ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ 10,200 ಕೋಟಿ ರೂಪಾಯಿ ವೆಚ್ಚದ ’ಸೇತು ಭಾರತಂ’ ಯೋಜನೆಗೆ ಚಾಲನೆ ನೀಡಿದರು. 2019ರೊಳಗೆ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ರೈಲ್ವೇ ಕ್ರಾಸಿಂಗ್ ಮುಕ್ತಗೊಳಿಸುವುದು ಈ ಯೋಜನೆಯ ಗುರಿ.
ಈ ವೇಳೆ ಮಾತನಾಡಿದ ಅವರು, ಸರ್ಕಾರ ಸಮಸ್ಯೆಗಳ ಬಗ್ಗೆ ತಿಳಿದಿದ್ದು, ಇದನ್ನು ಶಕ್ತಿಯುತವಾಗಿ ನಿಭಾಯಿಸುವ ಪ್ರಯತ್ನ ಮಾಡುತ್ತೇವೆ. ಎನ್ ಡಿಎ ಆಡಳಿತ ದೇಶದ ರೈಲ್ವೆ ವಲಯದಲ್ಲಿ ಬದಲಾವಣೆ ತರಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ. ಈ ಹಿಂದೆ ಕೆಲ ಸಂಸದರ ಮನವೊಲಿಕೆಗಾಗಿ ಕೆಲವು ರೈಲ್ವೆ ಯೋಜನೆಗಳನ್ನು ಘೋಷಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳಲಾಗುತ್ತಿತ್ತು. ಬಹಳಷ್ಟು ಹಳೆಯ ಯೋಜನೆಗಳು ಕಾರ್ಯಗತವಾಗದೆ ಹಾಗೇ ಉಳಿದಿವೆ. ಕೇವಲ ಚಪ್ಪಾಳೆಯ ಮೂಲಕ ರೈಲು ಯಶಸ್ವಿಯಾಗಿ ನಡೆಯುವುದಿಲ್ಲ. ನಾವು ರೈಲ್ವೇ ಲೈನ್ ಮತ್ತು ಗೇಜಸ್ಗಳನ್ನು ಬದಲಾಯಿಸಲು ನಿರ್ಧರಿಸಿದ್ದೇವೆ ಎಂದರು.
ಈ ವರ್ಷದ ಬಜೆಟ್ನಲ್ಲಿ ಗ್ರಾಮೀಣ ರಸ್ತೆಗಳಿಗೆ ಸಾಕಷ್ಟು ಅನುದಾನ ಸಿಕ್ಕಿದೆ, ಇದು ನಮ್ಮ ಗಮನ ಕೇಂದ್ರಿತ ವಲಯ. ಮೂಲಭೂತ ಸೌಕರ್ಯಗಳು ಭಾರತದ ಅಭಿವೃದ್ಧಿಗೆ ವೇಗ ಮತ್ತು ಶಕ್ತಿಯನ್ನು ತುಂಬುತ್ತದೆ. ಸಮಸ್ಯೆಗಳ ಬಗ್ಗೆ ನಮಗೆ ಅರಿವಿದೆ, ಸಮಸ್ಯೆಯನ್ನು ಶಕ್ತಿಯುತ ರೀತಿಯಲ್ಲಿ ಹೋಗಲಾಡಿಸ ಬಯಸುತ್ತೇವೆ ಎಂದರು.
ಈಗಾಗಲೇ 208 ಕಡೆಗಳಲ್ಲಿ ರೈಲ್ವೆ ಓವರ್ ಬ್ರಿಡ್ಜ್ ಅಥವಾ ಅಂಡರ್ ಪಾಸ್ ನಿರ್ಮಿಸಲು ಯೋಜನೆ ಪ್ರಾರಂಭವಾಗಿದೆ. ಸುಮಾರು 1,500 ಬ್ರಿಡ್ಜ್ ಗಳು 50 ರಿಂದ 60 ವರ್ಷ ಹಳೆಯದಾಗಿದ್ದು, ಇವುಗಳ ಮರು ನಿರ್ಮಾಣ ಕಾರ್ಯವೂ ಈ ಯೋಜನೆಯಡಿಯಲ್ಲಿ ಆಗಲಿದೆ. ಸುಮಾರು 50 ಸಾವಿರ ಕೋಟಿ ರೂಪಾಯಿಯನ್ನು ಈ ಯೋಜನೆಗೆ ವ್ಯಯಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ನಿತಿನ ಗಡ್ಕರಿ ಸೇರಿದಂತೆ ಹಲವಾರು ಮಂದಿ ಹಾಜರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.