ಫೆಬ್ರವರಿಯಲ್ಲಿ ದುಬಾರಿ ವಾಚ್ ಹಗರಣ, ಮಾರ್ಚ್ನಲ್ಲಿ ಎಸಿಬಿ ಹಗರಣ, ಏಪ್ರಿಲ್ ತಿಂಗಳಲ್ಲಿ ಪುತ್ರನ ಟೆಂಡರ್ ಹಗರಣ… ಇವೆಲ್ಲಾ ಸಾಲದೆಂಬಂತೆ ರಾಜ್ಯಾದ್ಯಂತ ಕಾಡಿರುವ ಭೀಕರ ಬರಗಾಲದ ಪರಿಹಾರಕ್ಕೆ ತುರ್ತುಕ್ರಮ ಕೈಗೊಳ್ಳದ ಬೇಜವಾಬ್ದಾರಿತನ – ಈ ವಿದ್ಯಮಾನಗಳು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರದ ಅಂತಿಮ ಕ್ಷಣಗಣನೆ ಆರಂಭವಾಗಿರುವುದರ ಸಂಕೇತವೇ?
ಈ ಪ್ರಶ್ನೆ ಈಗ ರಾಜ್ಯದ ಜನತೆಯನ್ನು ಕಾಡತೊಡಗಿದೆ. ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಸಾವಿರಾರು ಕೋಟಿ ರೂ.ಗಳ ಮೂರು ಹಗರಣಗಳು ನಡೆದಿವೆ ಎಂದು ವಿಧಾನ ಸಭೆಯ ಪ್ರತಿಪಕ್ಷನಾಯಕ ಜಗದೀಶ್ ಶೆಟ್ಟರ್ ದಾಖಲೆಗಳ ಸಮೇತ ಸುದ್ದಿಗೋಷ್ಠಿಯಲ್ಲಿ ಆರೋಪಿಸಿರುವುದು ಸಿದ್ದರಾಮಯ್ಯ ಅವರ ಪಾಲಿಗೆ ನುಂಗಲಾರದ ಇನ್ನೊಂದು ಬಿಸಿತುತ್ತು. ಅರ್ಕಾವತಿ ಬಡಾವಣೆಯಲ್ಲಿ 544 ಎಕರೆ ಅಕ್ರಮ ಡಿನೋಟಿಫಿಕೇಷನ್ ಹಗರಣದ ಸುಳಿಯಲ್ಲಿ ಸಿಲುಕಿರುವ ಸಿದ್ದರಾಮಯ್ಯ ಇದೀಗ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲೂ 77 ಎಕರೆ ಭೂಮಿ ಡಿನೋಟಿಫಿಕೇಷನ್ ಮಾಡಿ ಮೆಟ್ರೋಪಾಲಿಟಿನ್ ಸಹಕಾರಿ ಹೌಸಿಂಗ್ ಸೊಸೈಟಿಗೆ ಸುಮಾರು 30 ಎಕರೆ ಬೃಹತ್ ಪ್ರಮಾಣದ ಭೂಮಿ ಹಂಚಿಕೆ ಮಡಿರುವುದು ಇನ್ನೊಂದು ದೊಡ್ಡ ಹಗರಣ. ಹೀಗೆ ಒಂದಾದಮೇಲೊಂದು ಹಗರಣಗಳ ಸುಳಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಲುಕಿರುವುದು ಈಗ ಎಲ್ಲರಿಗೂ ಗೊತ್ತು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗಿನಿಂದ ತಮ್ಮ ಕುಟುಂಬವನ್ನು ಅಧಿಕಾರದ ಪರಿಧಿಯಿಂದ ಆದಷ್ಟೂ ದೂರವೇ ಇಟ್ಟಿದ್ದರು. ಇದು ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಗಿತ್ತು. ತಮ್ಮ ಪುತ್ರರನ್ನು ಅಧಿಕಾರದ ವ್ಯಾಪ್ತಿಯೊಳಗೆ ಬರಲು ಅವರೆಂದೂ ಬಿಟ್ಟಿರಲಿಲ್ಲ. ಆದರೆ ಈಗ ಅವರ ಎರಡನೇ ಪುತ್ರ ಡಾ. ಯತೀಂದ್ರ ನಿರ್ದೇಶಕರಾಗಿರುವ ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಷನ್ಸ್ ಇಂಡಿಯಾ ಸಂಸ್ಥೆಗೆ ಸರ್ಕಾರಿ ಗುತ್ತಿಗೆ ದೊರಕಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಬೆಂಗಳೂರು ಮೆಡಿಕಲ್ ಕಾಲೇಜಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪ್ರಯೋಗಾಲಯ, ತಪಾಸಣಾ ಕೇಂದ್ರ ತೆರೆಯಲು ಡಾ. ಯತೀಂದ್ರ ಅವರಿಗೆ ಸರ್ಕಾರಿ ಗುತ್ತಿಗೆ ದೊರಕಿದೆ. 2015 ರಲ್ಲಿ ಇ-ಪ್ರೊಕ್ಯೂರ್ಮೆಂಟ್ ಮೂಲಕವೇ ಟೆಂಡರ್ ಕರೆಯಲಾಗಿತ್ತು. ಕಡಿಮೆ ಮೊತ್ತ ಉಲ್ಲೇಖಿಸಿದ್ದರಿಂದ ಈ ಸಂಸ್ಥೆಗೆ ಟೆಂಡರ್ ಮಂಜೂರು ಆಗಿದೆ. ಸಂಸ್ಥೆಯಲ್ಲಿ ಸಿ.ಎಂ. ಪುತ್ರ ಇರುವುದು ಗಮನಕ್ಕೆ ಬಂದಿರಲಿಲ್ಲ. ಎಲ್ಲವೂ ನಿಯಮಬದ್ಧವಾಗಿ ನಡೆದಿದೆ ಎನ್ನುವುದು ಆಸ್ಪತ್ರೆಯ ನಿರ್ದೇಶಕರ ಹೇಳಿಕೆ. ಮೇಲ್ನೋಟಕ್ಕೆ ಇವೆಲ್ಲಾ ಪಾರದರ್ಶಕವಾಗಿಯೇ ಗೋಚರಿಸುತ್ತದೆ. ಆದರೆ ಟೆಂಡರ್ನಲ್ಲಿ ಭಾಗವಹಿಸಲು ಮುಂದೆ ಬಂದಿದ್ದು ಐದು ಕಂಪೆನಿಗಳು. ಷರತ್ತುಗಳ ಕಾರಣಕ್ಕಾಗಿ ಮೂರು ಕಂಪೆನಿಗಳು ಹಿಂದೆ ಸರಿದವು. ಮತ್ತೊಂದು ಸಂಸ್ಥೆ ಕಾಲಮಿತಿಯಲ್ಲಿ ಠೇವಣಿ ಕಟ್ಟಿರಲಿಲ್ಲ. ಹೀಗಾಗಿ ಗುತ್ತಿಗೆ ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಷನ್ಸ್ ಕಂಪೆನಿಯ ಪಾಲಾಗಿದೆ. ಬೀದಿ ಕಸ ಗುಡಿಸುವ ಟೆಂಡರ್ ಪ್ರಕ್ರಿಯೆಯಲ್ಲೂ ತುರುಸಿನ ಸ್ಪರ್ಧೆ ಇರುವ ಈ ಕಾಲದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪ್ರಯೋಗಾಲಯ, ತಪಾಸಣಾ ಕೇಂದ್ರ ತೆರೆಯುವ ಟೆಂಡರ್ನಲ್ಲಿ ಇಂತಹ ಜಾದೂ ಹೇಗೆ ಸಾಧ್ಯ? ಟೆಂಡರ್ನಲ್ಲಿ ಭಾಗವಹಿಸಿದ್ದ ನಾಲ್ಕು ಕಂಪೆನಿಗಳನ್ನು ಹಿಂದೆ ಸರಿಯುವಂತೆ ಮಾಡಿದ ಪ್ರಭಾವಿ ಶಕ್ತಿ ಯಾವುದು? ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರ ಸಂಬಂಧಿ ಎನ್ನಲಾದ ಡಾ. ರಾಜೇಗೌಡ ನಿರ್ದೇಶಕರಾಗಿರುವ ಈ ಸಂಸ್ಥೆ ಶುರುವಾಗಿದ್ದು ೨೦೦೯ರಲ್ಲಿ. ಡಾ. ಯತೀಂದ್ರ ಇದರ ನಿರ್ದೇಶಕರಾಗಿದ್ದು 2014 ರಲ್ಲಿ, ಅಂದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ನಂತರ. 2014 ರಲ್ಲಿ ಮೈಸೂರಿನ ಜಯದೇವ ಹೃದ್ರೋಗ ವಿಜ್ಞಾನ-ಸಂಶೋಧನಾ ಸಂಸ್ಥೆಯಲ್ಲೂ ರಕ್ತ ತಪಾಸಣಾ ಕೇಂದ್ರ ತೆರೆಯಲು ಟೆಂಡರ್ ಪಡೆದ ಸಂಸ್ಥೆ ಇಲ್ಲಿ ಕೂಡ ಅತ್ಯಂತ ಕಡಿಮೆ ಬಿಡ್ ಮೊತ್ತ ಸಲ್ಲಿಸಿದ್ದು ಆಶ್ಚರ್ಯಕರ. ಇವೆಲ್ಲಾ ಟೆಂಡರ್ ಪೂರ್ವ ಒಪ್ಪಂದದ ಸಂಶಯವನ್ನು ಗಟ್ಟಿಗೊಳಿಸುವಂತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇನೋ ‘ಇದೆಲ್ಲಾ ಜನಸೇವೆಯ ಕೆಲಸ’ ಎಂದಿದ್ದಾರೆ. ಇರಬಹುದು. ಇವೆಲ್ಲಾ ಜನಸೇವೆಯ ಕೆಲಸವೇ ಆಗಿರಬಹುದು. ಆದರೆ ಇದು ಸಣ್ಣಮೊತ್ತದ ವಹಿವಾಟೇನಲ್ಲ. ಸುಮಾರು 200 ಕೋಟಿ ಮೊತ್ತದ ವಹಿವಾಟನ್ನು ಯಾರೂ ಸಣ್ಣಮೊತ್ತವೆಂದು ಕರೆಯುವುದಿಲ್ಲ. ಜೊತೆಗೆ ಟೆಂಡರ್ ನೀಡಿಕೆ ಪ್ರಕ್ರಿಯೆ ಸಂಶಯಾತೀತವಾಗಿಯೂ ಇರಲಿಲ್ಲ.
ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಇದುವರೆಗೆ ಬೆಳಕಿಗೆ ಬಂದಿದ್ದೇ ಇಲ್ಲ. ಅವರ ಬಗ್ಗೆ ಎಲ್ಲಿಯೂ ಒಂದೇ ಒಂದು ಅಪಸ್ವರ ಕೇಳಿಬಂದಿರಲಿಲ್ಲ. ತಮ್ಮ ಪಾಡಿಗೆ ತಾವು ವೈದ್ಯರಾಗಿ ಕೆಲಸ ಮಾಡುತ್ತಿದ್ದರು. 7 ವರ್ಷಗಳಷ್ಟು ಹಳೆಯ ಕಂಪೆನಿಗೆ 2 ವರ್ಷಗಳ ಹಿಂದೆ ಅವರನ್ನು ನಿರ್ದೇಶಕರನ್ನಾಗಿ ಮಾಡಿಕೊಂಡಿದ್ದು ಅವರ ಗೆಳೆಯರು. ಅನಂತರ ಕಂಪೆನಿ ವ್ಯವಹಾರ ವಿಸ್ತರಿಸಲು ರಾಜಕೀಯ ಪ್ರಭಾವ ಬಳಸಿಕೊಂಡಿರಬಹುದು. ಅದು ಸ್ವಾಭಾವಿಕ. ಇದೆಲ್ಲಾ ಕಾನೂನಿನ ನೆಲೆಯಲ್ಲಿ ಪಾರದರ್ಶಕ ಎಂಬಂತೆ ತೋರಿದರೂ ನಿಯಮ, ನಿರ್ಬಂಧಗಳ ಉಲ್ಲಂಘನೆ ಎದ್ದು ಕಾಣುತ್ತಿದೆ. ಅದೇ ರೀತಿ ಇದೇ ಸಂಸ್ಥೆಗೆ ಬಿಡಿಎ ನೀಡಿರುವ ಭೂಮಿ ವಿಷಯವೂ ಬಹಿರಂಗವಾಗಿದ್ದು, ಇದೂ ಸಹ ಕಾನೂನು ಉಲ್ಲಂಘನೆಯ ಪರಿಧಿಗೆ ಬರುತ್ತದೆ. ಹೀಗಾಗಿ ಈ ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಸಿದ್ದರಾಮಯ್ಯ ಕೈ ತೊಳೆದುಕೊಂಡು ಸುಮ್ಮನಿರುವಂತಿಲ್ಲ. ಸ್ವಜನ ಪಕ್ಷಪಾತದ ಚೌಕಟ್ಟಿನೊಳಗೇ ಇದನ್ನು ಎಲ್ಲರೂ ನೋಡುತ್ತಾರೆ.
ಈ ಹಿಂದೆ ಬಿಜೆಪಿ ಸರ್ಕಾರ ಉರುಳಲು ಡಿನೋಟಿಫಿಕೇಷನ್ ಹಗರಣಗಳೇ ಕಾರಣವಾಗಿತ್ತು. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಸ್ವಜನಪಕ್ಷಪಾತವೆಸಗಿ ಡಿನೋಟಿಫಿಕೇಷನ್ ಅಡಿಯಲ್ಲಿ ಅಕ್ರಮವೆಸಗಿದ್ದರು ಎಂಬ ಆರೋಪವೇ ಭೂತಾಕಾರವಾಗಿ ಕಾಡಿ ಚುನಾವಣೆಯಲ್ಲಿ ಅವರ ಅಧಿಕಾರವನ್ನು ಆಹುತಿ ತೆಗೆದುಕೊಂಡಿತ್ತು. ಅನಂತರ ಅವರ ವಿರುದ್ಧ ಇದೇ ಕಾರಣಕ್ಕಾಗಿ ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗಿದ್ದವು (ಈಗ ಹಲವಾರು ಪ್ರಕರಣಗಳು ರದ್ದುಗೊಂಡು ಅದಕ್ಕೊಂದು ತಾರ್ಕಿಕ ಅಂತ್ಯ ದೊರೆತಂತಾಗಿದೆ). ಅದೇನೇ ಇರಲಿ, ಬಿಜೆಪಿ ಸರ್ಕಾರದ ಡಿನೋಟಿಫಿಕೇಷನ್ ಹಗರಣಗಳ ಕುರಿತು ಇದೇ ಸಿದ್ದರಾಮಯ್ಯ ಸಾರ್ವಜನಿಕವಾಗಿ, ಜೊತೆಗೆ ವಿಧಾನಮಂಡಲದಲ್ಲೂ ಖಂಡತುಂಡವಾಗಿ ಮಾತನಾಡಿದ್ದರು. ಬಿಜೆಪಿಯ ಭ್ರಷ್ಟಾಚಾರಗಳ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿತನಕ ಕಾಲ್ನಡಿಗೆ ಯಾತ್ರೆ ನಡೆಸಿ ಎಲ್ಲರ ಗಮನ ಸೆಳೆದಿದ್ದರು. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಕುಟುಂಬದವರನ್ನು ಅಧಿಕಾರದ ಅಂಗಳದೊಳಗೆ ಬಿಟ್ಟುಕೊಂಡರೆಂಬ ಆರೋಪವನ್ನು ಎಲ್ಲರಿಗಿಂತ ಹೆಚ್ಚಾಗಿ ಮಾಡಿದ್ದು ಇದೇ ಕಾಂಗ್ರೆಸ್ ಪಕ್ಷ. ಈಗ ಮಾತ್ರ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತಾನು ಖಂಡಿಸಿದ್ದನ್ನೇ ಮಾಡಹೊರಟಿರುವುದು ವೈರುಧ್ಯವಲ್ಲದೇ ಮತ್ತೇನು?
ಇಡೀ ರಾಜ್ಯದ ಬಹುತೇಕ ಜಿಲ್ಲೆಗಳು ಈಗ ತೀವ್ರ ಬರಪೀಡಿತ ಎಂಬುದು ಸಾಮಾನ್ಯರಿಗೂ ಗೊತ್ತು. ಹೀಗಿದ್ದರೂ ಸಿಎಂ ಸಿದ್ದರಾಮಯ್ಯ ಮೊನ್ನೆ ಮೊನ್ನೆಯವರೆಗೆ ಈ ಬರಪೀಡಿತ ಜಿಲ್ಲೆಗಳ ಪರಿಸ್ಥಿತಿ ಸುಧಾರಿಸಲು ಯಾವುದೇ ಚಿಂತನೆ ನಡೆಸಿರಲಿಲ್ಲ. ಕೊನೆ ಪಕ್ಷ ಬರಪೀಡಿತ ಪ್ರದೇಶಗಳಿಗೆ ಭೇಟಿ ಕೊಡುವ ಯೋಜನೆ ಕೂಡಾ ಹಮ್ಮಿಕೊಂಡಿರಲಿಲ್ಲ. ಯಡಿಯೂರಪ್ಪ ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿ ಬೆಂಗಳೂರಿನಲ್ಲಿ ಪದಗ್ರಹಣ ಮಾಡಿದ ಕೂಡಲೇ ಒಂದು ಸೂಚನೆ ನೀಡಿದ್ದರು ‘ರಾಜ್ಯದಲ್ಲಿನ ಭೀಕರ ಬರಗಾಲದ ಹಿನ್ನೆಲೆಯಲ್ಲಿ ಅಲ್ಲಿನ ನೈಜ ಸ್ಥಿತಿ, ಪರಿಹಾರ ಕಾರ್ಯಕ್ರಮದ ಜಾರಿ ಪರಿಶೀಲಿಸಲು ಪಕ್ಷದ ತಂಡಗಳನ್ನು ಎಲ್ಲೆಡೆ ಕಳುಹಿಸಲಾಗುವುದು’ ಎಂಬುದೇ ಆ ಸೂಚನೆಯಾಗಿತ್ತು. ಅಧಿಕಾರ ಪದಗ್ರಹಣದ ಬಳಿಕ ಯಡಿಯೂರಪ್ಪ ಸುಮ್ಮನೆ ಕೂರದೆ ತಕ್ಷಣ ಬರಪೀಡಿತ ಜಿಲ್ಲೆಗಳಾದ ಬೀದರ್, ಬಿಜಾಪುರ, ಕಲಬುರ್ಗಿ ಮೊದಲಾದ ಕಡೆಗಳಿಗೆ ಪ್ರವಾಸ ಕೈಗೊಂಡಿದ್ದರು. ಯಡಿಯೂರಪ್ಪನವರ ಈ ಪ್ರವಾಸ ಸಿದ್ದರಾಮಯ್ಯ ಅವರಲ್ಲಿ ಸಂಚಲನ ಮೂಡಿಸಿತೆಂಬುದು ಸುಳ್ಳಲ್ಲ. ಏಕೆಂದರೆ ಬರಪೀಡಿತ ಪ್ರದೇಶಗಳಿಗೆ ಪ್ರವಾಸದ ಯೋಜನೆಯೇ ಅವರ ದಿನಚರಿಯಲ್ಲಿರಲಿಲ್ಲ. ಆದರೆ ಏ.೧೭ರಿಂದ ಬರಪೀಡಿತ ಪ್ರದೇಶಗಳಿಗೆ ಭೇಟಿಕೊಡುವ ಕಾರ್ಯಕ್ರಮವನ್ನು ದಿಢೀರನೆ ಹಾಕಿಕೊಂಡರು. ಬೀದರ್ನ ಬರ ಪೀಡಿತ ಭಾಲ್ಕಿ, ಮತ್ತಿತರ ಕಡೆಗಳಿಗೆ ಭೇಟಿನೀಡಿದ ವರದಿ ಈಗಾಗಲೇ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಆ ಭೇಟಿಯ ವೈಖರಿ ಹೇಗಿತ್ತು ಎನ್ನುವುದೂ ಪ್ರಕಟವಾಗಿದೆ. ಕೇವಲ ಕಾಟಾಚಾರಕ್ಕಾಗಿ ಮಾತ್ರ ಸಿಎಂ ಸಿದ್ದರಾಮಯ್ಯ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಒಂದು ವೇಳೆ ಯಡಿಯೂರಪ್ಪ ಬರ ಪೀಡಿತ ಪ್ರದೇಶಗಳಿಗೆ ತಮ್ಮ ಪ್ರವಾಸ ಹಮ್ಮಿಕೊಳ್ಳದಿದ್ದಲ್ಲಿ ಸಿದ್ದರಾಮಯ್ಯ ಖಂಡಿತ ಬರಪೀಡಿತ ಪ್ರದೇಶಗಳ ಜನರ ನೋವು ಆಲಿಸಲು ತೆರಳುತ್ತಿರಲಿಲ್ಲ.
ಪ್ರತಿಪಕ್ಷವಾಗಿ ಬಿಜೆಪಿ ಹೇಳಿದ ಬಳಿಕ ಅಥವಾ ಅದು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಪ್ರಕಟಿಸಿದ ಬಳಿಕ ಮುಖ್ಯಮಂತ್ರಿಯಾದವರೊಬ್ಬರು ಆ ಬಗ್ಗೆ ಚಿಂತಿಸುತ್ತಾರೆಂದರೆ ಅದಕ್ಕಿಂತ ದೌರ್ಭಾಗ್ಯ ಇನ್ನೊಂದಿಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಎಲ್ಲರಿಗಿಂತ ಮೊದಲು ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯಗಳ ಕುರಿತು ಪರಿಶೀಲನೆ ನಡೆಸಬೇಕಾಗಿತ್ತು. ಆದರೆ ಅವರು ಹಾಗೆ ಮಾಡಿಲ್ಲದಿರುವುದು ಅವರ ವಿವೇಚನೆಯ ಕೊರತೆ ಹಾಗೂ ನಿಷ್ಕ್ರಿಯತೆಗೆ ಸಾಕ್ಷಿ.
ನಾಡಿನ ಜನತೆಗೆ ಹಲವಾರು ‘ಭಾಗ್ಯ’ಗಳನ್ನು ಕರುಣಿಸಿ ಬಿಟ್ಟರೆ ತನ್ನ ಕೆಲಸ ಮುಗಿಯಿತು ಎಂದು ಸಿಎಂ ಸಿದ್ದರಾಮಯ್ಯ ಭಾವಿಸಿದಂತಿದೆ. ಭ್ರಷ್ಟಾಚಾರದ ಆರೋಪ ಬಂದಕೂಡಲೇ, ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮಾಡಲಿಲ್ಲವೇ, ಆ ಪಕ್ಷದ ಮುಖ್ಯಮಂತ್ರಿ, ಮಂತ್ರಿಗಳು ಜೈಲಿಗೆ ಹೋಗಲಿಲ್ಲವೇ ಎಂದು ಟೀಕಿಸಿಬಿಟ್ಟರೆ ತನ್ನ ಮೇಲಿನ ಭ್ರಷ್ಟಾಚಾರ ಆರೋಪದಿಂದ ಕೈ ತೊಳೆದುಕೊಳ್ಳಬಹುದೆಂದು ಅವರು ಭಾವಿಸಿದಂತಿದೆ. ಸರ್ಕಾರದ ವಿರುದ್ಧ ಯಾವುದೇ ಆರೋಪಗಳು ಬಂದೆರಗಿದಾಗ, ಅದಕ್ಕೆ ಸೂಕ್ತ ಸಮರ್ಥನೆ ನೀಡಬೇಕಾದುದು ಅಥವಾ ಅದರ ನೈತಿಕ ಹೊಣೆಗಾರಿಕೆಯನ್ನು ಹೊರಬೇಕಾದುದು ಯಾವುದೇ ಮುಖ್ಯಮಂತ್ರಿಯ ಕರ್ತವ್ಯ. ಅದರ ಬದಲು ಹಿಂದಿನ ಸರ್ಕಾರ ಹೀಗೆ ಮಾಡಿರಲಿಲ್ಲವೇ? ನಮಗಿಂತ ಅವರೇನೂ ಕಡಿಮೆಯೇ? ಇತ್ಯಾದಿ ವಿತಂಡ ವಾದ ಹೂಡುವುದು ದಕ್ಷ ಮುಖ್ಯಮಂತ್ರಿಯೊಬ್ಬರ ರೀತಿಯಲ್ಲ. ಸಿದ್ದರಾಮಯ್ಯ ಈಗಾಗಲೇ ಅಧಿಕಾರದ 3 ವರ್ಷಗಳನ್ನು ಮುಗಿಸಿದ್ದಾರೆ. ಈ 3 ವರ್ಷಗಳ ಅವಧಿಯಲ್ಲಿ ಹೇಳಿಕೊಳ್ಳುವಂತಹ ಯಾವ ಸಾಧನೆಯೂ ಅವರಿಂದ ಆಗಿಲ್ಲ. ಸಾಧನೆಗಳೇನಾದರೂ ಆಗಿದ್ದರೆ ಅದು ಡಿನೋಟಿಫಿಕೇಷನ್ ಹಗರಣ, ಪುತ್ರನಿಗೆ ಅಕ್ರಮ ಗುತ್ತಿಗೆ ನೀಡಿದ ಹಗರಣ, ದುಬಾರಿ ವಾಚ್ ಹಗರಣ ಇತ್ಯಾದಿ!
ಈಗಲಾದರೂ ಇನ್ನುಳಿದ ಎರಡು ವರ್ಷಗಳಲ್ಲಿ ರಾಜ್ಯದ ಜನತೆಗೆ ಹಿತ ತರುವಂತಹ ಕಲ್ಯಾಣಕಾರಿ, ಅಭಿವೃದ್ಧಿ ಕೆಲಸಗಳನ್ನು ಹಮ್ಮಿಕೊಳ್ಳುವತ್ತ ಅವರು ಮುಂದಾಗಬೇಕು. ಪ್ರತಿಪಕ್ಷಗಳಿಗೆ ಈಗಾಗಲೇ ಒಂದರ ಮೇಲೊಂದು ಸಾಕಷ್ಟು ಟೀಕಾಸ್ತ್ರಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲ, ಸ್ವಪಕ್ಷೀಯ ನಾಯಕರ ತೀಕ್ಷ್ಣ ಟೀಕೆಗೂ ಸಿದ್ದರಾಮಯ್ಯ ಗುರಿಯಾಗುತ್ತಿದ್ದಾರೆ. ಇದೆಲ್ಲವನ್ನೂ ಅವರು ಹಗುರವಾಗಿ ತೆಗೆದುಕೊಂಡರೆ ಅಪಾಯ ತಪ್ಪಿದ್ದಲ್ಲ. ಸಿದ್ದರಾಮಯ್ಯನವರ ಸುತ್ತ ಮುತ್ತಿಕೊಂಡಿರುವ ವಂದಿಮಾಗಧರು ಅವರನ್ನು ಹಾಡಿ ಹೊಗಳಿ ದಾರಿತಪ್ಪಿಸುವ ಕೆಲಸ ಮಾಡುತ್ತಲೇ ಇದ್ದಾರೆ. ಅದು ಅವರಿಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ಅವರ ಮೇಲೆ ಮುಗಿಬೀಳಲು ಒಳ-ಹೊರಗಿನವರೆಲ್ಲಾ ಹವಣಿಸುತ್ತಿದ್ದಾರೆ. ಈಗಲೂ ಅವರು ಎಚ್ಚೆತ್ತುಕೊಳ್ಳದಿದ್ದರೆ ಅವರ ಅಧಿಕಾರದ ಅಂತಿಮ ಕ್ಷಣಗಣನೆ ಸನ್ನಿಹಿತವಾಯಿತೆಂದೇ ಭಾವಿಸಬೇಕಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.