ಬೆಳ್ತಂಗಡಿ: ರಾಜ್ಯಾದಂತ ಹೆಸರುವಾಸಿಯಗಿರುವ, ಇತಿಹಾಸ ಪ್ರಸಿದ್ಧ, ಏಕಶಿಲಾ ತಾಣ, ಚಾರಣಿಗರಿಗೆ ಪ್ರಿಯವಾದ ಬೆಳ್ತಂಗಡಿ ತಾಲೂಕಿನ ಗಡಾಯಿಕಲ್ಲು (ನರಸಿಂಹ ಗಡ) ಪ್ರವಾಸೋದ್ಯಮದ ಭೂಪಟದಲ್ಲಿ ಗುರುತಿಸಿಕೊಂಡಿರವ ಸ್ಥಳ.
ಇಲ್ಲಿಗೆ ಚಳಿಗಾಲ, ಬೇಸಗೆಯಲ್ಲಿ ರಾಜ್ಯದ ವಿವಿಧ ಭಾಗದಿಂದ ಪ್ರತಿ ನಿತ್ಯ ನೂರಾರು ಪ್ರವಾಸಿಗರು ಬರುತ್ತಾರೆ, ಗಡ ಏರುತ್ತಾರೆ, ಖುಷಿ ಪಡುತ್ತಾರೆ. ಆದರೆ ಈ ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಾತ್ರ ಸಂಪೂರ್ಣ ಹದಗೆಟ್ಟು ಹೋಗಿದ್ದು, ಪ್ರತಿನಿತ್ಯ ಬರುವ ಪ್ರವಾಸಿಗರು, ಇಲ್ಲಿನ ನಿವಾಸಿಗಳು ಸರಕಾರಕ್ಕೆ ಹಿಡಿಶಾಪ ಹಾಕುತ್ತಲೆ ಈ ರಸ್ತೆಯಲ್ಲಿ ಸಂಚರಿಸಿ ಗಡ ಹತ್ತುತ್ತಾರೆ. ಬೆಳ್ತಂಗಡಿ ಕಿಲ್ಲೂರು ರಸ್ತೆಯಲ್ಲಿ 5 ಕಿ.ಮೀ. ಸಾಗಿದರೆ ಗಡಾಯಿಕಲ್ಲು ರಸ್ತೆ ಸಿಗುತ್ತದೆ. ಇಲ್ಲಿಂದ ಮೂರು ಕಿ.ಮೀ. ಸಾಗಬೇಕೆಂದರೆ ಅದೊಂದು ಸಾಹಸವೆ ಸರಿ. ಈ ರಸ್ತೆ ಡಾಮರು ಕಂಡು ಎರಡು ದಶಕಗಳೇ ಕಳೆದಿದೆ. ಕೆಲ ವರ್ಷಗಳ ಹಿಂದೆ ರಸ್ತೆ ದುರಸ್ತಿ ಮಾಡಲಾಗಿತ್ತು.
ಆದರೆ ಅದು ಒಂದೇ ವರ್ಷದಲ್ಲಿ ಎದ್ದು ಹೋಯಿತು ಎನ್ನುತಾರೆ ಸ್ಧಳೀಯರು. ರಸ್ತೆಯ ಡಾಮರು ಸಂಪೂರ್ಣವಾಗಿ ಕಿತ್ತು ಹೋಗಿದೆ. ದೊಡ್ಡ ಹೊಂಡಗಳೇ ನಿರ್ಮಾಣಗೊಂಡಿದೆ. ವಾಹನಗಳು ಎದ್ದೂ ಬಿದ್ದೂ ಸಾಗಬೇಕಾದ ಸ್ಧಿತಿಯಿದೆ. ಸ್ಧಳೀಯ ರಿಕ್ಷಾ ಚಾಲಕರುಗಳಂತೂ ಈ ರಸ್ತೆಯಲ್ಲಿ ಸಂಚರಿಸಲು ಹೆದರುತ್ತಾರೆ. ಬೈಕ್ ಪ್ರಯಾಣಿಕರ ಪಾಡಂತೂ ಹೇಳತೀರದ್ದಾಗಿದೆ. ಹೊಂಡಗಳಿಗೆ ಬಿದ್ದು ಬೈಕ್ಗಳು ಉರುಳಿರುವ ಪ್ರಕರಣಗಳು ಅನೇಕವಿದೆ. ಗಡಾಯಿಕಲ್ಲನ್ನಾದರೂ ಸುಲಭವಾಗಿ ಹತ್ತಬಹುದು. ಆದರೆ ಈ ರಸ್ತೆಯಲ್ಲಿ ಹೋಗುವುದು ಮಾತ್ರ ಯಾತನಾಮಯ ಸ್ಥಿತಿ ಇದೆ.
ಜಮಲಾಬಾದ್ ಕೋಟೆಯ ಪರಿಸರದಲ್ಲಿ ಹಾಗೂ ಇಲ್ಲೇ ಮುಂದೆ ಮೂಡಾಯಿಗುತ್ತು ಪ್ರದೇಶದಲ್ಲಿ ಸುಮಾರು 300ಕ್ಕೂ ಹೆಚ್ಚು ಮನೆಗಳಿದ್ದು, ಪ್ರತಿ ನಿತ್ಯ ನೂರಾರು ಸಂಖ್ಯೆಯಲ್ಲಿ ಜನರು, ವಿದ್ಯಾರ್ಧಿಗಳು ಈ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ವಾಹನಗಳ ಸಂಚಾರವಿರಲಿ, ಕಾಲ್ನಡಿಗೆಯಲ್ಲಿ ಹೋಗುವುದೇ ಕಷ್ಟವಾಗಿ ಮಾರ್ಪಟ್ಟಿದೆ. ಇದೀಗ ಸ್ಧಳೀಯ ಯುವಕರು ರಸ್ತೆಯ ಹೊಂಡಗಳಿಗೆ ಮಣ್ಣು ಹಾಕಿರುವುದರಿಂದ ಕಷ್ಟ ಪಟ್ಟಾದರು ಹೋಗಬಹುದು. ಇನ್ನು ಮಳೆಗಾಲ ಆರಂಭಗೊಂಡಿತೆಂದರೆ ಈ ಹಾಕಿದ ಮಣ್ಣು ಎದ್ದು ಹೋಗಿ ಹೊಂಡಗಳಲ್ಲಿ ನೀರು ನಿಂತು ಸಂಚಾರ ಇನ್ನಷ್ಟು ಕಷ್ಟವಾಗಲಿದೆ. ರಸ್ತೆಯ ಪರಿಚಯವಿಲ್ಲದ ಪ್ರವಾಸಿಗರೇ ಹೆಚ್ಚಾಗಿ ಈ ರಸ್ತೆಯಲ್ಲಿ ಸಂಚರಿಸುವುದರಿಂದ ಅಪಘಾತಗಳಿಗೂ ಆಹ್ವಾನ ನೀಡಿದಂತಾಗಲಿದೆ. ಈ ರಸ್ತೆಯ ದುರಸ್ತಿಗಾಗಿ ಇಲ್ಲಿನ ಜನರು ರಾಜಕಾರಣಿಗಳಲ್ಲಿ, ಅಧಿಕಾರಿಗಳಲ್ಲಿ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ ಈವರೆಗೆ ರಸ್ತೆ ಮಾತ್ರ ದುರಸ್ತಿಯಾಗಿಲ್ಲ.
ಇದೀಗ ರಜಾ ದಿನಗಳಾದುದರಿಂದ ಬರುತ್ತಿರುವ ಪ್ರವಾಸಿಗರ ಸಂಖ್ಯೆಯು ಹೆಚ್ಚಾಗುತ್ತಿದೆ. ಹೊರ ರಾಜ್ಯಗಳಿಂದಲೂ ಜನರು ಇಲ್ಲಿಗೆ ಬರುತ್ತಿದ್ದಾರೆ. ವಾರಾಂತ್ಯಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ. ರಸ್ತೆಯ ದುಸ್ದಿತಿ ಮಾತ್ರ ಎಲ್ಲರನ್ನೂ ಕಾಡುತ್ತಿದೆ.
ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಇದು ಒಂದು ಐತಿಹಾಸಿಕ ತಾಣವಾಗಿದೆ. ಮೊದಲು ನರಸಿಂಹಗಡ ಎಂಬ ಹೆಸರು ಇದಕ್ಕಿತ್ತು. ಟಿಪ್ಪು ಸುಲ್ತಾನ್ ಇದನ್ನು ಗೆದ್ದುಕೊಂಡು ಇಲ್ಲಿ ಕೋಟೆ ನಿರ್ಮಿಸಿ ಅದನ್ನು ತನ್ನ ಅಡಗುತಾಣವಾಗಿ ಮಾಡಿಕೊಂಡಿದ್ದ ಮತ್ತು ಬ್ರಿಟಿಷರ ವಿರುದ್ಧದ ಹೋರಾಟದ ಕೇಂದ್ರವಾಗಿಸಿದ್ದ. ಸಮುದ್ರ ಮಟ್ಟದಿಂದ 1788 ಅಡಿ ಎತ್ತರವಿರುವ ಬೃಹತ್ ಬಂಡೆಯ ಮೇಲೆ ಕೋಟೆ, ಪಿರಂಗಿ, ಕೆರೆಗಳಿವೆ. ಬಂಡೆಯನ್ನೇರುವುದೇ ಒಂದು ಸಾಹಸವಾಗಿದೆ. ಇದೀಗ ಪುರಾತತ್ವ ಇಲಾಖೆಯು ಇದನ್ನು ನೋಡಿಕೊಳ್ಳುತ್ತಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗಿರುವುದರಿಂದ ವನ್ಯಜೀವಿ ಇಲಾಖೆಯ ನಿಯಂತ್ರಣವೂ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.