದಿದೆ.
ಹಲವು ಮಕ್ಕಳಲ್ಲಿ ಹಿಮೊಗ್ಲೊಬಿನ್ನ ತೀವ್ರ ಕೊರತೆಯಂದಾಗಿ ಲಿವರ್ ಹಾಗೂ ಸ್ಪ್ಲೀನ್ನ ಗಾತ್ರ ದೊಡ್ಡದಾಗಿತ್ತು. ಹಿಮೋಗ್ಲೋಬಿನ್ ಪ್ರಮಾಣ ಈಗ ಹೆಚ್ಚಿರುವುದರ ಪರಿಣಾಮವಾಗಿ ಅವರ ಪಿತ್ತಕೋಶ (Liver) ಮತ್ತು ಗುಲ್ಮ (ಸ್ಪ್ಲೀನ್- Spleen)ಗಳ ಗಾತ್ರದಲ್ಲಿ ತುಂಬ ಸುಧಾರಣೆಯಾಗುತ್ತಿದೆ. ಅವರ ಎತ್ತರ ಹಾಗೂ ತೂಕದಲ್ಲೂ ಸುಧಾರಣೆಯಾಗಿದೆ. ಹೆಚ್ಚಿನ ರಕ್ತಪೂರಣದಿಂದ ಕಬ್ಬಿಣದ ಅಂಶ ಏರುವುದನ್ನು ತಡೆಯುವ ಉದ್ದೇಶದಿಂದ ‘ಕಿಲೇಶನ್’ (Chelation) ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ಪರಿಷತ್ನ ಆಡಳಿತ ಮಂಡಳಿ ಸದಸ್ಯರು ಹಾಗೂ ಸಂಕಲ್ಪ ಇಂಡಿಯಾ ಪೌಂಡೇಶನ್ನ ಸದಸ್ಯರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.