ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ವಿರುದ್ಧ ಜನಾಂಗೀಯ ನಿಂದನೆ ಮಾಡಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಸೋಮವಾರ ಸಂಸತ್ತಿನಲ್ಲಿ ಕ್ಷಮೆಯಾಚನೆ ಮಾಡಿದ್ದಾರೆ.
ಗಿರಿರಾಜ್ ಹೇಳಿಕೆಯನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಕಾಂಗ್ರೆಸ್ ಅವರ ಕ್ಷಮೆಯಾಚನೆಗೆ ಪಟ್ಟು ಹಿಡಿಯಿತು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯೂ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿತು.
ಗಿರಿರಾಜ್ ತಮ್ಮ ಹೇಳಿಕೆಯಿಂದ ಸಮಸ್ತ ಭಾರತೀಯ ಮಹಿಳೆಯರಿಗೆ ಮಾತ್ರವಲ್ಲ ನೈಜೀರಿಯಾದ ಮಹಿಳೆಯರಿಗೂ ಅವಮಾನ ಮಾಡಿದ್ದಾರೆ. ಅವರು ಈ ಬಗ್ಗೆ ಕ್ಷಮೆಯಾಚಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಷ್ಟೇ ಅಲ್ಲ, ಪ್ರಧಾನಿಯೂ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತು.
ಆದರೆ ಗಿರಿರಾಜ್ ಹೇಳಿಕೆಗೂ, ಪ್ರಧಾನಿಗೂ ಸಂಬಂಧವಿಲ್ಲ ಎನ್ನುವ ಮೂಲಕ ಕಾಂಗ್ರೆಸ್ಗೆ ಬಿಜೆಪಿ ತಿರುಗೇಟು ನೀಡಿತು.
ಈ ನಡುವೆಯೇ ಗಿರಿರಾಜ್ ಅವರು ಎದ್ದು ನಿಂತು ‘ತಮ್ಮ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿಬಿಡಿ’ ಎಂದರು.
‘ಸೋನಿಯಾ ಬಿಳಿ ಚರ್ಮದವರಾಗಿದ್ದರಿಂದ ಅವರಿಗೆ ಕಾಂಗ್ರೆಸ್ನಲ್ಲಿ ಉತ್ತಮ ಸ್ಥಾನ ದೊರಕಿತು. ಒಂದು ವೇಳೆ ಅವರು ನೈಜೀರಿಯಾದವರಾಗಿದ್ದರೆ ಕಾಂಗ್ರೆಸ್ ಅವರಿಗೆ ಯಾವುದೇ ಸ್ಥಾನ ನೀಡುತ್ತಿರಲಿಲ್ಲ’ ಎಂದು ಗಿರಿರಾಜ್ ಹೇಳಿಕೆ ನೀಡಿದ್ದರು. ಇದಕ್ಕೆ ಭಾರೀ ಖಂಡನೆ ವ್ಯಕ್ತವಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.