ಬೆಳ್ತಂಗಡಿ : ಜನರ ತೀವ್ರ ವಿರೋಧವಿದ್ದರೂ ಜನವಸತಿಯ ನಡುವೆಯೇ ತ್ಯಾಜ್ಯ ಘಟಕದ ನಿರ್ಮಾಣ ಮಾಡುತ್ತಿರುವುದು ಮುಂಡಾಜೆ. ಪಂಚಾಯತ್ನ ಉದ್ದಟತನವನ್ನು ತೋರಿಸುತ್ತದೆ. ವಿರೋಧದ ನಡುವೆಯೂ ಘಟಕದ ನಿರ್ಮಾಣಕ್ಕೆ ಮುಂದಾದಲ್ಲಿ ಅದನ್ನು ತಡೆಯುವಲ್ಲಿ ಸರ್ವ ಪ್ರಯತ್ನ ಮಾಡಲಾಗುವುದು ಎಂದು ಕುರುಡ್ಯ, ಕುಳೂರು, ಕಾನರ್ಪ ನಾಗರಿಕರ ಪರವಾಗಿ ಸತ್ಯನಾರಾಯಣ ಹೊಳ್ಳ ಎಚ್ಚರಿಸಿದ್ದಾರೆ.
ಅವರು ಬುಧವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತ್ಯಾಜ್ಯ ಘಟಕದಿಂದಾಗುವ ತೊಂದರೆಯ ಬಗ್ಗೆ ಆಕ್ರೋಶಭರಿತರಾಗಿ ವಿವರಿಸಿದರು. ಮುಂಡಾಜೆ ಗ್ರಾಮ ಪಂಚಾಯತಿಯವರು ಕುರುಡ್ಯ-ಕೂಳುರು ಎಂಬ ಪ್ರದೇಶದಲ್ಲಿ ಕಳೆದ ವರ್ಷದಿಂದೀಚೆಗೆ ರೂ. 20 ಲಕ್ಷ ವೆಚ್ಚದಲ್ಲಿ ತ್ಯಾಜ್ಯ ಘಟಕವನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ. ಇಲ್ಲಿ 2 ಬಸ್ ತಂಗುದಾಣಗಳಿದ್ದು ಸುತ್ತಮುತ್ತ ಸುಮಾರು 60 ಮನೆಗಳಿವೆ. ಇಲ್ಲಿ ಘಟಕ ಸ್ಥಾಪಿಸುವುದು ಸರಿಯಲ್ಲವೆಂದು ವಾರ್ಡ್ ಸಭೆಯಲ್ಲೂ, ಪಂಚಾಯತ್ ಕಚೇರಿಗೂ ಮನವಿ ನೀಡಿದ್ದಲ್ಲದೆ ಜನವಸತಿ ಇಲ್ಲದ ನಿಡಿಗಲ್ ಎಂಬಲ್ಲಿ ನಿರ್ಮಿಸಲು ಕೋರಲಾಗಿತ್ತು.
ಅಲ್ಲದೆ ದುರ್ವಾಸನೆ ಬೀರದ ಘಟಕ ಎಲ್ಲಿಯಾದರೂ ಇದ್ದರೆ ತೋರಿಸಿ ಎಂದು ಪಂಚಾಯತ್ ಆಡಳಿತವನ್ನು ಕೇಳಿದರೂ ಅವರು ತೋರಿಸಿಲ್ಲ. ಶಾಸಕರೂ ಈ ಬಗ್ಗೆ ಪಂ.ಗೆ ಸೂಚಿಸಿದ್ದರು. ಹೀಗಿದ್ದರೂ ಯಾರದೋ ಹಿತಾಸಕ್ತಿಗಾಗಿ, ಹಟ ಹಿಡಿದು ಜನವಸತಿ ಇರುವಲ್ಲಿಯೇ ನಿರ್ಮಿಸುವತ್ತ ಪಂಚಾಯತ್ ಆಡಳಿತ ಹೊರಟಿದೆ. ಘಟಕದಿಂದಾಗಿ ಸುತ್ತಮುತ್ತಲಿನ ಜನರು ವಲಸೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದು ನಿಶ್ಚಿತ. ಹೀಗಾಗಿ ನಾವು ಅದನ್ನು ತೀವ್ರವಾಗಿ ವಿರೋಧಿಸುತ್ತೇವೆ.
ಅಧಿಕಾರವಿದೆಯೆಂದು ಜನವಿರೋಧಿಯಾಗಿ ವರ್ತಿಸುವುದು ಸರಿಯಲ್ಲ. ಘಟಕ ನಿರ್ಮಿಸಲು ಹೊರಟಲ್ಲಿ ಪರಿಸರದ ಜನಸೇರಿ ಅದನ್ನು ತಡೆಯುವುದು ನಿಶ್ಚಿತ ಎಂದರು.
ಗೋಷ್ಠಿಯಲ್ಲಿ ಕೆ. ಮಹಮ್ಮದ್, ಸುಂದರ ನಾಯ್ಕ, ಹೊನ್ನಪ್ಪ ನಾಯ್ಕ, ಬಾಲಕೃಷ್ಣ ಶೆಟ್ಟಿ, ಮಾಧವ ಭಟ್ ಕೆ. ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.