ಗುಜರಾತಿನಲ್ಲಿ ಅತ್ಯಂತ ಬಲಾಢ್ಯ ಸಮುದಾಯವಾಗಿರುವ ಪಟೇಲರು ತಮಗೆ ಮೀಸಲಾತಿ ಬೇಕೆಂದು ಆಕಾಶ-ಭೂಮಿ ಒಂದು ಮಾಡುವಂತೆ ಆಂದೋಲನ ನಡೆಸಿದ್ದು ಈಗ ಹಳೆಯ ಸುದ್ದಿ. ಈ ಆಂದೋಲನದ ಬಿಸಿ ಇನ್ನೇನು ಆರಿತು ಎನ್ನುವಷ್ಟರಲ್ಲೇ ಹರಿಯಾಣದಲ್ಲಿ ಜಾಟ್ ಸಮುದಾಯ ಮೀಸಲಾತಿಗಾಗಿ ಹಿಂಸಾತ್ಮಕ ಚಳುವಳಿಗೆ ಮುಂದಾಗಿದ್ದು ದೇಶದ ದೌರ್ಭಾಗ್ಯವಲ್ಲದೆ ಮತ್ತೇನು? ಜಾಟ್ ಸಮುದಾಯದ ಮೀಸಲಾತಿ ಹೋರಾಟದಲ್ಲಿ ಹರಿಯಾಣ ಅಕ್ಷರಶಃ ಬೆಂದುಹೋಗಿದೆ. ಪ್ರತಿಭಟನಾಕಾರರು ವಾಹನ, ಕಟ್ಟಡ, ಕಚೇರಿಗಳಿಗೆ ಬೆಂಕಿ ಹಚ್ಚಿದ ಪರಿಣಾಮವಾಗಿ ಸೇನೆಯ ಯೋಧರು ಅವರನ್ನು ಚದುರಿಸಲು ಗುಂಡು ಹಾರಿಸಬೇಕಾಯಿತು. ಐದುಮಂದಿ ಗುಂಡಿಗೆ ಬಲಿಯಾಗಿ ಹಲವರು ಗಾಯಗೊಂಡಿದ್ದೂ ಆಗಿದೆ. ಭುಗಿಲೆದ್ದ ಮೀಸಲಾತಿ ಹೋರಾಟದ ಹಿಂಸೆಯನ್ನು ಕಂಡು ಅಲ್ಲಿನ ರಾಜ್ಯಸರ್ಕಾರ ಜಾಟರ ಬೇಡಿಕೆಯನ್ನು ಮನ್ನಿಸುವುದಾಗಿ ಘೋಷಿಸಿದೆ. ಓಬಿಸಿ ಕೋಟಾದಡಿ ಮೀಸಲಾತಿ ಕಲ್ಪಿಸಬೇಕೆಂಬ ಬೇಡಿಕೆಗೆ ಸರ್ಕಾರ ಅನಿವಾರ್ಯವಾಗಿ ಒಪ್ಪಬೇಕಾಗಿದೆ. ಆದರೆ ಬರೀ ಬಾಯಿಮಾತಿನ ಹೇಳಿಕೆಗಳಿಗೆ ತಾವು ಬಗ್ಗುವುದಿಲ್ಲ, ಸರ್ಕಾರ ಲಿಖಿತ ಹೇಳಿಕೆ ನೀಡುವವರೆಗೆ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಬೇರೆ ಪ್ರತಿಭಟನಾಕಾರರು ಬೆದರಿಕೆ ಹಾಕಿದ್ದಾರೆ.
ಜಾಟ್ ಸಮುದಾಯಕ್ಕೆ ಮೀಸಲಾತಿ ಪಡೆಯುವ ಅರ್ಹತೆ ಇದೆಯೋ ಇಲ್ಲವೋ ಎನ್ನುವುದು ಬೇರೆ ವಿಚಾರ. ಆದರೆ ಪ್ರತಿಭಟನಾನಿರತರು ಬಸ್ಸಿಗೆ ಬೆಂಕಿ ಹಚ್ಚುವುದು, ಕುಡಿಯುವ ನೀರಿನ ಪೈಪನ್ನು ಒಡೆದುಹಾಕಿ ವಾರಾನುಗಟ್ಟಲೆ ಜನರು ನೀರಿಗಾಗಿ ಹಪಹಪಿಸುವಂತೆ ಮಾಡುವುದು, ದಾರಿಹೋಕರನ್ನು ಅಡ್ಡಗಟ್ಟಿ, ಹೊಡೆದು, ರಣಕೇಕೆ ಹಾಕಿ ಚಪ್ಪಾಳೆ ತಟ್ಟುವುದು – ಇವೆಲ್ಲ ಯಾವ ಸೀಮೆಯ ಪ್ರತಿಭಟನೆ? ಇಂತಹ ನಡವಳಿಕೆಯೇ ಮೀಸಲಾತಿ ಪಡೆಯಲು ಇರುವ ಅರ್ಹತೆಯೇ? ಇದಕ್ಕಿಂತ ಭಿನ್ನವಾಗಿ, ಪರಿಣಾಮಕಾರಿಯಾಗಿ ಮೀಸಲಾತಿ ಹೋರಾಟ ನಡೆಸಲು ಸಾಧ್ಯವಿಲ್ಲವೇ?
ಜಾಟರ ಮೀಸಲಾತಿ ಬೇಡಿಕೆ ಈಗಿನದಲ್ಲ, ತುಂಬಾ ಹಿಂದಿನದ್ದು. ಇಡೀ ದೇಶದಲ್ಲಿ ಶೇ. 2.5 ರಷ್ಟಿರುವ ಜಾಟ್ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಆಗಾಗ ಹೋರಾಟ ನಡೆಯುತ್ತಲೇ ಇದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಈ ಸಮಸ್ಯೆಯನ್ನು ಬಗೆಹರಿಸದೆ ಜಾರಿಕೊಂಡಿತ್ತು. ಆದರೀಗ ಈ ಹೋರಾಟದ ದುಷ್ಪರಿಣಾಮಗಳಿಗೆ ಹರಿಯಾಣದ ಬಿಜೆಪಿ ಸರ್ಕಾರದ ನಿಷ್ಕ್ರಿಯತೆಯೇ ಕಾರಣವೆಂದು ಕಾಂಗ್ರೆಸ್ ಮುಖಂಡರು ಆರೋಪಿಸುತ್ತಿರುವುದು ವಿಪರ್ಯಾಸ. ಜಾಟ್ ಸಮುದಾಯದ ಮೀಸಲಾತಿ ಅರ್ಹತೆ ನಿರ್ಧಾರಕ್ಕೆ ಕಾಂಗ್ರೆಸ್ ಸರ್ಕಾರವಿದ್ದಾಗಲೇ ಸಮಿತಿಯೊಂದನ್ನು ರಚಿಸಿ ಕ್ರಮ ಕೈಗೊಳ್ಳಬಹುದಿತ್ತು. ಜಾಟರು ಮೀಸಲಾತಿಗೆ ಅರ್ಹರಾಗಿದ್ದಲ್ಲಿ ಈ ವೇಳೆಗೆ ಅವರಿಗೆ ಮೀಸಲಾತಿ ವ್ಯವಸ್ಥೆ ಆರಂಭಿಸಬಹುದಿತ್ತು. ಆದರೆ ಕಾಂಗ್ರೆಸ್ ಸರ್ಕಾರ ವಹಿಸಿದ ನಿರ್ಲಕ್ಷ್ಯದಿಂದಾಗಿ ಈಗ ಹೋರಾಟ ಹಿಂಸಾತ್ಮಕ ರೂಪಕ್ಕೆ ತಿರುಗಿ, ಸಾವುನೋವು ಸಂಭವಿಸುವ ಮಟ್ಟಕ್ಕೆ ಮುಟ್ಟಿದೆ. ಈ ಪರಿಸ್ಥಿತಿಗೆ ಬಿಜೆಪಿ ಸರ್ಕಾರವೇ ಹೊಣೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದರೆ ಅದನ್ನು ನಂಬುವವರು ಯಾರು?
ಈ ಹಿಂದೆ ಗುಜರಾತಿನಲ್ಲಿ ಹಾರ್ದಿಕ ಪಟೇಲ್ ಎಂಬ ಹದಿಹರೆಯದ ಹುಡುಗನ ನೇತೃತ್ವದಲ್ಲಿ ಪಟೇಲ್ ಸಮುದಾಯ ಕೂಡ ಮೀಸಲಾತಿಗಾಗಿ ಭಾರೀ ಹೋರಾಟ ನಡೆಸಿತ್ತು. ಅಲ್ಲಿನ ಬಿಜೆಪಿ ಸರ್ಕಾರಕ್ಕೆ ಇದೊಂದು ನುಂಗಲಾಗದ ಬಿಸಿ ತುತ್ತು ಕೂಡ ಆಗಿತ್ತು. ಹಾಗೆ ನೋಡಿದರೆ ಇಡೀ ದೇಶದಲ್ಲಿ ಪಟೇಲ್ ಸಮುದಾಯ ಆರ್ಥಿಕವಾಗಿ ಅತ್ಯಂತ ಬಲಾಢ್ಯರು. ಜಾತಿ ದೃಷ್ಟಿಯಿಂದಲೂ ಪಟೇಲರು ಹಿಂದುಳಿದ ಸಮುದಾಯಕ್ಕೆ ಸೇರಿಲ್ಲ. ಹೀಗಿದ್ದರೂ ಮೀಸಲಾತಿ ಬೇಕೆಂದು ಹೋರಾಟ ನಡೆಸಿದ್ದು ಅದೆಷ್ಟು ಸಮರ್ಥನೀಯ ಎಂಬ ಚರ್ಚೆ ಈಗಲೂ ಚಾಲ್ತಿಯಲ್ಲಿದೆ. ಪಟೇಲ್ ಸಮುದಾಯ ಗುಜರಾತ್ನಲ್ಲಷ್ಟೇ ಅಲ್ಲದೆ, ದೇಶದ ಹೊರಗೆ ಇಂಗ್ಲೆಂಡ್ ಅಮೆರಿಕ, ನ್ಯೂಜಿಲ್ಯಾಂಡ್, ಕೆನಡಾ, ಮೊದಲಾದ ದೇಶಗಳಲ್ಲಿ ದೊಡ್ಡ ದೊಡ್ಡ ಉದ್ದಿಮೆಗಳಲ್ಲಿ ನಿರತರಾಗಿ ಆರ್ಥಿಕವಾಗಿ ಅತ್ಯಂತ ಬಲಾಢ್ಯರೆನಿಸಿಕೊಂಡಿದ್ದಾರೆ. ಮನಸ್ಸು ಮಾಡಿದರೆ ಶ್ರೀಮಂತ ಪಟೇಲರು ಇಡೀ ಪಟೇಲ್ ಸಮುದಾಯವನ್ನು ಆರ್ಥಿಕವಾಗಿ ಮೇಲೆತ್ತುವುದು ಕಷ್ಟಸಾಧ್ಯವೇನಲ್ಲ. ಇಂತಹ ಶೇ. 7.5 ರಷ್ಟು ಜನಸಂಖ್ಯೆ ಹೊಂದಿರುವ ಶ್ರೀಮಂತ ಸಮುದಾಯ ಕೂಡ ಸರ್ಕಾರದ ಮೀಸಲಾತಿಗಾಗಿ ಸ್ವಾಭಿಮಾನ ಬದಿಗಿಟ್ಟು ಭಿಕ್ಷೆ ಬೇಡಲು ಹೊರಟಿರುವುದು ಇನ್ನೊಂದು ವೈರುಧ್ಯ.
ಸಂವಿಧಾನಕರ್ತೃ ಡಾ. ಅಂಬೇಡ್ಕರ್, ಮೀಸಲಾತಿ ನೀತಿ ರಚಿಸುವಾಗ ಕೇವಲ ಜಾತಿಯೊಂದನ್ನೇ ಮಾನದಂಡವಾಗಿ ಪರಿಗಣಿಸಿರಲಿಲ್ಲ. ಆರ್ಥಿಕ ಹಿಂದುಳಿದಿರುವಿಕೆಯನ್ನೂ ಮೀಸಲಾತಿಗೆ ಪರಿಗಣಿಸಬೇಕೆಂದು ಹೇಳಿದ್ದರು. ಆದರೆ ಈಗ ದೇಶದಲ್ಲಿ ಎಲ್ಲ ಜಾತಿಗಳೂ ಹಿಂದುಳಿದ ಜಾತಿಯ ಪಟ್ಟಿಗೆ ಸೇರಲು ನಾ ಮುಂದು ತಾ ಮುಂದು ಎಂದು ಹವಣಿಸುತ್ತಿವೆ. ಸ್ವಾಭಿಮಾನದಿಂದ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಯಾರಿಗೂ ಆಸಕ್ತಿಯಿಲ್ಲ. ಸರ್ಕಾರ ನೀಡುವ ‘ಮೀಸಲಾತಿ’ ಭಿಕ್ಷೆಯಿಂದಲೇ ಬದುಕು ಸಾಗಿಸಬೇಕೆಂಬ ಸ್ವಾಭಿಮಾನಶೂನ್ಯ ಮಾನಸಿಕತೆ ಎದ್ದು ಕಾಣುತ್ತಿದೆ. ಒಂದು ಸ್ವಾಭಿಮಾನಿ ರಾಷ್ಟ್ರವಾಗಿ ಎದ್ದು ನಿಲ್ಲಬೇಕಾಗಿದ್ದ ಭಾರತದಲ್ಲಿ ಈ ಪರಿಯ ಅಪಸವ್ಯಗಳು ಖಂಡಿತ ಅನಪೇಕ್ಷಿತ.
ವಾಸ್ತವವಾಗಿ ಮೀಸಲಾತಿ ಆಂದೋಲನ ಚಾಲನೆ ಪಡೆದುಕೊಂಡಿದ್ದು ಅಲ್ಪಸಂಖ್ಯಾತರೆಂಬ ಹಣೆಪಟ್ಟಿ ಹೊತ್ತ ಮುಸ್ಲಿಂ ಮತ್ತು ಕ್ರೈಸ್ತರಿಗೆ ಸರ್ಕಾರ ತಾನಾಗಿಯೇ ಮೀಸಲಾತಿ ನೀಡಲು ಹೊರಟಾಗಿನಿಂದ. ಮತಬ್ಯಾಂಕ್ ಗಟ್ಟಿಗೊಳಿಸಲು ಸರ್ಕಾರ ಇಂತಹದೊಂದು ನಿರ್ಧಾರಕ್ಕೆ ಕೈ ಹಾಕಿತ್ತು. ಈಗ ಅದೇ ಸರ್ಕಾರಕ್ಕೆ ತಿರುಗುಬಾಣವಾಗಿದೆ. ಮುಸ್ಲಿಂ, ಕ್ರಿಶ್ಚಿಯನ್ರ ನಂತರ ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟವರ್ಗಕ್ಕೆ ಮೀಸಲಾತಿ ಮುಂದುವರಿಸಲಾಯಿತು. ಮೀಸಲಾತಿ ಪಡೆದ ಅನೇಕ ಹಿಂದುಳಿದ ಜನರಿಗೆ ಈಗಲೂ ಅದು ಮುಂದುವರೆಯುತ್ತಿರುವುದು ಉಳಿದ ಜಾತಿಗಳಿಗೆ ಅಸಹನೀಯವೆನಿಸಿದ್ದು ಸಹಜ. ಇದೇ ಹಿನ್ನೆಲೆಯಲ್ಲಿ ಇತರ ಹಿಂದುಳಿದ ಜಾತಿಗಳು ತಮಗೂ ಮೀಸಲಾತಿ ಬೇಕೆಂದು ಹಕ್ಕೊತ್ತಾಯ ಶುರುಮಾಡಿಕೊಂಡಿವೆ. ಸರ್ಕಾರದ ಪಾಲಿಗೆ ಇದೊಂದು ನುಂಗಲಾರದ ಬಿಸಿ ತುತ್ತು. ತಿನ್ನುವಂತಿಲ್ಲ, ಉಗುಳುವಂತೆಯೂ ಇಲ್ಲ. ಮೀಸಲಾತಿ ಹೋರಾಟಗಾರರನ್ನು ಎದುರು ಹಾಕಿಕೊಂಡರೆ ತಮ್ಮ ರಾಜಕೀಯ ಓಟ್ಬ್ಯಾಂಕಿಗೆ ಹೊಡೆತ ಬೀಳುವ ಭಯ ಆಳುವವರದ್ದು. ಹೀಗಾಗಿ ಈ ಸಮಸ್ಯೆ ಇನ್ನಷ್ಟು ಉಲ್ಬಣಿಸಿದೆ.
ಹತ್ತನೇ ಶತಮಾನದಲ್ಲಿ ಇರಾನ್ನಿಂದ ವಲಸೆ ಬಂದು, ಇಲ್ಲಿನ ಜನರೊಂದಿಗೆ ಬೆರೆತು, ಇಲ್ಲಿನ ಪ್ರಜೆಗಳೇ ಆಗಿಹೋಗಿರುವ ಪಾರ್ಸಿಗಳು ನಿಜವಾಗಿ ಮೀಸಲಾತಿಗೆ ಆಗ್ರಹಿಸಬೇಕಾಗಿತ್ತು. ಏಕೆಂದರೆ ಇಡೀ ದೇಶದ ಜನಸಂಖ್ಯೆಯಲ್ಲಿ ಪಾರ್ಸಿಗಳದ್ದು ಶೇ. 0.006 ರಷ್ಟು ಮಾತ್ರ. ಇರಾನ್ನಲ್ಲಿ ಮುಸ್ಲಿಮರ ದೌರ್ಜನ್ಯ ಸಹಿಸದೆ ಪಾರ್ಸಿಗಳು ಭಾರತದ ಗುಜರಾತಿಗೆ, ಅನಂತರ ಮುಂಬೈಗೆ ವಲಸೆ ಬಂದು ಇಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡರು. ಅವರೆಂದೂ ಮೀಸಲಾತಿಗಾಗಿ ಆಗ್ರಹಿಸಲಿಲ್ಲ, ದೇಶದ್ರೋಹಿ ಚಟುವಟಿಕೆಯಲ್ಲೂ ನಿರತರಾಗಲಿಲ್ಲ. ಬದಲಿಗೆ ಭಾರತದ ಅಭಿವೃದ್ಧಿಗೆ ತಮ್ಮಿಂದಾದ ಎಲ್ಲ ಬಗೆಯ ಕೊಡುಗೆಗಳನ್ನೂ ನೀಡಿದರು. ಒಂದು ವೇಳೆ ಪಾರ್ಸಿಗಳು ಇಂತಹ ಅಮೂಲ್ಯ ಕೊಡುಗೆ ನೀಡಿರದೇ ಇದ್ದಿದ್ದರೆ ಭಾರತ ಉದ್ಯಮ, ವಿಜ್ಞಾನ, ವ್ಯಾಪಾರ ಮೊದಲಾದ ಕ್ಷೇತ್ರಗಳಲ್ಲಿ ಈಗಿನಷ್ಟು ಪ್ರಗತಿ ಸಾಧಿಸಲು ಖಂಡಿತ ಸಾಧ್ಯವಿರಲಿಲ್ಲ.
ಯಾವುದೇ ಕ್ಷೇತ್ರ ತೆಗೆದುಕೊಳ್ಳಿ, ಅಲ್ಲಿ ಈ ಪಾರ್ಸಿ ಜನಾಂಗದ ಕೊಡುಗೆ ಎದ್ದು ಕಾಣುತ್ತದೆ. ವಿಜ್ಞಾನ ಕ್ಷೇತ್ರದಲ್ಲಿ, ಹೊಮಿ ಜೆ. ಭಾಭಾ, ಹೊಮಿ ಎನ್ ಸೇಟ್ನಾ ಅಪ್ರತಿಮ ಸಾಧನೆಮಾಡಿದ್ದರೆ ಉದ್ಯಮ ಕ್ಷೇತ್ರದಲ್ಲಿ ಜೇಮಷೆಡ್ಜಿ ಟಾಟಾ, ಜೆಆರ್ಡಿ ಟಾಟಾ ಅವರ ಕೊಡುಗೆ ಅತ್ಯಮೂಲ್ಯ. ಹಾಗೆಂದೇ ಜೇಮಷೆಡ್ಜಿ ಟಾಟಾ ಅವರನ್ನು ಭಾರತೀಯ ಉದ್ಯಮದ ಪಿತಾಮಹ ಎನ್ನಲಾಗುತ್ತಿದೆ. ಈಗಂತೂ ಟಾಟಾ ಕಂಪೆನಿ ಉಪ್ಪಿನಿಂದ ಹಿಡಿದು ಉಕ್ಕಿನವರೆಗೆ ಎಲ್ಲ ರೀತಿಯ ಉತ್ಪನ್ನಗಳ ತಯಾರಿಕೆಯಲ್ಲಿ ನಿರತವಾಗಿರುವುದು ಇಡೀ ದೇಶಕ್ಕೇ ಗೊತ್ತು. ಪ್ರತೀ ವರ್ಷ ತಪ್ಪದೆ ಆದಾಯ ತೆರಿಗೆಯನ್ನು ಸೂಕ್ತವೇಳೆಯಲ್ಲಿ ಪಾವತಿಸುವವರ ಪಟ್ಟಿಯಲ್ಲಿ ಟಾಟಾ ಕಂಪೆನಿ ನಂ.1. ಗಾಡ್ರೇಜ್, ವಾಡಿಯಾ ಕಂಪೆನಿಗಳೂ ಕೂಡಾ ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿವೆ.
ಮಿಲಿಟರಿ ಕ್ಷೇತ್ರದಲ್ಲಿ ಫೀಲ್ಡ್ಮಾರ್ಷಲ್ ಆಗಿದ್ದ ಸ್ಯಾಮ್ ಮಾಣೆಕ್ ಷಾ ಹೆಸರು ಕೇಳದವರಾರು? ವಾಯುದಳದಲ್ಲಿ ಏರ್ ಮಾರ್ಷಲ್ ಆಸ್ಪೀ ಇಂಜಿನಿಯರ್, ನೌಕಾದಳದಲ್ಲಿ ಅಡ್ಮಿರಲ್ ಜಲ್ ಕರ್ಸೇಠ್ಜೀ, ಪಾಲೀ ಹೋಮೀ ಮೇಜರ್, ವೈಸ್ ಅಡ್ಮಿರಲ್ ಆರ್. ಎಫ್. ಕಂಟ್ರಾಕ್ಟರ್, ಲೆ.ಜ. ಎಫ್.ಎಲ್. ಬಿಲ್ಮೊರಿಯಾ… ಹೀಗೆ ಹಲವಾರು ಗಣ್ಯರು ಶ್ರಮಿಸಿದ್ದಾರೆ. ಕ್ರಿಕೆಟ್ ರಂಗದಲ್ಲಿ ಫಾರೂಕ್ ಇಂಜಿನಿಯರ್, ಪಾಲೀ ಉಮ್ರಿಗರ್ ಹೆಸರು ಇಂದಿನ ಪೀಳಿಗೆಗೆ ಅಷ್ಟಾಗಿ ಗೊತ್ತಿರಲಿಕ್ಕಿಲ್ಲ. ಆದರೆ ಇವರಿಬ್ಬರೂ ಕ್ರಿಕೆಟ್ನ ದಂತಕತೆಗಳಾಗಿದ್ದವರು. ರಾಕ್ಸ್ಟಾರ್ ಫ್ರಿಡ್ಡಿ ಮರ್ಕ್ಯುರಿ, ಸಂಗೀತ ನಿರ್ದೇಶಕ ಜ್ಯುಬಿನ್ ಮೆಹ್ತ, ಸಿನೆಮಾ ಚಿತ್ರಕಥೆಗಾರ ಸೂನಿ ತಾರಾಪುರೆವಾಲಾ, ಗ್ರಂಥಕರ್ತ ರೋಹಿನ್ಟನ್ ಮಿಸ್ತ್ರಿ, ಬಪ್ಸಿಸಿದ್ವಾ, ರೇಡಿಯೋಜಾಕಿ ಪಾಲಿ ಆರ್ ಸಿಂಗಾರ, ಭಾರತದ ಮೊಟ್ಟಮೊದಲ ಮಹಿಳಾ ಪತ್ರಿಕಾ ಛಾಯಾಚಿತ್ರಗಾರ್ತಿಯಾಗಿದ್ದ ಹೊಮೈ ವ್ಯಾರ್ವಾಲಾ, ಸಿನಿಮಾ ನಟಿ ನೀನಾ ವಾಡಿಯಾ, ಪೆರ್ಸಿಸ್ ಖಂಬಟ್ಟ, ರಾಜಕೀಯ ಕ್ಷೇತ್ರದಲ್ಲಿ ಮಿನುಗಿದ ಬಿ.ಪಿ. ವಾಡಿಯಾ, ಪಿಲೂ ಮೋದಿ, ಮಿನೂ ಮಸಾನಿ, ನ್ಯಾಯಾಂಗ ಕ್ಷೇತ್ರದಲ್ಲಿ ಅಪ್ರತಿಮ ಪ್ರತಿಭೆ ಬೆಳಗಿದ ಬುಕ್ತಿಯಾರ್ ರುಸ್ತುಂಜೀ, ಸೋಲಿ ಸೋರಬ್ಜೀ, ನಾನೀ ಫಾಲ್ಕೀವಾಲಾ, ಸ್ಯಾಂ ಫಿರೋಜ್ ಭರೂಚಾ… ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಗಣನೀಯ ಸೇವೆ ಸಲ್ಲಿಸಿದ ಅದೆಷ್ಟೋ ಪಾರ್ಸಿಗಳಿದ್ದಾರೆ. ಆದರೆ ಅವರೆಂದೂ ತಾವು ಅಲ್ಪಸಂಖ್ಯಾತರೆಂಬ ಕಾರಣಕ್ಕಾಗಿ ಮೀಸಲಾತಿಗೆ ಆಗ್ರಹಿಸಲಿಲ್ಲ. ಅವರೆಲ್ಲಾ ‘ಸಂಪತ್ತಿರುವುದು ಈ ಸಮಾಜದ ಅಭಿವೃದ್ಧಿಗಾಗಿ’ ಎಂದು ಆಶಿಸಿದರು. ಕೆರೆಯ ನೀರನ್ನು ಕೆರೆಗೇ ಚೆಲ್ಲಿದರು. ಟಾಟಾ ಕಂಪೆನಿಯ ವಾರ್ಷಿಕ ಆದಾಯವೇ ನೂರು ಬಿಲಿಯನ್ ಡಾಲರ್. ಇದು ಪಾಕಿಸ್ಥಾನದ ಜಿಡಿಪಿಯ ಅರ್ಧಕ್ಕಿಂತಲೂ ಹೆಚ್ಚು. ಆದರೆ ರತನ್ ಟಾಟಾ ತಮ್ಮ ಬದುಕಿನಲ್ಲಿ ಒಂದೇ ಒಂದು ಬಾರಿ ಕೂಡ ಸರ್ಕಾರದ ವಿರುದ್ಧ ತೊಡೆ ತಟ್ಟಲಿಲ್ಲ. ಬದಲಿಗೆ ಈ ದೇಶದ ಉನ್ನತಿಗಾಗಿ ನಿರಂತರ ಶ್ರಮಿಸುತ್ತಲೇ ಇದ್ದಾರೆ.
ಒಂದು ವೇಳೆ ಕೇವಲ ಶೇ. 0.006 ರಷ್ಟಿರುವ ಪಾರ್ಸಿಗಳು ಆಗ್ರಹಿಸಿದ್ದರೆ ಅವರಿಗೆ ಮೀಸಲಾತಿ ಸಿಗುವುದು ದುಸ್ತರವೇನಿರಲಿಲ್ಲ. ಆದರೆ ಅವರೆಂದೂ ಅದಕ್ಕಾಗಿ ಆಗ್ರಹಿಸಲಿಲ್ಲ. ಅಲ್ಲದೆ ಭಾರತಕ್ಕೆ ಪಾರ್ಸಿಗಳು ಬರುವಾಗ ಶ್ರೀಮಂತರಾಗಿಯೇನೂ ಇರಲಿಲ್ಲ. ಇಲ್ಲಿ ಕಷ್ಟಪಟ್ಟು ದುಡಿದು ಹಣಗಳಿಸಿದರು. ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿದರು. ತನ್ಮೂಲಕ ತಾವೂ ಶ್ರೀಮಂತರಾದರು. ಇಂದು ಪಾರ್ಸಿಗಳು ಪ್ರಾರಂಭಿಸಿದ ಉದ್ಯಮ ಕ್ಷೇತ್ರಗಳಲ್ಲಿ ಸಾವಿರಾರು, ಲಕ್ಷಾಂತರ ಮಂದಿ ಉದ್ಯೋಗ ಹಿಡಿದು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ, ನೆಮ್ಮದಿಯಾಗಿದ್ದಾರೆ. ಜನಸಂಖ್ಯೆಯಲ್ಲಿ ತೀರಾ ಕನಿಷ್ಠ ಪ್ರಮಾಣದಲ್ಲಿರುವ ಪಾರ್ಸಿಗಳ ಸಾಧನೆ, ಪರಿಶ್ರಮ, ಸ್ವಾಭಿಮಾನಿ ನಡವಳಿಕೆ, ದೇಶದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಇತ್ಯಾದಿ ಸಂಗತಿಗಳು ಮೀಸಲಾತಿಗಾಗಿ ಈಗ ಅನಗತ್ಯವಾಗಿ ಹೋರಾಡುತ್ತಿರುವ ಸಮುದಾಯಗಳ ಕಣ್ಣು ತೆರೆಸಬೇಕಾಗಿತ್ತು. ಆದರೆ …? ಛೆ!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.