ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್ ಮತ್ತು ಪತ್ರಿಕಾ ಭವನ ಟ್ರಸ್ಟ್ ಅಶ್ರಯದಲ್ಲಿ ಪತ್ರಕರ್ತರ ಕ್ರೀಡಾಕೂಟ ನಗರದ ಅಲೋಶಿಯಸ್ ಕಾಲೇಜು ಮೈದಾನದಲ್ಲಿ ಭಾನುವಾರ ನಡೆಯಿತು.
ಕ್ರೀಡಾ ಮತ್ತು ಯುವಜನ ಸೇವೆ ಹಾಗೂ ಮೀನುಗಾರಿಕಾ ಇಲಾಖೆ ಸಚಿವ ಕೆ.ಅಭಯಚಂದ್ರ ಜೈನ್ ಕ್ರೀಡಾಕೂಟ ಉದ್ಘಾಟಿಸಿ, ಮನುಷ್ಯನ ದೈಹಿಕ, ಮಾನಸಿಕ ಒತ್ತಡ ನಿವಾರಣೆಯಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ. ರಾಜ್ಯದಲ್ಲಿ ಕ್ರೀಡೆಗೆ ಪೂರಕ ವಾತಾವರಣ ಕಲ್ಪಿಸಲು ಕ್ರೀಡಾ ಸ್ಫೂರ್ತಿಯ ಆಕಾರಿಗಳ ನೇಮಕ, ಸೌಲಭ್ಯ ವಿತರಣೆ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.
ರಾಜ್ಯದ 200 ಸರಕಾರಿ ಶಿಕ್ಷಣ ಸಂಸ್ಥೆಗಳ ದೈಹಿಕ ಶಿಕ್ಷಕರನ್ನು ಆಯಾ ತಾಲೂಕು ಮತ್ತು ಜಿಲ್ಲಾ ಕ್ರೀಡಾಂಗಣಗಳ ನಿರ್ವಹಣೆ ನೋಡಿಕೊಳ್ಳಲು ನಿಯೋಜಿಸಲಾಗುವುದು. ಈ ಕುರಿತು ಮುಖ್ಯಮಂತ್ರಿಯವರಲ್ಲಿ ಮಾತುಕತೆ ನಡೆಸಿ, ಶೀಘ್ರ ಸಭೆ ಕರೆದು, ಚರ್ಚಿಸಿ ಆದೇಶಿಸಲಾಗುವುದು.
ರಾಜ್ಯದಲ್ಲಿ 30 ಜಿಲ್ಲಾ ಕ್ರೀಡಾಂಗಣ ಮತ್ತು 175 ತಾಲೂಕು ಕ್ರೀಡಾಂಗಣಗಳಿದ್ದು, ಅವುಗಳ ನಿರ್ವಹಣೆ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರಲಾಗುವುದು ಎಂದರು.
ಮುಖ್ಯ ಅತಿಥಿ ಪೊಲೀಸ್ ಆಯುಕ್ತ ಎಸ್.ಮುರುಗನ್ ಮಾತನಾಡಿ, ಆರೊಗ್ಯ ಕಾಪಾಡುವ ಜತೆಗೆ ಮನೋರಂಜನೆಗಾಗಿ ಕ್ರೀಡೆಗಳಲ್ಲಿ ಭಾಗವಹಿಸುವುದೂ ಅತೀ ಅಗತ್ಯ. ಪತ್ರಕರ್ತರು ಪ್ರತಿವರ್ಷ ಕ್ರೀಡಾಕೂಟ ಏರ್ಪಡಿಸುವುದು ಸಂತೋಷದ ವಿಚಾರ. ಮಾಹಿತಿ ಸಂಗ್ರಹದಲ್ಲಿ ಇಲ್ಲಿಯ ಪೊಲೀಸರಿಗಿಂತ ಪತ್ರಕರ್ತರು ಚುರುಕಾಗಿದ್ದು, ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಪತ್ರಕರ್ತರು ಮಾದರಿಯಾಗಿ ಸಾಮಾಜಿಕ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ ಎಂದರು.
ಉದಯವಾಣಿ ಪತ್ರಿಕೆಯ ನ್ಯೂಸ್ ಬ್ಯೂರೋ ಮುಖ್ಯಸ್ಥ ಮನೋಹರ ಪ್ರಸಾದ್ ಶುಭ ಹಾರೈಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಇಂದಾಜೆ ಉಪಸ್ಥಿತರಿದ್ದರು.
ಕ್ರೀಡಾ ಸಾಧಕರಾದ ತರಬೇತುದಾರ, ಮಾಜಿ ಯೋಧ ಲಕ್ಷ್ಮಣ ರೈ, ಈಜು ಪಟು ಮನೋಹರ ಪ್ರಭು ಮತ್ತು ಶಾಟ್ಪುಟ್ ಪಟು ಸಾಕ್ಷಿ ಕುಂದಾಪುರ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ್ರೆಸ್ ಕ್ಲಬ್ ಖಜಾಂಚಿ ವೇಣು ವಿನೋದ್ ಕ್ರೀಡಾ ಸಾಧಕರನ್ನು ಪರಿಚಯಿಸಿದರು.
ಮಡಿಕೇರಿಯಲ್ಲಿ ಕೊಡಗು ಕಾರ್ಯನಿರತ ಪತ್ರಕರ್ತರ ಸಂಘವು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾಟದಲ್ಲಿ ರನ್ನರ್ಸ್ ಅಪ್ ಬಹುಮಾನ ಪಡೆದಿರುವ ದ.ಕ. ತಂಡದ ಸದಸ್ಯರನ್ನು ಅಭಿನಂದಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಸ್ವಾಗತಿಸಿ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಬಿ.ರವೀಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ಆರ್. ವಂದಿಸಿದರು. ಪತ್ರಕರ್ತ ಪಿ. ಬಿ. ಹರೀಶ್ ರೈ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.