ಬೆಳ್ತಂಗಡಿ : ಕಳೆದ ಮಂಗಳವಾರ ತುಮಕೂರು ಜಿಲ್ಲೆಯ ಹೆತ್ತೇನಹಳ್ಳಿಯ ಶ್ರೀ ಆದಿಶಕ್ತಿ ಮಾರಮ್ಮ ಜಾತ್ರೆಯಲ್ಲಿ ಅಗ್ನಿಕುಂಡ ಹಾಯುವಾಗ ಗಾಯಗೊಂಡ ಭಕ್ತರಿಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ತುರ್ತು ಪರಿಹಾರ ಪ್ರಕಟಿಸಿದ್ದಾರೆ.ಈ ಸಂಬಂಧ ತುಮಕೂರು ಜಿಲ್ಲಾ ನಿರ್ದೇಶಕರಾದ ಗಂಗಾಧರ್ ರೈಯವರು ಸಲ್ಲಿಸಿದ ಪ್ರಾಥಮಿಕ ವರದಿಯನ್ನು ಆಧರಿಸಿ ಗಾಯಗೊಂಡ ಅರುವತ್ತೊಂದು ಮಂದಿ ಗಾಯಾಳುಗಳಿಗೆ ತುರ್ತಾಗಿ ತಲಾ ರೂ. 4,000/-ದಂತೆ ವಿತರಿಸಲು ಡಾ|ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಗೆ ಸೂಚಿಸಿದ್ದಾರೆ.
ಅದರಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಂಗಳೂರು ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣರವರು ಇಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ, 49 ಮಂದಿ ಗಾಯಾಳುಗಳನ್ನು ಮಾತನಾಡಿಸಿ, ಸಾಂತ್ವನ ಹೇಳಿದರು. ಇವರು ಕ್ಷೇತ್ರದ ಪರವಾಗಿ ಶೀಘ್ರ ಗುಣಮುಖರಾಗುವಂತೆ ಗಾಯಾಳುಗಳಿಗೆ ಹಾರೈಸಿದರು. ಧರ್ಮಾಧಿಕಾರಿಗಳ ಆದೇಶದಂತೆ ಸ್ಥಳದಲ್ಲಿಯೇ ಸಹಾಯಧನ ವಿತರಣೆಯನ್ನು ಮಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟಗಳ ಪದಾಧಿಕಾರಿಗಳು, ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರು ಮತ್ತಿತರ ಗಣ್ಯರು ಈ ಸಂದರ್ಭ ಹಾಜರಿದ್ದರು.
ಇನ್ನು ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿರುವ 12 ಮಂದಿ ಗಾಯಾಳುಗಳನ್ನು ಇದೇ ಸಂದರ್ಭ ಸಂದರ್ಶಿಸಿದ ತುಮಕೂರು ಜಿಲ್ಲಾ ನಿರ್ದೇಶಕರಾದ ಗಂಗಾಧರ್ ರೈಯವರು ಮತ್ತು ಪ್ರಗತಿಬಂಧು ಒಕ್ಕೂಟಗಳ ಪದಾಧಿಕಾರಿಗಳು ಗಾಯಾಳುಗಳಿಗೆ ಧೈರ್ಯ ತುಂಬಿದರು. ಧರ್ಮಸ್ಥಳ ಕ್ಷೇತ್ರದಿಂದ ನೀಡಲಾದ ಸಹಾಯಧನವನ್ನು ವಿತರಿಸಿ ಶೀಘ್ರ ಗುಣಮುಖರಾಗುವಂತೆ ಶುಭ ಹಾರೈಸಿದರು.
ಈ ಸಂದರ್ಭ ಪತ್ರಿಕಾ ಹೇಳಿಕೆ ನೀಡಿರುವ ಡಾ| ಹೆಗ್ಗಡೆಯವರು ಜಾತ್ರೆಯಲ್ಲಾದ ಅವಘಡದ ಕುರಿತಂತೆ ತೀವ್ರ ಸಂತಾಪ ವ್ಯಕ್ತಪಡಿಸಿ, ಹೆಚ್ಚಾಗಿ ದುಡಿಯುವ ವರ್ಗಕ್ಕೆ ಸೇರಿರುವ ಗಾಯಾಳುಗಳಿಗೆ ಸರ್ವರ ಸಹಕಾರವನ್ನು ಕೋರಿದ್ದಾರೆ. ಈ ಸಂಬಂಧ ಗಾಯಾಳುಗಳ ಚಿಕಿತ್ಸೆಗೆ ಸಹಕರಿಸಿದ ಆಸ್ಪತ್ರೆಯ ವೈದ್ಯರುಗಳು ಮತ್ತು ಸಹಾಯಕರುಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಅವರು ಅಭಿನಂದಿಸಿದ್ದಾರೆ. ಈ ಸಂಬಂಧ ಶ್ರಮಪಟ್ಟ ಎಲ್ಲರಿಗೂ ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದವನ್ನು ಅವರು ಕೋರಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.