ಮಂಗಳೂರು : ತುಳು ಸಿನೆಮಾಗಳು ಪರಭಾಷೆಯ ಚಿತ್ರಗಳ ಪೈಪೋಟಿಯಿಂದ ತುಳುನಾಡಲ್ಲೇ ಒಂದು ವಾರದ ಪ್ರದರ್ಶನ ಕಂಡು ಕಿತ್ತೊಗೆಯುವ ಕಾಲ ಬಂದಿದೆ. ‘ನಮ್ಮ ಕುಡ್ಲ’ ಸಿನೆಮಾ ಕಳೆದ ವಾರ ಬಿಡುಗಡೆಗೊಂಡು ಒಂದೇವಾರದಲ್ಲಿ ತಮಿಳುಭಾಷೆಯ ಚಿತ್ರಕ್ಕಾಗಿ ತೆರವುಮಾಡಬೇಕಾಯಿತು, ತುಳುನಾಡಿನ ಸಿನೆಮಾ ಮಂದಿರಗಳ ಮಾಲಿಕರು ಪರಭಾಷೆಯ ಚಿತ್ರಗಳ ಜೊತೆ ತುಳು ಭಾಷೆಯ ಚಿತ್ರಗಳಿಗೆ ಕನಿಷ್ಟ ಒಂದು ಪ್ರದರ್ಶನಕ್ಕಾದರೂ ಅವಕಾಶ ನೀಡಲಿ ಎಂದು ಚಲನಚಿತ್ರ ನಿರ್ದೇಶಕ ಮತ್ತು ನಮ್ಮ ಕುಡ್ಲ ತುಳು ಸಿನೆಮಾ ಸಂಕಲನಕಾರ ಹರೀಶ್ ನಾಯಕ್ ಹೇಳಿದರು.
ನಗರದ ವುಡ್ಲ್ಯಾಂಡ್ಸ್ ಹೊಟೇಲಿನಲ್ಲಿ ಶನಿವಾರ ‘ನಮ್ಮ ಕುಡ್ಲ’ ತುಳು ಸಿನೆಮಾ ತಂಡ ಹಾಗೂ ತುಳುನಾಡು ರಕ್ಷಣಾ ವೇದಿಕೆ ಜಂಟಿಯಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಾ ‘ನಮ್ಮ ಕುಡ್ಲ’ ತುಳು ಸಿನೆಮಾ ಎಪ್ರಿಲ್ ೮ ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹದಿಮೂರು ಚಲನಚಿತ್ರ ಮಂದಿರ ಹಾಗೂ ಮಲ್ಟಿಪೆಕ್ಸ್ಗಳಲ್ಲಿ ಬಿಡುಗಡೆಗೊಂಡಿತ್ತು. ಒಂದು ವಾರ ಯಶಸ್ವೀ ಪ್ರದರ್ಶನ ಕಂಡು ಪ್ರೇಕ್ಷಕರಿಂದ ಅತ್ಯುತ್ತಮ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು ಆದರೆ ಥಿಯೇಟರ್ ಮಾಲಿಕರು ಎಪ್ರಿಲ್ ೧೫ರಂದು ಪರಭಾಷೆಯ ಚಿತ್ರಗಳ ಲಾಬಿಗೆ ಮಣಿದು ೧೦ ಥಿಯೇಟರ್ಗಳಿಂದ ಕಿತ್ತು ಹಾಕಿದ್ದಾರೆ ಎಂದು ವಿಷಾದ ವ್ಯಕ್ತ ಪಡಿಸಿದರು.
ತುಳುವರಲ್ಲಿ ಬೇರೆ ಭಾಷೆಯವರಂತೆ ಒಗ್ಗಟ್ಟಿಲ್ಲ, ತುಳು ನೆಲದಲ್ಲೇ ಇದ್ದು ಇಲ್ಲಿನ ಥಿಯೇಟರ್ ಮಾಲಿಕರು ಬೇರೆಯ ಭಾಷೆಯ ಚಿತ್ರಗಳನ್ನು ಹಾಕುತ್ತಾರೆ, ಇದಕ್ಕೆ ತುಳು ಚಿತ್ರ ನಿರ್ಮಾಪಕರು ಒಗ್ಗಟ್ಟಿರಬೇಕು ಎಂದು ತುಳುನಾಡು ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಹೇಳಿದರು.
‘ನಮ್ಮ ಕುಡ್ಲ’ ತುಳು ಸಿನೇಮಾಕ್ಕೆ ಆದ ತೊಂದರೆ ಇನ್ನು ಮುಂದೆ ಬೇರೆ ತುಳು ಸಿನೇಮಾಗಳಿಗೆ ಆದಲ್ಲಿ ತುಳುನಾಡು ರಕ್ಷಣಾ ವೇದಿಕೆಯ ಕಾರ್ಯಕರ್ತರು ಅಂತಹ ಸಿನೇಮಾ ಮಂದಿರಗಳ ಮುಂದೆ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು. ಸರಕಾರ ಕೇವಲ ಐದು ಭಾಷೆಯ ಚಲನ ಚಿತ್ರಗಳಿಗೆ ಮಾತ್ರ ಸಬ್ಸಿಡಿ ನೀಡುತ್ತದೆ, ಉಳಿದ ತೊಂಬತ್ತೈದು ಕನ್ನಡ ಚಿತ್ರಗಳಿಗೆ ಸಬ್ಸಿಡಿ ನೀಡುತ್ತದೆ. ಇದು ಸರಕಾರದ ಯಾವ ತಾರತಮ್ಯ ಎಂದು ಶೆಟ್ಟಿ ಪ್ರಶ್ನಿಸಿದರು.
ತುಳುನಾಡು ರಕ್ಷಣಾ ವೇದಿಕೆಯ ವತಿಯಿಂದ ತುಳು ನಿರ್ಮಾಪಕರನ್ನು ಒಟ್ಟುಗೂಡಿಸಿ ಒಂದು ತುಳು ಚಿತ್ರ ನಿರ್ಮಾಪಕರ ಸಂಘ ಮಾಡಲು ಪ್ರಯತ್ನ ಮಾಡುತ್ತೇವೆ. ನಂತರದ ದಿನಗಳಲ್ಲಿ ತುಳು ಸಿನೇಮಾ ಛೇಂಬರ್ ನಿರ್ಮಾಣಕ್ಕೆ ಸರಕಾರವನ್ನು ಒತ್ತಾಯಿಸಲಾಗುವುದು ಎಂದು ಯೋಗೀಶ್ ಶೆಟ್ಟಿ ಹೇಳಿದರು..
ಹರೀಶ್ ನಾಯಕ್, ಚಲನಚಿತ್ರ ನಿರ್ದೇಶಕರು ಮತ್ತು ನಮ್ಮ ಕುಡ್ಲ ತುಳು ಸಿನೆಮಾ ಸಂಕಲನಕಾರ, ಯೋಗೀಶ್ ಶೆಟ್ಟಿ ಜಪ್ಪು, ತುಳುನಾಡು ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ, ಪ್ರಶಾಂತ್ ರಾವ್ ಕಡಬ, ಪ್ರಧಾನ ಕಾರ್ಯದರ್ಶಿ ತುಳುನಾಡು ರಕ್ಷಣಾ ವೇದಿಕೆ, ಸಿರಾಜ್ ಅಡ್ಕರ್ ರಾಜ್ಯ ಪ್ರಧಾನ ಕಾರ್ಯದರ್ಶಿ, ತುಳುನಾಡು ರಕ್ಷಣಾ ವೇದಿಕೆ, ಶ್ರೀಕಾಂತ್ ಸಾಲಿಯಾನ್ ತುಳುನಾಡು ರಕ್ಷಣಾ ವೇದಿಕೆ ಅಧ್ಯಕ್ಷರು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ, ಸ್ಕೈಲಾರ್ಕ್ ರಾಜ್ ನಮ್ಮ ಕುಡ್ಲ ತುಳು ಸಿನೆಮಾ ಕಲಾವಿದ, ರಕ್ಷಿತ್.ಕೆ ಬಂಗೇರ ತುಳುನಾಡು ರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ದ.ಕ ಜಿಲ್ಲೆ, ಯಾಕೂಬ್ ತುಳುನಾಡು ರಕ್ಷಣಾ ವೇದಿಕೆ ಕಟ್ಟಡ ನಿರ್ಮಾಣ ಘಟಕ ಮೊದಲಾದವರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.