`ನೀವು ನನಗೆ ರಕ್ತ ಕೊಡಿ. ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ’ ಎಂದ ಆ ಮಹಾಪುರುಷ ನೇತಾಜಿ ಸುಭಾಷ್ಚಂದ್ರ ಬೋಸ್ ಭಾರತ ಕಂಡ ಒಬ್ಬ ಅಪ್ರತಿಮ ಸ್ವಾತಂತ್ರ್ಯ ಸೇನಾನಿ. ನೇತಾಜಿಯವರ ಅಕಾಲಿಕ ಸಾವು ಇಂದಿಗೂ ನಿಗೂಢ. ಅವರ ಸಾವಿನ ಕುರಿತು ಒಬ್ಬೊಬ್ಬರು ಒಂದೊಂದು ಕತೆ ಹೇಳುತ್ತಾರೆ. ಅವರು 1945 ರ ಆಗಸ್ಟ್ 18 ರಂದು ವಿಮಾನ ದುರ್ಘಟನೆಯಲ್ಲಿ ಮೃತರಾದರು ಎಂಬುದು ಒಂದು ವಾದ. ಆದರೆ ಆ ದುರ್ಘಟನೆಯಲ್ಲಿ ಅವರ ಜೊತೆಗಿದ್ದವರು ಸಾವಿಗೀಡಾಗಲಿಲ್ಲ. 9 ಸೀಟಿನ ಆ ವಿಮಾನದಲ್ಲಿ ಚಾಲಕರು ಸೇರಿ ಒಟ್ಟು 13 ಜನ ಪ್ರಯಾಣಿಸುತ್ತಿದ್ದರು. ನೇತಾಜಿ ಅವರಲ್ಲದೆ ಕರ್ನಲ್ ಹಬೀಬುರ್ ರೆಹಮಾನ್ ಮತ್ತಿತರರೂ ಆ ವಿಮಾನದಲ್ಲಿದ್ದರು. ಆದರೆ ನೇತಾಜಿ ಮಾತ್ರ ಸಾವಿಗೀಡಾಗಿ ಇತರರು ಗಾಯಗಳೊಂದಿಗೆ ಬದುಕುಳಿದರು ಎಂಬ ವಾದ ಎಂಥವರಿಗಾದರೂ ಅಚ್ಚರಿ ಉಂಟುಮಾಡದೆ ಇರದು.
ಈಚೆಗೆ ಇನ್ನೊಂದು ಸುದ್ದಿಯೂ ಸ್ಫೋಟಗೊಂಡಿದ್ದು ನಿಮಗೆ ತಿಳಿದೇ ಇದೆ. ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಕುಟುಂಬದ ಚಟುವಟಿಕೆಗಳ ಮೇಲೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಎರಡು ದಶಕ (1948-1968) ಗಳ ಕಾಲ ಗೂಢಚರ್ಯೆ ನಡೆಸಿದ್ದರು. ನೆಹರು ಅವರ ನಿಧನ (27-05-1964)ದ ನಂತರವೂ ನಾಲ್ಕು ವರ್ಷ ಕಾಲ ಈ ಗೂಢಚರ್ಯೆ ಮುಂದುವರೆದಿತ್ತು ಎಂಬ ಅಂಶ ಗುಪ್ತಚರ ದಳದ ದಾಖಲೆಗಳ ಮೂಲಕ ಬಹಿರಂಗವಾಗಿದೆ. ಆಂಗ್ಲ ಮಾಧ್ಯಮವೊಂದು ಈ ಬಗ್ಗೆ ವಿಸ್ತೃತ ವರದಿ ಪ್ರಕಟಿಸಿದ್ದು, ಈ ವಿಚಾರ ಈಗ ರಾಜಕೀಯವಾಗಿಯೂ ಚರ್ಚೆಗೆ ಗ್ರಾಸ ಒದಗಿಸಿದೆ.
ಕೇಂದ್ರ ಸರ್ಕಾರ 60 ವರ್ಷಗಳಿಗೂ ಹೆಚ್ಚು ಕಾಲದಿಂದ ನೇತಾಜಿ ಕುರಿತ ಕಡತಗಳನ್ನು `ಟಾಪ್ ಸೀಕ್ರೆಟ್’ ಎನ್ನುತ್ತಾ ಜತನದಿಂದ ಕಾಪಿಟ್ಟುಕೊಂಡಿದೆ. ಸರ್ಕಾರ ಇದುವರೆಗೆ ಬಹಿರಂಗಪಡಿಸಿರುವ ಕೆಲವೇ ಕೆಲವು ದಾಖಲೆಗಳಲ್ಲಿ ನೇತಾಜಿ ಕಣ್ಮರೆ ರಹಸ್ಯ ಬಯಲಾಗುವಂತಹ ಯಾವುದೇ ವಿಚಾರಗಳು ಕಂಡುಬಂದಿಲ್ಲ. ಈ ನಡುವೆ ಕಡತಗಳನ್ನು ಸುಟ್ಟುಹಾಕಲಾಗಿದೆ ಎಂಬ ವದಂತಿಯೂ ಹಬ್ಬಿ ಹಲವು ಸಂಶಯಗಳಿಗೆ ಕಾರಣವಾಗಿತ್ತು. ಒಂದೊಂದೇ ಕಡತವನ್ನು ಬಹಿರಂಗಪಡಿಸುತ್ತಿರುವ ಸರ್ಕಾರ, ಎಲ್ಲ ಕಡತಗಳನ್ನು ಒಮ್ಮೆಲೇ ಏಕೆ ಬಹಿರಂಗಪಡಿಸಬಾರದು ಎಂದು ನೇತಾಜಿ ಕುಟುಂಬಸ್ಥರು ಆಗ್ರಹಿಸಿದ್ದೂ ನಡೆದಿದೆ. ವಿವಿಧ ವಿಚಾರಣಾ ಸಮಿತಿಗಳೂ ನೇತಾಜಿ ಕಣ್ಮರೆ ಕುರಿತು ವಿಚಾರಣೆ ನಡೆಸಬೇಕೆಂದು ತಾಕೀತು ಮಾಡಿದ್ದವು. 1955 ರಲ್ಲಿ ನೇತಾಜಿ ನಿಗೂಢ ಕಣ್ಮರೆ ಬಗ್ಗೆ ವಿಚಾರಣೆ ನಡೆಸಲು ಶಾನವಾಜ್ ನೇತೃತ್ವದ ಸಮಿತಿ ರಚಿಸಿದ್ದರು ಅಂದಿನ ಪ್ರಧಾನಿ ನೆಹರು. ಸಮಿತಿಯಲ್ಲಿ ನೇತಾಜಿ ಸೋದರ ಸುರೇಶ್ ಬೋಸ್ ಕೂಡ ಸದಸ್ಯರಾಗಿದ್ದರು. ಸಮಿತಿ ಸಲ್ಲಿಸಿದ ವರದಿಯಲ್ಲಿ ವಿಮಾನ ಅಪಘಾತದಲ್ಲಿ ನೇತಾಜಿ ಸಾವನ್ನಪ್ಪಿದ್ದಾರೆ ಎಂದು ದಾಖಲಿಸಿದ್ದನ್ನು ವಿರೋಧಿಸಿ ಸುರೇಶ್ ಬೋಸ್ ಹೇಳಿಕೆ ದಾಖಲಿಸಿದ್ದರು. ನೇತಾಜಿ ಸೋವಿಯತ್ ಯೂನಿಯನ್ಗೆ ಪರಾರಿಯಾಗಿದ್ದಾರೆ ಎಂಬುದು ಸುರೇಶ್ ಬೋಸ್ ಅವರ ವಾದವಾಗಿತ್ತು.
1970 ರಲ್ಲಿ ವಿರೋಧಪಕ್ಷದ ಸದಸ್ಯರ ಆಗ್ರಹದ ಮೇರೆಗೆ ಆಗಿನ ಪ್ರಧಾನಿ ಇಂದಿರಾಗಾಂಧಿಯವರು ಜಿ.ಡಿ. ಖೋಸ್ಲಾ ಸಮಿತಿ ರಚಿಸಿದ್ದರು. 1974 ರಲ್ಲಿ ವರದಿ ಸಲ್ಲಿಸಿದ ಆ ಸಮಿತಿ, ವಿಮಾನ ಅಪಘಾತದಲ್ಲಿ ನೇತಾಜಿ ವಿಧಿವಶರಾಗಿದ್ದಾರೆ ಎಂದು ತಿಳಿಸಿತ್ತು. ಆದರೆ ಈ ಸಮಿತಿಯ ವರದಿ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. 1978 ರಲ್ಲಿ ಶಾನವಾಜ್ ಮತ್ತು ಜಿ.ಡಿ.ಖೋಸ್ಲಾ ಸಮಿತಿಗಳ ವರದಿಗಳೆರಡೂ ಪರಸ್ಪರ ವೈರುಧ್ಯಗಳಿಂದ ಕೂಡಿವೆ ಎಂದು ಆಗಿನ ಪ್ರಧಾನಿ ಮೊರಾರ್ಜಿ ದೇಸಾಯಿ ತಿರಸ್ಕರಿಸಿದ್ದರು. 1999 ರಲ್ಲಿ ಕಲ್ಕತ್ತಾ ಹೈಕೋರ್ಟ್ ನಿರ್ದೇಶನದ ಮೇರೆಗೆ ಗೃಹಸಚಿವಾಲಯ ನ್ಯಾ.ಎಂ.ಕೆ.ಮುಖರ್ಜಿ ಆಯೋಗವನ್ನು ರಚಿಸಿ ವಿಚಾರಣೆಗೆ ಆದೇಶ ನೀಡಿತ್ತು. 2006 ರಲ್ಲಿ ಈ ಆಯೋಗ ವರದಿ ಸಲ್ಲಿಸಿದ್ದು, ಯುಎಸ್ಎಸ್ಆರ್ (ಸೋವಿಯತ್ ಒಕ್ಕೂಟ)ಗೆ ಹೋಗುತ್ತಿರುವಾಗ ಸಂಭವಿಸಿದ ವಿಮಾನ ದುರಂತದಲ್ಲಿ ನೇತಾಜಿ ಸಾವನ್ನಪ್ಪಿಲ್ಲ ಎಂದು ಹೇಳಿತು. ಆದರೆ ಯುಪಿಎ ಸರ್ಕಾರ ಈ ವರದಿಯನ್ನು ತಿರಸ್ಕರಿಸಿತು. ಹೀಗೆ ನೇತಾಜಿಯವರ ಸಾವು ಬರಬರುತ್ತಾ ಕಗ್ಗಂಟಾಗಿಯೇ ಉಳಿದು ಹೋಗಿದೆ. ಅವರ ನಿಧನದ ಬಗ್ಗೆ ಯಾವ ಸ್ಪಷ್ಟತೆಯೂ ಇಲ್ಲ.
ಇವೆಲ್ಲಕ್ಕಿಂತ ಹೊರತಾದ ಇನ್ನೊಂದು ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದವರು ಭಾರತೀಯ ಸುಭಾಷ್ ಸೇನಾದ ರಾಷ್ಟ್ರೀಯ ಅಧ್ಯಕ್ಷರಾದ ಅರವಿಂದ ಪ್ರತಾಪ್ ಸಿಂಹ `ಸುಭಾಷ್’ ಅವರು. ಇತ್ತೀಚೆಗೆ ಅವರು ಲೇಖನವೊಂದರ ಮೂಲಕ, ನೇತಾಜಿ ಅವರು ಯಾವ ವಿಮಾನ ದುರಂತದಲ್ಲೂ ಮಡಿದಿಲ್ಲ. ಅವರು ಈಗಲೂ ಬದುಕಿದ್ದಾರೆ. ಅವರಿಗೀಗ 118 ವರ್ಷ. ವಿವಿಧ ವೇಷಗಳಲ್ಲಿ ಅವರು ಆಗಾಗ ಕಾಣಿಸಿಕೊಂಡಿದ್ದಾರೆ…. ಮುಂತಾದ ಸ್ಫೋಟಕ ಮಾಹಿತಿಯನ್ನು ಹೊರಗೆಡವಿದ್ದಾರೆ. ಕಾಬೂಲಿನಲ್ಲಿ ಜಿಯಾವುದ್ದೀನ್, ಇಟಲಿಯಲ್ಲಿ ಸಿನಾರೊ ಓರ್ಲ್ಟಾಂಡೊ ಮಜಾಟ, ಜರ್ಮನಿಯಲ್ಲಿ ಮಿ.ಎಕ್ಸ್, ಬರ್ಲಿನ್ನಲ್ಲಿ ಕರೋಡಿನಾ, ಪೀಕಿಂಗ್ನಲ್ಲಿ ಜನರಲ್ ಲೀಪೂಚಿಂಗ್, ಮಂಚೂರಿಯಾದಲ್ಲಿ ಚಂದ್ರಬೋಸ್, ಮಧ್ಯಪ್ರದೇಶದ ಬರೇಲಿ ಎಂಬಲ್ಲಿ ಬಾಬಾ ಹನುಮಾನ್ ಗಿರಿ, ಆಗ್ರಾ ಮತ್ತು ಇಟಾವಗಳಲ್ಲಿ ಕರ್ನಲ್ ಜೋಗಿಂದರ್ ಸಿಂಗ್, ಫತೇಪುರ್, ಜಲಪಾಯಿಗುರಿ ಇತ್ಯಾದಿ ಕಡೆಗಳಲ್ಲಿ ಬಾಬಾ ಸಮಾಜಾನಂದ, ಭುವನೇಶ್ವರದ ಕಾಂಗ್ರೆಸ್ ಅಧಿವೇಶನದಲ್ಲಿ ಡಿಲಾ ಪುಕಾನ್, 1980 ರಲ್ಲಿ ಫೈಜಾಬಾದ್ನಲ್ಲಿ ಮೌನಿಬಾಬಾ… ಹೀಗೆ ವಿವಿಧ ಹೆಸರುಗಳಲ್ಲಿ, ವಿವಿಧ ವೇಷಗಳಲ್ಲಿ , ವಿವಿಧ ಸಂದರ್ಭಗಳಲ್ಲಿ ನೇತಾಜಿ ಪ್ರತ್ಯಕ್ಷರಾಗಿದ್ದರು ಎಂಬುದು ಅವರ ವಾದ.
ಭಾರತೀಯ ಸುಭಾಷ್ ಸೇನೆ ಬಹಿರಂಗಪಡಿಸಿದ ಇನ್ನಷ್ಟು ಸ್ಫೋಟಕ ಮಾಹಿತಿಗಳು ಹೀಗಿವೆ:
• 1945 ರ ಆ. 18 ರಂದು ನೇತಾಜಿ ವಿಮಾನ ದುರಂತದಲ್ಲಿ ಅಸುನೀಗಲಿಲ್ಲ. ಅವರು ರಷ್ಯಾ, ಚೀನಾ, ಟಿಬೆಟ್ ಮೂಲಕ ಮುಂಬೈಯನ್ನು ತಲುಪಿದರು. ಅಲ್ಲಿ ಗುಪ್ತವಾಗಿದ್ದು ಆಜಾದ್ ಸೈನಿಕರ ಮೂಲಕ ನೌಕಾಸೇನೆಯಲ್ಲಿ ಆಂದೋಲನ ಪ್ರಾರಂಭಿಸಿದರು. ಪರಿಣಾಮವಾಗಿ 1946 ರ ಫೆ. 18 ರಂದು ನಡೆದ ಹತ್ಯಾಕಾಂಡದಲ್ಲಿ 700 ಕ್ಕೂ ಹೆಚ್ಚು ಬ್ರಿಟಿಷ್ ಅಧಿಕಾರಿಗಳು ಕೊಲ್ಲಲ್ಪಟ್ಟರು….
• 1946 ರ ಡಿ. 16 ರಂದು ನೆಹರು, ಕ್ಲೆಮೆಂಟ್ ಅಟಿ (ಅಂದಿನ ಬ್ರಿಟಿಷ್ ಪ್ರಧಾನಿ)ಗೆ ಬರೆದ ಪತ್ರದಲ್ಲಿ `ನಿಮ್ಮ ಯುದ್ದಾಪರಾಧಿ ನೇತಾಜಿ ಬೋಸ್ ಸ್ಟಾಲಿನ್ ಸಹಾಯದೊಂದಿಗೆ ರಷ್ಯಾದಲ್ಲಿದ್ದಾರೆ. ನಿಮಗೆ ಬೇಕಾದಂತೆ ಸೂಕ್ತ ಕ್ರಮ ಜರುಗಿಸಲು ಸೂಚಿಸಲಾಗಿದೆ. ನೇತಾಜಿಗೆ ಯಾವುದೇ ಸುಳಿವು ಕೊಡಬೇಡಿ…’ ಎಂದು ತಿಳಿಸಿದ್ದರು.
• 1962 ರಲ್ಲಿ ಭುವನೇಶ್ವರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಡಿಕಾಫುಕಾನ್ ಎಂಬ ಹೆಸರಿನಲ್ಲಿ ನೇತಾಜಿ ಹೋಗಿದ್ದರು. ವೇದಿಕೆಯಲ್ಲಿದ್ದ ನೆಹರು ಅವರನ್ನುದ್ದೇಶಿಸಿ `ಜವಹರ್’ ಎಂದು ತಮ್ಮ ಎಂದಿನ ಶೈಲಿಯಲ್ಲಿ ಕೂಗಿ ಕರೆದಾಗ ನೆಹರು ಮೂರ್ಛೆ ಹೋಗಿದ್ದರು. ಆಗ ಅವರನ್ನು ಕೆಳಕ್ಕೆ ಬೀಳದಂತೆ ಎತ್ತಿಹಿಡಿದಿದ್ದು ಇಂದಿರಾಗಾಂಧಿಯವರು.
• ಉತ್ತರಪ್ರದೇಶದ ಸೀತಾಪುರ ಜಿಲ್ಲೆಯ ಮುಜೆಹೆನಾ ಆಶ್ರಮದಲ್ಲಿದ್ದ ಮೌನಿಬಾಬಾ ಇನ್ಯಾರೂ ಅಲ್ಲ, ಅವರೇ ಸ್ವತಃ ನೇತಾಜಿ ಸುಭಾಷ್ಚಂದ್ರ ಬೋಸ್ ಎಂದು ನ್ಯಾ. ಎಂ.ಕೆ. ಮುಖರ್ಜಿ ತಮ್ಮ ವರದಿಯಲ್ಲಿ ತಿಳಿಸಿದ್ದರು. ಆದರೆ 2006 ರಲ್ಲಿ ಆಗಿನ ಯುಪಿಎ ಸರ್ಕಾರದ ಗೃಹಮಂತ್ರಿ ಶಿವರಾಜ ಪಾಟೀಲ್ ಆ ವರದಿಯನ್ನು ಯಾವುದೇ ಚರ್ಚೆ ನಡೆಸದೆ ತಿರಸ್ಕರಿಸಿದ್ದರು.
• ಆರೆಸ್ಸೆಸ್ನ ಹಿಂದಿನ ಸರಸಂಘಚಾಲಕರಾಗಿದ್ದ ಕು.ಸೀ.ಸುದರ್ಶನ್ ಅವರು `ನೇತಾಜಿ 1985 ರವರೆಗೆ ಅಜ್ಞಾತವಾಗಿ ಜೀವಂತವಾಗಿದ್ದರು’ ಎಂದು ಹೇಳಿದ್ದು ಲಕ್ನೋದ ದೈನಿಕ ಜಾಗರಣ ಪತ್ರಿಕೆಯಲ್ಲಿ 2006 ರ ಜೂ. 28 ರಂದು ಪ್ರಕಟವಾಗಿದೆ.
• ಈಗಿನ ಪ್ರಧಾನಿ ನರೇಂದ್ರ ಮೋದಿ ಕಳೆದ ಲೋಕಸಭಾ ಚುನಾವಣೆಯಲ್ಲಿ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅಲ್ಲಿ ಅವರು ನಾಮಪತ್ರಕ್ಕೆ ಸಹಿ ಹಾಕಿದ್ದು ತಮ್ಮ ಪೆನ್ನಿನಿಂದಲ್ಲ, ಬದಲಿಗೆ ಓರ್ವ ಸಂತರು ಕೊಟ್ಟ ಪೆನ್ನಿನಿಂದ. ಆ ಸಂತರು ಇನ್ನಾರೂ ಅಲ್ಲ, ಸ್ವತಃ ನೇತಾಜಿ ಸುಭಾಷ್ಚಂದ್ರ ಬೋಸ್. ಅಂತಹ ಮಹಾನ್ ಸಂತ ಕೊಟ್ಟ ಪೆನ್ನಿನಿಂದ ಸಹಿ ಹಾಕಿ ನಾಮಪತ್ರ ಸಲ್ಲಿಸಿದ್ದರಿಂದಲೇ ಬಿಜೆಪಿ ಆ ಚುನಾವಣೆಯಲ್ಲಿ 284 ಸ್ಥಾನ ಗಳಿಸಲು ಸಾಧ್ಯವಾಯಿತು. ಎನ್ಡಿಎಗೆ 300ಕ್ಕೂ ಹೆಚ್ಚು ಸ್ಥಾನ ಪ್ರಾಪ್ತವಾಗಿದ್ದು ಇದೇ ಕಾರಣದಿಂದ.
• ನೇತಾಜಿ ಫೈಜಾಬಾದ್ನಲ್ಲಿ 1985 ರಲ್ಲಿ ನಿಧನರಾದರೆಂದು, ಅವರ ಆಪ್ತರಲ್ಲಿ ಕೆಲವರು ಮಾತ್ರ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರೆಂದು ಭಾರತ ಸರ್ಕಾರ ಹೇಳಿತ್ತು. ಅದೇ ರೀತಿ 9ಬಾರಿ ಬೇರೆ ಬೇರೆ ಜಾಗಗಳಲ್ಲಿ ಅವರು ಸತ್ತಿರುವರೆಂದು ಹೇಳಲಾಗಿದೆ. ಅಂತಾರಾಷ್ಟ್ರೀಯವಾಗಿ ನೇತಾಜಿ 2 ಬಾರಿ ಸತ್ತಿರುವರೆಂದು ಘೋಷಿಸಲಾಗಿದೆ. ಹಾಗಿದ್ದರೆ ನೇತಾಜಿ ಒಟ್ಟು 11 ಬಾರಿ ಸತ್ತಿದ್ದಾರಾ?
• ಭಾರತ ಸರ್ಕಾರ 1992 ರಲ್ಲಿ ನೇತಾಜಿಯವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿಯನ್ನು ಘೋಷಿಸಿತ್ತು. ಆದರೆ ನೇತಾಜಿ ಕುಟುಂಬದವರು ಮರಣಪ್ರಮಾಣ ಪತ್ರಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಶ್ರೀಮತಿ ಸರೋಜ.ವಿ.ಮನೋಹರ್ ಹಾಗೂ ಜೆ.ಜೆ.ಪಾಟ್ನಾಯಕ್ರನ್ನೊಳಗೊಂಡ ಪೀಠ 1997 ರ ಆ. 4 ರಂದು ನೀಡಿದ ತೀರ್ಪಿನಲ್ಲಿ `ನೇತಾಜಿ ಸತ್ತಿರುವರು’ ಎಂಬ ಶಬ್ದ ಬಳಕೆಯನ್ನು ರದ್ದು ಪಡಿಸಿ, ಅವರನ್ನು ಹುಡುಕಿ ತರುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು.
ಹೀಗೆ ಭಾರತೀಯ ಸುಭಾಷ್ ಸೇನಾ ನೇತಾಜಿ ಸುಭಾಷ್ಚಂದ್ರ ಬೋಸರ ನಿಗೂಢ ಸಾವನ್ನು ಭೇದಿಸುವ ಹಲವಾರು ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದೆ. ಜಸ್ಟಿಸ್ ಎಂ.ಕೆ.ಮುಖರ್ಜಿ ಆಯೋಗದ ವರದಿಯನ್ನು ಬಹಿರಂಗಪಡಿಸಿ. ಹಾಗಿಲ್ಲದಿದ್ದರೆ ನೇತಾಜಿ ಎಲ್ಲಿ, ಯಾವಾಗ ಮತ್ತು ಹೇಗೆ ಸತ್ತಿರುವವರು ಎಂದು ತಿಳಿಸಲು ಅವರ ಮರಣ ಪ್ರಮಾಣಪತ್ರವೊಂದನ್ನು ಹೊರಡಿಸಿ ಎಂದೂ ಆಗ್ರಹಿಸಿದೆ.
`ಸುಭಾಷ್ಚಂದ್ರ ಬೋಸರ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಹೆದರಿಕೆ ಇದ್ದೇ ಇತ್ತು. ಬೋಸ್ ಕುಟುಂಬದವರ ಬೇಹುಗಾರಿಕೆ ನಡೆಸಲು ಇದೇ ಕಾರಣ’ ಎಂದು ಖ್ಯಾತ ಪತ್ರಕರ್ತ ಎಂ.ಜೆ. ಅಕ್ಬರ್ ಈಚೆಗೆ ಹೇಳಿರುವುದು ಗಮನಾರ್ಹ. `ಸುಭಾಷ್ ಬದುಕಿದ್ದಾರೋ ಇಲ್ಲವೋ ಎಂಬುದರ ಬಗ್ಗೆ ಆಗಿನ ಸರ್ಕಾರದ ಬಳಿ ಮಾಹಿತಿ ಇರಲಿಲ್ಲ. ಆದರೆ ಅವರು ಬದುಕಿದ್ದರೆ ಕೊಲ್ಕತ್ತಾದಲ್ಲಿನ ತಮ್ಮ ಕುಟುಂಬದವರೊಂದಿಗೆ ಸಂಪರ್ಕಿಸಬಹುದು ಎಂಬ ಭಯ ಕಾಂಗ್ರೆಸ್ ಹಾಗೂ ಅದರ ನಾಯಕರಿಗೆ, ಅದರಲ್ಲೂ ವಿಶೇಷವಾಗಿ ನೆಹರು ಅವರಿಗೆ ಕಾಡುತ್ತಿತ್ತು. ಬೋಸ್ ಭಾರತಕ್ಕೆ ಮರಳಿದ್ದರೆ ದೇಶ ಅವರಿಗೆ ಅಭೂತಪೂರ್ವ ಸ್ವಾಗತ ನೀಡುತ್ತಿತ್ತು. ಕಾಂಗ್ರೆಸ್ಗೆ ಮಾತ್ರ ಇದು ಬೇಡವಾಗಿದ್ದ ಸಂಗತಿ…. ಸುಭಾಷರು ಬದುಕಿದ್ದರೆ 1962 ರಲ್ಲೇ ಕಾಂಗ್ರೆಸ್ ಸೋಲಿನ ರುಚಿ ಕಾಣುತ್ತಿತ್ತು’ ಎಂದೂ ಅಕ್ಬರ್ ಅಭಿಪ್ರಾಯಪಟ್ಟಿದ್ದಾರೆ.
ನೇತಾಜಿ ಅವರ ನಿಗೂಢ ಸಾವಿನ ಕುರಿತು ಹೀಗೆ ಅನೇಕ ಬಗೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಲೇ ಇವೆ. ನೇತಾಜಿ ಕುರಿತ ಅನೇಕ ರಹಸ್ಯಗಳನ್ನು ಸ್ವಾತಂತ್ರ್ಯ ಬಂದ ಬಳಿಕ 50 ವರ್ಷಕ್ಕೂ ಹೆಚ್ಚು ಕಾಲ ನಿರಂತರ ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿಯೇ ಬಚ್ಚಿಟ್ಟಿದೆ. ನೇತಾಜಿ ಸಾವಿನ ರಹಸ್ಯವನ್ನು ಅಂಧಕಾರದಲ್ಲಿ ಅದು ಹೂತಿಟ್ಟಿದೆ. ಆ ಅಂಧಕಾರದಲ್ಲಿ ಬಹಳಷ್ಟು ರಹಸ್ಯಗಳು ಅಡಗಿವೆ ಎನ್ನುವುದಂತೂ ಈ ಎಲ್ಲಾ ವಿದ್ಯಮಾನಗಳಿಂದ ಸ್ಪಷ್ಟವಾಗುವ ಸಂಗತಿ.
ನೇತಾಜಿ ಸುಭಾಷ್ಚಂದ್ರ ಬೋಸ್ ಬದುಕಿದ್ದಾರೋ ಸತ್ತಿದ್ದಾರೋ, ಅದಿನ್ನೂ ಇತ್ಯರ್ಥವಾಗಬೇಕಾದ ಗಂಭೀರ ವಿಚಾರ. ಅದು ಇತ್ಯರ್ಥವಾಗಬಹುದೆಂಬ ನಂಬಿಕೆಯಂತೂ ಯಾರಿಗೂ ಇಲ್ಲ. ಆದರೆ ನೇತಾಜಿ ಕಣ್ಮರೆಯಾಗಿ ಇಷ್ಟು ದಶಕಗಳ ಬಳಿಕವೂ ಅವರ ಪ್ರಭಾವ ಜನಮಾನಸದಲ್ಲಿ ದಟ್ಟವಾಗಿರುವುದು, ಅವರ ಕುರಿತು ಚರ್ಚೆ, ವಿಶ್ಲೇಷಣೆ, ಚಿಂತನೆ ನಡೆಯುತ್ತಿರುವುದು ನೇತಾಜಿಯವರ ಅದ್ಭುತ ವ್ಯಕ್ತಿತ್ವ , ಧೀಮಂತ ನಾಯಕತ್ವ , ಕೋಲ್ಮಿಂಚಿನಂತಹ ಊಹನೆಗೂ ನಿಲುಕದ ಅವರ ಅಪ್ರತಿಮ ದೇಶಭಕ್ತಿಗೆ ಉಜ್ವಲ ನಿದರ್ಶನ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.