ಬೆಳ್ತಂಗಡಿ : ಸ್ವಾವಲಂಬನೆಗೆ ಪೂರಕವಾಗುವ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದಲ್ಲಿ ಸಶಕ್ತೀಕರಣ ಸಾಧ್ಯ ಎಂದು ಧರ್ಮಸ್ಥಳದ ಎಸ್.ಕೆ.ಡಿ.ಆರ್.ಡಿ.ಪಿ ಕಾರ್ಯನಿರ್ವಾಹಕ ನಿರ್ದೇಕರಾದಡಾ. ಎಲ್.ಹೆಚ್. ಮಂಜುನಾಥ್ ಅಭಿಪ್ರಾಯಪಟ್ಟರು.
ಉಜಿರೆಯ ಎಸ್.ಡಿ.ಎಂ ಕಾಲೇಜಿನ ಸಮ್ಯಕ್ದರ್ಶನ ಸಭಾಂಗಣದಲ್ಲಿ ರುಡ್ಸೆಟ್, ಎಸ್.ಕೆ.ಡಿ.ಆರ್.ಡಿ.ಪಿ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಸಂಘದ ಸಂಯುಕ್ತ ಆಶ್ರಯದಲ್ಲಿ `ವಿತ್ತೀಯ ಸೇರ್ಪಡೆ ಹಾಗು ಸಬಲೀಕರಣದಲ್ಲಿ ವ್ಯವಹಾರ ಪ್ರತಿನಿಧಿಯ ಪಾತ್ರ’ ಕುರಿತು ಬುಧವಾರ ಜರುಗಿದ ಯು.ಜಿ.ಸಿ.ಪ್ರಾಯೋಜಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದುರ್ಬಲ ವಲಯದಲ್ಲಿ ಮಹಿಳೆಯರೂ ಇದ್ದಾರೆ. ಅಸಮಾನತೆಯ ನೋವುಗಳ ಜತೆಗೇಜೀವಿಸುತ್ತಿದ್ದಾರೆ. ಇಂಥ ಅಸಮಾನತೆಯನ್ನು ಹೋಗಲಾಡಿಸಲು ಮಹಿಳೆಗೆ ಹಣದ ಶಕ್ತಿಯನ್ನು ನೀಡಬೇಕು. ಇದೇಆರ್ಥಿಕ ಒಳಗೊಳ್ಳುವಿಕೆ. ಇದೇ ದುರ್ಬಲರ ಸಶಕ್ತೀಕರಣ. ಇದಕ್ಕಾಗಿ ಸ್ವಉದ್ಯೋಗವನ್ನು ಸೃಷ್ಟಿಸಬೇಕು. ಸಣ್ಣ ಉಳಿತಾಯದ ಕಡೆಗೆ ಜನಮನವನ್ನು ಒಪ್ಪಿಸಬೇಕು. ಈ ಹಾದಿಯಲ್ಲಿ ಎಸ್.ಕೆ.ಡಿ.ಆರ್.ಡಿ.ಪಿ. ಕಾರ್ಯನಿರ್ವಹಿಸುತ್ತಿದೆ ಎಂದರು.
ಮಹಿಳೆಯ ಸ್ಥಿತಿ ಹೀನಾಯವಾಗಿದೆ. ಮಹಿಳೆ ಸದಾ ಇನ್ನೊಬ್ಬರ ಹಿಡಿತದಲ್ಲಿಯೇ ಬದುಕುವ ಸ್ಥಿತಿ ಈಗಲೂ ಇದೆ. ನಾಲ್ಕು ಗೋಡೆಗಳ ನಡುವೆ ಅಡುಗೆ ಮನೆಯಲ್ಲಿಯೇ ಬದುಕು ಸವೆಸುವಂತಾಗಿದೆ. ಅಡುಗೆ ಮಾಡುವುದು ಆಕೆಯ ಕೆಲಸವಾದರೆ, ಗಂಡಸರದು ತರಕಾರಿತರುವ ಕೆಲಸವಾಗಿದೆ. ಬಟ್ಟೆ ತೊಳೆಯುವುದು ಮಹಿಳೆಯದಾದರೆ, ಖರೀದಿಸುವುದು ಮಾತ್ರ ಗಂಡಸರು. ಮಹಿಳೆ ಮಕ್ಕಳನ್ನು ಬೆಳೆಸಿದರೆ, ಅವರ ಭವಿಷ್ಯದ ಬಗ್ಗೆ ನಿರ್ಧರಿಸುವುದು ಗಂಡಸರು. ಒಂದು ವೇಳೆ ಮಹಿಳೆಯು ಮನೆಯಿಂದ ಹೊರಬಂದು ದುಡಿದರೂ, ಮಾರುಕಟ್ಟೆ ವ್ಯವಹಾರವೆಲ್ಲ ಪುರುಷರ ಹಿಡಿತದಲ್ಲೇಇರುತ್ತದೆ. ಈ ಬಗೆಯ ಅಸಮಾನತೆ ಸಮಂಜಸವಲ್ಲ ಎಂದು ಮಂಜುನಾಥ್ ಪ್ರತಿಪಾದಿಸಿದರು.
ಬ್ಯಾಂಕುಗಳಿಂದ ಸಾಲ ಪಡೆಯುವಾಗ ಇರುವ ಉತ್ಸಾಹ ಹಿಂತಿರುಗಿಸ ಬೇಕಾದಾಗ ಇರುವುದಿಲ್ಲ. ವಿಜಯ ಮಲ್ಯರಂಥವರು ಸಾಲ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಯಾಕೆಂದರೆ ಅಂಥವರು ಬ್ಯಾಂಕುಗಳೊಂದಿಗೆ ವ್ಯವಹರಿಸುವಾಗ ಬೆಲೆಬಾಳುವ ಕಾರಿನಲ್ಲಿ ಹೋಗಿರುತ್ತಾರೆ. ಬೆಲೆಬಾಳುವ ಬಟ್ಟೆತೊಟ್ಟಿರುತ್ತಾರೆ. ಸೊಗಸಾಗಿ ಮಾತನಾಡುತ್ತಾರೆ. ಆದರೆ ಬಡವರು ಬ್ಯಾಂಕಿನ ವ್ಯವಸ್ಥಾಪಕರೊಂದಿಗೆ ಮಾತನಾಡಲು ಹೆದರುತ್ತಾರೆ. ಕೈ ಕಟ್ಟಿ ನಿಲ್ಲುತ್ತಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಅವರು, “ಶ್ರೀಮಂತರು ಒಮ್ಮೆಲೇ ಹಲವು ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋದರೆ, ಬಡವರು ಬಿಡಿ ಬಿಡಿಯಾಗಿ ವಸ್ತುಗಳನ್ನು ಕೊಳ್ಳಲು ಹೋಗುತ್ತಾರೆ. ಇದು ನಮ್ಮಅರ್ಥವ್ಯವಸ್ಥೆಯ ಸ್ಥಿತಿಯನ್ನು ತಿಳಿಸುತ್ತದೆ’ ಎಂದರು.
ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಡಾ. ರವೀಂದ್ರ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಡಾ. ಪ್ರಶಾಂತ್, ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಪರಮೇಶ್ವರ, ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಉದಯಚಂದ್ರ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರ್ದೇಶಕರಾದ ಡಾ.ಎ. ಜಯಕುಮಾರ್ ಶೆಟ್ಟಿ ಸ್ವಾಗತಿಸಿದರು. ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಾಲಕೃಷ್ಣ ಪಿ.ಕೆ ವಂದಿಸಿದರು. ಮಡಂತ್ಯಾರಿನ ಸಿಕ್ರೇಡ್ ಆರ್ಟ್ ಹಾರ್ಟ್ ಕಾಲೇಜು ಪ್ರಾಧ್ಯಾಪಕ ಪ್ರೊ.ಜೋಸೆಫ್ ಕಾರ್ಯಕ್ರಮದ ನಿರೂಪಣೆ ಮಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.