ತುಳು ಭಾಷಿಗರಿಗೆ ನೂತನ ವರ್ಷದ ಆರಂಭದ ಸಂಕೇತವಾಗಿ ಬಿಸು ಪರ್ಬವನ್ನು ಆಚರಿಸಲಾಗುತ್ತದೆ. ಹಿಂದೂ ಶಾಸ್ತ್ರದ ಪ್ರಕಾರ ಚಂದ್ರಮಾನ ಯುಗಾದಿ ಮತ್ತು ಸೌರಮಾನ ಯುಗಾದಿ ಎಂದು ಎರಡು ದಿನವನ್ನು ಹೊಸವರ್ಷದ ಆರಂಭವಾಗಿ ಆಚರಿಸಲಾಗುತ್ತದೆ. ಗೌಡ ಸಾರಸ್ವತ ಬ್ರಾಹ್ಮಣರಿಗೆ ಮತ್ತು ವಿಶ್ವಕರ್ಮ ಸಮುದಾಯದವರಿಗೆ ಚಂದ್ರಮಾನ ಯುಗಾದಿ ಹೊಸ ಸಂವತ್ಸರವಾದರೆ, ಉಳಿದ ಸಮುದಾಯದವರಿಗೆ ಇವತ್ತು ಹೊಸ ವರ್ಷದ ಆರಂಭ. ಸಾಮಾನ್ಯವಾಗಿ ಹೆಚ್ಚಾಗಿ ಕರ್ನಾಟಕ, ಕೇರಳ ಗಡಿಭಾಗದಲ್ಲಿ ಈ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಆದರೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೂಡ ಬಿಸು ಹಬ್ಬವನ್ನು ಆಚರಿಸಲು ಉತ್ಸುಕವಾಗಿತ್ತು ಎನ್ನುವುದು ಸಂತೋಷದ ಸಂಗತಿ.
ತುಳು ನಾಡಿನ ಪ್ರಮುಖ ಆಚರಣೆಗಳಲ್ಲಿ ಒಂದಾಗಿರುವ ಬಿಸು ಪರ್ಬ (ವಿಷು ಹಬ್ಬ)ದ ಅಂಗವಾಗಿ ಮಂಗಳವಾರ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಗುತ್ತಿನ ಮನೆಯಲ್ಲಿ ಬಿಸು ಆಚರಣೆಯನ್ನು ಆಯೋಜಿಸಲಾಯಿತು. ಪ್ರಥಮ ಬಾರಿಗೆ ಆಯೋಜಿಸಲಾಗುತ್ತಿರುವ ಬಿಸು ಪರ್ಬದಲ್ಲಿ ಬಿಸು ಕಣಿ ಇಡುವ ಮೂಲಕ ಬೆಳಗ್ಗೆ ಕಾರ್ಯಕ್ರಮ ಆರಂಭಗೊಂಡಿತು.
ಕಣಿ ಇಡುವ ಕುರಿತಂತೆ ಮಾಹಿತಿ ನೀಡಿ ಮಾತನಾಡಿದ ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ವಿವೇಕ ರೈ, ಪಿಲಿಕುಳದ ಗುತ್ತಿನ ಮನೆಯಲ್ಲಿ ಈ ದಿನ ಚರಿತ್ರಾರ್ಹ ದಿನವೆಂದು ಬಣ್ಣಿಸಿದರು.
ತುಳುವಿನ ಪಗ್ಗು ತಿಂಗಳ ಸಂಕ್ರಮಣದ ಮಾರನೆಯ ದಿನವನ್ನು ಬಿಸು ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಕೃಷಿ ಪ್ರಧಾನವಾದ ತುಳುನಾಡಿನಲ್ಲಿ ಸಮೃದ್ಧ ಕೃಷಿ ಆಶಯದದೊಂದಿಗೆ ಈ ಹಬ್ಬವನ್ನು ಆಚರಿಸಲಾಗುತ್ತದೆ. ಬಾಳೆ ಎಲೆಯ ಮೇಲೆ ಅಕ್ಕಿ ಹಾಗೂ ತೆಂಗಿನ ಕಾಯಿ ಇರಿಸಿ ತಮ್ಮ ಮನೆಯಲ್ಲೇ ಬೆಳೆಯಲಾಗುವ ಭತ್ತ, ತೆಂಗು, ಬಾಳೆ, ಅಡಿಕೆ, ಕಾಳುಮೆಣಸು, ತರಕಾರಿ ಹಾಗೂ ಹಣ್ಣು ಹಂಪಲುಗಳು, ಕರಕುಶಲ ವಸ್ತುಗಳನ್ನು ಜೋಡಿಸಿ ದೀಪಹಚ್ಚಿ ಕೈಮುಗಿದು ಮನೆಯ ಕಿರಿಯರು ಮನೆ ಹಿರಿಯರ ಕಾಲು ಹಿಡಿದು ಆಶೀರ್ವಾದ ಪಡೆಯಲಾಗುತ್ತದೆ. ಹಶಿತ ಮನೆಯ ಹಿತ್ತಲಿನಲ್ಲೇ ಬೆಳೆದ ತರಕಾರಿಯಿಂದ ತಯಾರಿಸಿದ ಸಿಹಿಯೂಟವನ್ನು ಮಾಡಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿ ನಶಿಸುತ್ತಿರುವಂತೆಯೇ ಆಚರಣೆಗಳೂ ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಿಲಿಕುಳದ ಗುತ್ತಿನ ಮನೆಯಲ್ಲಿ ಈ ಸಂಪ್ರದಾಯವನ್ನು ಮುಂದುವರಿಸುವ ನಿಟ್ಟಿನಲ್ಲಿ ಪ್ರಸಕ್ತ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಮುತುವರ್ಜಿಯ ಮೇರೆಗೆ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದವರು ಹೇಳಿದರು.
ಪಿಲಿಕುಳದ ಸಂಸ್ಕೃತಿ ಗ್ರಾಮ ಕೇವಲ ಶೋ ಪೀಸ್ ಅಲ್ಲ. ಕಳೆದುಹೋಗುತ್ತಿರುವ ತುಳುನಾಡಿನ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಬಹಳ ಶ್ರಮದೊಂದಿಗೆ ಪಿಲಿಕುಳದಲ್ಲಿ ವಿಶಾಲ ವಾತಾವರಣದಲ್ಲಿ ಸಂಸ್ಕೃತಿ ಗ್ರಾಮವನ್ನು ರಚಿಸಲಾಗಿದೆ. ಈಗಾಗಲೇ ಇಲ್ಲಿ ಆಟಿಡೊಂಜಿ ದಿನ ಎಂಬ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಇದೀಗ ಈ ವರ್ಷದಿಂದ `ಬಿಸು ಪರ್ಬ’ವನ್ನು ಆಚರಿಸಲಾಗುತ್ತಿದೆ ಎಂದು ಪ್ರೊ. ವಿವೇಕ ರೈ ಹೇಳಿದರು. ಇನ್ನೂ ಬಿಸು ಪರ್ಬದ ಬಿಸು ಕಣಿ ಕೂಡ ಆಸ್ತಿಕರಲ್ಲಿ ಕುತೂಹಲ ಮೂಡಿಸಿತ್ತು.
ತುಳುನಾಡಿನಲ್ಲಿ ಬಿಸು ಪರ್ಬವನ್ನು ಆಚರಿಸಲಾಗುತ್ತದೆಯಾದರೂ ಮನೆಗಳಲ್ಲಿ ಕಣಿ ಇಡುವ ಸಂಪ್ರದಾಯ ತೀರಾ ವಿರಳ. ಹಾಗಾಗಿ ಇಂದು ಗುತ್ತಿನ ಮನೆಯಲ್ಲಿ ಇರಿಸಲಾಗಿದ್ದ ಬಿಸು ಕಣಿಯನ್ನು ಯುವಕರು ಅತ್ಯಂತ ಕುತೂಹಲದಿಂದ ವೀಕ್ಷಿಸಿ ಹಿರಿಯರಿಂದ ವಿವರ ಪಡೆಯುತ್ತಿದುದು ಕಂಡು ಬಂತು. ಕೇಪುಳ ಹೂ, ತೆಂಗಿನಕಾಯಿ, ಬಾಳೆಗೊನೆ, ಎಳನೀರು ಗೊನೆ, ಹಲಸು, ನೇರಳೆ, ಅಡಿಕೆ, ಬದನೆ, ಬೆಂಡೆಕಾಯಿ, ತೊಂಡೆಕಾಯಿ, ಗೇರು, ಕುಂಬಳಕಾಯಿ, ಸೋರೆಕಾಯಿ, ಹೀರೆಕಾಯಿ ಸೇರಿದಂತೆ ತುಳುನಾಡಿನಲ್ಲಿ ಬೆಳೆಯುವ ಎಲ್ಲಾ ರೀತಿಯ ತರಕಾರಿ ಹಣ್ಣು ಹಂಪಲುಗಳನ್ನು ಜೋಡಿಸಿಡಲಾಗಿತ್ತು. ಮಧ್ಯಾಹ್ನದ ವೇಳೆಗೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂರವರು ಬಿಸು ಕಣಿಗೆ ಬದನೆಕಾಯಿಯನ್ನು ಇಡುವ ಮೂಲಕ ಮಧ್ಯಾಹ್ನದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು ಗುತ್ತಿನ ಮನೆಗಳು ಇಂದು ಅಪರೂಪವಾಗುತ್ತಿದ್ದು, ಆಚರಣೆಗಳು ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮದ ಮೂಲಕ ಯುವ ಪೀಳಿಗೆಯಲ್ಲಿ ಮಣ್ಣಿನ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಈ ಕಾರ್ಯಕ್ರಮ ಅತೀ ಅಗತ್ಯ ಎಂದರು.
ನಶಿಸಿ ಹೋಗುತ್ತಿರುವ ಕೆಲವು ಸಂಪ್ರದಾಯಗಳನ್ನು ಮತ್ತೆ ಎತ್ತಿ ಹಿಡಿಯುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ಅಲ್ಲಿ ಸೇರಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿರುವುದು ಕೂಡ ಕೇಳಿ ಬಂತು. ಹಿಂದೂಗಳಲ್ಲಿಯೇ ಎರಡೆರಡು ಯುಗಾದಿಗಳು ಯಾಕೆ ಎಂದು ಇತ್ತೀಚೆಗೆ ಯಾರೋ ಸಾಮಾಜಿಕ ತಾಣಗಳಲ್ಲಿ ತಮ್ಮ ಅಭಿಪ್ರಾಯ ಹರಿಯಬಿಟ್ಟಿದ್ದರು. ಹಬ್ಬಗಳು ಎಷ್ಟಾದರೇನಂತೆ ಅದನ್ನು ಸಂತೋಷದಿಂದ ಸಂಭ್ರಮಿಸುವ ಮನಸ್ಸುಗಳು ಒಂದೇ ಕಡೆ ಒಟ್ಟಾಗುತ್ತವಲ್ಲ, ಅದು ಮುಖ್ಯ ಎಂದು ಅನಿಸದೇ ಇರುವುದಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.