ಶಿರೂರು: ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಶಿರೂರು ದತ್ತು ಸ್ವೀಕರಿಸಿದ್ದು, ಮುಂದಿನ ದಿನಗಳಲ್ಲಿ ಈ ಗ್ರಾಮವನ್ನು ಸರ್ಕಾರ ಹಾಗೂ ಖಾಸಗಿ ವ್ಯಕ್ತಿಗಳ ಸಹಭಾಗಿತ್ವದಲ್ಲಿ ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ರಾಜ್ಯಸಭಾ ಸದಸ್ಯ ಆಸ್ಕರ ಫೆರ್ನಾಂಡಿಸ್ ಹೇಳಿದರು. ಶಿರೂರು ಗ್ರಾಮ ದತ್ತು ಸ್ವೀಕರಕ್ಕೆ ಚಾಲನೆ ನೀಡಿ ಬಳಿಕ ಗ್ರೀನ್ವ್ಯಾಲಿ ಸ್ಕೂಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇಲ್ಲಿನ ಗ್ರೀನ್ವ್ಯಾಲಿ ಸ್ಕೂಲ್ನ ಸಂಸ್ಥಾಪಕ ಅಬ್ದುಲ್ ಖಾದರ್ ಬಾಶು ಈಗಾಗಲೇ ಶಿರೂರು ಗ್ರಾಮಕ್ಕೆ ಕುಡಿಯುವ ನೀರು, ರಸ್ತೆ ಸೇರಿದಂತೆ ಹಲವು ಮೂಲ ಸೌಕರ್ಯ ಕಲ್ಪಿಸಿದ್ದು, ಇಲ್ಲಿನ ಮಹಿಳೆಯರ ಸ್ವಾವಲಂಬಿ ಜೀವನ ನಡೆಸುವಂತಾಗಲು ಸುಮಾರು 100 ದನಗಳನ್ನು ದಾನವಾಗಿ ನೀಡುವ ಚಿಂತನೆ ಹೊಂದಿದ್ದು, ಇಂದು ಪ್ರಾಯೋಗಿಕವಾಗಿ ೨೫ ದನಗಳನ್ನು ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸ್ಥಳೀಯರ ಸಹಕಾರದಲ್ಲಿ ಆದರ್ಶ ಗ್ರಾಮ ಯೋಜನೆಯಡಿ, ಇಲ್ಲಿನ ಆಸ್ಪತ್ರೆ, ಶಿಕ್ಷಣ, ಪಡಿತರ ಚೀಟಿ, ಬ್ಯಾಂಕ್ ಅಕೌಂಟ್, ಸಂಪರ್ಕ ರಸ್ತೆ, ಮೊದಲಾದ ಮೂಲಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದರು.
ಶಿರೂರು ಕರಾವಳಿಯಲ್ಲಿ ಸಮುದ್ರಕ್ಕೆ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ 5 ಕೋಟಿ ರೂ, ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಶಿರೂರು, ಬೈಂದೂರು, ಪಡುವರಿ ಹಾಗೂ ಯಡ್ತರೆ ಗ್ರಾಮಕ್ಕೆ ಕುಡಿಯುವ ನೀರು ಸೌಲಭ್ಯ ಕಲ್ಪಿಸಲು 33 ಕೋಟಿ ರೂ, ಪ್ರವಾಸೋದ್ಯಮ ಇಲಾಖೆಯಡಿ ಕರಾವಳಿ-ದೊಂಬೆ ಕಾಂಕ್ರೇಟ್ ರಸ್ತೆ ನಿರ್ಮಾಣಕ್ಕೆ ೯೪ ಲಕ್ಷ ರೂ. ಅನುದಾನ ಈಗಾಗಲೇ ಮಂಜೂರಾತಿ ಹೊಂದಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಕೆ. ಗೋಪಾಲ ಪೂಜಾರಿ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಸಚಿವ ಹೆಚ್.ಕೆ. ಪಾಟೀಲ್, ಅರಣ್ಯ ಸಚಿವ ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ. ಖಾದರ್, ಕಾನೂನು ಮತ್ತು ಪಶು ಸಂಗೋಪನ ಸಚಿವ ಟಿ.ಬಿ. ಜಯಚಂದ್ರ, ಮೀನುಗಾರಿಕಾ ಮತ್ತು ಯುವಜನಾ ಸೇವಾ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಪ್ರತಾಪಶ್ಚಂದ್ರ ಶೆಟ್ಟಿ, ಬ್ಲೋಸಂ ಫೆರ್ನಾಂಡಿಸ್, ಎಂ.ಎಂ ಗಪೂರ, ಗ್ರಾಪಂ ಅಧ್ಯಕ್ಷ ರಾಮು ಮೇಸ್ತ, ತಾಪಂ ಸದಸ್ಯ ರಾಜು ಪೂಜಾರಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.