ಕಮ್ಯುನಿಸ್ಟ್ ಪಕ್ಷಕ್ಕೆ ಈಗ ನಮ್ಮ ದೇಶದಲ್ಲಿ ನಿಜಕ್ಕೂ ಅಳಿವು-ಉಳಿವಿನ ಪ್ರಶ್ನೆ. ದೇಶದ ರಾಜಕೀಯ ಭೂಪಟದಿಂದ ತನ್ನ ಹೆಸರು ಎಲ್ಲಿ ಅಳಿಸಿಹೋಗಲಿದೆಯೋ ಎಂಬ ಆತಂಕ ಅದರದ್ದು. ಪಶ್ಚಿಮ ಬಂಗಾಳ ಮತ್ತು ಕೇರಳದ ವಿಧಾನಸಭೆಗೆ ಸದ್ಯ ನಡೆಯಲಿರುವ ಚುನಾವಣೆ ಸಿಪಿಎಂ ಪಾಲಿಗೆ ಕೊನೆಯ ಅವಕಾಶವಾಗಿರುವಂತೆ ಕಾಣುತ್ತಿದೆ. ಆ ಪಕ್ಷದ ಪಾಲಿಗೆ ಈ ಅಸೆಂಬ್ಲಿ ಚುನಾವಣೆ ‘ಮಾಡು ಇಲ್ಲವೇ ಮಡಿ’ ಎಂಬ ಸ್ಥಿತಿ. ಹಾಗಾಗಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ರಾಜಕೀಯ ವಿರೋಧಿಗಳೊಂದಿಗೂ ಕೈ ಜೋಡಿಸಲು, ಮೈತ್ರಿ ಮಾಡಿಕೊಳ್ಳಲು ಅದು ಈ ಬಾರಿ ಹೇಸಿಲ್ಲ. ಬಹಳ ಹಿಂದೆ, ಅಂದರೆ 60 ರ ದಶಕದಲ್ಲಿ ಕಮ್ಯುನಿಸ್ಟ್ ನಾಯಕ ಇಎಂಎಸ್ ನಂಬೂದರಿಪಾಡ್ ‘ನಮ್ಮ ಪಕ್ಷವು ದೆವ್ವಗಳೊಂದಿಗೂ ಮೈತ್ರಿ ಮಾಡಿಕೊಳ್ಳುತ್ತದೆ’ ಎಂದಿದ್ದರು. ಆಗ ಅವರು ಹೇಳಿದ್ದು – ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಮೂಲ ನಾಶಮಾಡುವ ಹಿನ್ನೆಲೆಯಲ್ಲಿ. ಆದರೆ ಈಗ ಕಮ್ಯುನಿಸ್ಟ್ ಪಕ್ಷ ಮೈತ್ರಿಮಾಡಿಕೊಳ್ಳುತ್ತಿರುವುದು ಕೇವಲ ತನ್ನ ಅಸ್ತಿತ್ವದ ಉಳಿವಿಗಾಗಿ.
ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಸಿಪಿಎಂ ಕಾಂಗ್ರೆಸ್ನೊಂದಿಗೆ ಮೈತ್ರಿಗೆ ಮುಂದಾಗಿದೆ. ತಮಾಷೆಯೆಂದರೆ, ಕೇರಳದಲ್ಲಿ ಇದೇ ಕಾಂಗ್ರೆಸ್ ಪಕ್ಷ ಸಿಪಿಎಂ ಪಾಲಿಗೆ ಕಟ್ಟರ್ವಿರೋಧಿ ಪಕ್ಷ. ಪಶ್ಚಿಮ ಬಂಗಾಳದ ಈ ಮೈತ್ರಿ ಒಪ್ಪಂದದಿಂದಾಗಿ ಬಂಗಾಳದ ಕಾಮ್ರೇಡ್ಗಳು ಕೇರಳದಲ್ಲಿ ಸಿಪಿಎಂ ಪರವಾಗಿ ಪ್ರಚಾರಮಾಡುವಂತಿಲ್ಲ. ಅದೇ ರೀತಿ ಕೇರಳದ ಸಿಪಿಎಂ ನಾಯಕರು, ಪಶ್ಚಿಮ ಬಂಗಾಳಕ್ಕೆ ತಮ್ಮ ಪಕ್ಷದ ಪ್ರಚಾರಕ್ಕೆ ಹೋಗುವಂತಿಲ್ಲ. ಇದು ಅವರೇ ತಂದುಕೊಂಡ ಸ್ಥಿತಿ. ಹೀಗಿದ್ದರೂ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ‘ಒಂದು ಜಾಣತನದ ನಡೆ’ ಎಂದು ಸಿಪಿಎಂ ನಾಯಕರು ಬಣ್ಣಿಸಿಕೊಂಡಿದ್ದಾರೆ. ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಈ ತಂತ್ರವಂತೆ. ಪಶ್ಚಿಮ ಬಂಗಾಳ ಹಾಗೂ ಕೇರಳದ ಚುನಾವಣೆಗಳು ರಾಜಕೀಯದಲ್ಲಿ ಶಾಶ್ವತವಾಗಿ ಯಾರೂ ಶತ್ರುಗಳಲ್ಲ, ಮಿತ್ರರೂ ಅಲ್ಲ ಎಂಬ ಸಿದ್ಧಾಂತವನ್ನು ಮತ್ತೆ ನೆನಪು ಮಾಡಿಕೊಟ್ಟಿದೆ. ಕೇರಳದಲ್ಲಿ ಇನ್ನೊಂದು ಅವಧಿಗೆ ಅಧಿಕಾರ ಸಿಗದಿದ್ದರೆ ಅಥವಾ ಪಶ್ಚಿಮ ಬಂಗಾಳದಲ್ಲಿ ಸಿಪಿಎಂನ ಅಸ್ತಿತ್ವಕ್ಕೇ ಧಕ್ಕೆಯಾದರೆ – ಇವೆರಡೂ ವಿದ್ಯಮಾನಗಳು ನಾಲ್ಕು ದಶಕಗಳ ಹಳೆಯ ಪಕ್ಷವಾಗಿರುವ ಸಿಪಿಎಂ ಪಾಲಿಗೆ ಮೃತ್ಯುಪಾಶವೇ ಸರಿ. 1964 ರಲ್ಲಿ ಕಮ್ಯುನಿಸ್ಟ್ ಪಕ್ಷ ವಿಭಜನೆಯಾದ ಬಳಿಕ ಇದು ಬಹುಶಃ ಆ ಪಕ್ಷದ ಪಾಲಿಗೆ ಒದಗಿರುವ ಅತ್ಯಂತ ಕರಾಳ ಸನ್ನಿವೇಶ. ಹೀಗಾಗಿ ಈ ಬಾರಿ ಸಿಪಿಎಂ ಪಕ್ಷಕ್ಕೆ ನಿಜಕ್ಕೂ ಮತಿಭ್ರಮಣೆಯ ಸನ್ನಿವೇಶ ಎದುರಾಗಿರುವುದು ನಿಜ.
ಕೇರಳದಲ್ಲಿ ಫ್ರಾನ್ಸಿಸ್ ಜಾರ್ಜ್ ನೇತೃತ್ವದ ಒಂದು ಗುಂಪು ಕೆ.ಎಂ. ಮಣಿ ನೇತೃತ್ವದ ಕೇರಳ ಕಾಂಗ್ರೆಸ್ನಿಂದ ಸಿಡಿದು ಹೊರಬಂದಿದೆ. ತನಗೆ ಸೂಕ್ತ ಟಿಕೆಟ್ಗಳನ್ನು ಹಂಚಿಲ್ಲ ಎಂಬುದು ಈ ಆಕ್ರೋಶಕ್ಕೆ ಕಾರಣ. ಈಗ ಈ ಗುಂಪನ್ನು ಸಿಪಿಎಂ ಓಲೈಸತೊಡಗಿದೆ. ಅದೇ ರೀತಿ ಆರ್ಎಸ್ಪಿ ತೊರೆದ ಕೋವೂರ್ ಕುಂಜುಮನ್ ಎಂಬ ರಾಜಕೀಯ ನಾಯಕನನ್ನು ಎಲ್ಡಿಎಫ್ ಮೈತ್ರಿಕೂಟಕ್ಕೆ ಆಹ್ವಾನಿಸಲಾಗಿದೆ. ಇನ್ನೊಬ್ಬ ಕೇರಳ ಕಾಂಗ್ರೆಸ್ ನಾಯಕ, ಭ್ರಷ್ಟಾಚಾರ ಆರೋಪ ಹೊತ್ತು ಜೈಲು ಸೇರಿದ್ದ ಆರ್. ಬಾಲಕೃಷ್ಣಪಿಳ್ಳೈ ಮತ್ತು ಆತನ ಮಗ, ಮಾಜಿ ಮಂತ್ರಿ ಗಣೇಶ್ ಕುಮಾರ್ ಅವರನ್ನು ಸಿಪಿಎಂ ತನ್ನೆಡೆಗೆ ಸೆಳೆದುಕೊಂಡಿದೆ. ಇವೆಲ್ಲ ವಿದ್ಯಮಾನಗಳು ಈ ಬಾರಿ ಹೇಗಾದರೂ ಮತ್ತೆ ಕೇರಳದಲ್ಲಿ ಎಲ್ಡಿಎಫ್ ಅಧಿಕಾರಕ್ಕೆ ಬರಬೇಕೆಂಬುದೇ ಆಗಿದೆ.
ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ನೇತೃತ್ವದ ಎಡ ಮೈತ್ರಿಕೂಟ, ಒಟ್ಟು 294 ಅಸೆಂಬ್ಲಿ ಸ್ಥಾನಗಳ ಪೈಕಿ ಬರೋಬ್ಬರಿ 75 ಸ್ಥಾನಗಳನ್ನು ಕಾಂಗ್ರೆಸ್ ಮತ್ತಿತರ ಮೈತ್ರಿಕೂಟ ಪಕ್ಷಗಳಿಗೆ ಬಿಟ್ಟುಕೊಟ್ಟಿದೆ. 2011ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ತೃಣಮೂಲ ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಆಗ ಕಾಂಗ್ರೆಸ್ ಪಾಲಿಗೆ ಸಿಕ್ಕಿದ್ದು ಕೇವಲ 68 ಸ್ಥಾನಗಳು. ಕೊಲ್ಕತ್ತಾದಲ್ಲಿ ಇರುವ ಒಟ್ಟು 11 ಅಸೆಂಬ್ಲಿ ಸ್ಥಾನಗಳಲ್ಲಿ ಕಾಂಗ್ರೆಸ್ಗೆ 5 ಸ್ಥಾನಗಳನ್ನು ಸಿಪಿಎಂ ಬಿಟ್ಟುಕೊಟ್ಟಿದೆ. ಕಾಂಗ್ರೆಸ್ಗೆ ಎಲ್ಲ ಕಡೆ ಸಾಧ್ಯವಾದಷ್ಟು ಅನುಕೂಲ ಕಲ್ಪಿಸಬೇಕೆಂದು ತನ್ನ ಪಕ್ಷದ ಕಾರ್ಯಕರ್ತರಿಗೆ ಸಿಪಿಎಂ ಕರೆನೀಡಿದೆ. ಮುರ್ಶಿದಾಬಾದ್ನಲ್ಲಿ ಎಡ ಮೈತ್ರಿಕೂಟದ ಅಂಗಪಕ್ಷವಾಗಿರುವ ಆರ್ಎಸ್ಪಿ 3 ಸ್ಥಾನಗಳನ್ನು ಕಾಂಗ್ರೆಸ್ಗಾಗಿ ತ್ಯಾಗ ಮಾಡಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಅಲ್ಲಿ ಸಿಪಿಎಂ ನೇತೃತ್ವದ ಎಡಮೈತ್ರಿಕೂಟ ಶೇ. 33ರಷ್ಟು ಮತಗಳನ್ನು ಪಡೆದಿದ್ದರೆ ಕಾಂಗ್ರೆಸ್ಗೆ ದಕ್ಕಿದ್ದು ಕೇವಲ ಶೇ. 9.6 ಮಾತ್ರ. ತೃಣಮೂಲಕಾಂಗ್ರೆಸ್ ಶೇ. 44 ಹಾಗೂ ಬಿಜೆಪಿ ಶೇ. 17 ಮತಗಳನ್ನು ಆಗ ಪಡೆದಿತ್ತು.
ಸಿಪಿಎಂ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಮೈತ್ರಿ ಸಾಧ್ಯವಾಗದಿದ್ದಾಗಲೆಲ್ಲ ಸ್ನೇಹಪೂರ್ಣ ಸ್ಪರ್ಧೆ ನಡೆಸಬೇಕೆಂದು ನಿರೀಕ್ಷಿಸಲಾಗುತ್ತದೆ. ಈ ಬಾರಿ ಕೂಡ ಅದೇ ಸ್ಥಿತಿ ಕೆಲವೆಡೆ ಕಂಡುಬಂದಿದೆ. ಪಶ್ಚಿಮ ಬಂಗಾಳದ ನಬಗ್ರಾಮ, ದೊಮ್ಕಲ್, ಹರಿಹರಪಾರ ಮುಂತಾದ ಕೆಲವು ಕಡೆಗಳಲ್ಲಿ ಸಿಪಿಎಂ ಮತ್ತು ಕಾಂಗ್ರೆಸ್ ನಡುವೆ ಸ್ನೇಹದ ಸ್ಪರ್ಧೆ! ಕೇರಳದಲ್ಲೂ ಇಂತಹ ಸ್ನೇಹದ ಸ್ಪರ್ಧೆಗಳು ಯುಡಿಎಫ್ ಮತ್ತು ಎಲ್ಡಿಎಫ್ ನಡುವೆ ಕೆಲವೆಡೆ ನಡೆದರೆ ಆಶ್ಚರ್ಯವಿಲ್ಲ. ಏಕೆಂದರೆ ಈಗ ದಿನೇದಿನೇ ಕೇರಳದಲ್ಲಿ ತೃತೀಯಶಕ್ತಿಯಾಗಿ ಪ್ರಬಲವಾಗುತ್ತಿರುವ ಬಿಜೆಪಿಯನ್ನು ದೂರ ಇಡುವುದಕ್ಕಾಗಿ ಅದು ಇಂತಹ ಯಾವ ‘ರಾಜಕೀಯ ತ್ಯಾಗ’ಕ್ಕೂ ಸಿದ್ಧ. ನೇಮಂ, ವಟ್ಟಿಯೂರುಕಾವು, ಪಾಲಕ್ಕಾಡ್, ಮಂಜೇಶ್ವರ, ಕಟ್ಟಕ್ಕಡ, ಕಾಸರಗೋಡು, ಕಝಕೊಟ್ಟಂ ಹಾಗೂ ತಿರುವನಂತಪುರಂ ಮೊದಲಾದ ಬಿಜೆಪಿಯ ಪ್ರಾಬಲ್ಯ ಹೆಚ್ಚಿರುವ ಕ್ಷೇತ್ರಗಳಲ್ಲಿ ಕೊನೆಯ ಕ್ಷಣದಲ್ಲಿ ಯುಡಿಎಫ್ ಮತ್ತು ಎಲ್ಡಿಎಫ್ ನಡುವೆ ಹೊಂದಾಣಿಕೆಯಾದರೆ ಆಚ್ಚರಿಯೇನಿಲ್ಲ. ಹಿಂದೆ ಕೂಡ ಕಾಸರಗೋಡು, ಮಂಜೇಶ್ವರದಲ್ಲಿ ಬಿಜೆಪಿ ಇನ್ನೇನು ಗೆಲ್ಲುವ ಹಂತಕ್ಕೆ ತಲುಪಿದೆ ಎನಿಸಿದಾಗ ಎಲ್ಡಿಎಫ್ ಮತ್ತು ಯುಡಿಎಫ್ ಹೊಂದಾಣಿಕೆ ಮಾಡಿಕೊಂಡು, ಬಿಜೆಪಿ ಗೆಲ್ಲದಂತೆ ಮಾಡಿದ್ದವು. ಈ ಬಾರಿಯೂ ಅಂತಹ ವಿದ್ಯಮಾನಗಳು ನಡೆದರೆ ಆಶ್ಚರ್ಯವಿಲ್ಲ.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಕಾರಕ್ಕೇರುವ ಮುನ್ನ ಸತತ 35 ವರ್ಷಗಳ ಕಾಲ ಆ ರಾಜ್ಯವಾಳಿದ್ದು ಮಾರ್ಕ್ಸಿಸ್ಟ್ ಕಮ್ಯುನಿಸ್ಟ್ ಪಕ್ಷ. ಇಷ್ಟೊಂದು ದೀರ್ಘ ಕಾಲ ಅಧಿಕಾರ ದೊರೆತಿದ್ದರೂ ಸಿಪಿಎಂ ಆ ರಾಜ್ಯಕ್ಕೆ ಮಾಡಿದ ಉಪಕಾರ ಏನೇನೂ ಇಲ್ಲ. ಭ್ರಷ್ಟಾಚಾರ ಮತ್ತಷ್ಟು ಹೆಚ್ಚಿತು. ಕೊಲೆಗಳು, ಅತ್ಯಾಚಾರ, ಮಾನಹರಣ ಮೇರೆಮೀರಿತು. ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟ್ ಆಡಳಿತವಿದ್ದಾಗಲೆಲ್ಲ ಇದೇ ಕಥೆ. ಕೇರಳದಲ್ಲಂತೂ ಎಲ್ಡಿಎಫ್ ಅಧಿಕಾರಕ್ಕೆ ಬಂದಾಗಲೆಲ್ಲ ಸಂಘಪರಿವಾರದ ಕಾರ್ಯಕರ್ತರನ್ನು ಮನಸೋಇಚ್ಛೆ ಕೊಚ್ಚಿ ಕೊಲೆಮಾಡಿದ ಪ್ರಕರಣಗಳಿಗೆ ಲೆಕ್ಕವೇ ಇಲ್ಲ. ಸಿಪಿಎಂನ ಭದ್ರಕೋಟೆಯೆಂದೇ ಹೇಳಲಾಗುವ ಕಣ್ಣೂರು ಜಿಲ್ಲೆಯಲ್ಲಿ 100 ಕ್ಕೂ ಹೆಚ್ಚು ಆರೆಸ್ಸೆಸ್ ಕಾರ್ಯಕರ್ತರನ್ನು ದಾರುಣವಾಗಿ ಕೊಲೆಮಾಡಿದ ಕುಖ್ಯಾತಿ ಕಮ್ಯುನಿಸ್ಟ್ ಆಡಳಿತದ್ದು.
ಪಶ್ಚಿಮ ಬಂಗಾಳದಲ್ಲೂ ಕಾಮ್ರೇಡ್ಗಳ ಆಡಳಿತ ಇದಕ್ಕಿಂತ ಭಿನ್ನವಾಗಿರಲಿಲ್ಲ. ಟಿಎಂಸಿ ಅಧಿಕಾರಕ್ಕೆ ಬಂದೊಡನೆ ಮಿಡ್ನಾಪುರ ಜಿಲ್ಲೆಯ ಗರ್ಬೆಟ್ಟಾ ಕ್ಷೇತ್ರದ 7 ಮಂದಿ ಟಿಎಂಸಿ ಕಾರ್ಯಕರ್ತರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಕಮ್ಯುನಿಸ್ಟರನ್ನು ವಿರೋಧಿಸುವ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹೀಗೆ ನಾಪತ್ತೆಯಾಗುವ ವಿದ್ಯಮಾನ ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳಲ್ಲಿ ಹೊಸದೇನಲ್ಲ. ಟಿಎಂಸಿ ನೇತೃತ್ವದ ಸರ್ಕಾರ ಈ ನಾಪತ್ತೆ ಪ್ರಕರಣದ ಬೆನ್ನುಹತ್ತಿ ಹೋದಾಗ, ಪೋಲೀಸರು ಮೊದಲು ಬಂಧಿಸಿದ್ದು ಅದೇ ಗರ್ಬೆಟ್ಟಾ ಕ್ಷೇತ್ರದ ಮಾಜಿ ಶಾಸಕ ಸುಶಾಂತ್ಘೋಷ್ನನ್ನು. ಈತ ಸಿಪಿಎಂನ ನಾಯಕ. 80 ರ ದಶಕದಲ್ಲಿ ಮೊದಲಬಾರಿಗೆ ಶಾಸಕನಾದ ಈತ ಒಟ್ಟು 6 ಬಾರಿ ಕ್ಷೇತ್ರದಿಂದ ಆಯ್ಕೆಯಾಗಿದ್ದಾನೆ. 1991 ರಿಂದ 2011 ರವರೆಗೆ ಕಮ್ಯುನಿಸ್ಟ್ ಸರ್ಕಾರದಲ್ಲಿ ಸಾರಿಗೆ ಖಾತೆ ಸೇರಿದಂತೆ ಹಲವು ಪ್ರಮುಖ ಹುದ್ದೆಗಳನ್ನೂ ನಿರ್ವಹಿಸಿದ್ದ. 20 ವರ್ಷಗಳ ಕಾಲ ಸತತವಾಗಿ ಒಂದಿಲ್ಲೊಂದು ಖಾತೆಯ ಸಚಿವನಾಗಿ ಈತ ಜನಪರ ಕಾರ್ಯ ನಿರ್ವಹಿಸಿದ್ದಾನೆಂದು ನೀವು ಭಾವಿಸಿದ್ದರೆ ಅದು ಮಾತ್ರ ಸುಳ್ಳು. ಆತ ತನ್ನ ಅಧಿಕಾರಾವಧಿಯಲ್ಲಿ ಮಾಡಿದ್ದು – ತನ್ನ ವಿರೋಧಿಗಳ ಕಥೆ ಮುಗಿಸಿದ್ದು. ಗೂಂಡಾಗಳನ್ನು ಛೂ ಬಿಟ್ಟು ತನಗಾಗದವರನ್ನು ಅಪಹರಿಸುತ್ತಿದ್ದ. ನಂತರ ಅವರಿಗೆ ಚಿತ್ರಹಿಂಸೆ ನೀಡಿ ಜೀವಂತವಾಗಿ ಸಮಾಧಿ ಮಾಡಿಬಿಡುತ್ತಿದ್ದ. ತಮಾಷೆಯೆಂದರೆ ಆ ಸಮಾಧಿಸ್ಥಳ ಆತನ ಹೊಲವೇ ಆಗಿತ್ತು. ಹಾಗಾಗಿ ನಾಪತ್ತೆಯಾದವರು ಎಲ್ಲಿ ಹೋದರು ಎಂಬ ಸುಳಿವೂ ಕೂಡ ಯಾರಿಗೂ ಸಿಗುತ್ತಿರಲಿಲ್ಲ. ತನ್ನನ್ನು ವಿರೋಧಿಸಿದವರಿಗೆ ಆತನ ತೋಟದ ಮನೆಯೇ ಸ್ಮಶಾನ. ಟಿಎಂಸಿ ಸರ್ಕಾರದ ಅವಧಿಯಲ್ಲಿ ಪೊಲೀಸರು ನಾಪತ್ತೆ ಪ್ರಕರಣವನ್ನು ಬೇಧಿಸಿದಾಗ ಆತನ ತೋಟದ ಮನೆಯ ನೆಲದಾಳದಲ್ಲಿ ಸಿಕ್ಕಿದ್ದು ಮೂಳೆಗಳ ರಾಶಿ, ಕೊಳೆತುಹೋದ ಮಾನವ ಶರೀರಗಳು! ಅಲ್ಲಿ ದೊರಕಿದ ಮೂಳೆಗಳು, ಕೊಳೆತ ಶರೀರಗಳು ಸುಶಾಂತ್ ಘೋಷ್ ಅದೆಂತಹ ನರರಾಕ್ಷಸ ಹಾಗೂ ಸಿಪಿಎಂ ಸರ್ಕಾರ ಜನಪರ ಅಭಿವೃದ್ಧಿ ಹೆಸರಿನಲ್ಲಿ ಅದೆಂತಹ ಕ್ರೂರ ಆಡಳಿತ ನಡೆಸುತ್ತಿತ್ತು ಎನ್ನುವುದರ ಕರಾಳ ಕಥೆಗಳಿಗೆ ಸಾಕ್ಷಿಯಾಗಿದೆ.
ಇದು ಕೇವಲ ಒಂದು ನಿದರ್ಶನ, ಅಷ್ಟೆ. ಪಶ್ಚಿಮ ಬಂಗಾಳದ ಹಲವೆಡೆ, ಸಿಪಿಎಂ ಆಡಳಿತದ ದೀರ್ಘಾವಧಿಯಲ್ಲಿ ಸಾವಿರಾರು ಕೊಲೆಗಳು ನಡೆದಿವೆ. ರಕ್ತದೋಕುಳಿ ಚೆಲ್ಲಾಡಿದೆ. ಶಿಕ್ಷಣಕ್ಷೇತ್ರವನ್ನು ಸಂಪೂರ್ಣ ಕಡೆಗಣಿಸಲಾಯಿತು. ಉದ್ಯಮಗಳು ಬಾಗಿಲು ಮುಚ್ಚಿಕೊಂಡವು. ರಸ್ತೆಗಳು ಇನ್ನಷ್ಟು ಕುಲಗೆಟ್ಟುಹೋದವು. ಕುಡಿಯುವ ನೀರು, ವಿದ್ಯುತ್ದೀಪ ಮೊದಲಾದ ಮೂಲಸೌಕರ್ಯಗಳಿಗೆ ತಿಲಾಂಜಲಿ ನೀಡಲಾಯಿತು. ಅಭಿವೃದ್ಧಿ ಕಾರ್ಯಗಳು ಸೊಂಟ ಮುರಿದುಕೊಂಡು ಬಿದ್ದವು. ಅಲ್ಲೇನಾದರೂ ಅಭಿವೃದ್ಧಿ ಕಾರ್ಯ ನಡೆದಿದ್ದರೆ ಅದು ಸಿಪಿಎಂ ವಿರೋಧಿಗಳನ್ನು ಕೊಚ್ಚಿ ಕೊಂದುಹಾಕುವ ಅಭಿವೃದ್ಧಿ ಮಾತ್ರ! ಸ್ವಜನಪಕ್ಷಪಾತ ಸರ್ವಾಧಿಕಾರ, ಕೊಲೆ ರಾಜಕೀಯ, ಪ್ರಜಾಸತ್ತಾತ್ಮಕ ವ್ಯವಸ್ಥೆಗಳ ದಮನ, ಜನವಿರೋಧಿ ಆಡಳಿತ… ಹೀಗೆ ದೌರ್ಜನ್ಯ, ದಮನಗಳದ್ದೇ ಕಥೆ.
ಕೇರಳದಲ್ಲೂ ಅದೇ ಕಥೆ, ಎಲ್ಡಿಎಫ್ ಅಧಿಕಾರಕ್ಕೆ ಬಂದಿದ್ದರೆ ಆ ರಾಜ್ಯದಲ್ಲಿ ರಕ್ತದ ಕಾಲುವೆ ಹರಿಯಿತೆಂದೇ ಅರ್ಥ. ಕಾರ್ಲ್ಮಾರ್ಕ್ಸ್ ಪ್ರತಿಪಾದಿಸಿದ ವರ್ಗರಹಿತಸಮಾಜ ಎಂದರೆ ಇದೇ ಆಗಿರಬಹುದೇನೋ! ತಮ್ಮ ತಾರುಣ್ಯದಲ್ಲಿ ಕಮ್ಯುನಿಸ್ಟ್ ಸಿದ್ಧಾಂತದ ಒಲವು ಹೊಂದಿದ್ದು, ಅನಂತರ ಅನುಭವ ಹೆಪ್ಪುಗಟ್ಟಿದಂತೆ ಕಮ್ಯುನಿಸ್ಟರ ನಿಜ ಬಣ್ಣ, ವಂಚನೆಯ ಅರಿವಾದ ಕೆ.ಪಿ. ಜೋಸೆಫ್ ಎಂಬ ಕೇಂದ್ರ ಸರ್ಕಾರದ ನಿವೃತ್ತ ಅಧಿಕಾರಿ ಈಚೆಗೆ ಮಲೆಯಾಳದಲ್ಲಿ ‘ಮಾರ್ಕ್ಸಿಸಾತಿಂತೆ ಕನಪ್ಪುರಂಗಲ್’ (ಮಾರ್ಕ್ಸಿಸಂನ ಕರಾಳ ಮುಖಗಳು) ಎಂಬ ಕೃತಿಯನ್ನು ರಚಿಸಿದ್ದಾರೆ. ಆ ಕೃತಿಯಲ್ಲಿರುವ ಪ್ರಬಂಧಗಳು ಮಾರ್ಕ್ಸಿಸ್ಟ್ ಸಿದ್ಧಾಂತದ ಗೋಮುಖ ವ್ಯಾಘ್ರನೀತಿಯನ್ನು ಎಳೆಎಳೆಯಾಗಿ ಅನಾವರಣಗೊಳಿಸಿದೆ.
ಕಮ್ಯುನಿಸ್ಟರಿಗೆ ಅಧಿಕಾರವೆಂಬುದು ತಮ್ಮ ವಿರೋಧಿಗಳನ್ನು ಬಗ್ಗುಬಡಿಯುವುದಕ್ಕಾಗಿ ಅಷ್ಟೇ ಹೊರತು ದೇಶದ ಅಭಿವೃದ್ಧಿಗಾಗಿ ಅಥವಾ ಜನಪರ ಕಲ್ಯಾಣಕ್ಕಾಗಿ ಖಂಡಿತ ಅಲ್ಲ. ಮೈತ್ರಿ ಇರಲಿ, ಇಲ್ಲದಿರಲಿ ಕಮ್ಯುನಿಸ್ಟರು ಅಧಿಕಾರಕ್ಕೇರಿದರೆ ಏನಾಗಬಹುದೆಂಬುದಕ್ಕೆ ಪಶ್ಚಿಮ ಬಂಗಾಳ ಹಾಗೂ ಕೇರಳದ ಕರಾಳ ಕಥೆಗಳೇ ಸಾಕ್ಷಿ. ಹೀಗಿದ್ದೂ ಈ ಬಾರಿಯ ಚುನಾವಣೆಯಲ್ಲಿ ಈ ರಾಜ್ಯಗಳ ಜನತೆ ಮತ್ತೆ ಕಾಮ್ರೇಡ್ಗಳಿಗೆ ಮತ ಹಾಕಿದರೆ ಅದು ಅವಿವೇಕದ ಪರಮಾವಧಿ. ಸಿಪಿಎಂ ಹಾಗೂ ಅದರ ಜೊತೆ ಅಧಿಕಾರಕ್ಕಾಗಿ ಕೈ ಜೋಡಿಸಿರುವ ಕಾಂಗ್ರೆಸ್ – ಇವೆರಡೂ ಪಕ್ಷಗಳು ಇದುವರೆಗೆ ಕಡಿದು ಕಟ್ಟೆಹಾಕಿರುವುದೇನು ಎಂಬುದು ರಹಸ್ಯವಲ್ಲ. ಜನರು ಇಂತಹ ಮೈತ್ರಿಕೂಟವನ್ನು ಎಷ್ಟು ದೂರವಿಟ್ಟರೆ ದೇಶಕ್ಕೆ ಅಷ್ಟೂ ಒಳ್ಳೆಯದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.