ಬೆಳ್ತಂಗಡಿ : ನೂತನವಾಗಿ ದೇವಾಲಯಗಳನ್ನು ನಿರ್ಮಿಸುವ ಬದಲು ಪುರಾತನ ದೇವಸ್ಥಾನಗಳ ಜೀರ್ಣೋದ್ಧಾರದಿಂದ ಇಡೀ ಸಮಾಜಕ್ಕೆ ಸುಕೃತಫಲ ಪ್ರಾಪ್ತಿಯಾಗುತ್ತದೆ ಎಂದು ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪಂಜ ಭಾಸ್ಕರ ಭಟ್ ಅಭಿಪ್ರಾಯಪಟ್ಟಿದ್ದಾರೆ. ಅವರು ಶನಿವಾರ ಶಿಬಾಜೆ ಗ್ರಾಮದ ಮೊಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಒಂದು ಕ್ಷೇತ್ರ ಅಭಿವೃದ್ಧಿಯಾಗಲು ಕ್ಷೇತ್ರದ ತಂತ್ರಿಗಳ ತಪಸ್ಸಯ, ವೇದಪಾರಾಯಣ, ನಿಯಮಾನುಸಾರ ಪೂಜೆ, ಅನ್ನದಾನ ಹಾಗೂ ವಾರ್ಷಿಕೋತ್ಸವ ಕಾರಣವಾಗುತ್ತದೆ. ಅದರೊಂದಿಗೆ ಕ್ಷೇತ್ರದಲ್ಲಿ ದ್ರವ್ಯಶುದ್ಧಿಯನ್ನು ಕಾಪಾಟುವ ಮೂಲಕ ಸಾನಿಧ್ಯದ ವೃದ್ಧಿಯಾಗುತ್ತದೆ ಎಂದರು. ಸಮಾರಂಭದಲ್ಲಿ ಆಶೀರ್ವಚನ ನೀಡಿದ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ, ನಮ್ಮಲ್ಲಿ ಆಡಂಬರದ ಭಕ್ತಿ ಇರಬಾರದು. ಅಂತರಂಗದ ಭಕ್ತಿಯಿಂದ ಭಗವಂತನ ಸೇವೆ ಮಾಡಿದಾಗ ಪುಣ್ಯಫಲ ಪ್ರಾಪ್ತಿಯಾಗುತ್ತದೆ ಎಂದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ ಮಾತನಾಡಿ, ಸತ್ಕಾರ್ಯಗಳಿಂದ ಭಗವಂತ ನಮ್ಮ ಕೈಹಿಡಿಯುತ್ತಾನೆ. ಭಗವಂತ ಮತ್ತು ನಮ್ಮ ನಡುವೆ ಪ್ರೀತಿಯ ಸೆಲೆ ಇರಬೇಕು. ನಮ್ಮ ದೇವಸ್ಥಾನ, ದೈವಸ್ಥಾನಗಳ ಉಳಿವಿಗೆ ಮೊದಲು ನಮ್ಮ ದೇಶವನ್ನು ಉಳಿಸುವುದು ಅತೀ ಮುಖ್ಯ ಎಂದರು.
ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ಎಪಿಎಂಸಿ ಮಾಜಿ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ರಂಜನ್ ಜಿ.ಗೌಡ, ದಂತವೈದ್ಯ ಡಾ. ಎಂ.ಎಂ.ದಯಾಕರ್, ಬೆಂಗಳೂರಿನ ವೈದ್ಯ ಡಾ. ಹರೀಶ್ಬಾಬು, ಮಂಗಳೂರಿನ ಉದ್ಯಮಿ ಶ್ರೀಕರ ದಾಮ್ಲೆ, ಶಿಬಾಜೆ ಗ್ರಾಮ ಪಂಚಾಯತ್ ಸದಸ್ಯ ಮಾಧವ ಗೌಡ, ಕೊಕ್ಕಡ ವೈದ್ಯನಾಥೇಶ್ವರ ದೇವಸ್ಥಾನದ ಮಾಜಿ ಅಧ್ಯಕ್ಷ ಸತ್ಯನಾರಾಯಣ ಶುಭ ಹಾರೈಸಿದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಸಚ್ಚಿದಾನಂದ ಭಟ್ ಅವರನ್ನು ಗೌರವಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಪೂಂಜಾ, ಕಾರ್ಯಾಧ್ಯಕ್ಷ ಬಿ.ಸಚ್ಚಿದಾನಂದ ಭಟ್, ಪ್ರಧಾನ ಕಾರ್ಯದರ್ಶಿ ದೀಪಕಾನಂದ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಕೃಷ್ಣಪ್ಪ ಗೌಡ ವೇದಿಕೆಯಲ್ಲಿದ್ದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಿರ್ದೇಶಕ ಆನಂದ ಸುವರ್ಣ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಟಿ. ಮೋಹನ ಉಪಾಧ್ಯಾಯ ವಂದಿಸಿದರು. ಬೆಳ್ತಂಗಡಿ ವಾಣಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಅನುರಾಧ ರಾವ್ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.