ಉಪ್ಪುಂದ: ಕಲಿಸುವ ಪರಿಣತಿ ಹೊಂದಿರುವ ಗುರು, ಕಲಿಕೆಗೆ ಬದ್ಧನಾದ ಶಿಷ್ಯ ಮತ್ತು ಪ್ರಾಮಾಣಿಕ ಆಸಕ್ತಿ ಇರುವ ಶ್ರೋತೃಗಳೆಂಬ ತ್ರಿವೇಣಿ ಸಂಗಮವಾದರೆ ಅಲ್ಲಿ ಸಂಗೀತ ಉನ್ನತಿ ಸಾಧಿಸುತ್ತದೆ ಎಂದು ಮಣಿಪಾಲದ ಡಾ. ಟಿ. ಎಂ. ಎ. ಪೈ ಪಾಲಿಟೆಕ್ನಿಕ್ನ ಪ್ರಾಂಶುಪಾಲ ಟಿ. ರಂಗ ಪೈ ಹೇಳಿದರು.
ಉಪ್ಪುಂದದ ಯು. ರಮೇಶ ವೈದ್ಯರ ಮನೆಯಂಗಳದಲ್ಲಿ ಸುರತ್ಕಲ್ನ ಚಿರಂತನ ಚಾರಿಟಬಲ್ ಟ್ರಸ್ಟ್ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ದುರ್ಗಾಪರಮೇಶ್ವರಿ ಮ್ಯೂಸಿಕ್ ಟ್ರಸ್ಟ್ನ ೮ನೇ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ತ್ರಿವೇಣಿ ಸಂಗಮಕ್ಕೆ ಪರಸ್ಪರ ಪ್ರಭಾವಿಸುವ ಮತ್ತು ಪ್ರಭಾವಿತವಾಗುವ ಗುಣವಿದೆ. ಹಾಗಾಗಿ ಅವು ಒಂದು ಇನ್ನೊಂದರ ಸೃಷ್ಟಿಗೆ, ಮುನ್ನಡೆಗೆ ಕಾರಣವಾಗುತ್ತವೆ. ಅವು ಮೂರು ಇರುವಲ್ಲಿ ಸಂಗೀತ ಪರಂಪರೆ ಸ್ಥಾಯಿಯಾಗುತ್ತದೆ ಎಂದ ಅವರು ಗ್ರಾಮೀಣ ಪ್ರದೇಶವಾದ ಉಪ್ಪುಂದದಲ್ಲಿ ಶಾಸ್ತ್ರೀಯ ಸಂಗೀತ ಶಾಲೆ ನಡೆಸುತ್ತಿರುವ ಟ್ರಸ್ಟ್ನ ಉಪಕ್ರಮವನ್ನು ಶ್ಲಾಘಿಸಿದರು. ನಿವೃತ್ತ ಬ್ಯಾಂಕ್ ಅಧಿಕಾರಿ, ಸಾಹಿತಿ ಯು. ರಮೇಶ ವೈದ್ಯ ಉದ್ಘಾಟಿಸಿದರು. ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಹಿರಿಯ ರಂಗಕರ್ಮಿ ಬಿ. ಗಣೇಶ ಕಾರಂತ ಅತಿಥಿಯಾಗಿದ್ದರು. ಸಂಗೀತ ಗುರು ರಾಘವೇಂದ್ರ ಉಪಾಧ್ಯಾಯ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು. ಗಿರೀಶ ಶೇಟ್ ನಿರೂಪಿಸಿದರು.
ಸಂಗೀತ ಶಾಲೆಯ ವಿದ್ಯಾರ್ಥಿಗಳಾದ ಅಜಿತ್ ಭಂಡಾರ್ಕಾರ್, ಕೇದಾರ ಮರವಂತೆ, ಶರತ್ ನಾಡ, ವಿಶ್ವಜಿತ್ ಕಿಣಿ, ವಿಜಯಲಕ್ಷ್ಮೀ ಅವರಿಂದ ಹಾಡುಗಾರಿಕೆ, ಸೌರಭ್ ಕಿಣಿ, ಪುನೀತ್, ಭರತ್, ಕಾರ್ತಿಕ್ ಅವರಿಂದ ತಬಲಾ ಸೋಲೊ ಪ್ರಸ್ತುತಗೊಂಡುವು. ಗುರು ರಾಘವೇಂದ್ರ ಉಪಾಧ್ಯಾಯ, ಮಣಿಪಾಲದ ಪಂ. ಕಿರಣ ಅವರಿಂದ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ಪ್ರೊ. ಟಿ. ರಂಗ ಪೈ, ಕ್ಯಾಲಿಕಟ್ನ ನಳಿನ್ ಮೂಲ್ಜಿ, ಕಡತೋಕಾದ ಕೆ. ಪಿ. ವಿನೋದ್, ಮಣಿಪಾಲದ ಶಶಿಕಿರಣ್ ಸಾಥ್ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.