News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪರಿಹಾರ ಕಾರ್ಯದಲ್ಲಿ ಸರ್ಕಾರ, ಸೇನೆ, ಆರೆಸ್ಸೆಸ್ ; ಗೀಲಾನಿ, ಯಾಸಿನ್ ಮಲಿಕ್ ಮಾತ್ರ ನಾಪತ್ತೆ !

ಭೂಮಿಯ ಮೇಲಿನ ಸ್ವರ್ಗವೆಂದೇ ಬಣ್ಣಿಸಲಾಗುತ್ತಿದ್ದ ಕಾಶ್ಮೀರ ಕಣಿವೆ ಇಂದು ನರಕಸದೃಶ ಸ್ಥಿತಿಗೆ ತಲುಪಿದೆ. ಇದಕ್ಕೆ ಕಾರಣ ಇತ್ತೀಚೆಗೆ ಅಲ್ಲಿ ಸಂಭವಿಸಿದ ಭೀಕರ ಪ್ರಳಯದಾಟ. ಈ ಶತಮಾನದವಧಿಯಲ್ಲೆ ಕಂಡು ಕೇಳರಿಯದ ಭಾರಿ ಮಳೆ ಹಾಗೂ ಭೀಕರ ಪ್ರವಾಹ ಜಮ್ಮು-ಕಾಶ್ಮೀರ ರಾಜ್ಯವನ್ನು ಸಂಪೂರ್ಣ ಕೊಚ್ಚಿ ಹಾಕಿದೆ. ಇನ್ನೂರಕ್ಕೂ ಹೆಚ್ಚು ಮಂದಿ ಈ ಭೀಕರ ಪ್ರವಾಹದಿಂದ ಸಾವಿಗೀಡಾಗಿದ್ದಾರೆ. ಆದರೆ ವಾಸ್ತವವಾಗಿ ಸಾವಿಗೀಡಾದವರ ನಿಖರ ಸಂಖ್ಯೆ ಇನ್ನೂ ಹೆಚ್ಚಿರಬಹುದು. 1500 ಹಳ್ಳಿಗಳು ಪ್ರವಾಹದಿಂದ ನಲುಗಿ ಹೋಗಿವೆ. 360 ಹಳ್ಳಿಗಳು ಪ್ರವಾಹದಲ್ಲಿ ಅಕ್ಷರಶಃ ಮುಳುಗಿವೆ. ಸುಮಾರು 1,10,000 ಜನರನ್ನು ಸೇನಾಪಡೆ ಪ್ರವಾಹದಿಂದ ರಕ್ಷಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ (ಎನ್‌ಡಿಆರ್‌ಎಫ್), ಭಾರತೀಯ ವಾಯುಪಡೆ, ಭೂಸೈನ್ಯ, ನೌಕಾಪಡೆ, ಸೇವಾಭಾರತಿ ಮುಂತಾದ ಸಂಘ ಪರಿವಾರದ ಸಂಘಟನೆಗಳು, ಸಾಮಾಜಿಕ ಜಾಲತಾಣಗಳು ಸಂತ್ರಸ್ತರ ಪರಿಹಾರ ಕಾರ್ಯದಲ್ಲಿ ಹಗಲಿರುಳು ಶ್ರಮಿಸುತ್ತಿವೆ. ಸುಮಾರು 10,000 ದಷ್ಟು ಸೈನ್ಯದ ಇಂಜಿನಿಯರ್‌ಗಳು ಹಗಲಿರುಳು ಶ್ರಮಿಸಿ ಜಮ್ಮು-ಕಾಶ್ಮೀರದ 1,000 ಹಳ್ಳಿಗಳಿಗೆ ಹಾಳಾಗಿಹೋದ ರಸ್ತೆಗಳನ್ನು ಮರುನಿರ್ಮಿಸಿ ಕೊಟ್ಟಿದ್ದಾರೆ. 30 ಸಹಸ್ರ ಸೈನಿಕಪಡೆ ಜಮ್ಮು-ಕಾಶ್ಮೀರ ಪ್ರವಾಹ ಪರಿಹಾರ ಕಾರ್ಯದಲ್ಲಿ ತೊಡಗಿದೆ. ಈ ಪೈಕಿ 21 ಸಹಸ್ರ ಸೈನಿಕಪಡೆ ಕಾಶ್ಮೀರದಲ್ಲಿ ಕಾರ್ಯನಿರತವಾಗಿದ್ದರೆ, 9 ಸಹಸ್ರ ಸೈನಿಕಪಡೆ ಜಮ್ಮು ಪ್ರದೇಶದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿದೆ. ಶ್ರೀನಗರ ಮತ್ತು ಜಮ್ಮು ಪ್ರದೇಶದಲ್ಲಿ ಸೈನಿಕಪಡೆ 19 ಪರಿಹಾರ ಶಿಬಿರಗಳನ್ನು ಸ್ಥಾಪಿಸಿದೆ. ಭೂಸೇನೆಯ ಮುಖ್ಯಸ್ಥ ಜನರಲ್ ದಲ್‌ಬೀರ್ ಸಿಂಗ್ ಸುಹಾಗ್ ಸ್ವತಃ ಕಾಶ್ಮೀರ ಕಣಿವೆಗೆ ಬಂದಿಳಿದು ಪರಿಹಾರ ಕಾರ್ಯಗಳನ್ನು ನಿರ್ದೇಶಿಸುತ್ತಿದ್ದಾರೆ. ಕಡಿಮೆ ಮಾತಿನ, ಆದರೆ ಹೆಚ್ಚು ಕೆಲಸ ನಿರ್ವಹಿಸುವ ದಲ್‌ಬೀರ್ ಸಿಂಗ್ ಬರಿದೇ ದೆಹಲಿಯಲ್ಲಿ ಕುಳಿತು ಹೇಳಿಕೆ ನೀಡಲಿಲ್ಲ. ಪರಿಹಾರ ಕಾರ್ಯದ ನೆಲದಲ್ಲೇ ನಿಂತು ಪರಿಸ್ಥಿತಿಯನ್ನು ತಹಬಂದಿಗೆ ತರಲು ಶ್ರಮಿಸುತ್ತಿರುವುದು ಅವರ ಕಾಳಜಿಗೆ ನಿದರ್ಶನ.

ಇತ್ತ ಸಂಘಪರಿವಾರದ ಸೇವಾ ಘಟಕವಾಗಿರುವ ಸೇವಾಭಾರತಿ ಸಂತ್ರಸ್ತರ ಕಣ್ಣೀರು ಒರೆಸಲು ಹಗಲಿರುಳು ಶ್ರಮಿಸುತ್ತಿದೆ. ಶ್ರೀನಗರ, ಪುಲ್ವಾಮ ಮತ್ತು ಬಡಗಾಮ್‌ನ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಅಗತ್ಯ ಸೇವೆಯನ್ನು ಸಲ್ಲಿಸುತ್ತಿದೆ. ಹಸಿದವರಿಗೆ ಊಟವನ್ನು ಪೂರೈಸುತ್ತಿದೆ. ಅಲ್ಲದೆ ಸೇವಾಭಾರತಿಯ ತಂಡ ಬರಝುಲ್ಲ , ಸನತ್‌ನಗರ, ಪೊಹ್ರೊ, ಗೂರ್‌ಪುರ್, ಸಿದ್ಧಿಕ್‌ಬಾಗ್, ಚೆಕ್ಪುರ, ಝನೀಬಾಗ್, ವಗೂರ ಗ್ರಾಮಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಬಡಗಾಮ್ ಜಿಲ್ಲೆಯ ಏಕಲ್ ವಿದ್ಯಾಲಯದ ಶಿಕ್ಷಕರು ಪರಿಹಾರ ಕಾರ್ಯಾಚರಣೆಗೆ ಮರದ ದೋಣಿಗಳನ್ನು ಸಿದ್ಧಪಡಿಸಿ ನೀಡಿದ್ದಾರೆ. ರೇಶಿಪುರ, ಪೆಡಗಾಂಪುರ, ಲರಿಕ್‌ಪುರ, ಗುಲ್ಜಾರ್‌ಪುರ ಗ್ರಾಮಗಳಲ್ಲಿ ಪ್ರವಾಹ 12 ಅಡಿಯಿಂದ 32 ಅಡಿಯಷ್ಟು ಎತ್ತರಕ್ಕೆ ಬಂದು ಅಪ್ಪಳಿಸಿತ್ತು. ಈ ಪ್ರವಾಹಕ್ಕೆ ನೂರಾರು ಮನೆಗಳೇ ಕೊಚ್ಚಿಹೋಗಿವೆ. ಹೊಲದಲ್ಲಿದ್ದ ಬೆಳೆ, ತರಕಾರಿ, ಹಣ್ಣು ಎಲ್ಲವೂ ಸರ್ವನಾಶವಾಗಿವೆ. ಇನ್ನು ಸಾವಿಗೀಡಾದ ದನಕರು, ಜಾನುವಾರುಗಳ ಸಂಖ್ಯೆಯನ್ನು ಈ ಹಂತದಲ್ಲಿ ಲೆಕ್ಕಹಾಕುವುದು ಕಷ್ಟಸಾಧ್ಯವೇ ಸರಿ. ಪ್ರವಾಹದಿಂದಾಗಿ ಸ್ಮಶಾನದಲ್ಲಿ ಹೂಳಲಾಗಿದ್ದ ಶವಗಳು ಮೇಲಕ್ಕೆ ತೇಲಲಾರಂಭಿಸಿವೆಯೆಂದು ಸ್ಥಳೀಯರು ತಿಳಿಸಿದ್ದಾರೆ.

nera22article

ಪ್ರಧಾನಿ ನರೇಂದ್ರ ಮೋದಿ ಸುದ್ದಿ ತಿಳಿದಕೂಡಲೇ, `ಇದೊಂದು ರಾಷ್ಟ್ರೀಯ ದುರಂತ. ಸಂತ್ರಸ್ತರ ನೆರವಿಗೆ ಇಡೀ ದೇಶವೇ ಧಾವಿಸಬೇಕು ” ಎಂದು ಕರೆಕೊಟ್ಟರು. ಅಷ್ಟೇ ಅಲ್ಲ, ಕೇಂದ್ರಸರ್ಕಾರದಿಂದ 1,000 ಕೋಟಿ ಹಣವನ್ನು ತಕ್ಷಣ ಮೊದಲ ಕಂತಾಗಿ ಪರಿಹಾರಕಾರ್ಯಕ್ಕೆ ಬಿಡುಗಡೆಗೊಳಿಸಿದರು. ಹೆಚ್ಚುವರಿಯಾಗಿ ಇನ್ನೂ ಒಂದು ಸಹಸ್ರ ಕೋಟಿ ಹಣ ಬಿಡುಗಡೆಗೆ ಆದೇಶಿಸಿದರು. ಪ್ರಧಾನಿಯಾಗಿ ದೆಹಲಿಯಲ್ಲೇ ಕುಳಿತು ಹೇಳಿಕೆ ನೀಡದೆ, ಕಾಶ್ಮೀರ ಕಣಿವೆಗೆ ಬಂದಿಳಿದು ಪ್ರವಾಹಪೀಡಿತ ದೃಶ್ಯವನ್ನು ಕಣ್ಣಾರೆ ಕಂಡರು. ವಿಮಾನದಲ್ಲಿ ಕುಳಿತು ವಾಯುಸಮೀಕ್ಷೆ ಮಾತ್ರ ನಡೆಸದೆ ಭೂಮಾರ್ಗದಲ್ಲಿ ಸಂಚರಿಸಿ ಪ್ರವಾಹ ಪೀಡಿತರನ್ನು ಕಂಡು ಸಾಂತ್ವನ ಹೇಳಿದರು. ಕೇಂದ್ರ ಗೃಹಸಚಿವ ರಾಜನಾಥ್‌ಸಿಂಗ್ ಕೂಡ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿ ಸಂತ್ರಸ್ತರ ಪರಿಹಾರಕಾರ್ಯಕ್ಕೆ ಚಾಲನೆ ನೀಡಿದರು.

ಆದರೆ `ಕಾಶ್ಮೀರ ನಮ್ಮದು, ಇದೊಂದು ಪ್ರತ್ಯೇಕ ದೇಶವಾಗಬೇಕು, ಈ ದೇಶದ ಸ್ಥಾಪನೆಗೆ ಕಾಶ್ಮೀರಿಗಳು ಸ್ವತಂತ್ರ ಹೋರಾಟ ನಡೆಸಬೇಕು’ ಎಂದೆಲ್ಲಾ ಬೊಬ್ಬೆಹೊಡೆಯುತ್ತಿದ್ದ ಹುರಿಯತ್ ನಾಯಕ ಸೈಯದ್ ಅಲಿ ಶಾ ಗೀಲಾನಿಯಾಗಲಿ, ಪ್ರತ್ಯೇಕತಾವಾದಿ ನಾಯಕನೆಂದು ಮಿಂಚುತ್ತಿದ್ದ ಜೆಕೆಎಲ್‌ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ಆಗಲೀ ಜಮ್ಮು-ಕಾಶ್ಮೀರದ ಪ್ರವಾಹ ಪೀಡಿತರ ಕ್ಷೇಮ-ಸಮಾಚಾರ ವಿಚಾರಿಸಲು ಸ್ಥಳಕ್ಕೆ ಇದುವರೆಗೂ ಬಂದಿಲ್ಲ. ಅವರಿಬ್ಬರು ಎಲ್ಲಿ ಮಾಯವಾಗಿದ್ದಾರೋ ಯಾರಿಗೂ ಗೊತ್ತಿಲ್ಲ. ಈ ಮುಖಂಡರು ಭೀಕರ ಪ್ರವಾಹದಲ್ಲಂತೂ ಕೊಚ್ಚಿಕೊಂಡು ಹೋಗಿರಲಾರರು! ಏಕೆಂದರೆ ಇವರು ನಡೆಸುವುದು ಹೈಟೆಕ್ ಬದುಕು. ಪ್ರವಾಹ ಬಂದ ತಕ್ಷಣ ತಮ್ಮ ಜೀವ ಉಳಿಸಿಕೊಳ್ಳಲು ಅವರು ದೆಹಲಿಯ ತಮ್ಮ ಸುಸಜ್ಜಿತ ಹವಾನಿಯಂತ್ರಿತ ಬಂಗಲೆಗೆ ಧಾವಿಸಿರುತ್ತಾರೆ ಎಂಬುದು ರಹಸ್ಯವೇನಲ್ಲ. ಕಾಶ್ಮೀರ ಕಣಿವೆಯ ಜನತೆಯ ಧ್ವನಿಯೆಂದು ಬಣ್ಣಿಸಿಕೊಳ್ಳುತ್ತ, ಸ್ವಯಂಘೋಷಿತ ಕಾಶ್ಮೀರ ರಕ್ಷಕರೆಂದು ಮುಖವಾಡ ತೊಟ್ಟ ಈ ಮುಖಂಡರಿಗೆ ಹಾಗಿದ್ದರೆ ಮನೆ-ಮಠ, ಜಮೀನು, ಹೊಲ ಕಳೆದುಕೊಂಡು ಬೀದಿ ಪಾಲಾಗಿರುವ ಕಾಶ್ಮೀರ ಜನತೆಯ ಬಗ್ಗೆ ಒಂದಿನಿತೂ ಕಾಳಜಿ ಇಲ್ಲವೇ? ಇವರಿಗಿದ್ದಿದ್ದು ಕೇವಲ ಕಾಶ್ಮೀರ ರಾಜ್ಯದ ಆಡಳಿತ ಗದ್ದುಗೆ ಹಿಡಿಯಬೇಕೆಂಬ ಅಧಿಕಾರದಾಸೆಯೇ? ಕಾಶ್ಮೀರದ ಜನತೆ ಸೈನಿಕರನ್ನು ಸದಾ ದೂಷಿಸುತ್ತಿತ್ತು. ತಮ್ಮ ಮಕ್ಕಳನ್ನು ವಿನಾಕಾರಣ ಉಗ್ರರೆಂದು ಸಂಶಯದಿಂದ ಕಂಡು ಅವರ ಮೇಲೆ ಸೈನಿಕರು ಗುಂಡುಹಾರಿಸುತ್ತಾರೆಂದು ಕಣಿವೆಯ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದುಂಟು. ಆದರೆ ಅದೇ ಸೈನಿಕರೇ ಈಗ ತಮ್ಮ ಜೀವದ ಹಂಗು ತೊರೆದು ಕಣಿವೆಯ ಜನರನ್ನು ರಕ್ಷಿಸಲು ನಡುಕಟ್ಟಿ ನಿಂತಿದ್ದಾರೆ. ಕೆಲವೆಡೆ ಜನರು ಸೈನಿಕರ ಮೇಲೆ ಹಲ್ಲೆ ನಡೆಸಿದ್ದಾರೆ. ಆದರೆ ಹಲ್ಲೆಗೀಡಾದ ಸೈನಿಕರು ತಿರುಗಿಬೀಳದೆ ಪರಿಹಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಅವರ ಕರ್ತವ್ಯನಿಷ್ಠೆಗೆ ಉಜ್ವಲ ನಿದರ್ಶನ. ಪರಿಹಾರ ಕಾರ್ಯನಿರತ ಸೈನಿಕರ ಮೇಲೆ ಕಲ್ಲೆಸೆದ ಜನತೆಯ ಮಾನಸಿಕತೆಯಾದರೂ ಎಂತಹದು! ಬಹುಶಃ ಹಾಗೆ ಮಾಡಲು ಗೀಲಾನಿ, ಯಾಸಿನ್ ಮಲಿಕ್‌ರಿಂದಲೇ ಅವರಿಗೆ ಪ್ರಚೋದನೆ ದೊರಕಿರಬಹುದು! ತಮ್ಮ ಜೀವ ಉಳಿಸಲು ಬಂದವರನ್ನು ಮನುಷ್ಯ ಮಾತ್ರದವರು ದೇವರೆಂದು ಭಾವಿಸುತ್ತಾರೆ. ಅದು ನಮ್ಮ ಸಂಸ್ಕೃತಿ, ಸಂಸ್ಕಾರ. ಆದರೆ ಜೀವ ಉಳಿಸಲು ಬಂದ ಸೈನಿಕರ ಮೇಲೆಯೇ ತಿರುಗಿ ಬೀಳುತ್ತಾರೆಂದರೆ ಅಂಥವರಿಗೆ ಸಂಸ್ಕೃತಿ, ಸಂಸ್ಕಾರದ ಅರಿವು ಇಲ್ಲವೆಂದೇ ಅರ್ಥ. ಅಥವಾ ಯಾರದೋ ಕುಮ್ಮಕ್ಕಿನಿಂದ ಅವರು ಪ್ರಚೋದಿತರಾಗಿದ್ದಾರೆಂದೇ ತರ್ಕಿಸಬೇಕಾಗುತ್ತದೆ.

ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಗೊಳಿಸಲು ಇದೇ ಗೀಲಾನಿ, ಯಾಸಿನ್ ಮಲಿಕ್ ಜನರಿಂದ ಕೋಟಿಗಟ್ಟಲೆ ಹಣವನ್ನು ಸಂಗ್ರಹಿಸಿದ್ದರು. ಸ್ವತಂತ್ರ ಕಾಶ್ಮೀರಕ್ಕಾಗಿ ಸಂಗ್ರಹಿಸಲಾಗಿದ್ದ ಈ ಹಣಕ್ಕೆ “ ಝಕಾತ್ ” ಎಂದು ಹೆಸರಿಸಲಾಗಿತ್ತು. ಆ ಮೊತ್ತದಲ್ಲಿ ಸ್ವಲ್ಪವಾದರೂ ಈಗ ಕಣಿವೆಯ ಸಂತ್ರಸ್ತರಿಗೆ ನೆರವು ನೀಡಲು ಬಳಸಬೇಕೆಂಬ ಕಾಳಜಿ ಈ ನಾಯಕಮಣಿಗಳಿಗೆ ಇನ್ನೂ ಉಂಟಾಗಿಲ್ಲ. ಸಂತ್ರಸ್ತ ಮಗುವಿಗೆ ಗೀಲಾನಿ ಅಥವಾ ಯಾಸಿನ್ ಮಲಿಕ್ ಕನಿಷ್ಠ ಬಿಸ್ಕೆಟ್ ನೀಡುವ ದೃಶ್ಯ ಕಂಡು ಬಂದಿದ್ದರೆ ಈ ನಾಯಕಮಣಿಗಳಿಗೆ ಮಾನವೀಯತೆ ಇದೆಯೆಂದು ಭಾವಿಸಬಹುದಾಗಿತ್ತು. ಆದರೆ….?

ಸಂತ್ರಸ್ತರಿಗೆ ಸ್ವತಃ ಸೇವೆ ಸಲ್ಲಿಸಲು ಗೀಲಾನಿ, ಮಲಿಕ್‌ಗೆ ಕಷ್ಟಸಾಧ್ಯ ಎಂದೇ ಇಟ್ಟುಕೊಳ್ಳೋಣ. ಕೊನೆಪಕ್ಷ ಮುಖ್ಯಮಂತ್ರಿ ಒಮಾರ್ ಅಬ್ದುಲ್ಲಾ ಅವರೊಂದಿಗೆ ಪರಿಹಾರ ಕಾರ್ಯಗಳಲ್ಲಿ ಕೈಜೋಡಿಸಿದ್ದರೆ ಈ ನಾಯಕಮಣಿಗಳಿಗೆ ಕಾಶ್ಮೀರದ ಬಗ್ಗೆ ಇರುವ ಕಾಳಜಿಯನ್ನು ನಂಬಬಹುದಿತ್ತು. ಆದರೆ ಅದನ್ನೂ ನೆರವೇರಿಸುವ ಸೌಜನ್ಯ ತೋರಿಲ್ಲ. ಅಸಲಿಗೆ ಪ್ರತ್ಯೇಕತಾವಾದಿಗಳು, ಉಗ್ರರು, ಆಗಾಗ ಕಾಶ್ಮೀರದ ಪರವಾಗಿ ಹೇಳಿಕೆ ನೀಡುವವರು ಈಗ ಮಾತ್ರ ಬಾಯಿಗೆ ಬೀಗ ಹಾಕಿಕೊಂಡಿರುವುದು ಏನನ್ನು ಸೂಚಿಸುತ್ತದೆ? ಈ ಮಂದಿಗೆ ಕಾಶ್ಮೀರದ ಅಧಿಕಾರ ಬೇಕು, ಅಲ್ಲಿನ ಸಂಪತ್ತು ಬೇಕು. ಆದರೆ ಅಲ್ಲಿನ ಜನರ ಕಷ್ಟ ಸಂಕಟಗಳ ಗೊಡವೆ ಬೇಕಿಲ್ಲ. ಪ್ರವಾಹಕ್ಕೆ ಸಿಲುಕಿ ಸತ್ತರೆ, ಮನೆಗಳನ್ನು ಕಳೆದುಕೊಂಡರೆ ಅದು ಜನರ ಕರ್ಮ. ಅದಕ್ಕೆ ತಾವು ಮಾಡಬೇಕಾದುದೇನಿಲ್ಲ ಎಂಬ ಸಂದೇಶವಲ್ಲದೆ ಮತ್ತೇನು? ಇಂತಹ ಸ್ವಾರ್ಥಿ ಮುಖಂಡರನ್ನು ನಂಬುವ, ತಲೆಯ ಮೇಲೆ ಹೊತ್ತು ಮೆರೆಯುವ ಕಾಶ್ಮೀರ ಕಣಿವೆಯ ಜನರ ಬೌದ್ಧಿಕ ದಾರಿದ್ರ್ಯವನ್ನು ನೋಡಿ ನಗಬೇಕೋ ಅಳಬೇಕೋ ತಿಳಿಯದಾಗಿದೆ.

ಕಾಶ್ಮೀರ ಕಣಿವೆಯಲ್ಲಿ ಪ್ರವಾಹದ ಮುನ್ಸೂಚನೆ ಇರಲಿಲ್ಲವೇ? ಐದು ವರ್ಷಗಳ ಹಿಂದೆ ಭಾರತೀಯ ರಾಷ್ಟ್ರೀಯ ಕಲೆ ಮತ್ತು ಸಾಂಸ್ಕೃತಿಕ ಪರಂಪರೆ ಟ್ರಸ್ಟ್ ಕಣಿವೆಯಲ್ಲಿ ಪ್ರವಾಹಭೀತಿ ತಲೆದೋರಿ ಪ್ರಾಕೃತಿಕ ವಿಪತ್ತು ಸಂಭವಿಸಲಿದೆ ಎಂದು ಭವಿಷ್ಯ ನುಡಿದಿತ್ತು. 2012 ರಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಕೂಡ ಜಮ್ಮು-ಕಾಶ್ಮೀರ ರಾಜ್ಯದಲ್ಲಿ ಭಾರೀ ಪ್ರವಾಹ ಉಂಟಾಗುವ ಭೀತಿಯ ಬಗ್ಗೆ ಕೇಂದ್ರ ಸರ್ಕಾರವನ್ನು ಎಚ್ಚರಿಸಿತ್ತು. ಆದರೆ ಆಗಿನ ಕೇಂದ್ರ ಯುಪಿಎ ಸರ್ಕಾರ ಹಾಗೂ ಜಮ್ಮು-ಕಾಶ್ಮೀರ ಸರ್ಕಾರ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲೇ ಇಲ್ಲ. ಅದರ ಪರಿಣಾಮ ಇಂದು ನಮ್ಮೆಲ್ಲರ ಕಣ್ಮುಂದಿದೆ. ವಿಶೇಷವಾಗಿ ಶ್ರೀನಗರದಲ್ಲಿ ಒಳಚರಂಡಿ ವ್ಯವಸ್ಥೆ ಒಂದಿಷ್ಟೂ ಸಮರ್ಪಕವಾಗಿಲ್ಲ. ದಾಲ್ ಸರೋವರದ ಬಹುಭಾಗ ಜಾಗವನ್ನು ಪ್ರಭಾವಿ ಹಣವಂತರು ಆಕ್ರಮಿಸಿಕೊಂಡು ಅಲ್ಲಿ ತಾತ್ಕಾಲಿಕ ಮನೆಗಳನ್ನು ಕಟ್ಟಿ ಪ್ರವಾಸಿಗರಿಗೆ ಬಾಡಿಗೆಗೆ ನೀಡುತ್ತಿದ್ದಾರೆ. ಈ ಎಲ್ಲಾ ಅವ್ಯವಸ್ಥೆಗಳು ಮೊನ್ನೆಯ ಪ್ರವಾಹಕ್ಕೆ ಇನ್ನಷ್ಟು ಇಂಬು ನೀಡಿವೆ. ಸರೋವರಗಳ ನೀರು ಸರಾಗವಾಗಿ ಹರಿದುಹೋಗದಂತೆ ತಡೆಯೊಡ್ಡಿರುವುದು, ಸಮರ್ಪಕ ಯೋಜನೆಯಿಲ್ಲದ ನಗರೀಕರಣ ಮುಂತಾದ ಅಪಸವ್ಯಗಳು ಇದರ ಜೊತೆ ಸೇರಿದ್ದರಿಂದಾಗಿ ಈ ಪ್ರವಾಹ ಇಷ್ಟೊಂದು ಪ್ರಕೋಪಕ್ಕೆ ಹೋಗುವಂತಾಗಿರುವುದು ಕಟು ವಾಸ್ತವ.

ಇತ್ತ ಕಾಶ್ಮೀರ ಕಣಿವೆಯಲ್ಲಿ ಪ್ರವಾಹದಿಂದ ಜನರು ನಲುಗುತ್ತಿದ್ದರೆ, ಅತ್ತ ಬ್ರಿಟಿಷ್ ಪಾರ್ಲಿಮೆಂಟ್ ಸಭೆಯಲ್ಲಿ ಜಮ್ಮು-ಕಾಶ್ಮೀರದ ಕುರಿತು ವಿಶೇಷ ಚರ್ಚೆಯೊಂದನ್ನು ನಡೆಸಿದ್ದು ಎಂತಹ ಸೋಜಿಗ! ಜಮ್ಮು-ಕಾಶ್ಮೀರಕ್ಕೂ ಬ್ರಿಟನ್‌ಗೂ ಎಲ್ಲಿಗೆಲ್ಲಿಯ ಸಂಬಂಧ? ಆದರೆ ಅಲ್ಲೊಬ್ಬ ದುರುಳ ಸಾಂಸದನಿದ್ದಾನೆ. ಅವನ ಹೆಸರು ಡೇವಿಡ್ ವಾರ್ಡ್. ಬ್ರಾಡ್‌ಫೋರ್ಡ್ ಪೂರ್ವ ಕ್ಷೇತ್ರದಿಂದ ಚುನಾಯಿತನಾಗಿರುವ ಈ ಸಾಂಸದನ ಕ್ಷೇತ್ರದಲ್ಲಿ ಮೂರು ದಶಲಕ್ಷಕ್ಕೂ ಹೆಚ್ಚು ಭಾರತ-ಪಾಕಿಸ್ಥಾನಕ್ಕೆ ಸೇರಿದ ಸಮುದಾಯ ವಾಸಿಸುತ್ತಿದೆ. ಈ ಪೈಕಿ ಜಮ್ಮು-ಕಾಶ್ಮೀರಕ್ಕೆ ಸೇರಿದವರೇ ಬರೋಬ್ಬರಿ ಒಂದು ಲಕ್ಷ ಮಂದಿ ಇದ್ದಾರೆ. ಅವರನ್ನು ಖುಷಿಪಡಿಸಲು ಈ ತಲೆಹರಟೆ ಸಾಂಸದ ಕಾಶ್ಮೀರದ ಕುರಿತು ಪಾರ್ಲಿಮೆಂಟ್‌ನಲ್ಲಿ ವಿಶೇಷ ಚರ್ಚೆ ನಡೆಯಬೇಕೆಂದು ಆಗ್ರಹಿಸಿದ್ದ. ಆದರೆ ಆತನ ಈ ಆಗ್ರಹಕ್ಕೆ ಮಣಿದ ಬ್ರಿಟನ್ ಪ್ರಧಾನಿ ಎಂತಹವರು? ಜಮ್ಮು-ಕಾಶ್ಮೀರ ವಿವಾದ ಏನಿದ್ದರೂ ಭಾರತದ ಆಂತರಿಕ ಸಮಸ್ಯೆ. ಆ ವಿಷಯದಲ್ಲಿ ತಾನು ಹಸ್ತಕ್ಷೇಪ ನಡೆಸುವುದು ತರವಲ್ಲ ಎಂಬ ಪರಿಜ್ಞಾನವಾದರೂ ಬೇಡವೇ? ಅದೂ ಅಲ್ಲದೆ ಭಯೋತ್ಪಾದನೆಯನ್ನು ಹತ್ತಿಕ್ಕುವ ವಿಷಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ಪರಸ್ಪರ ಒಪ್ಪಂದವೊಂದಕ್ಕೆ ಪಾಲುದಾರರು. ಹೀಗಿರುವಾಗ ಜಮ್ಮು-ಕಾಶ್ಮೀರ ವಿವಾದದ ಕುರಿತು ಪಾರ್ಲಿಮೆಂಟ್‌ನಲ್ಲಿ ವಿಶೇಷ ಚರ್ಚೆ ನಡೆಸಲು ಇಂಗ್ಲೆಂಡ್‌ಗೆ ಅಧಿಕಾರ ಕೊಟ್ಟವರಾರು?

ಅದೇನೇ ಇರಲಿ, ಪ್ರಾಕೃತಿಕ ವಿಪತ್ತು ಎಲ್ಲೇ ತಲೆದೋರಿದರೂ ಅದಕ್ಕೆ ನಾವೆಲ್ಲರೂ ಸ್ಪಂದಿಸಬೇಕು. ಅದು ಮಾನವೀಯತೆಯ ಲಕ್ಷಣ. ದುರಂತದ ಸಂದರ್ಭದಲ್ಲಿ ನಮಗಾಗದವರನ್ನೂ ಪ್ರೀತಿಯಿಂದ ಕಾಣಬೇಕು. ಗೀಲಾನಿ, ಯಾಸಿನ್ ಮಲಿಕ್‌ರಂತಹ ಸಮಯಸಾಧಕರಿಗೆ ಈ ಅಂಶ ಅರ್ಥವಾಗುತ್ತದೆಯೇ?

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top