ಅವರೊಬ್ಬರಿದ್ರೆ ಸಾಕು, ಭ್ರಷ್ಟರಿಗೆ ಖಂಡಿತ ನಿದ್ರೆ ಬರೋಲ್ಲ!
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅವರನ್ನು ರಾಜ್ಯಸಭೆಗೆ ನಾಮಿನೇಟ್ ಮಾಡಿದ್ದು, ಏ. 26 ರಂದು. ಮರುದಿನವೇ, ಅಂದರೆ ಏ. 27 ರಂದು ಅವರು ಅಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಸೋನಿಯಾ ಗಾಂಧಿ ಹೆಸರನ್ನು ಎಳೆದು ತರುವ ಮೂಲಕ ರಾಜ್ಯಸಭೆಯಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದರು. ರಾಜ್ಯಸಭೆಗೆ ಸರ್ಕಾರ ಯಾರಾದರೂ ಗಣ್ಯರನ್ನು ನಾಮಿನೇಟ್ ಮಾಡಿದರೆ, ಅವರು ಅಧಿಕಾರ ಸ್ವೀಕರಿಸಿ, ಅನಂತರ ಆ ಹುದ್ದೆಗೆ ಹೊಂದಿಕೊಂಡು, ಆಮೇಲೆ ರಾಜ್ಯಸಭೆಯಲ್ಲಿ ಯಾವುದೇ ವಿಷಯದ ಕುರಿತು ಮಾತನಾಡಲು ಕನಿಷ್ಠ 6 ತಿಂಗಳಾದರೂ ಸಮಯ ತೆಗೆದುಕೊಳ್ಳುತ್ತಾರೆ. ಕೆಲವು ರಾಜ್ಯಸಭಾ ಸದಸ್ಯರಂತೂ ತಮ್ಮ 6 ವರ್ಷಗಳ ಅವಧಿಯಲ್ಲಿ ಒಂದೇ ಒಂದು ಮಾತನಾಡದೆ, ವೇತನವನ್ನು ಮಾತ್ರ ತಪ್ಪದೇ ಎಣಿಸಿ ಜೇಬಿಗಿಳಿಸಿ ತೆರಳುವವರೂ ಇದ್ದಾರೆ. ಆದರೆ ಈ ವ್ಯಕ್ತಿ ಹಾಗಲ್ಲ. ಅವರಿಗೆ ಮಾತೇ ಬಂಡವಾಳ. ಅದು ರಾಜ್ಯಸಭೆ ಇರಲಿ, ಸಾರ್ವಜನಿಕ ಸಭೆ ಆಗಿರಲಿ ಅಥವಾ ಅಂತಾರಾಷ್ಟ್ರೀಯ ಅಧಿವೇಶನವಿರಲಿ ಅಲ್ಲಿ ಈ ವ್ಯಕ್ತಿ ಮಾತಿನ ಬಾಂಬ್ ಸಿಡಿಸದೇ ಇರುವುದಿಲ್ಲ. ಆದರೆ ಆ ಬಾಂಬ್ ಠುಸ್ ಪಟಾಕಿ ಅಲ್ಲ. ಸಾಕಷ್ಟು ದಾಖಲೆಗಳು ಅದರ ಹಿಂದಿರುತ್ತವೆ. ಹಾಗಾಗಿಯೇ ಈ ವ್ಯಕ್ತಿ ಮಾತನಾಡಿದರೆಂದರೆ, ಅನೇಕ ಮನಸ್ಸುಗಳು ಹೆದರಿ ಕಂಗಾಲಾಗುತ್ತವೆ.
ಭಾರತೀಯ ರಾಜಕಾರಣದಲ್ಲಿ ಈ ಇಳಿವಯಸ್ಸಿನಲ್ಲೂ ಇಂತಹ ಮಾತಿನ ಬಾಂಬ್ ಸಿಡಿಸಿ ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸಿರುವ ಆ ವ್ಯಕ್ತಿ ಡಾ. ಸುಬ್ರಮಣಿಯನ್ ಸ್ವಾಮಿ ಅಲ್ಲದೇ ಮತ್ಯಾರು? ಮೊನ್ನೆ ಏ. 27 ರಂದು ರಾಜ್ಯಸಭೆಯ ಅಧಿವೇಶನದ ಶೂನ್ಯವೇಳೆಯಲ್ಲಿ ಅಗಸ್ಟಾ ವೆಸ್ಟ್ಲ್ಯಾಂಡ್ ಒಪ್ಪಂದ ಹಗರಣ ಪ್ರಸ್ತಾಪಿಸಿ, ಕಿಡಿ ಹಚ್ಚಿದಾಗ ಡಾ. ಸ್ವಾಮಿಗೆ ಈಗ 75 ವರ್ಷ ಆಗಿದೆ ಎಂದು ಯಾರೂ ಹೇಳಲೂ ಸಾಧ್ಯವಿರಲಿಲ್ಲ. ಅಗಸ್ಟಾ ವೆಸ್ಟ್ಲ್ಯಾಂಡ್ ಹಗರಣದ ಕುರಿತು ಇಟಲಿಯ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಹೆಲಿಕಾಪ್ಟರ್ಗಳ ಖರೀದಿಗೆ ‘ಸಿಗ್ನೋರಾ ಗಾಂಧಿ’ ಚಾಲಕ ಶಕ್ತಿಯಾಗಿದ್ದರು ಎಂಬಂಥ ಉಲ್ಲೇಖವಿದೆ. ಸಿಗ್ನೋರಾ ಎಂದರೆ ಇಟಲಿ ಭಾಷೆಯಲ್ಲಿ ಮೇಡಂ ಅಥವಾ ಶ್ರೀಮತಿ ಎಂದರ್ಥ. ಇದು ಶ್ರೀಮತಿ ಸೋನಿಯಾ ಗಾಂಧಿ ಅವರನ್ನು ಕುರಿತಾದಂತಹ ಉಲ್ಲೇಖ. ಹಾಗೆಯೇ ಆಗಿನ ಪ್ರಧಾನಿ ಮನಮೋಹನ ಸಿಂಗ್ ಹಾಗೂ ಅಹಮದ್ ಪಟೇಲ್ ಅವರ ಹೆಸರೂ ಈ ಪ್ರಕರಣದಲ್ಲಿ ತಳುಕು ಹಾಕಿಕೊಂಡಿದೆ ಎಂದು ಡಾ. ಸ್ವಾಮಿ ಆರೋಪಿಸಿದ್ದೇ ತಡ, ಇಡೀ ರಾಜ್ಯಸಭೆ ಕೋಲಾಹಲದ ಸಂತೆಯಾಯಿತು. ವಿರೋಧ ಪಕ್ಷದ ಸದಸ್ಯರೆಲ್ಲಾ ಸ್ಪೀಕರ್ ಅವರ ಬಳಿ ಧಾವಿಸಿ, ಡಾ. ಸ್ವಾಮಿಯವರ ಈ ಹೇಳಿಕೆಯನ್ನು ಕಡತದಿಂದ ಕಿತ್ತುಹಾಕಬೇಕೆಂದು ಬೊಬ್ಬೆ ಹೊಡೆದರು. ಸಭೆ ಮುಂದೂಡಲ್ಪಟ್ಟಿತು. ಮತ್ತೆ ಸಭೆ ಪ್ರಾರಂಭವಾದಾಗ ಪುನಃ ಈ ಹಗರಣದ ಭುಗಿಲು ಹೊತ್ತಿಕೊಂಡಿದ್ದು ಸಹಜವ. ದೆಹಲಿಯ ಹೊರಗೆ ಈಗ ಭಾರಿ ತಾಪಮಾನ ಇರುವುದು ನಿಜ. ಆದರೆ ಪಾರ್ಲಿಮೆಂಟ್ ಭವನದ ತಾಪಮಾನ ಏ. 26 ರಿಂದ ಹೊರಗಿನ ತಾಪಮಾನಕ್ಕಿಂತ ಹೆಚ್ಚಿದೆ. ಅದಕ್ಕೆ ಕಾರಣ ಡಾ. ಸುಬ್ರಮಣಿಯನ್ ಸ್ವಾಮಿ ಎಂಬ ‘ಡೋಂಟ್ ಕೇರ್’ ವ್ಯಕ್ತಿಯ ಪ್ರವೇಶ! 17 ವರ್ಷಗಳ ದೀರ್ಘ ಅಂತರದ ಬಳಿಕ ಡಾ. ಸ್ವಾಮಿ ಮತ್ತೆ ರಾಜ್ಯಸಭೆ ಪ್ರವೇಶಿಸಿರುವುದು ಆಡಳಿತ ಪಕ್ಷದ ಪಾಲಿಗಂತೂ ಬ್ರಹ್ಮಾಸ್ತ್ರ ದೊರಕಿದಂತೆ. ಬಹುಶಃ ಡಾ. ಸ್ವಾಮಿ ಅವರ ಈ ಅಸದೃಶ ಎದೆಗಾರಿಕೆ ಹಿನ್ನೆಲೆಯಲ್ಲೇ ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡಿರಬಹುದು.
ಸೋನಿಯಾ ಗಾಂಧಿ ಮತ್ತು ಅವರ ಕುಟುಂಬದ ವಿರುದ್ಧ ಡಾ. ಸ್ವಾಮಿ ಹರಿಹಾಯುತ್ತಿರುವುದು ಇದೇ ಮೊದಲಲ್ಲ. ಸೋನಿಯಾ ಗಾಂಧಿ ಯುಪಿಎ-1 ಅಧಿಕಾರಕ್ಕೇರುವ ಸಂದರ್ಭದಲ್ಲಿ ತಾನು ಪ್ರಧಾನಿ ಹುದ್ದೆಗೆ ಸ್ಪರ್ಧಿ ಎಂದು ರಾಷ್ಟ್ರಪತಿಗೆ ಅಹವಾಲು ಸಲ್ಲಿಸಿದಾಗ, ಇನ್ನೇನು ರಾಷ್ಟ್ರಪತಿ ಅಬ್ದುಲ್ಕಲಾಂ ಅವರನ್ನು ಪ್ರಧಾನಿಯಾಗಿ ಅಂಗೀಕರಿಸಿಯೇ ಬಿಡುತ್ತಾರೆ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಅದಕ್ಕೆ ತಣ್ಣೀರೆರಚಿದವರು ಇದೇ ಡಾ. ಸ್ವಾಮಿ. ಸೋನಿಯಾ ಗಾಂಧಿಯ ರಾಷ್ಟ್ರೀಯತೆ, ಆಕೆಯ ಭಾರತದ ಪೌರತ್ವದ ಕುರಿತು ಸಾಕಷ್ಟು ವಿವಾದಗಳಿವೆ. ಹೀಗಿರುವಾಗ ಆಕೆಯನ್ನು ಏಕಾಏಕಿ ಪ್ರಧಾನಿ ಸ್ಥಾನಕ್ಕೆ ನೇಮಿಸುವುದು ಸಂವಿಧಾನವಿರೋಧಿ ಕ್ರಮವಾಗುತ್ತದೆ ಎಂದು ಸಾಕ್ಷಾಧಾರಗಳ ಸಹಿತ ವಾದಿಸಿದ್ದರು. ಕೊನೆಗೂ ಸೋನಿಯಾ ಗಾಂಧಿ ಈ ದೇಶದ ಪ್ರಧಾನಿ ಆಗಲಿಲ್ಲ. ದೇಶದ ಸೌಭಾಗ್ಯ!
2008 ರಲ್ಲಿ ಯುಪಿಎ ಸರ್ಕಾರದ ೨ಜಿ ಹಗರಣವನ್ನು ಬಯಲು ಮಾಡಿದ ಅಗ್ರಗಣ್ಯ ಕೂಡ ಇದೇ ಡಾ. ಸ್ವಾಮಿ. ಆಗಿನ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ, ಟೆಲಿಕಾಂ ಸಚಿವರಾಗಿದ್ದ ಎ. ರಾಜಾ ಅವರನ್ನು ೨ಜಿ ಹಗರಣದ ಪ್ರಮುಖ ಆರೋಪಿಯಾಗಿ ಪರಿಗಣಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ವಾಮಿ ಆಗ್ರಹಿಸಿದ್ದರು. ಆದರೆ ‘ಮೌನಿಬಾಬಾ’ ಮನಮೋಹನ ಸಿಂಗ್ ಯಾವುದೇ ಕ್ರಮ ಕೈಗೊಳ್ಳದಿದ್ದಾಗ ಡಾ. ಸ್ವಾಮಿ ಸುಪ್ರಿಂಕೋರ್ಟ್ನಲ್ಲಿ ಈ ಹಗರಣದ ಕುರಿತು ಕೇಸ್ ದಾಖಲಿಸಿದರು. ಅನಂತರ 2ಜಿ ಹಗರಣ ಸಾಕಷ್ಟು ಗದ್ದಲ ಎಬ್ಬಿಸಿ ಸಚಿವ ಎ. ರಾಜಾ ಅವರ ಬಂಧನದಲ್ಲಿ ಪರ್ಯಾವಸಾನವಾಗಿದ್ದು ಈಗ ಹಳೆಯ ಕಥೆ. ೨೦೧೧ರ ಏ.೧೫ರಂದು ಡಾ. ಸ್ವಾಮಿ, ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಅನುಮತಿ ನೀಡಬೇಕೆಂದು ಆಗಿನ ಪ್ರಧಾನಿ ಡಾ. ಸಿಂಗ್ ಅವರಿಗೆ 206 ಪುಟಗಳ ದೂರ ಸಲ್ಲಿಸಿದ್ದರು. ಗೃಹಸಚಿವ ಪಿ. ಚಿದಂಬರಂ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. 2ಜಿ ಹಗರಣದಲ್ಲಿ ಎ. ರಾಜಾ, ಚಿದಂಬರಂ ಹಾಗೂ ಪ್ರಧಾನಿ ಡಾ. ಸಿಂಗ್ ಪಾಲುದಾರರಾಗಿದ್ದಾರೆ ಎಂದು ಸಾಕ್ಷಗಳ ಸಹಿತ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
2012 ರ ನ. 1 ರಂದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ – ಇಬ್ಬರೂ ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ಪ್ರಮುಖ ಆರೋಪಿಗಳೆಂದು ಸಾಕ್ಷಾಧಾರಗಳ ಸಹಿತ ಡಾ. ಸ್ವಾಮಿ ದೂರು ಸಲ್ಲಿಸಿದ್ದರು. ಈ ಹಗರಣದಲ್ಲಿ ಸೋನಿಯಾ ಮತ್ತು ರಾಹುಲ್ ಕೋರ್ಟಿನಿಂದ ಜಾಮೀನು ಪಡೆಯಬೇಕಾದ ಗಂಭೀರ ಸಂದರ್ಭವೂ ಒದಗಿತ್ತು. ಹಗರಣದ ತನಿಖೆ ಈಗಲೂ ನಡೆಯುತ್ತಿದೆ.
ಯುಪಿಎ ಸರ್ಕಾರ ಪ್ರಾಚೀನ ಹಾಗೂ ಐತಿಹಾಸಿಕ ರಾಮಸೇತುವನ್ನು ಕೆಡವಿ ಭಾರತ – ಶ್ರೀಲಂಕಾ ನಡುವೆ ಸಮುದ್ರ ಸೇತು ನಿರ್ಮಿಸಲು ಹೊರಟಾಗ ಅದರ ವಿರುದ್ಧ ಕಾನೂನಾತ್ಮಕ ಹೋರಾಟ ಕೈಗೊಂಡ ಮೊದಲಿಗ ಡಾ. ಸ್ವಾಮಿ. ರಾಮಸೇತು ಕೋಟಿಕೋಟಿ ಭಾರತೀಯರ ಶ್ರದ್ಧಾಕೇಂದ್ರ. ಅದನ್ನು ಯಾವುದೇ ಕಾರಣಕ್ಕೂ ಒಡೆಯಕೂಡದು. ಅಷ್ಟೇ ಅಲ್ಲ, ಅದನ್ನು ಒಡೆದರೆ ಪ್ರಾಕೃತಿಕವಾಗಿ ನಷ್ಟ ಸಂಭವಿಸುವುದು ಭಾರತಕ್ಕೇ. ಐಪಿಸಿ 295 ರ ಸೆಕ್ಷನ್ ಪ್ರಕಾರ ಸರ್ಕಾರದ ಕ್ರಮ ಒಂದು ಕ್ರಿಮಿನಲ್ ಅಪರಾಧವಾಗುತ್ತದೆ ಎಂದು ಪ್ರಧಾನಿ ಡಾ. ಸಿಂಗ್ಗೆ ಎಚ್ಚರಿಕೆಯ ಪತ್ರ ಬರೆದಿದ್ದರು. ಸುಪ್ರಿಂಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಸೇತುಸಮುದ್ರಂ ಶಿಪ್ಪಿಂಗ್ ಕೆನಾಲ್ ಪ್ರಾಜೆಕ್ಟ್ (ಎಸ್ಎಸ್ಎಸ್ಸಿಪಿ) ಅನುಷ್ಠಾನದ ವಿರುದ್ಧ ತಡೆಯಾಜ್ಞೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಸೇತುಸಮುದ್ರಂ ಯೋಜನೆ ಅಲ್ಲಿಗೇ ಹಳ್ಳಹಿಡಿದು ಹೋಗಿತ್ತು.
ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ಅವರನ್ನು ಡಾ. ಸ್ವಾಮಿ ರಾಜಕೀಯವಾಗಿ ಕೆಣಕಿದಷ್ಟು ಬಹುಶಃ ಇನ್ಯಾರೂ ಕೆಣಕಿರಲಿಕ್ಕಿಲ್ಲ. ಆಕೆಯ ಭ್ರಷ್ಟಾಚಾರದ ಕುರಿತು ನೂರಾರು ಪುಟಗಳ ದಾಖಲೆಗಳನ್ನು ಸಂಗ್ರಹಿಸಿ, ಕರ್ನಾಟಕ ಹೈಕೋರ್ಟ್ ಜಯಲಲಿತಾಳನ್ನು ಪರಪ್ಪನ ಅಗ್ರಹಾರ ಜೈಲಿಗಟ್ಟುವಂತೆ ಮಾಡಿದ ಖ್ಯಾತಿ ಡಾ.ಸ್ವಾಮಿಯವರದು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವು ಬಾಬ್ರಿ ಮಸೀದಿ ಉರುಳಿದ ಜಾಗದಲ್ಲೇ ಆಗಬೇಕೆಂದು ಸುಪ್ರಿಂಕೋರ್ಟ್ ಮೆಟ್ಟಿಲು ಹತ್ತಿದ ಡಾ. ಸ್ವಾಮಿ, ಮುಂದಿನ ರಾಮನವಮಿಯೊಳಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುವುದು ನಿಶ್ಚಿತ ಎಂದು ಮೊನ್ನೆ ತಾನೇ ಹೇಳಿದ್ದಾರೆ. ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಮಂದಿರ ನಿರ್ಮಾಣಕ್ಕಾಗಿ ಸಂಗ್ರಹವಾಗಿರುವ ಸಂಪನ್ಮೂಲಗಳನ್ನು ಯಾವುದೇ ಶಾಲೆ, ಮನೆ ಅಥವಾ ರಸ್ತೆ ನಿರ್ಮಾಣಕ್ಕೆ ಬಳಸಕೂಡದು. ಸರ್ಕಾರ ರಾಮಮಂದಿರವನ್ನು ನಿರ್ಮಿಸಕೂಡದು. ಆದರೆ ಜನರೇ ಮಂದಿರ ನಿರ್ಮಾಣಕ್ಕೆ ಮುಂದಾಗಬೇಕು ಎಂಬುದು ಡಾ. ಸ್ವಾಮಿ ಅಭಿಮತ.
ಹೀಗೆ ಡಾ. ಸ್ವಾಮಿ ಒಂದಲ್ಲ ಒಂದು ಹೋರಾಟದಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಪ್ರಹರಿ. ಸುಮ್ಮನೆ ಕುಳಿತಿರುವ ಜಾಯಮಾನದವರಲ್ಲ. ಹಾಗಾಗಿಯೇ ಅವರನ್ನು ಕಂಡರೆ ಹಲವರಿಗೆ ಭಯ. ಕೆಲವರಿಗೆ ಗೌರವಮಿಶ್ರಿತ ಭಯ! ಡಾ. ಸ್ವಾಮಿ ಯಾವ ಕ್ಷಣದಲ್ಲಿ ಯಾರ ವಿರುದ್ಧ ತಿರುಗಿ ಬೀಳುತ್ತಾರೆಂದು ಊಹಿಸುವುದೇ ಕಷ್ಟ. ವಾಜಪೇಯಿ ಸರ್ಕಾರ ಕೆಲವು ವಿಷಯಗಳ ಕುರಿತು ಮೃದು ಧೋರಣೆ ತಳೆದಾಗ ಅದನ್ನು ನೇರಾನೇರ ಖಂಡಿಸುವಲ್ಲಿ ಸ್ವಾಮಿ ಹಿಂದೆ ಬಿದ್ದಿರಲಿಲ್ಲ.
ಎಲ್ಲಕ್ಕಿಂತ ಡಾ. ಸ್ವಾಮಿಯವರ ಸಾಹಸ ವ್ಯಕ್ತವಾಗಿದ್ದು 1975 ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ. ಜನಸಂಘದ ನಾಯಕರಾಗಿದ್ದ ಹಾಗೂ ರಾಜ್ಯಸಭಾ ಸದಸ್ಯರಾಗಿದ್ದ ಡಾ. ಸ್ವಾಮಿ ವಿರುದ್ಧ ಆಗ ಅರೆಸ್ಟ್ ವಾರೆಂಟ್ ಜಾರಿಯಾಗಿತ್ತು. ಆದರೆ ಸ್ವಾಮಿ ಮಾತ್ರ ಯಾರ ಕೈಗೂ ಸಿಕ್ಕಿರಲಿಲ್ಲ. ವಿದೇಶಕ್ಕೆ ತೆರಳಿ ಅಲ್ಲಿನ ಭಾರತೀಯರನ್ನು ಸಂಘಟಿಸಿ, ಭಾರತದಲ್ಲಿ ಪ್ರಜಾಪ್ರಭುತ್ವ ಹೇಗೆ ಸೊಂಟ ಮುರಿದು ಬಿದ್ದಿದೆ ಎಂಬುದನ್ನು ಅವರು ಪರಿಣಾಮಕಾರಿಯಾಗಿ ಬಿಂಬಿಸಿದ್ದರು. ಭಾರತಕ್ಕೆ ಮತ್ತೆ ಬಂದರೆ ಅವರನ್ನು ತಕ್ಷಣ ಬಂಧಿಸಲು ಆಗಿನ ಪ್ರಧಾನಿ ಇಂದಿರಾ ಗಾಂಧಿ ಆದೇಶ ನೀಡಿದ್ದರು. 1976 ರ ಆ.10 ರಂದು ಮಳೆಗಾಲದ ಸಂಸತ್ ಅಧಿವೇಶನ ಪ್ರಾರಂಭವಾದ ದಿನ. ರಾಜ್ಯಸಭೆಯಲ್ಲಿ ಸಭಾಪತಿ ಜತ್ತಿಯವರು ಸಂತಾಪ ಸೂಚನೆ ನಿರ್ಣಯ ಮಂಡಿಸಲು ಎದ್ದು ನಿಂತರು. ಕೂಡಲೇ ಸದಸ್ಯರ ನಡುವಿನಿಂದ ಒಂದು ಧ್ವನಿ ಇಡೀ ಸಭಾ ಭವನದಲ್ಲಿ ಮಾರ್ದನಿಸಿತು : ‘ನಾನು ಸುಬ್ರಮಣಿಯನ್ ಸ್ವಾಮಿ, ವಿಧಿ ಬಿಂದುವನ್ನು ಎತ್ತಲು ಇಚ್ಚಿಸುವೆ’. ಸಭಿಕರ ಮೈಯಲ್ಲಿ ಮಿಂಚು ಸುಳಿದ ಅನುಭವ. ಒಂದು ಕ್ಷಣ ಎಲ್ಲವೂ ಸ್ತಬ್ಧ. ಸಭೆಯಲ್ಲಿ ಹಾಜರಿದ್ದ ಗೃಹ ಶಾಖೆಯ ರಾಜ್ಯ ಸಚಿವ ಓಂ ಮೆಹ್ತಾ ಅವರಂತೂ ದಿಗ್ಭ್ರಾಂತರಾದರು. ಅರೆಸ್ಟ್ ವಾರೆಂಟ್ ಹೊತ್ತಿರುವ ಸ್ವಾಮಿ ರಾಜ್ಯಸಭೆಯೊಳಗೆ ಪ್ರವೇಶಿಸಿದ್ದಾದರೂ ಹೇಗೆ? ಆದರೆ ಅಷ್ಟರೊಳಗೆ ಸ್ವಾಮಿ ಸಭೆಯಿಂದ ಏಕಾಏಕಿ ಕಣ್ಮರೆಯಾಗಿಬಿಟ್ಟರು. ಮಂತ್ರಿಗಳ ಪರದಾಟ, ಪೊಲೀಸರ ವ್ಯರ್ಥ ತಡಕಾಟ, ರೈಲು, ಬಸ್ಸು, ವಿಮಾನ ಕಾರು… ಎಲ್ಲೆಡೆ ಡಾ. ಸ್ವಾಮಿಗಾಗಿ ತೀವ್ರ ಹುಡುಕಾಟ. ಭಾರತದಿಂದ ಸ್ವಾಮಿ ಮತ್ತೊಮ್ಮೆ ತಪ್ಪಿಸಿಕೊಂಡು ಹೋಗದಂತೆ ಸರ್ಪಗಾವಲು. ಆದರೆ ಡಾ.ಸ್ವಾಮಿ ಸರ್ದಾರ್ಜಿ ವೇಷ ಧರಿಸಿ ದೆಹಲಿಯಿಂದ ತಪ್ಪಿಸಿಕೊಂಡು ವಿದೇಶಕ್ಕೆ ಹಾರಿದ್ದರು. ಈ ಅವಮಾನದಿಂದ ಪಾರಾಗಲು ಸರ್ಕಾರ ತನಿಖಾ ಸಮಿತಿಯ ನಾಟಕವಾಡಿ ಸ್ವಾಮಿಯವರನ್ನು ರಾಜ್ಯಸಭೆ ಸದಸ್ಯತ್ವದಿಂದ ಕಿತ್ತುಹಾಕುವ ದೊಡ್ಡ ‘ಶೌರ್ಯ’ದ ಕೆಲಸ ಮಾಡಿತ್ತು.
ಹಾರ್ವರ್ಡ್ ವಿವಿ ಪ್ರಾಧ್ಯಾಪಕ, 5 ಬಾರಿ ಲೋಕಸಭಾ ಸದಸ್ಯ, 2 ಬಾರಿ ಕೇಂದ್ರ ಸಚಿವ, ಭಾರತದಲ್ಲಿ ಆರ್ಥಿಕ ಉದಾರೀಕರಣಕ್ಕೆ ಬುನಾದಿ ಹಾಕಿದ ಆರ್ಥಿಕ ತಜ್ಞ, ಪ್ರಖರ ಹಿಂದೂವಾದಿ, ಬಿಸಿರಕ್ತದ ಯುವಕರೆದೆಯಲ್ಲಿ ಪ್ರತಿಭಟನೆಯ ಕಿಚ್ಚು, ಕೆಚ್ಚುಗಳನ್ನು ಹಚ್ಚುತ್ತಿರುವ ಡಾ. ಸ್ವಾಮಿ ಭ್ರಷ್ಟಾಚಾರದ ಕಳಂಕವನ್ನು ಒಂದಿಷ್ಟೂ ಅಂಟಿಸಿಕೊಳ್ಳದ ಅಪರೂಪದ, ಅಪೂರ್ವ ರಾಜಕಾರಣಿ. ‘ಪ್ರಧಾನಿ ಮೋದಿ 2019 ರ ವರೆಗೆ ಅಧಿಕಾರದಲ್ಲಿ ಮುಂದುವರೆದರೆ, ಮುಂದಿನ 2025 ರವರೆಗೂ ಅವರ ಅಧಿಕಾರ ಶಾಶ್ವತವಾಗಿರುತ್ತದೆ’ ಎಂದು ಬೇರೆ ಡಾ. ಸ್ವಾಮಿ ಭವಿಷ್ಯ ನುಡಿದಿದ್ದಾರೆ. ಆ ಭವಿಷ್ಯ ನಿಜವಾಗಲಿದೆಯೇ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.