ಶಿರೂರು: ನಗರ ಪ್ರದೇಶಗಳಲ್ಲಿ ಜಾಗತೀಕರಣದ ಪ್ರಭಾವದಿಂದ ದೇಶಿಯ ಸಂಸ್ಕೃತಿ, ಸದಾಚಾರ ಹಾಗೂ ಸಂಪ್ರದಾಯಗಳು ಮರೆಯಾವಾಗುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಉಳಿದುಕೊಂಡಿದೆ. ಸಮಾಜಮುಖಿ ಉದ್ದೇಶದಿಂದ ಸಂಘಟಿಸಿದ ಇಂತಹ ವಿಭಿನ್ನ ಕಾರ್ಯಕ್ರಮಗಳು ಸದಾಕಾಲ ಜನಮಾನಸದಲ್ಲಿ ಉಳಿದುಕೊಳ್ಳುತ್ತದೆ ಎಂದು ಕಿರುತೆರೆ ಹಾಗೂ ಚಲನಚಿತ್ರ ನಟಿ ವಿದ್ಯಾಮೂರ್ತಿ ಹೇಳಿದರು.
ಶಿರೂರು ಉತ್ಸವ-2015ರ ಮೂರನೇ ದಿನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಗ್ರಾಮೀಣ ಸೊಗಡಿನ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸ್ವಸ್ಥ ಸಮಾಜದ ನಿರ್ಮಾಣವಾಗುತ್ತದೆ. ಇಂತಹ ಉತ್ಸವಗಳಿಂದ ಉತ್ಸಾಹ ಹೆಚ್ಚುವುದರೊಂದಿಗೆ ಸ್ಥಳೀಯ ಪ್ರತಿಭೆಗಳ ಕಲಾಪ್ರೌಢಿಮೆ ಪ್ರದರ್ಶಿಸುವ ಹಾಗೂ ಸಾಧನೆ ಮಾಡಿದವರನ್ನು ಗುರುತಿಸುವ ವೇದಿಕೆ ದೊರೆತಂತಾಗುತ್ತದೆ ಎಂದರು.
ಉಪ್ಪುಂದ ಓಂಗಣೇಶ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಉದ್ಯಮಿ ನರಸಿಂಹ ಬಿಜಾಡಿ, ಕಿರುತೆರೆಯ ನಟಿಯರಾದ ಧನುಜ, ಚಿತ್ರ ರೈ, ವೀಣಾಬಾಲಾಜಿ ಉಪಸ್ಥಿತರಿದ್ದರು. ಉತ್ಸವದ ಯಶಸ್ಸಿಗೆ ಸಹಕರಿಸಿದ ಸಮಿತಿಯ ಸದಸ್ಯರು, ಸ್ವಯಂಸೇವಕರನ್ನು, ಸ್ತ್ರೀಶಕ್ತಿ ಸದಸ್ಯರನ್ನು ಗುರುತಿಸಿ ಗೌರವಿಸಲಾಯಿತು. ಮೂರು ದಿನಗಳ ಈ ಶಿರೂರು ಉತ್ಸವವನ್ನು ಯಶಸ್ವೀಯಾಗಿ ಸಂಯೋಜಿಸಿದ ಅರುಣ್ ಕುಮಾರ್ ಹಾಗೂ ಸಮಿತಿ ಕಾರ್ಯದರ್ಶಿ ಪುಷ್ಪರಾಜ ಶೆಟ್ಟಿಯವರಿಗೆ ಪೌರಸನ್ಮಾನ ನೀಡಿ ಗೌರವಿಸಲಾಯಿತು.
ಆಲಂದೂರು ಮಂಜುನಾಥ ಗಾಣಿಗ ವಂದಿಸಿದರು. ಸಭೆಯ ನಂತರ ಸ್ಟೆಪ್ ಆನ್ ಸ್ಟೆಪ್ ಕುಂದಾಪುರ ಹಾಗೂ ಸಂಜನಾ ಡ್ಯಾನ್ಸ್ ಅಕಾಡೆಮಿ ಭಟ್ಕಳ ಇವರಿಂದ ಡ್ಯಾನ್ಸ್ ಝಲಕ್ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ನವೀನಚಂದ್ರ ಕೊಪ್ಪ ತಂಡದವರಿಂದ ಸಂಗೀತ ವೈವಿಧ್ಯ ಕಾರ್ಯಕ್ರಮ ನಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.