ಬೆಳ್ತಂಗಡಿ : ಬದುಕಿನ ಎಲ್ಲಾ ಮಗ್ಗುಲುಗಳು ಸಾಹಿತ್ಯಕತೆಯಿಂದಲೇ ಕೂಡಿದೆ. ಆದ್ದರಿಂದ ಸಾಹಿತ್ಯಕ್ಕೆ ವಸ್ತುವಿಲ್ಲ ಎಂಬ ಮಾತು ಅಪ್ರಸ್ತುತ ಎಂದು ಪುತ್ತೂರು ವಿವೇಕಾನಂದ ಮಹಾ ವಿದ್ಯಾಲಯದ ಪ್ರಾಚಾರ್ಯ ಡಾ|| ಮಾಧವ ಭಟ್ ಅವರು ಹೇಳಿದರು. ಬೆಳಾಲು ಶ್ರೀ . ಧ.ಮಂ ಪ್ರೌಢ ಶಾಲೆಯಲ್ಲಿ ಶನಿವಾರ ನಡೆದ ಬೆಳ್ತಂಗಡಿ ತಾಲೂಕು 14 ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮಾನ ಮತ್ತು ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ನೀಡಿದರು.
ಬರವಣಿಗೆ ಮತ್ತು ಒದು ಸಾಹಿತ್ಯಕ್ಕೆ ಪೂರಕವಾದ ವಿಚಾರಗಳು. ಇತಿಹಾಸದ ಓದಿನಿಂದಲೂ ನಮ್ಮಲ್ಲಿ ಸಾಹಿತ್ಯದ ಬೆಳವಣಿಗೆಗೆ ಪ್ರೇರಣೆಯಾಗುತ್ತದೆ. ಪ್ರೇಮ-ವಿರಹ-ಸೋಲು-ಗೆಲುವು-ಸವಾಲು-ಅವಕಾಶ- ಕಷ್ಟ-ಸುಖಃ ಇವೆಲ್ಲರೂ ನಮ್ಮ ಜೀವನದ ಭಾಗಗಳೇ ಆಗಿದ್ದು ಇವು ಸಾಹಿತ್ಯದ ಏಳಿಗೆಗೆ ಕೊಡುಗೆಯನ್ನು ನೀಡುತ್ತವೆ ಎಂದರು.
ಬದುಕಿನ ಎಲ್ಲ ಮಗ್ಗುಲುಗಳೂ ಸಾಹಿತ್ಯದಿಂದಲೇ ಅಡಕವಾಗಿದೆ. ನಮ್ಮ ಪರಿಸರ, ಕೃಷಿ ಚಟುವಟಿಕೆ, ನಮ್ಮ ಸುತ್ತಲಿನ ಎಲ್ಲವೂ ಸಾಹಿತ್ಯಿಕ ದೃಷ್ಟಿಯಿಂದ ಸಾಹಿತ್ಯ ರಚನೆಗೆ ಬೇಕಾದ ವಸ್ತುಗಳೇ ಆಗಿದೆ. ಆದ್ದರಿಂದ ಸಾಹಿತ್ಯಕ್ಕೆ ಸಾಮಾಗ್ರಿಗಳಿಲ್ಲ ಎಂಬ ಮಾತು ಅಪ್ರಸ್ತುತವಾಗುತ್ತದೆ ಎಂದ ಅವರು. ಸಮ್ಮೇಳನಗಳಿಗೆ ಯಾರದ್ದೋ ಕಡ್ಡಾಯ ಸೂಚನೆ ಪಡೆದು ಬರುವ ಜನರಿಗಿಂತ ಅದನ್ನೇ ಮೆಚ್ಚಿಬರುವ ಜನಸಮೂಹದ ಅಗತ್ಯತೆಯನ್ನು ವಿವರಿಸಿದರು.
ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಪ್ರೊ. ಎಸ್ ಪ್ರಭಾಕರ್ ಅವರು ಮಾತನಾಡಿ, ಸಾಹಿತ್ಯವಿಲ್ಲದೆ ಬದುಕಿಲ್ಲ. ಸಾಹಿತ್ಯ ನಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ. ಮನಸ್ಸಿಗೆ ಶಾಂತಿ ಮುದವನ್ನು ನೀಡುತ್ತದೆ. ಅತಿ ಹೆಚ್ಚು ಜ್ಞಾನ ಪೀಠಗಳನ್ನು ಪಡೆದ ಹೆಮ್ಮೆ ನಮ್ಮದಾದರೂ ನಮ್ಮ ಕೃತಿಗಳು ಇತರ ಭಾಷೆಗಳಿಗೆ ತರ್ಜುಮೆಯಾಗಿಲ್ಲ ಎಂಬ ಮಾತು ನಮ್ಮ ಕೊರತೆಯಾಗಿದೆ ಎಂದರು.
ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೧೦ ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ಅಡ್ಕಾರಿಶ್ರೀಕರ ರಾವ್( ಸಹಕಾರಿ ಮತ್ತು ಸಂಘಟನೆ), ಯು. ಸಿ ಪೌಲೋಸ್ ಸಿಯೋನ್ ಅಶ್ರಮ ಟ್ರಸ್ಟ್( ಸಮಾಜ ಸೇವೆ), ಗೋಪಾಲಕೃಷ್ಣ ಗೊಲ್ಲ( ಶಿಕ್ಷಣ), ಎಸ್. ಬಿ ನರೇಂದ್ರ ಕುಮಾರ್ ಉಜಿರೆ (ಯಕ್ಷಗಾನ ಮತ್ತು ಕ್ರೀಡಾ ಸಂಘಟನೆ), ಬಾಬಾ ಉಜಿರೆ (ಸಾಹಿತ್ಯ), ಶ್ಯಾಮಲಾ ನಾಗರಾಜ್( ಸಂಗೀತ), ಅಣ್ಣು ನಲ್ಕೆ( ಜಾನಪದ), ದೇಜಪ್ಪ ಎಳ್ಳುಗದ್ದೆ(ಕೃಷಿ), ಮತ್ತು ಶಶಿಧರ ಆಚಾರ್ಯ(ಶಿಲ್ಪಕಲೆ) ಇವರನ್ನು ಸನ್ಮಾನಿಸಲಾಯಿತು. ಕಳೆದ ಶೈಕ್ಷಣಿಕ ಸಾಲಿನ ೧೦ ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಪಡೆದ ಆಯಿಶಾ ಎಂ ಕಿಲ್ಲೂರು ಅವರನ್ನು ವಿಶೇಷವಾಗಿ ಪುರಸ್ಕರಿಸಿ ಪ್ರೋತ್ಸಾಹಿಸಲಾಯಿತು.
ಸನ್ಮಾನಿತರ ಪರವಾಗಿ ಶ್ರೀಕರ ರಾವ್ ಅನಿಸಿಕೆ ವ್ಯಕ್ತಪಡಿಸಿದರು.ವೇದಿಕೆಯಲ್ಲಿ ತಾ|ಕಸಾಪ ಅಧ್ಯಕ್ಷ ಡಾ|| ಬಿ ಯಶೋವರ್ಮ, ಜಿಲ್ಲಾ ಗೌರವ ಕಾರ್ಯದರ್ಶಿ ಡಾ|| ಎಂ ಪಿ ಶ್ರೀನಾಥ್, ತಾಲೂಕು ಗೌರವ ಕಾರ್ಯದರ್ಶಿಗಳಾದ ರಾಮಕೃಷ್ಣ ಭಟ್ ಚೊಕ್ಕಾಡಿ ಮತ್ತು ಅಶ್ರಫ್ ಆಲಿಕುಂಞಿ, ತಾಲೂಕು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ರಾಜಾರಾಮ ಶರ್ಮ ಉಪ ಸ್ಥಿತರಿದ್ದರು.
ಎಸ್ಡಿಎಂ ಕಾಲೇಜಿನ ಉಪನ್ಯಾಸಕ ಡಾ|| ದಿವಾ ಕೊಕ್ಕಡ ಕಾರ್ಯಕ್ರಮ ನಿರೂಪಿಸಿದರು. ಸಮ್ಮೇಳನದ ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ದಾಮೋಧರ ಗೌಡ ಸುರುಳಿ ಸ್ವಾಗತಿಸಿದರು. ಶಿಕ್ಷಕ ಸುರೇಶ್ ಧನ್ಯವಾದವಿತ್ತರು. ಬಳಿಕ ಡಾ|| ಈ ಮಹಾಬಲ ಭಟ್ ಇವರಿಂದ ಗಮಕ ವಾಚನ ವೈವಿಧ್ಯ ಕಾರ್ಯಕ್ರಮ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ನೃತ್ಯನಿಕೇತನ ಕೊಡವೂರು ಇದರ ವಿದ್ವಾನ್ ಸುಧೀರ್ ರಾವ್ ಮತ್ತು ವಿದುಷಿ ಮಾನಸಿ ಕೊಡವೂರು ಇವರ ತಂಡದವರಿಂದ ನೃತ್ಯ ಸಿಂಚನ ಕಾರ್ಯಕ್ರಮ ನಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.