ಕಾರ್ಕಳ: ರಾಜ್ಯ ಜಲಸಂಪನ್ಮೂಲ ಇಲಾಖೆಯಿಂದ ಸಣ್ಣ ನೀರಾವರಿ ಯೋಜನೆಯಡಿಯಲ್ಲಿ 85 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿದ್ದು, ಆ ಅನುದಾನದಡಿಯಲ್ಲಿ ಆನೆಕೆರೆ ಅಭಿವೃದ್ಧಿ ಹಾಗೂ ಕೆರೆ ಬಸದಿ ಜೀರ್ಣೋದ್ಧಾರ ಕಾಮಗಾರಿಗೆ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಅವರು ಭಾನುವಾರ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕರು, ಒಟ್ಟು ಅನುದಾನಗಳ ಪೈಕಿ ೨೫ ಲಕ್ಷ ರೂ. ಕೆರೆಯ ಹೂಳು, 33 ಲಕ್ಷ ರೂ. ವೆಚ್ಚದಲ್ಲಿ ವಾಕಿಂಗ್ ಟ್ರ್ಯಾಕ್, 17 ಲಕ್ಷ ರೂ. ವೆಚ್ಚದಲ್ಲಿ ಫೆನ್ಸಿಂಗ್ ಕಾಮಗಾರಿ, 8 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ಅಲಂಕಾರ, ಕಲ್ಲು ಬೆಂಚು ಅಳವಡಿಸಲು ಮೀಸಲಿಡಲಾಗಿದೆ. ಅಂತರ್ಜಾಲ ಜಾಸ್ತಿಯಾಗಬೇಕು ಮತ್ತು ಪ್ರವಾಸೋದ್ಯಮಕ್ಕಾಗಿ ಒತ್ತು ನೀಡುವುದು ಈ ಕಾಮಗಾರಿಯ ಉದ್ದೇಶ.
ಕಳೆದ ಎರಡು ವರ್ಷಗಳಿಂದ ರಾಜ್ಯ ಸರಕಾರದ ಮೇಲೆ ಒತ್ತಡ ಹೇರಿ 85 ಲಕ್ಷ ರೂ. ಅನುದಾನ ಮಂಜೂರಾಗಿರುವುದು ಸಂತೋಷ ಕೊಟ್ಟಿದೆ. ಕಾರ್ಕಳ ನಗರದಲ್ಲಿ ಕೇಂದ್ರೀಕೃತವಾಗಿರುವ ಆನೆಕೆರೆ ಎಲ್ಲಾ ದೃಷ್ಟಿಯಿಂದಲೂ ಅಭಿವೃದ್ಧಿಯಾಗಬೇಕು, ಪ್ರವಾಸಿಗರನ್ನು ತನ್ನತ್ತ ಸೆಳೆಯಬೇಕು ಎನ್ನುವುದು ನಮ್ಮೆಲ್ಲರ ಅಭಿಲಾಷೆಯಾಗಿದೆ. ಬಹಳ ಪುರಾತನವಾದ ಕೆರೆ ಬಸದಿಯ ಜೀರ್ಣೋದ್ಧಾರ ಕಾರ್ಯಕ್ರಮದ ಜೊತೆ ಜೊತೆಯಾಗಿ ನಡೆಯಬೇಕು ಎಂಬುವುದು ಭಕ್ತರ ಹಾಗೂ ಸಾರ್ವಜನಿಕರ ಅಭಿಪ್ರಾಯವಾಗಿದೆ ಎಂದರು.
ಕಳೆದ 2007ರ ಸಾಲಿನಲ್ಲಿ ನಾವು ಆನೆಕೆರೆ ಹೂಳೆತ್ತುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, 2008ಕ್ಕೆ ಹೂಳು ಎತ್ತಲಾಗಿತ್ತು. ಅದರ ಮುಂದುವರೆದ ಭಾಗವಾಗಿ ಇನ್ನಷ್ಟು ಅಭಿವೃದ್ಧಿ ಕಾರ್ಯಕ್ರಮಗಳು ನಡೆಯಬೇಕು ಎನ್ನುವ ಹಿನ್ನೆಲೆಯಲ್ಲಿ 85 ಲಕ್ಷ ರೂ. ಕಾಮಗಾರಿಯನ್ನು ಮಗದೊಮ್ಮೆ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಜೈನಮಠದ ಪರಮಪೂಜ್ಯ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯ, ಪರಮಪೂಜ್ಯ ಏಲಾಚಾರ್ಯ ಉಪಾಧ್ಯಾಯ 108 ನಿಜಾನಂದ ಮಹಾರಾಜ್ ಮತ್ತು ಪುರಸಭೆ ಉಪಾಧ್ಯಕ್ಷೆ ಶಶಿಕಲಾ ರಾಣೆ, ಹಿರಿಯ ನ್ಯಾಯವಾದಿ ಎಂ.ಕೆ. ವಿಜಯಕುಮಾರ್, ಪುರಸಭೆ ಸದಸ್ಯರಾದ ಗಿರಿಧರ್ ನಾಯಕ್, ಪ್ರಕಾಶ್ ರಾವ್, ಪಾರ್ಶ್ವನಾಥ ವರ್ಮ, ಅನಿತಾ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.
ಸಚಿವರ ಕಡೆಗಣನೆ: ಕಾಂಗ್ರೆಸ್ ಪ್ರತಿಭಟನೆ
ರಾಜ್ಯದ ಎಲ್ಲಾ ಕೆರೆಗಳ ಅಭಿವೃದ್ಧಿಗೆ ಸರಕಾರವು ಅನುದಾನ ಬಿಡುಗೊಳಿಸಿದ್ದು, ಆ ಹಿನ್ನೆಲೆಯಲ್ಲಿ ಕಾರ್ಕಳ ಕ್ಷೇತ್ರಕ್ಕೆ ದೊರೆತ ಅನುದಾನದಲ್ಲಿ ಆನೆಕೆರೆ ಹಾಗೂ ಕೆರೆ ಬಸದಿ ಅಭಿವದ್ಧಿಗೆ ಹಣವನ್ನು ಮೀಸಲಿಡಲಾಗಿದೆ. ಇದು ಶಾಸಕರ ವಿಶೇಷ ಪ್ರಯತ್ನದಿಂದ ಬಂದ ಅನುದಾನವಲ್ಲ. ಅಲ್ಲದೆ ಈ ಕಾಮಗಾರಿ ಶಂಕುಸ್ಥಾಪನೆಯ ಸಂದರ್ಭ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಕಡೆಗಣಿಸಲಾಗಿದೆ ಎಂದು ಪುರಸಭೆ ಸದಸ್ಯ ಶುಭದ ರಾವ್ ಆರೋಪಿಸಿದರು.
ಶಂಕುಸ್ಥಾಪನಾ ಸಮಾರಂಭದ ಇನ್ನೊಂದು ಭಾಗದಲ್ಲಿ ಕಾಂಗ್ರೆಸ್ ನೇತೃತ್ವದ ಪುರಸಭೆ ಆಡಳಿತ ಪಕ್ಷದ ಸದಸ್ಯರು ಕಾರ್ಯಕ್ರಮ ಬಹಿಷ್ಕರಿಸಿ ಪ್ರತಿಭಟಿಸಿದ ಸಂದರ್ಭ ಅವರು ಮಾತನಾಡಿದರು.
ಈ ಸಂದರ್ಭ ಪುರಸಭೆ ಅಧ್ಯಕ್ಷೆ ರೆಹಮತ್, ಸದಸ್ಯರಾದ ಸುಭಿತ್ ಎನ್.ಆರ್, ನವೀನ್ ದೇವಾಡಿಗ, ಅಕ್ಷಯ, ವಿವೇಕಾನಂದ ಶೆಣೈ, ಪ್ರತಿಮಾ ರಾಣೆ, ನಳಿನಿ ಆಚಾರ್ಯ, ವಿನ್ನಿಬೋಲ್ಡ್ ಮೆಂಡೋನ್ಸಾ ಉಪಸ್ಥಿತಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.