ಬೆಳ್ತಂಗಡಿ : ನಾಡಿನ ಪ್ರಸಿದ್ಧ ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಸೋಮವಾರ ಸಹಸ್ರಾರು ಭಕ್ತರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.
ಈ ಬಾರಿ ಶಿವರಾತ್ರಿ ಸೋಮವಾರ ಬಂದಿರುವುದರಿಂದ ಈ ದಿನಕ್ಕೆ ಹೆಚ್ಚಿನ ಮಹತ್ವ ಇದ್ದು ರಾಜ್ಯದ ಮೂಲೆ ಮೂಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಮಹಾಶಿವರಾತ್ರಿಯಂದು ಪಾದಯಾತ್ರಿಗಳಿಗೆ ಶ್ರೀ ಕ್ಷೇತ್ರ ರಾಜ್ಯದ ವಿವಿಧ ಭಾಗಗಳಿಂದ ಧರ್ಮಸ್ಥಳಕ್ಕೆ ಆಗಮಿಸುವ 11 ಸಾವಿರಕ್ಕೂ ಹೆಚ್ಚು ಪಾದಯಾತ್ರಿಕರನ್ನು ಸ್ವಾಗತಿಸಲು ಹಾಗೂ ಅವರಿಗೆ ಬೇಕಾದ ಸಕಲ ವ್ಯವಸ್ಥೆಗಳನ್ನು ಕಲ್ಪಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರಿಗಳ ವ್ಯವಸ್ಥಾಪನಾ ಸಮಿತಿ ಸರ್ವ ಸಿದ್ಧತೆಯನ್ನು ಮಾಡಿತ್ತು.
ಶ್ರೀ ಕ್ಷೇತ್ರಕ್ಕೆ ಭಕ್ತರು ಕಳೆದ 37 ವರ್ಷಗಳಿಂದ ಕಾಲ್ನಡಿಗೆಯಿಂದಲೇ ದೂರದ ಬೆಂಗಳೂರು, ಮೈಸೂರು, ತುಮಕೂರು, ಹಾಸನ, ಚಿಕ್ಕಮಗಳೂರು, ಭದ್ರಾವತಿ, ಕೊಡಗು, ಗಂಗಾವತಿ ಮತ್ತಿತರ ಊರುಗಳಿಂದ ಮಹಾಶಿವರಾತ್ರಿ ಪ್ರಯುಕ್ತ ಹರಕೆ ಹೊತ್ತು ಕಾಲ್ನಡಿಗೆಯಲ್ಲಿ ಬರುತ್ತಿದ್ದಾರೆ. ಮಾ. 4 ರಿಂದಲೇ ಪಾದಯಾತ್ರಿಗಳು ಧರ್ಮಸ್ಥಳಕ್ಕೆ ಆಗಮಿಸಿದ್ದರು. ಪಾದಯಾತ್ರಿಗಳು ತಮ್ಮ ಪಾದಯಾತ್ರೆಯ ಸಂದರ್ಭ ಶಿವನ ಸ್ಮರಣೆಯೊಂದಿಗೆ ಪ್ರಯಾಣ ಬೆಳೆಸುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ತಲುಪುವ ಉದ್ದೇಶವನ್ನು ಹೊಂದುವ ಯೋಜನೆ ಹಾಕಿಕೊಂಡಿದ್ದರು.
ದಾರಿಯುದ್ದಕ್ಕೂ ಶ್ರೀ ಕ್ಷೇತ್ರದ ಭಕ್ತಾಭಿಮಾನಿಗಳು ಅಭಿಮಾನ ಹಾಗೂ ಗೌರವದಿಂದ ದೇವಸ್ಥಾನ, ಭಜನಾ ಮಂದಿರಗಳ ಹಾಗೂ ಕೆಲವು ಸಂಘ ಸಂಸ್ಥೆಗಳ ಸಮಿತಿಯವರು ಅಲ್ಲಲ್ಲಿ ಪಾದಯಾತ್ರಿಗಳಿಗೆ ಉಳಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಸಮಿತಿಯು ಪಾದಯಾತ್ರಿಗಳು ತಾಲೂಕಿನ ಗಡಿ ಚಾರ್ಮಾಡಿಯಲ್ಲಿ ಪ್ರಥಮ ಚಿಕಿತ್ಸೆಗೆ ವೈದ್ಯರುಗಳ ವ್ಯವಸ್ಥೆ ಮಾಡಿತ್ತು. ಇನ್ನೊಂದು ಕಡೆ ಕೊಕ್ಕಡ, ಬೂಡುಜಾಲು ನಲ್ಲೂ ವ್ಯವಸ್ಥೆ ಮಾಡಿತ್ತು. ಸೋಮಂತಡ್ಕ, ಉಜಿರೆಯಲ್ಲಿ ಎಸ್.ಡಿ.ಎಂ. ಆಸ್ಪತ್ರೆಯ ಬಳಿ ವೈದ್ಯರುಗಳು ಯಾತ್ರಿಕರಿಗೆ ಸೇವೆ ಸಲ್ಲಿಸಿದ್ದಾರೆ. 24 ಗಂಟೆಗಳ ಕಾಲದಲ್ಲಿ ಸುಸಜ್ಜಿತ ವ್ಯವಸ್ಥೆ ಇರುವ 2 ಸಂಚಾರಿ ಆಸ್ಪತ್ರೆ ಸೇವೆಗೆ ಲಭ್ಯವಿರುವಂತೆ ವ್ಯವಸ್ಥೆಯನ್ನು ಮಾಡಲಾಗಿತ್ತು.
ಧರ್ಮಸ್ಥಳದ ಮಹಾದ್ವಾರದ ಬಳಿ ಮಾಹಿತಿಗಾಗಿ ಪಾದಯಾತ್ರಿಗಳ ವಿಶೇಷ ಕಚೇರಿಯನ್ನು ರಚಿಸಲಾಗಿತ್ತು. ಮಾಹಿತಿ ನೀಡುವ ಹಾಗೂ ದ್ವಾರದ ಬಳಿ ಪಾನೀಯದ ವ್ಯವಸ್ಥೆಯನ್ನು ಮಾಡಲಾಗಿತ್ತು. ಪಾದಯಾತ್ರಿಗಳಿಗೆ ತಂಗಲು ವಸತಿ ವ್ಯವಸ್ಥೆಯನ್ನೂ ಕೂಡಾ ಸಮಿತಿಯು ಮಾಡಿದೆ. ಸುಮಾರು 11 ಸಾವಿರಕ್ಕೂ ಹೆಚ್ಚು ಪಾದಯಾತ್ರಿಗಳು ಈಗಾಗಲೇ ಶ್ರೀ ಕ್ಷೇತ್ರವನ್ನು ತಲುಪಿದ್ದಾರೆ. ಶ್ರೀ ದೇವರ ದರ್ಶನ ಮಾಡಿ, ಶಿವ ಪಂಚಾಕ್ಷರಿ ಮಂತ್ರವನ್ನು ಪಠಿಸುತ್ತಾ ಜಾಗರಣೆಯಲ್ಲಿ ಪಾಲ್ಗೊಂಡರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.