ಬೆಳ್ತಂಗಡಿ : ನೆರಿಯ ಗ್ರಾಮದ ಕಾಟಾಜೆಯಲ್ಲಿ ಭೂಮಾಲಿಕನ ದೌರ್ಜನ್ಯಕ್ಕೆ ಒಳಗಾದ ಮಲೆಕುಡಿಯ ಕುಟುಂಬಗಳಿಗೆ ಇನ್ನೂ ಜಮೀನಿನ ಹಕ್ಕು ಪತ್ರ ನೀಡದಿರುವ ಬಗ್ಗೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಬೆಳ್ತಂಗಡಿ ತಹಶೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಜಿಲ್ಲಾಧಿಕಾರಿ ಎ.ಬಿಇಬ್ರಾಹಿಂ ಅವರು ಗುರುವಾರ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲುಸ್ವೀಕರಿಸಿದರು. ಈ ಸಂದರ್ಭದಲ್ಲಿ ದಲಿತ ಹಕ್ಕುಗಳ ಹೋರಾಟ ಸಮಿತಿಯ ಮುಖಂಡ ಶೇಖರ ಎಲ್ ಹಾಗೂ ಸುಂದರ ಮಲೆಕುಡಿಯ ಅವರ ಪತ್ನಿ ರೇವತಿ ಅವರು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿ ತಮಗೆ ಇನ್ನೂ ಹಕ್ಕು ಪತ್ರ ನೀಡದಿರುವ ಬಗ್ಗೆ ಗಮನ ಸೆಳೆದರು. ಇಲ್ಲಿನ ಸುಮಾರು 22 ಮಲೆಕುಡಿಯ ಕುಟುಂಬಗಳು ಹಕ್ಕು ಪತ್ರಕ್ಕಾಗಿ ಅರ್ಜಿಗಳನ್ನು ಸಲ್ಲಿಸಿ ಕಾಯುತ್ತಿದ್ದರೂ ಇನ್ನೂ ಅವರಿಗೆ ಹಕ್ಕುಪತ್ರ ಸಿಗದಿರುವ ಬಗ್ಗೆ ಗಮನ ಸೆಳೆದರು. ಈ ಕಡತಗಳನ್ನು ತರಿಸಿ ಪರಿಶೀಲಿಸಿದ ಜಿಲ್ಲಾಧಿಕಾರಿಯವರು ಯಾವ ಕಾರಣಕ್ಕಾಗಿ ಇದನ್ನು ತಡೆ ಹಿಡಿಯಲಾಗಿದೆ ಕೂಡಲೆ ಇದನ್ನು ಸಮಿತಿಯ ಮುಂದೆ ಮಂಡಿಸಿ ಎಂದು ಸೂಚನೆ ನೀಡಿದರು. ಸಂಪೂರ್ಣ ಅಂಗವಿಕಲರಾಗಿರುವ ಸುಂದರ ಮಲೆಕುಡಿಯ ಅವರು ಯಾವುದೇ ಕೆಲಸಗಳನ್ನು ಮಾಡಲು ಅಸಹಾಯಕರಾಗಿದ್ದು ಅವರಿಗೆ ಅಂಗವಿಕಲ ವೇತನ ನೀಡುವ ಬಗ್ಗೆ ಪರಿಶೀಲಿಸುವಂತೆ ಅವರು ಸೂಚನೆ ನೀಡಿದರು.
ಕಂದಾಯ ಇಲಾಖೆಗೆ ಸಲ್ಲಿಕೆಯಾಗಿರುವ ಹಲವು ಅರ್ಜಿಗಳು ತಿಂಗಳುಗಳು ಕಳೆದರೂ ವಿಲೇ ಆಗದಿರುವ ಬಗ್ಗೆ ಹಲವರು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು. ಅದಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಅವರು ಇನ್ನು ಮುಂದೆ ಯಾವುದೇ ಕಾರಣಕ್ಕೂ ಅರ್ಜಿಗಳನ್ನು ಉಳಿಸಿಕೊಳ್ಳದಂತೆ ಸೂಚಿಸಿದರು. ನ್ಯಾಯಾಲಯಗಳ ಆದೇಶಗಳು ಬಂದು ತಿಂಗಳುಗಳೇ ಕಳೆದಿದ್ದರೂ ಅದನ್ನು ಕಂದಾಯ ಇಲಾಖೆಯವರು ಸರಿಯಾಗಿ ಅನುಷ್ಠಾನಕ್ಕೆ ತರದಿರುವ ಬಗ್ಗೆ ಬಂದ ದೂರುಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಯವರು ಇದಕ್ಕೆ ವಾರದಲ್ಲಿಯೇ ಪರಿಹಾರ ಹುಡುಕುವಂತೆ ಸೂಚಿಸಿದರು.
ನಿವೃತ್ತ ಸೈನಿಕ ಚಂದಪ್ಪ ಅವರ ಜಮೀನು ಸಮಸ್ಯೆ ಬಹುತೇಕ ಪರಿಹಾರ ಕಂಡಿದ್ದು ಅವರಿಗೆ ಮಂಜೂರರಾಗಿರುವ ಎರಡುಎಕ್ರೆ ಜಮೀನನ್ನು ಕೂಡಲೆ ಅವರ ಸ್ವಾಧಿನಕ್ಕೆ ನೀಡುವಂತೆ ತಹಸೀಲ್ದಾರರಿಗೆ ಸೂಚಿಸಲಾಯಿತು. ಸಾರ್ವಜನಿಕರಿಂದ ಬಂದ ವಿವಿಧ ಅರ್ಜಿಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಯವರು ಪರಿಹಾರಒದಗಿಸುವಂತೆ ಸೂಚಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.