ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನ ವನದ ಒಳಗಿರುವ ಜಮೀನಿನ ದಾಖಲೆಗಳಿಲ್ಲದ ಕುಟುಂಬಗಳನ್ನು ಗುರುತಿಸಿ ಅವರ ವಿರುದ್ಧ ಅತಿಕ್ರಮಣಕಾರರೆಂದು ಪ್ರಕರಣ ದಾಖಲಿಸಿ ಯಾವುದೇ ಪರಿಹಾರ ನೀಡದೆ ಹೊರತಳ್ಳುವ ಪ್ರಯತ್ನ ಮತ್ತೆ ಪ್ರಾರಂಭವಾಗಿರವುದು ಅಲ್ಲಿನ ನಿವಾಸಿಗಳ ನಿದ್ದೆಗೆಡಿಸಿದೆ.
ರಾಷ್ಟ್ರೀಯ ಉದ್ಯಾನವನದ ಒಳಗೆ ನೆಲೆಸಿರುವ ಮೂಲ ನಿವಾಸಿಗಳಲ್ಲದ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ ಮತ್ತೆ ಚುರುಕುಗೊಂಡಿದೆ. ಕುದುರೆಮುಖ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರು ನ್ಯಾಯಾಲಯದ ಆದೇಶದಂತೆ ವಾರದೊಳಗೆ ಜಮೀನನ್ನು ಬಿಟ್ಟುಕೊಡುವಂತೆ, ಇಲ್ಲವಾದಲ್ಲಿ ಬಲವಂತದಿಂದ ಒಕ್ಕಲೆಬ್ಬಿಸುವುದಾಗಿ ಮಲವಂತಿಗೆ ಗ್ರಾಮ ಪಂಚಾಯತ್ನ ಹಲವು ಕುಟುಂಬಗಳಿಗೆ ಈಗಾಗಲೇ ಅಂತಿಮ ನೋಟೀಸ್ ನೀಡಲಾಗಿದೆ.
ರಾಷ್ಟ್ರೀಯ ಉದ್ಯಾನವನ ಘೋಷಣೆಯಾದಾಗಲೇ ಈ ಒಕ್ಕಲೆಬ್ಬಿಸುವಿಕೆಯ ಪ್ರಕ್ರಿಯೆಗೆ ಇಲಾಖೆ ಮುಂದಾಗಿತ್ತು. ಆದರೆ ಈ ವೇಳೆಗೆ ನಕ್ಸಲ್ ಸಮಸ್ಯೆ ತೀವ್ರವಾಗಿದ್ದ ಹಿನ್ನಲೆಯಲ್ಲಿ ಸ್ಧಗಿತಗೊಂಡಿದ್ದ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಇದೀಗ ಮತ್ತೆ ಚಾಲನೆ ದೊರೆತಂತಾಗಿದೆ. ನೊಟೀಸ್ ಪಡೆದಿರುವ ಕುಟುಂಬಗಳು ಕಂಗಾಲಾಗಿದ್ದು, ತಮ್ಮ ಜಮೀನನ್ನು ಕಳೆದುಕೊಂಡರೆ ಎಲ್ಲಿಗೆ ಹೋಗಬೇಕು ಎಂದು ತಿಳಿಯದೆ ಅತಂತ್ರ ಸ್ಧಿತಿಯಲ್ಲಿದ್ದಾರೆ.
ಲಭ್ಯ ಮಾಹಿತಿಯಂತೆ ಬೆಳ್ತಂಗಡಿ ತಾಲೂಕಿನಲ್ಲಿ ರಾಷ್ಟ್ರೀಯ ಉದ್ಯಾನ ವನದ ಒಳಗೆ ಮಲವಂತಿಗೆ ಗ್ರಾಮ ಪಂಚಯತ್ ವ್ಯಾಪ್ತಿಯಲ್ಲಿನ ೧೫ ಕುಟುಂಬಗಳು 3 ಎಕರೆಗಿಂತ ಹೆಚ್ಚು ಜಮೀನು ಹೊಂದಿದ್ದು, ಮೊದಲ ಹಂತದಲ್ಲಿ ಇವರನ್ನು ಒಕ್ಕಲೆಬ್ಬಿಸಲು ಮುಂದಾಗಿದೆ. ಉಳಿದಂತೆ ಇದೇ ಗ್ರಾಮದಲ್ಲಿ 22 ಕುಟುಂಬಗಳು 3 ಎಕರೆಗಿಂತ ಕಡಿಮೆ ದಾಖಲೆಯಿಲ್ಲದ ಜಮೀನು ಹೊಂದಿದ್ದು ಎರಡನೆಯ ಹಂತದಲ್ಲಿ ಇವರನ್ನು ಒಕ್ಕಲೆಬ್ಬಿಸುವ ಉದ್ದೇಶವನ್ನು ಇಲಾಖೆ ಹೊಂದಿದೆ. ಈಗಾಗಲೇ ಆರು ಕುಟುಂಬಗಳು ತಮ್ಮ ಬಳಿ ಇದ್ದ ದಾಖಲೆಯಿಲ್ಲದ ಜಾಗ ತೆರವುಗೊಳಿಸಿದ್ದಾರೆ. ಈ ಕುಟುಂಬಗಳು ಪಟ್ಟಾ ಜಮೀನು ಹೊಂದಿದ್ದರು ಅತಿಕ್ರಮಣದ ಜಮೀನೂ ಹೊಂದಿದ್ದರು. ಇವರು ತಮ್ಮ ಬಳಿ ಇದ್ದ ದಾಖಲೆಯಿಲ್ಲದ ಜಮೀನನ್ನು ಅರಣ್ಯ ಇಲಾಖೆಗೆ ಹಿಂತಿರುಗಿಸಿದ್ದಾರೆ.
ಆದರೆ ಇದೀಗ ಉಳಿದ ಕುಟುಂಬಗಳ ಸ್ಧಿತಿ ಹಾಗಲ್ಲ. ಇವರಿಗೆ ಇರುವುದು ಕೇವಲ ಈ ಜಮೀನು ಮಾತ್ರವಾಗಿದೆ. ದಶಕಗಳಿಂದ ಈ ಜಮೀನನ್ನೇ ನಂಬಿ ಬದುಕನ್ನು ನಡೆಸುತ್ತಾ ಬಂದಿದ್ದಾರೆ. ಇದೀಗ ಏಕಾ ಏಕಿ ತಮ್ಮ ಜಮೀನುಗಳನ್ನು ಬಿಟ್ಟುಕೊಟ್ಟರೆ ತಾವೇನು ಮಾಡುವುದು ಎಂಬ ಪ್ರಶ್ನೆಯನ್ನು ಮುಂದಿಡುತ್ತಿದ್ದಾರೆ ಈ ಕುಟುಂಬಗಳು. ಜಮೀನಿನ ದಾಖಲೆ ಪತ್ರಗಳಿಲ್ಲದ ಕುಟುಂಬಗಳಿಗೆ ಯಾವುದೇ ಪರಿಹಾರವನ್ನು ನೀಡಲು ಸಾಧ್ಯವಿಲ್ಲ ಎಂಬ ನಿಲುವನ್ನು ವನ್ಯಜೀವಿ ವಿಭಾಗದವರು ತೆಗೆದುಕೊಂಡಿದ್ದು, ಇವರು ಸಂಸಾರದೊಂದಿಗೆ ಬೀದಿಗೆ ಬೀಳಬೇಕಾದ ಸ್ದಿತಿ ಕಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.