ಆತ ಮೂರನೇ ತರಗತಿಗೆ ಶಾಲೆ ಬಿಟ್ಟು ಹೊರ ಬಂದವ, ಆದರೆ ಐದು ಮಂದಿ ವಿದ್ವಾಂಸರು ಆತನ ಬಗ್ಗೆ ಪಿಎಚ್ಡಿ ಸಂಶೋಧನೆ ಮಾಡಿದ್ದಾರೆ. ಇತ್ತೀಚಿಗೆ ರಾಷ್ಟ್ರಪತಿಗಳು ಆತನಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ಕೆಲವೇ ವರ್ಷ ಶಾಲೆಯ ಮೆಟ್ಟಿಲು ಹತ್ತಿರುವ 66 ವರ್ಷದ ಒರಿಸ್ಸಾ ಮೂಲದ ಹಲ್ದಾರ್ ನಾಗ್ ಈಗ ಪ್ರಶಸ್ತಿ ವಿಜೇತ ಬರಹಗಾರ ಮತ್ತು ಕವಿ. ಆತನ ಬರವಣಿಗೆಗಳು ಸಂಶೋಧನೆಗೆ ಮೂಲವಸ್ತುವಾಗಿದೆ.
ಕೊಸ್ಲಿ ಭಾಷೆಯಲ್ಲಿ ತಾನು ಬರೆದ ಎಲ್ಲಾ 20 ಮಹಾಕಾವ್ಯಗಳನ್ನು, ಕವಿತೆಗಳನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಇವರಿಗಿದೆ. ಇದೀಗ ಸಂಬಲ್ಪುರ್ ಯೂನಿವರ್ಸಿಟಿ ಇವರ ಬರವಣಿಗೆಗಳನ್ನು ಒಗ್ಗೂಡಿಸಿ ತನ್ನ ವಿದ್ಯಾರ್ಥಿಗಳಿಗೆ ‘ಹಲ್ದಾರ್ ಗ್ರಂಥಬಲಿ-2’ ಎಂದು ಪಠ್ಯಕ್ರಮವನ್ನಾಗಿಸಲು ಮುಂದಾಗಿದೆ.
ಯಾವತ್ತೂ ಚಪ್ಪಲಿ ತೊಡದ ನಾಗ್ ಬಿಳಿ ಪಂಚೆ ಮತ್ತು ಕೋಟು ಹಾಕಿಕೊಂಡು ಇರುತ್ತಾರೆ. ಕೇಳಿದರೆ ಇದರಲ್ಲೇ ನನಗೆ ಆರಾಮ ಎನಿಸುತ್ತದೆ ಎನ್ನುತ್ತಾರೆ.
1950ರಲ್ಲಿ ಒರಿಸ್ಸಾದ ಬರ್ಗೃಹ್ ಜಿಲ್ಲೆಯಲ್ಲಿ ಜನಿಸಿದ ಇವರು ಮೂರನೇ ಕ್ಲಾಸ್ ತೊರೆದವರು, 10ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡು ಸಾಕಷ್ಟು ಕಷ್ಟಪಟ್ಟವರು. ಎರಡು ವರ್ಷ ಶಾಪ್ವೊಂದರಲ್ಲಿ ಪಾತ್ರೆ ತೊಳೆದರು, ಆದಾದ ಎರಡು ವರ್ಷದ ಬಳಿಕ ಹೈಸ್ಕೂಲ್ವೊಂದರಲ್ಲಿ ಪಾತ್ರೆ ತೊಳೆಯುವ ಕಾಯಕ ಶುರು ಮಾಡಿದರು. ವಿಧವೆಯ ಮಗನಾಗಿ ಜೀವನ ನಡೆಸುವುದು ಅತೀವ ಕಷ್ಟ ಎಂಬುದಾಗಿ ಇವರು ಆಗಾಗ ಹೇಳುತ್ತಿರುತ್ತಾರೆ.
ತಮ್ಮ ಊರಲ್ಲಿ ಹೆಚ್ಚು ಹೆಚ್ಚು ಶಾಲೆ ಆರಂಭಗೊಂಡ ತರುವಾಯ ಬ್ಯಾಂಕ್ನಿಂದ 1 ಸಾವಿರ ರೂಪಾಯಿ ಸಾಲ ಪಡೆದು ಶಾಲಾ ಮಕ್ಕಳಿಗಾಗಿ ಸ್ಟೇಶನರಿ ಮತ್ತು ತಿಂಡಿಯ ಅಂಗಡಿಯನ್ನು ಆರಂಭಿಸಿದರು. ಇದೇ ಕಾಯಕ ಮಾಡುತ್ತಿರುವ ವೇಳೆ 1990 ತಮ್ಮ ಮೊದಲ ಕೃತಿ ‘ಧೋಡೋ ಬರ್ಗಚ್’ (ಆಲದ ಮರ)ವನ್ನು ಬರೆದರು.
ಈ ಕೃತಿ ಸ್ಥಳೀಯ ಮ್ಯಾಗಜೀನ್ವೊಂದರಲ್ಲಿ ಪ್ರಕಟಗೊಂಡಿತು. ಬಳಿಕ ಆ ಮ್ಯಾಗಜೀನ್ಗೆ 4 ಕವಿತೆಗಳನ್ನು ಕಳುಹಿಸಿದರು, ಅವೆಲ್ಲವೂ ಪ್ರಕಟಗೊಂಡಿತು. ಅವರಿಗೆ ಸನ್ಮಾನವನ್ನೂ ಮಾಡಲಾಯಿತು, ಇದರಿಂದ ಪ್ರೇರಿತರಾಗಿ ಹೆಚ್ಚು ಹೆಚ್ಚು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ದೂರ ದೂರ ಪ್ರಯಾಣಿಸಿ ತಮ್ಮ ಕವಿತೆಗಳನ್ನು ವಾಚಿಸಿದರು. ಜನರಿಂದ ಉತ್ತಮ ಸ್ಪಂದನೆ ದೊರೆಯಿತು.
ಇದೀಗ ಅವರು ಒರಿಸ್ಸಾದ ಲೋಕ್ ಕಬಿ ರತ್ನಾ ಎಂದೇ ಕರೆಯಲ್ಪಡುತ್ತಾರೆ, ಇವರು ಪ್ರಕೃತಿ, ಸಮಾಜ, ಕಾಲ್ಪನಿಕ, ಧಾರ್ಮಿಕ ವಿಷಯದ ಮೇಲೆಯೇ ಹೆಚ್ಚಾಗಿ ಬರೆಯುತ್ತಾರೆ. ತನ್ನ ಬರವಣಿಗೆಯ ಮೂಲಕ ಸಾಮಾಜಿಕ ಸುಧಾರಣೆಯ ಕಾರ್ಯ ಮಾಡುತ್ತಾರೆ. ಅವರ ಪ್ರಕಾರ ಬರವಣಿಗೆ ನಿಜ ಜೀವನಕ್ಕೆ ಕನೆಕ್ಟ್ ಆಗಿರಬೇಕು ಮತ್ತು ಜನರಿಗೆ ಉತ್ತ ಸಂದೇಶವನ್ನು ನೀಡಬೇಕು. ಅದೆರಡೂ ಅವರ ಬರವಣಿಗೆಯಲ್ಲಿದೆ.
ಹಿಂದುಳಿದಿರುವ ಕೊಸ್ಲಿ ಭಾಷೆಯನ್ನು ಮೇಲೆತ್ತುವ, ಯುವಕರಿಗೆ ಮುಟ್ಟಿಸುವ ಪ್ರಯತ್ನವೂ ಇವರ ಬರವಣಿಗೆಯ ಹಿಂದಿದೆ ಎಂದರೆ ತಪ್ಪಾಗಲಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.