ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ರವರ 125 ನೇ ಜನ್ಮದಿನ ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪ್ರತಿಯೊಂದು ರಾಜಕೀಯ ಪಕ್ಷವೂ ಈಗ ಓಟ್ ಬ್ಯಾಂಕ್ ಆಸೆಗಾಗಿ ಅಂಬೇಡ್ಕರ್ ಪರವಾಗಿ ಎದ್ದುನಿಂತಿರುವುದು ಕಾಲದ ವ್ಯಂಗ್ಯ. ಅಂಬೇಡ್ಕರ್ ಅವರ ಆಶೋತ್ತರಗಳ ಕುರಿತು ಕಿಂಚಿತ್ತು ಅರಿವಿಲ್ಲದಿರುವವರೂ ಅಂಬೇಡ್ಕರ್ ಪರವಾಗಿ ವೇದಿಕೆ ಹತ್ತಿ ಉದ್ದುದ್ದ ಭಾಷಣ ಬಿಗಿಯುತ್ತಿರುವ ದೃಶ್ಯವು ಹಾಸ್ಯಾಸ್ಪದ. ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ತನ್ನ ಎಲ್ಲ ಫ್ಲೆಕ್ಸ್ಗಳಲ್ಲಿ ದೊಡ್ಡದಾಗಿ ಕಾಣುವಂತೆ ಹಾಕಿಕೊಂಡಿರುವುದಂತೂ ಅದರ ಓಟ್ ಬ್ಯಾಂಕ್ ರಾಜಕಾರಣದ ಹುನ್ನಾರಕ್ಕೆ ದಿವ್ಯನಿದರ್ಶನ. ಅಂಬೇಡ್ಕರ್ ತಮ್ಮ ಜೀವಮಾನದುದ್ದಕ್ಕೂ ಕಾಂಗ್ರೆಸ್ ಪಕ್ಷ ಹಾಗು ಅದರ ಸಿದ್ಧಾಂತಗಳನ್ನು ವಿರೋಧಿಸುತ್ತಲೇ ಬಂದಿದ್ದರು. 1919 ರಲ್ಲಿ ಬಾಬಾಸಾಹೇಬರು ಸೌತ್ಬರೋ ಆಯೋಗದ ಮುಂದೆ ಭಾರತೀಯರೆಲ್ಲರಿಗೂ ಮತದಾನದ ಹಕ್ಕನ್ನು ನೀಡುವ ವಯಸ್ಕ ಮತದಾನ ಪದ್ದತಿ ಜಾರಿಗೊಳಿಸಬೇಕು. ದಲಿತರಿಗೆ ಶಾಸನ ಸಭೆಗಳಲ್ಲಿ ಪ್ರತ್ಯೇಕ ಪ್ರಾತಿನಿಧ್ಯ ನೀಡಬೇಕು ಮುಂತಾದ ಬೇಡಿಕೆ ಇಟ್ಟಿದ್ದರು. ಆದರೆ 1928 ರಲ್ಲಿ ಕಾಂಗ್ರೆಸ್ ಪಕ್ಷ ನೆಹರೂ ಅಧ್ಯಕ್ಷತೆಯಲ್ಲಿ ಸಂವಿಧಾನ ರಚನಾಸಮಿತಿ ರಚಿಸಿಕೊಂಡು ಸೈಮನ್ ಆಯೋಗಕ್ಕೆ ಮನವಿ ಸಲ್ಲಿಸಿ, ‘ಮತದಾನ ಪದ್ದತಿಯನ್ನು ಈಗಿರುವಂತೆ ಪದವೀದರರು ಮತ್ತು ತೆರಿಗೆದಾರರಿಗೆ ಮಾತ್ರ ನೀಡುವುದು ಸೂಕ್ತ. ಅಸ್ಪೃಶ್ಯರ ಸಮಸ್ಯೆ ಸಾಮಾಜಿಕ, ಧಾರ್ಮಿಕ ಸಮಸ್ಯೆಯಾಗಿರುವುದರಿಂದ ಅವರಿಗೆ ಶಾಸನ ಸಭೆಗಳಲ್ಲಿ ಪ್ರತ್ಯೇಕ ರಾಜಕೀಯ ಪ್ರಾತಿನಿಧ್ಯ ನೀಡುವ ಅಗತ್ಯವಿಲ್ಲ’ ಎಂದು ವಾದಿಸಿತ್ತು. ಈ ಸಂಗತಿ ಈಗಿನ ಅದೆಷ್ಟು ಕಾಂಗ್ರೆಸ್ ನಾಯಕರಿಗೆ ಗೊತ್ತಿದೆ?
ಸ್ವಾತಂತ್ರ್ಯಾನಂತರದಲ್ಲೂ ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಕೊಟ್ಟ ಕಿರುಕುಳ ಕಡಿಮೆಯದ್ದೇನಲ್ಲ. 1950-51 ರಲ್ಲಿ ಕೇಂದ್ರ ಸರ್ಕಾರದ ಕಾನೂನು ಮಂತ್ರಿಯಾಗಿದ್ದ ಅಂಬೇಡ್ಕರ್, ಭಾರತದ ಎಲ್ಲ ವರ್ಗದ ಮಹಿಳೆಯರಿಗೆ ಸಮಾನ ನಾಗರೀಕ ಹಕ್ಕುಗಳನ್ನು ನೀಡುವ ಹಿಂದು ಕೋಡ್ ಮಸೂದೆ ಮಂಡಿಸಿದಾಗ ನೆಹರು ಸರ್ಕಾರ ಅದನ್ನು ಸಾರಾಸಗಟಾಗಿ ತಿರಸ್ಕರಿಸಿತ್ತು! ಸಂವಿಧಾನದ ಅನುಚ್ಛೇದ ೩೪೦ರ ಆಧಾರದ ಮೇಲೆ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲು ಹಿಂದುಳಿದ ವರ್ಗಗಳ ಆಯೋಗ ರಚಿಸಬೇಕೆಂಬ ಅಂಬೇಡ್ಕರ್ ಅವರ ಬೇಡಿಕೆಯನ್ನೂ ನೆಹರು ಸರ್ಕಾರ ಮಾನ್ಯ ಮಾಡಿರಲಿಲ್ಲ. ಇದರಿಂದ ಬೇಸರಗೊಂಡು ಅಂಬೇಡ್ಕರ್ ಕಾನೂನು ಮಂತ್ರಿ ಪದವಿಗೇ ಆಗ ರಾಜೀನಾಮೆ ನೀಡಿದ್ದರು. 1992 ರಲ್ಲಿ ಅಧಿಕಾರಕ್ಕೇರಿದ ಪಿ.ವಿ. ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಟ್ಟಾರೆ ಮೀಸಲಾತಿಯನ್ನೇ ನಿರ್ಜೀವಗೊಳಿಸುವ ಉದ್ದೇಶದಿಂದ ಖಾಸಗೀಕರಣ ನೀತಿ ಜಾರಿಗೊಳಿಸಿತ್ತು. ಈ ನೀತಿಯಿಂದಾಗಿ ಒಬಿಸಿ, ಎಸ್ಸಿ, ಎಸ್ಟಿ ವರ್ಗಗಳ ಕೋಟ್ಯಂತರ ಉದ್ಯೋಗಗಳು ಬ್ಯಾಕ್ಲಾಗ್ ಆಗಿಯೇ ಉಳಿದಿವೆ. ಅಷ್ಟೇ ಏಕೆ, ಯಾರ್ಯಾರಿಗೋ ಬದುಕಿರುವಾಗಲೇ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಿದ ಕಾಂಗ್ರೆಸ್ ಸರ್ಕಾರಕ್ಕೆ ಅಂಬೇಡ್ಕರರಂತಹ ಮೇರು ವ್ಯಕ್ತಿತ್ವ ನೆನಪಿಗೇ ಬರಲಿಲ್ಲ. ಎಂ.ಜಿ. ರಾಮಚಂದ್ರನ್, ಇಂದಿರಾಗಾಂಧಿ ಮುಂತಾದ ರಾಜಕೀಯ ನಾಯಕರಿಗೆ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಿದ ಕಾಂಗ್ರೆಸ್ಗೆ ಅಂಬೇಡ್ಕರ್ ಆ ಪ್ರಶಸ್ತಿಗೆ ಅತ್ಯಂತ ಅರ್ಹರು ಎಂದೆನಿಸಲೇ ಇಲ್ಲ. ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರ ಯಾವುದೇ ಸಿದ್ಧಾಂತ ಅಥವಾ ನೀತಿಗೂ ಬದ್ಧವಾಗಿರಲಿಲ್ಲ ಎನ್ನುವುದಕ್ಕೆ ಇಷ್ಟು ನಿದರ್ಶನಗಳು ಸಾಕಲ್ಲವೇ?
ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲಿ ಮಾತನಾಡಿದ ಅನೇಕ ಮಹನೀಯರು, ಅನಗತ್ಯವಾಗಿ ಬಿಜೆಪಿ ಹಾಗೂ ಸಂಘಪರಿವಾರವನ್ನು ಎಳೆದುತಂದು, ಇವೆಲ್ಲ ಅಂಬೇಡ್ಕರ್ ಅವರನ್ನು ದ್ವೇಷಿಸುತ್ತಿದ್ದವು ಎಂಬಂತೆ ಬಿಂಬಿಸಿರುವುದು ವಾಸ್ತವಕ್ಕೆ ಬಲ ದೂರ. 1987-88 ರ ಅವಧಿಯಲ್ಲಿ ಬಾಬಾಸಾಹೇಬರ ಬರಹ, ಭಾಷಣಗಳನ್ನು ಮಹಾರಾಷ್ಟ್ರ ಸರ್ಕಾರ ಪ್ರಕಟಿಸಿದಾಗ ಸಂಘಪರಿವಾರದವರು ಆ ಪುಸ್ತಕಗಳನ್ನು ಖರೀದಿಸಿ, ಬಹಿರಂಗವಾಗಿ ಸುಟ್ಟು ಪ್ರತಿಭಟಿಸಿದರೆಂದು ಹಿರಿಯ ವಕೀಲ ಸಿ.ಎಸ್. ದ್ವಾರಕಾನಾಥ್ ಪತ್ರಿಕೆಯೊಂದರ ತಮ್ಮ ಅಂಕಣದಲ್ಲಿ ಹೇಳಿದ್ದಾರೆ. ಆದರೆ ಈ ಹೇಳಿಕೆಯನ್ನು ಸಮರ್ಥಿಸುವ ಯಾವುದೇ ಆಧಾರಗಳನ್ನು ಅವರು ನೀಡಿಲ್ಲ. ಅಂಬೇಡ್ಕರ್ ಕುರಿತ ಪುಸ್ತಕಗಳನ್ನು ಸುಟ್ಟಿದ್ದು ಯಾವ ದಿನಾಂಕ? ಸುಟ್ಟವರು ಯಾರು? ಅವರನ್ನು ಬಂಧಿಸಲಾಯಿತೇ ಅಥವಾ ಹಾಗೇ ಬಿಡಲಾಯಿತೇ? ಬಂಧಿಸಿದ್ದರೆ ಅವರಿಗೆ ಶಿಕ್ಷೆ ನೀಡಲಾಯಿತೇ? ಇತ್ಯಾದಿ ಯಾವುದೇ ಪೂರಕ ಸಮರ್ಥನೆಗಳನ್ನು ಅವರು ತಮ್ಮ ಲೇಖನದಲ್ಲಿ ವ್ಯಕ್ತಪಡಿಸಿಲ್ಲ. ಒಂದು ರೀತಿಯಲ್ಲಿ ಇದು ಹಿಟ ಅಂಡ್ ರನ್ ಕೇಸಿನಂತೆ! ಸಂಘಪರಿವಾರವನ್ನು ಅಂಬೇಡ್ಕರ್ ವಿರುದ್ಧ ಎತ್ತಿ ಕಟ್ಟುವ ಹುನ್ನಾರ ಇದು ಎಂಬುದು ಸ್ಪಷ್ಟ.
ವಾಸ್ತವವಾಗಿ ಅಂಬೇಡ್ಕರ್ ಕುರಿತು ಮಾತನಾಡುತ್ತಿರುವ ಅನೇಕ ವಿಚಾರವಂತರು, ಬುದ್ಧಿಜೀವಿಗಳು ಅಂಬೇಡ್ಕರ್ ಹಾಗೆ ಹೇಳಿದ್ದರು, ಹೀಗೆ ಹೇಳಿದ್ದರು, ದಲಿತರ ಉದ್ಧಾರಕ್ಕಾಗಿ ಅವರು ಹೇಗೆ ಪ್ರಯತ್ನಿಸಿದರು ಮುಂತಾಗಿ ಭಾಷಣ ಬಿಗಿಯುತ್ತಾರೆಯೇ ಹೊರತು, ಅಂಬೇಡ್ಕರ್ ಚಿಂತನೆಗಳನ್ನು ಸ್ವತಃ ತಾವು ಹೇಗೆ ಕೃತಿಗಿಳಿಸಲು ಪ್ರಯತ್ನಿಸಿದ್ದೇವೆ ಎಂಬ ಬಗ್ಗೆ ಚಕಾರ ಕೂಡ ಎತ್ತದಿರುವುದು ಎಂತಹ ವಿಪರ್ಯಾಸ! ಬೇರೆಯವರನ್ನು ಟೀಕಿಸುವುದು ಸುಲಭ. ಆದರೆ ತಾವೇನು ಮಾಡಿದ್ದೇವೆ ಎಂದು ಹೇಳುವುದು ಸುಲಭವಲ್ಲ. ಸಂಘ ಪರಿವಾರ ಅಥವಾ ಸಂಘ ಪ್ರೇರಿತ ಸಂಘಟನೆಗಳು ದೇಶದಾದ್ಯಂತ ಸದ್ದಿಲ್ಲದೆ ಅಂಬೇಡ್ಕರ್ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಸಂಘ ಪ್ರಾರಂಭವಾದಂದಿನಿಂದಲೇ ಪ್ರಯತ್ನಿಸುತ್ತಿರುವುದನ್ನು ಬುದ್ಧಿಜೀವಿಗಳು ಗಮನಿಸಬೇಕಾಗಿದೆ.
ಸಂಘ ಪ್ರಾರಂಭವಾದಾಗ, ಸಂಘದ ಶಿಬಿರಗಳಲ್ಲಿ ಎಲ್ಲ ಜಾತಿಯವರು ಪಾಲ್ಗೊಳ್ಳುತ್ತಿದ್ದರು. ಸಂಘದ ಮೊಟ್ಟಮೊದಲ ಶಿಬಿರ ನಡೆದಾಗ ಅದರಲ್ಲಿ ಅನೇಕ ಮಹಾರ (ಹರಿಜನ) ಬಂಧುಗಳೂ ಇದ್ದರು. ಊಟದ ಸಮಯದಲ್ಲಿ ಕೆಲವು ಸಂಪ್ರದಾಯಸ್ಥರಿಗೆ, ‘ನಾವು ಮಹಾರರ ಜೊತೆ ಕುಳಿತು ಊಟ ಮಾಡುವುದು ಹೇಗೆ?’ ಎಂಬ ಮುಜುಗರ. ಏಕೆಂದರೆ ಅವರು ಎಂದೂ ಹಾಗೆ ಊಟ ಮಾಡಿದವರಲ್ಲ. ಸಂಘ ಸ್ಥಾಪಕ ಡಾ. ಹೆಡಗೇವಾರರ ಮುಂದೆ ಈ ಪ್ರಶ್ನೆಯನ್ನಿಟ್ಟಾಗ ಅವರು ‘ಶಿಬಿರದಿಂದ ಆಚೆ ತೊಲಗಿ, Get Lost’ ಎಂದೇನೂ ಹೇಳಲಿಲ್ಲ. ಬದಲಿಗೆ ‘ಎಲ್ಲರೂ ಸೇರಿ ಒಂದೆಡೆ ಊಟಕ್ಕೆ ಕುಳಿತುಕೊಳ್ಳುವುದು ನಮ್ಮ ಪದ್ಧತಿ’ ಎಂದಷ್ಟೇ ಹೇಳಿದರು. ಹಿಂಜರಿಯುತ್ತಿದ್ದ ನಾಲ್ಕು ಜನರಿಗೆ, ‘ನೀವು ಬೇರೆ ಸಾಲು ಮಾಡಿ ಊಟಕ್ಕೆ ಕುಳಿತುಕೊಳ್ಳಬಹುದು’ ಎಂದು ಸಲಹೆ ನೀಡಿದರು. ಅವರು ಪ್ರತ್ಯೇಕವಾಗಿಯೇ ಊಟಕ್ಕೆ ಕುಳಿತರು. ಆದರೆ ರಾತ್ರಿ ಊಟದ ವೇಳೆಗೆ ಅವರೆಲ್ಲಾ ಡಾ. ಹೆಡಗೇವಾರ್ ಬಳಿ ಬಂದು, ‘ನಾವು ತಪ್ಪು ಮಾಡಿದ್ದೇವೆ. ಹಾಗೆ ಮಾಡಬಾರದಾಗಿತ್ತು’ ಎಂದರು. ಅದಾದ ಮೇಲೆ ಅವರಿಗೆ ಅಸ್ಪೃಶ್ಯತೆಯ ಕುರಿತು ಉಪದೇಶಿಸುವ ಅಗತ್ಯವೇ ಬೀಳಲಿಲ್ಲ. ಅಂದರೆ ಅವರಲ್ಲಿ ಆಗಬೇಕಿದ್ದ ಪರಿವರ್ತನೆ ಆಗಿತ್ತು. ಡಾ. ಹೆಡಗೇವಾರ್ ಅವರನ್ನೇನಾದರೂ ಹೊರಗೆ ತಳ್ಳಿದ್ದರೆ ಈ ಪರಿವರ್ತನೆ ಆಗುತ್ತಿತ್ತೆ?
1974 ರ ಮೇ 8 ರಂದು ಪುಣೆಯಲ್ಲಿ ನಡೆದ ವಸಂತ ವ್ಯಾಖ್ಯಾನಮಾಲಾದಲ್ಲಿ ಸಂಘದ ಅಂದಿನ ಸರಸಂಘಚಾಲಕರಾಗಿದ್ದ ಬಾಳಾಸಾಹೇಬ್ ದೇವರಸ್ ಅವರು, ‘ಸಮಾಜಿಕ ಸಮತೆ ಮತ್ತು ಹಿಂದು ಸಂಘಟನೆ’ ಕುರಿತು ಉಪನ್ಯಾಸ ನೀಡುತ್ತಾ, ‘ಅಸ್ಪೃಶ್ಯತೆ ತಪ್ಪಲ್ಲ ಅನ್ನುವುದಾದರೆ ಜಗತ್ತಿನಲ್ಲಿ ಇನ್ನು ಯಾವುದೂ ತಪ್ಪಾಗದು’ ಎಂದು ಘೋಷಿಸಬೇಕು ಎಂದಿದ್ದರು. ಸಾಮಾಜಿಕ ವಿಷಮತೆಯನ್ನು ನಿರ್ಮೂಲಗೊಳಿಸುವುದು ನಮ್ಮೆಲ್ಲರ ಗುರಿಯಾಗಬೇಕು ಎಂದು ಕರೆನೀಡಿದ್ದರು. ಅಸ್ಪೃಶ್ಯತೆ ಒಂದು ಘೋರ ತಪ್ಪು ಮತ್ತು ಅದನ್ನು ಬಡಸಹಿತ ತೊಡೆದು ಹಾಕಬೇಕಾದುದು ಅತ್ಯಗತ್ಯ (untouchability must be thrown out lock, stock and barrel) ಎಂದು ಖಂಡತುಂಡವಾಗಿ, ಸ್ಪಷ್ಟ ಶಬ್ದಗಳಲ್ಲಿ ನುಡಿದಿದ್ದರು. ಸಂಘದ ಎರಡನೇ ಸರಸಂಘಚಾಲಕರಾಗಿದ್ದ ಶ್ರೀ ಗುರೂಜೀ ಅವರು ವಿಶ್ವಹಿಂದೂ ಪರಿಷತ್ತಿನ ಮೂಲಕ ಧರ್ಮಗುರುಗಳನ್ನು ಒಂದೆಡೆ ಸೇರಿಸಿ, ಅವರೊಡನೆ ಮಾತುಕತೆಯಾಡಿ ಹಿಂದುಗಳೆಲ್ಲರೂ ಒಂದು. ಧರ್ಮದಿಂದ ಮತಾಂತರ ಹೊಂದಿದವರನ್ನು ಮರಳಿ ಧರ್ಮಕ್ಕೆ ಕರೆದುಕೊಳ್ಳಲು ಮುಂದಾಗಬೇಕು ಎಂದು ಹೇಳಿ ಅವರ ಮನವೊಲಿಸಿದ್ದರು. ಸಂಘ ಅಥವಾ ಸಂಘಪ್ರೇರಿತ ಸಂಘಟನೆಗಳು ಅಸ್ಪೃಶ್ಯತೆಯ ಕುರಿತು ಕೇವಲ ಟೀಕೆಗಳನ್ನು ಮಾತ್ರ ಮಾಡದೆ, ಅಸ್ಪೃಶ್ಯತೆಯನ್ನು ನಿವಾರಿಸುವ ವಿವಿಧ ಮಾರ್ಗೋಪಾಯ ಗಳನ್ನು ಹುಡುಕಿದವು. ಇಂದು ಸಂಘ ಈ ಹಿನ್ನೆಲೆಯಲ್ಲಿ ಪ್ರವೇಶಿಸದ ಕ್ಷೇತ್ರಗಳೇ ಇಲ್ಲವೆನ್ನಬೇಕು. ವನವಾಸಿ, ಆದಿವಾಸಿ, ಹಿಂದುಳಿದ ವರ್ಗ, ಕೊಳಗೇರಿ, ಉಪೇಕ್ಷಿತ ಬಸ್ತಿಗಳು … ಹೀಗೆ ಎಲ್ಲೆಡೆ ಧ್ವನಿಯಿಲ್ಲದವರಿಗೆ ಧ್ವನಿ ನೀಡುವ, ಸಾಮಾಜಿಕ ಸಾಮರಸ್ಯವನ್ನು ಬೆಸೆಯುವ ಸ್ತುತ್ಯರ್ಹ, ಆದರೆ ಸದ್ದಿಲ್ಲದ ಕಾರ್ಯವನ್ನು ಸಂಘಪ್ರೇರಿತ ಸಂಘಟನೆಗಳು ನಡೆಸುತ್ತಾ ಬಂದಿವೆ. ಆದರೆ ಸಂಘಪರಿವಾರವನ್ನು ಸುಖಾಸುಮ್ಮನೆ ಟೀಕಿಸುವ ಬುದ್ಧಿಜೀವಿಗಳು, ಬರಹಗಾರರು ಎಂದಾದರೂ ಈ ಬಗ್ಗೆ ಯೋಚಿಸಿದ್ದಾರಾ?
ಅಂಬೇಡ್ಕರ್ ಅವರನ್ನು ಇಂದು ದೇವರ ಸಾಲಿಗೆ ನಾವು ಸೇರಿಸಿಬಿಟ್ಟಿದ್ದೇವೆ. ಅವರ ಆರಾಧನೆಗೆ ಮಾತ್ರ ಅವರ ಚಿಂತನೆಗಳನ್ನು ಸೀಮಿತಗೊಳಿಸಿದ್ದೇವೆ. ಅವರೊಬ್ಬ ಮಹಾನ್ ಸಮಾಜ ಸುಧಾರಕ, ಧ್ಯೇಯಜೀವಿ ಅಪ್ರತಿಮ ವಾಗ್ಮಿ, ಅಭಿವೃದ್ಧಿಯ ಹರಿಕಾರ, ಪ್ರಖರ ದೇಶಭಕ್ತ ಎಂಬುದನ್ನು ಮರೆತೇ ಬಿಟ್ಟಿದ್ದೇವೆ. ನಿಜ, ಅಂಬೇಡ್ಕರ್ ಜಾತಿ ವಿನಾಶಕ್ಕೆ ಕರೆನೀಡಿದ್ದರು. ಆದರೆ ಅವರೆಂದೂ ದೇಶವಿರೋಧಿಯಾಗಿರಲಿಲ್ಲ. ನನಗೊಂದು ಮಾತೃಭೂಮಿಯಿಲ್ಲ ಎಂದವರು ನೊಂದು ಹೇಳಿದ್ದರು. ಆದರೆ ಅವರು ಈ ದೇಶವನ್ನು ಬಿಟ್ಟು ಬೇರೆಡೆಗೆ ವಲಸೆ ಹೋಗಲಿಲ್ಲ. ತಮ್ಮ ವಿದ್ಯಾಭ್ಯಾಸದ ಸಂದರ್ಭದಲ್ಲಿ ಅವರು ಅಮೆರಿಕ ಹಾಗೂ ಇಂಗ್ಲೆಂಡ್ಗಳಲ್ಲಿ ಅಧ್ಯಯನ ನಿರತರಾಗಿದ್ದರು. ಜಾತಿಯ ಕಟ್ಟುಪಾಡುಗಳಿಲ್ಲದ, ಅಸ್ಪೃಶ್ಯತೆಯ ಸೋಂಕಿಲ್ಲದ ಅಲ್ಲಿನ ಮುಕ್ತ ಸಮಾಜವನ್ನು ಕಂಡು ಅವರಿಗೆ ಅಪಾರ ಸಂತೋಷವಾಗಿತ್ತು. ಭಾರತದಲ್ಲಾದರೋ ಅಂಬೇಡ್ಕರ್ ತಮ್ಮ ಜೀವಮಾನದುದ್ದಕ್ಕೂ ಅವಮಾನಗಳನ್ನೇ ಅನುಭವಿಸಿದ್ದರು. ಜಾತಿಯ ಕಾರಣಕ್ಕಾಗಿ ಅವರು ಅನೇಕ ಸಂದರ್ಭಗಳಲ್ಲಿ ಅವಮಾನದಿಂದ ನಲುಗಿಹೋಗುವ ಸಂದರ್ಭಗಳು ಎದುರಾಗಿತ್ತು. ಹೀಗಿರುವಾಗ ಅವರು ಇಂತಹ ಅವಮಾನಗಳಿಗೆ ಕೊನೆ ಹಾಡಲು ಇಂಗ್ಲೆಂಡ್ ಅಥವಾ ಅಮೆರಿಕಾದಲ್ಲೇ ಶಾಶ್ವತವಾಗಿ ನೆಲೆಸುವ ಯೋಚನೆ ಮಾಡಿದ್ದರೆ ಅದೇನೂ ತಪ್ಪಾಗುತ್ತಿರಲಿಲ್ಲ. ಆದರೆ ಅಂಬೇಡ್ಕರ್ ಹಾಗೆ ಮಾಡಲಿಲ್ಲ. ತಮ್ಮ ಉನ್ನತ ವಿದ್ಯಾಭ್ಯಾಸದ ಬಳಿಕ ಮರಳಿ ತಾಯ್ನಾಡಿಗೇ ಬಂದು ಇಲ್ಲಿ ಸೇವೆ ಸಲ್ಲಿಸಿದರು ಎಂಬ ಅಂಶ ಅವರಿಗೆ ತಾಯ್ನಾಡಿನ ಬಗ್ಗೆ ಎಂತಹ ಮಮತೆಯಿತ್ತು ಎನ್ನುವುದಕ್ಕೆ ಉಜ್ವಲ ನಿದರ್ಶನ.
ಅಂಬೇಡ್ಕರ್ ಮನಸ್ಸು ಮಾಡಿದ್ದರೆ ಮುಸ್ಲಿಂ ಅಥವಾ ಕ್ರಿಶ್ಚಿಯನ್ ಆಗಬಹುದಿತ್ತು. ಆದರೆ ಅವರಿಗೆ ಆ ಧರ್ಮಗಳಲ್ಲಿ ಅಡಗಿದ್ದ ಹುಳುಕುಗಳು ಗೊತ್ತಿತ್ತು. 150 ವರ್ಷಕ್ಕೂ ಹೆಚ್ಚು ಭಾರತವನ್ನಾಳಿದ ಬ್ರಿಟಿಷರು ಈ ದೇಶಕ್ಕೆ ರೈಲು ತಂದರು, ಅಂಚೆ ತಂದರು, ವಿಮಾನ ಹಾರಾಟ ವ್ಯವಸ್ಥೆ ಮಾಡಿದರು. ಕಾಲೇಜುಗಳನ್ನು ತೆರೆದರು. ಆದರೆ ಇಲ್ಲಿ ಹುದುಗಿದ್ದ ಅಸ್ಪೃಶ್ಯತೆಯ ಕಳಂಕವನ್ನು ತೊಡೆದುಹಾಕಲು ಮಾತ್ರ ಅವರೆಂದೂ ಪ್ರಯತ್ನಿಸಲಿಲ್ಲ. ಎಂಬ ಗಂಭೀರ ಅಂಶ ಅಂಬೇಡ್ಕರ್ ಅವರಿಗೆ ಮನವರಿಕೆಯಾಗಿತ್ತು. ಅದೇ ರೀತಿ ಮುಸ್ಲಿಮರು ದಲಿತರನ್ನು ಮತಾಂತರಗೊಳಿಸಿ ಮುಸ್ಲಿಮರನ್ನಾಗಿ ಮಾಡುವುದರಿಂದ ದಲಿತರ ಉದ್ಧಾರ ಸಾಧ್ಯವಿಲ್ಲ ಎಂಬ ಅರಿವೂ ಅವರಿಗಿತ್ತು. ‘ಮುಸ್ಲಿಂ ಜಗತ್ತು ಎಂದಿಗೂ ಭಾರತವನ್ನು ಸರ್ವಧರ್ಮ ಸಮನ್ವಯದ ದೇಶ ಎಂದು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ. ಯಾಕೆಂದರೆ ಮುಸ್ಲಿಂ ಮನಸ್ಸಿಗೆ ಅರ್ಥವಾಗುವುದು ಮುಸ್ಲಿಂ ದೇಶ, ಮುಸ್ಲಿಮರಲ್ಲದವರ ದೇಶ – ಎರಡೇ’ ಎಂದು ಅವರು ಹೇಳಿದ್ದು ಇದೇ ಹಿನ್ನಲೆಯಲ್ಲಿ. ಹೀಗಾಗಿ ಅವರು ಜಾತಿಪದ್ದತಿ ಇರದ ಬೌದ್ಧ ಧರ್ಮವನ್ನೇ ತಮ್ಮ ಬದುಕಿನ ಸಂಧ್ಯಾಕಾಲದಲ್ಲಿ ಅಪ್ಪಿಕೊಂಡರು. ಬೌದ್ಧ ಧರ್ಮ ಹಿಂದೂ ಧರ್ಮದ್ದೇ ಒಂದು ಕವಲು ಎಂಬ ಅಂಶ ಅವರಿಗೆ ಗೊತ್ತಿಲ್ಲದೇ ಇರಲಿಲ್ಲ. ಕಮ್ಯುನಿಸಂ ಕುರಿತು ಅಂಬೇಡ್ಕರ್ ಹೇಳಿದ್ದಂತೂ ಹಗಲಿನಷ್ಟು ಸ್ಪಷ್ಟವಿದೆ: ‘ಕಮ್ಯುನಿಸಂ ಮತ್ತು ಪ್ರಜಾಪ್ರಭುತ್ವ ಜೊತೆಜೊತೆಯಾಗಿ ಇರಲು ಸಾಧ್ಯವಿಲ್ಲ. ಕಮ್ಯುನಿಸಂ ಕಾಡಿನ ಬೆಂಕಿಯಂತೆ. ಎದುರಾದವರನ್ನೆಲ್ಲಾ ಅದು ನುಂಗಿ ಹಾಕುತ್ತದೆ’.
ಅಂಬೇಡ್ಕರ್ ಜೀವಿತಾವಧಿಯಲ್ಲಿ ಹಿಂದೂ ಸಮಾಜದಲ್ಲಿದ್ದ ಅಸ್ಪೃಶ್ಯತೆ, ಮೂಢನಂಬಿಕೆಗಳಂತಹ ದೋಷಗಳು ಈಗಲೂ ಇವೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಆ ದೋಷಗಳನ್ನು ನಿವಾರಿಸುವ ಪ್ರಯತ್ನಗಳಿಗೆ ಈಗ ಹೆಚ್ಚಿನ ಚಾಲನೆ ದೊರಕಿದೆ ಎಂಬುದೂ ಅಷ್ಟೇ ನಿಜ. ಮನೆ, ಮಂದಿರ, ಸಾರ್ವಜನಿಕ ಕುಡಿಯುವ ನೀರು – ಇಲ್ಲೆಲ್ಲಾ ಯಾವುದೇ ಅಸಮಾನತೆ ಇರಕೂಡದು. ಇವು ಎಲ್ಲರಿಗೂ ಮುಕ್ತವಾಗಿರಬೇಕು ಎಂದು ಆರೆಸ್ಸೆಸ್ ಈ ಬಾರಿಯ ತನ್ನ ಅಖಿಲ ಭಾರತೀಯ ಸಭೆಯಲ್ಲಿ ನಿರ್ಣಯವನ್ನೇ ಕೈಗೊಂಡಿದೆ. ಅಂಬೇಡ್ಕರ್ ಚಿಂತನೆಗಳನ್ನು ತನ್ಮೂಲಕ ಕೃತಿಗಿಳಿಸಲು ಮುಂದಾಗಿದೆ. ಸಮಾಜಕ್ಕೆ ಅಂಟಿಕೊಂಡಿರುವ ಕೊಳೆಯನ್ನು ಒಂದೇ ದಿನ ತೊಳೆಯಲು ಸಾಧ್ಯವಿಲ್ಲ. ಆದರೆ ತೊಳೆಯುವ ಪ್ರಕ್ರಿಯೆ ಒಮ್ಮೆ ಪ್ರಾರಂಭವಾದರೆ ಸಮಾಜದಲ್ಲಿ ಹೊಸ ಬೆಳಕು ಮೂಡುವುದರಲ್ಲಿ ಅನುಮಾನವಿಲ್ಲ. ಕೊಳೆಯನ್ನು ತೊಳೆಯುವವರ ಸಂಖ್ಯೆ ಹೆಚ್ಚಬೇಕಷ್ಟೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.