ಪುತ್ತೂರು: ನಮ್ಮ ದೇಶದಲ್ಲಿ ಆರ್ಥಿಕ ಬೆಳವಣಿಗೆಯು ವೇಗವಾಗಿ ನಡೆಯತ್ತಿದ್ದರೂ, ದೂರದರ್ಶಿತ್ವ ಮತ್ತು ನ್ಯಾಯೋಚಿತವಾದ ಬೆಳವಣಿಗೆಯ ನಿರ್ವಹಣೆ ಕುರಿತು ಗಮನಹರಿಸುವ ಅಗತ್ಯವಿದೆ ಎಂದು ಮಂಗಳೂರಿನ ಸಂತ ಅಲೋಶಿಯಸ್ ಸಂಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ| ವಿ. ಬಿ. ಹಾನ್ಸ್ ಹೇಳಿದರು.
ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಅರ್ಥಶಾಸ್ತ್ರ ವಿಭಾಗದ ಯೋಜನಾ ವೇದಿಕೆಯ ಆಶ್ರಯದಲ್ಲಿ ’ಭಾರತದಲ್ಲಿ ಆರ್ಥಿಕ ಬೆಳವಣಿಗೆಯ ನಿರ್ವಹಣೆ’ ಎಂಬ ವಿಷಯದ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಭಾರತವು ಬಿಕ್ಕಟ್ಟು ಮುಕ್ತ ರಾಷ್ಟ್ರವಲ್ಲ. ಉತ್ಪಾದನಾ ರಂಗದಲ್ಲಿ ನಿಧಾನಗತಿಯ ಬೆಳವಣಿಗೆ, ಮೂಲ ಸೌಕರ್ಯದಲ್ಲಿ ನಿರಾಸೆಯ ಪರಿಸ್ಥಿತಿ, ಆಡಳಿತದಲ್ಲಿ ಭ್ರಷ್ಟಾಚಾರ, ರಫ್ತು ಕ್ಷೇತ್ರದಲ್ಲಿ ಮಂದ ಗತಿಯ ಬೆಳವಣಿಗೆ, ನಗರೀಕರಣದ ಅನಿಯಂತ್ರಿತ ಬೆಳವಣಿಗೆ, ಕಪ್ಪು ಹಣ, ವಿಪರೀತ ವಿದೇಶಿ ಸಾಲ ಇತ್ಯಾದಿಗಳನ್ನು ಹತೋಟಿಯಲ್ಲಿಡಬೇಕಾದ ಅನಿವಾರ್ಯತೆಯಿದೆ. ದಾರ್ಶನಿಕ ಮತ್ತು ನೈತಿಕ ನಾಯಕತ್ವದ ಮೂಲಕ ದೇಶದ ಅರ್ಥವ್ಯವಸ್ಥೆಯಲ್ಲಿ ಪರಿಪೂರ್ಣತೆಯನ್ನು ಸಾಧಿಸಬಹುದು ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿರುವ ರೆ| ಡಾ| ಆಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ದೇಶದ ಆರ್ಥಿಕ ನೀತಿಗಳನ್ನು ರೂಪಿಸುವ ಸಂದರ್ಭದಲ್ಲಿ ಪ್ರತಿಯೊಬ್ಬ ಪ್ರಜೆಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಬೇಕು. ಮಾನವ ಸಂಪನ್ಮೂಲದ ಸಮರ್ಪಕ ಬಳಕೆಯಾದಾಗ ವ್ಯಕ್ತಿ ಮತ್ತು ರಾಷ್ಟ್ರದ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಭಾಗದ ಸಂಯೋಜಕರಾದ ಪ್ರೊ. ದಿನಕರ ರಾವ್ ಮತ್ತು ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಪ್ರದೀಪ್ ಕೆ. ಎಸ್. ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸೌಮ್ಯ ಪ್ರಾರ್ಥಿಸಿ, ಛಾಯಾ ಸ್ವಾಗತಿಸಿದರು. ಗಿರೀಶ್ ಅತಿಥಿಗಳನ್ನು ಪರಿಚಯಿಸಿ, ಗೀತಾ ಭಟ್ ವಂದಿಸಿದರು. ಭರತ್ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.