ಬೆಳ್ತಂಗಡಿ : ತಾಲೂಕಿನ ಜನರ ಬಹುದಿನಗಳ ಬೇಡಿಕೆಯಾದ ಧರ್ಮಸ್ಥಳ ಪೊಲೀಸ್ ಠಾಣೆಗೆ ಸರಕಾರದ ಅಂತಿಮ ಅನುಮೋದನೆ ದೊರೆತಿದ್ದು, ಮಾ. 14 ರಂದು ಧರ್ಮಸ್ಥಳ ಪೊಲೀಸ್ ಠಾಣೆಯ ಭಾಗ್ಯ ಬಂದಿದೆ. ರಾಜ್ಯ ಗೃಹ ಸಚಿವ ಡಾ| ಜಿ. ಪರಮೇಶ್ವರ ಅವರು ನೂತನ ಠಾಣೆಯ ಕಾರ್ಯಕ್ಕೆ ಧರ್ಮಸ್ಥಳ ಗ್ರಾ.ಪಂ.ನ ಕಟ್ಟಡದಲ್ಲಿ ಚಾಲನೆ ನೀಡಲಿದ್ದಾರೆ.
ಬೆಳಿಗ್ಗೆ 10 ಗಂಟೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಗೌರವ ಉಪಸ್ಥಿತಿಯಲ್ಲಿ ಶಾಸಕ ಕೆ. ವಸಂತ ಬಂಗೇರ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನೆರವೇರಲಿದೆ. ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಆರೋಗ್ಯ ಸಚಿವ ಯು. ಟಿ. ಖಾದರ್, ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್, ಸಂಸದ ನಳೀನ್ ಕುಮಾರ್ ಕಟೀಲು, ಐಜಿಪಿ ಓಂ ಪ್ರಕಾಶ್, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ.ವಿದ್ಯಾ ಹಾಗೂ ಜಿ.ಪಂ, ತಾ.ಪಂ. ಸದಸ್ಯರುಗಳು ಉಪಸ್ಥಿತರಿರುತ್ತಾರೆ.
ಸರಕಾರದ ಅನುಮೋದನೆ ಸಿಕ್ಕಿದ ಬಳಿಕ ನೂತನ ಠಾಣೆಗೆ ಹಲವು ಬಾರಿ ಉದ್ಘಾಟನೆಗೆ ದಿನ ನಿಗದಿಯಾಗಿತ್ತು. ಒಂದಲ್ಲ ಒಂದು ನೆಪದಿಂದ ದಿನಾಂಕವನ್ನು ಮುಂದೂಡಲಾಗಿತ್ತು. ಇದೀಗ ಕೊನೆಗೂ ದಿನ ನಿಗದಿ ಪಡಿಸಲಾಗಿದ್ದು ಜನರ ಬೇಡಿಕೆ ಈಡೇರಲಿದೆ. ಹೊಸ ಠಾಣೆಗೆ ಬೆಳ್ತಂಗಡಿ ಪೋಲೀಸ್ ಠಾಣಾ ವ್ಯಾಪ್ತಿಯ ೯ ಗ್ರಾಮಗಳು ಹಾಗು ಉಪ್ಪಿನಂಗಡಿ ಪೋಲೀಸ್ ಠಾಣಾ ವ್ಯಾಪ್ತಿಯ ೯ ಗ್ರಾಮಗಳು ವ್ಯಾಪ್ತಿಗೆ ಬರಲಿವೆ. ಪಶ್ಚಿಮ ವಲಯದಲ್ಲಿಯೆ ಅತಿ ಹೆಚ್ಚು ಪ್ರಕರಣಗಳು ದಾಖಲಾಗುವ ಠಾಣೆ ಎಂಬ ಕೀರ್ತಿ ಪಡೆದಿದ್ದ ಬೆಳಂಗಡಿ ಪೋಲೀಸ್ ಠಾಣೆಯನ್ನು ಇದೀಗ ವಿಭಜಿಸಲಾಗಿದ್ದು ಧರ್ಮಸ್ಧಳ ಕೇಂದ್ರವಾಗಿಸಿ ಠಾಣೆ ಆರಂಭಗೂಳ್ಳಲಿದೆ.
ಧರ್ಮಸ್ಧಳ ಕೇಂದ್ರವಾಗಿ ಆರಂಭ ಗೊಳ್ಳಲಿರುವ ನೂತನ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಧರ್ಮಸ್ಧಳ, ಪುದುವೆಟ್ಟು , ಬೆಳಾಲು, ನೆರಿಯ, ಚಿಬಿದ್ರೆ, ಚಾರ್ಮಾಡಿ, ತೋಡತ್ತಾಡಿ, ಮುಂಡಾಜೆ, ಹಾಗು ಕಲ್ಮಂಜ ಗ್ರಾಮಗಳನ್ನು ಹಾಗು ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ನಿಡ್ಲೆ, ಕಳೆಂಜ, ಪಟ್ರಮೆ, ಕೊಕ್ಕಡ, ಶಿಶಿಲ, ಶಿಬಾಜೆ, ಹತ್ಯಡ್ಕ, ರೆಖ್ಯ ಹಾಗೂ ಬಂದಾರು ಗ್ರಾಮಗಳು ಸೇರಲ್ಪಡುತ್ತದೆ. ಚಾರ್ಮಾಡಿ ಘಾಟ್ ರಸ್ತೆ ಹಾಗು ಶಿರಾಡಿ ಘಾಟ್ ರಸ್ತೆಯ ನಡುವಿನ ವಿಶಾಲವಾದ ಪ್ರದೇಶಗಳು ಇದರ ವ್ಯಾಪ್ತಿಗೆ ಬರಲಿದೆ. ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಗಡಿಯ ವರೆಗೆ ವಿಸ್ತರಿಸಿಕೊಂಡಿದೆ. ಹೊಸ ಠಾಣೆಯ ಭೌಗೋಳಿಕ ವ್ಯಾಪ್ತಿ ತುಂಬ ವಿಸ್ತಾರವಾಗಿದ್ದು ಹಲವಾರು ಕುಗ್ರಾಮಗಳನ್ನು ಹೊಂದಿದೆ.
ಸಿಬ್ಬಂದಿಗಳು : ನೂತನ ಧರ್ಮಸ್ಥಳ ಠಾಣೆಗೆ ಓರ್ವ ಎಸ್ಐ, ಇಬ್ಬರು ಎಎಸ್ಐ, 7 ಮಂದಿ ಹೆಚ್ಸಿ, 21 ಮಂದಿ ಪಿಸಿ ಗಳು, 2 ಮಂದಿ ಮಹಿಳಾ ಪಿಸಿ ಗಳು ಸೇರಿದಂತೆ 33 ಹುದ್ದೆಗಳನ್ನು ಮಂಜೂರುಗೊಳಿಸಿ ಹಣಕಾಸು ಇಲಾಖೆ ಅಧಿಸೂಚನೆ ಹೊರಡಿಸಿದೆ. ಈಗಾಗಲೆ ಹೊಸ ಠಾಣೆಗೆ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಜಿಲ್ಲೆಯಲ್ಲಿಯೇ ಸಿಬಂದಿಗಳ ಕೊರತೆ ಇದೆ. ಹೊಸ ಠಾಣೆಗೆ ಸಿಬಂದಿಗಳ ನೇಮಕ ಆದಲ್ಲಿ ಮಾತ್ರ ಹೊರೆ ಕಡಿಮೆಯಾಗಬಹುದು. ಹೊಸ ಠಾಣೆಯನ್ನು ತಾತ್ಕಾಲಿಕವಾಗಿ ಧರ್ಮಸ್ಥಳ ಗ್ರಾಮ ಪಂಚಾಯತಿನ ಕಟ್ಟಡದಲ್ಲಿ ಆರಂಭಿಸಲು ಉದ್ದೇಶಿಸಲಾಗಿದ್ದು ಕಟ್ಟಡವನ್ನು ಅದಕ್ಕೆ ಸಿದ್ದಗೊಳಿಸಲಾಗಿದೆ. ಹೊಸ ಠಾಣೆಗೆ ಜಾಗ ಗುರುತಿಸುವ ಕಾರ್ಯವನ್ನೂ ಮಾಡಲಾಗಿದೆ.
ಚಾರ್ಮಾಡಿ ಹಾಗೂ ಕೊಕ್ಕಡದಲ್ಲಿ ಹೊರಠಾಣೆಗೆ ಬೇಡಿಕೆ : ಧರ್ಮಸ್ಧಳದಲ್ಲಿ ಹೊಸ ಪೋಲೀಸ್ ಠಾಣೆ ಆರಂಭ ಆಗುವುದರೊಂದಿಗೆ ಚಾರ್ಮಾಡಿ ಹಾಗೂ ಕೊಕ್ಕಡದಲ್ಲಿ ಹೊರ ಠಾಣೆಗೆ ಜನರ ಬೇಡಿಕೆ ಇದೆ. ಈಗಾಗಲೇ ಚಾರ್ಮಾಡಿಯಲ್ಲಿ ಇರುವ ಪೋಲೀಸ್ ಚೆಕ್ ಪೋಸ್ಟ್ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.