ಬೆಳ್ತಂಗಡಿ : ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ಹೋಗಿ ಬರುವ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಸ್ಥೆಗಳಲ್ಲಿ ದುಡಿಯುವ ನೌಕರರು ತಾ.ಪಂ., ಜಿ.ಪಂ. ಚುನಾವಣೆಯಲ್ಲಿನ ಮತದಾನದ ತಮ್ಮ ಹಕ್ಕನ್ನು ಚಲಾಯಿಸಲು ಅಸಾಧ್ಯವಾಗುವಂತಹ ಸ್ಥಿತಿಯನ್ನು ಚುನಾವಣಾ ಆಯೋಗ ತಂದಿಟ್ಟಿದೆ ಎಂಬ ವಿಚಾರ ಚರ್ಚೆಯಲ್ಲಿದೆ.
ಕಾರಣ ಇಷ್ಟೆ. ಚುನಾವಣೆ ಪ್ರಕ್ರಿಯೆ ಇರುವುದು ಗ್ರಾಮೀಣ ಪ್ರದೇಶದಲ್ಲಿ. ನಗರ ಪಂ., ಪುರಸಭೆ, ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಚುನಾವಣೆ ಇರುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಚುನಾವಣೆಗಾಗಿ ಶುಕ್ರವಾರ ಹಾಗೂ ಶನಿವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆದರೆ ನ.ಪಂ. ಪುರಸಭೆ, ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಶಾಲಾ ಕಾಲೇಜುಗಳಿಗೆ, ಸಂಸ್ಥೆಗಳ ಕಚೇರಿಗಳಿಗೆ, ಬ್ಯಾಂಕುಗಳಿಗೆ ರಜೆ ಇಲ್ಲವಾಗಿದೆ. ಹೀಗಾಗಿ ರಜೆ ಇಲ್ಲದ್ದರಿಂದ ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ಕಾಲೇಜಿಗಾಗಿ, ಇನ್ನಿತರ ಕಚೇರಿಗಳಿಗೆ ಹೋಗುವವರು ಹೋಗಲೇಬೇಕಾದ ಪ್ರಸಂಗ ಎದುರಾಗಿದೆ.
ಬಹುತೇಕ ಶೇ. 90 ರಷ್ಟು ವಿದ್ಯಾರ್ಥಿಗಳು ನಗರದ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುವವರೇ ಆಗಿದ್ದಾರೆ. ವಸತಿ ನಿಲಯದಲ್ಲಿ ಇದ್ದೋ ಅಥವಾ ಮನೆಯಿಂದ ಹೋಗಿ ಬರುವವರು ಇರುತ್ತಾರೆ. ಕಾಲೇಜು ವಿದ್ಯಾರ್ಥಿಗಳಿಗೆ ಮತದಾನ ಹಕ್ಕು ಇರುವುದರಿಂದ ಇಂತಹ ಸ್ಥಿತಿಯಲ್ಲಿ ಮತದಾನ ಮಾಡಲು ಅಸಾಧ್ಯವಾಗಿರುತ್ತದೆ ಎಂಬುದು ಕಾಲೇಜು ವಿದ್ಯಾರ್ಥಿಗಳ ಅಳಲಾಗಿದೆ. ಹಾಗೆಯೇ ಸಂಸ್ಥೆಗಳಲ್ಲಿ ದುಡಿಯುವ ವರ್ಗಕ್ಕೂ ಇದೇ ಸಮಸ್ಯೆ ಎದುರಾಗಿದೆ. ಶನಿವಾರವಾಗಿದ್ದರೂ ಬಹುದೂರದ ಹಳ್ಳಿಗಳಿಂದ ನಗರಕ್ಕೆ ಹೋಗುವವರು ಮತ್ತೆ ಮನೆಗೆ ಮರಳುವಾಗ ಐದು ಗಂಟೆ ದಾಟುತ್ತದೆ.
ಈ ಸಮಸ್ಯೆಯಿಂದ ಮಂಗಳೂರಿನಲ್ಲಿರುವ ಸುಮಾರು ೧೨ ಕಾಲೇಜುಗಳ ಸುಮಾರು ೧೦,೦೦೦ ಕ್ಕೂ ವಿದ್ಯಾರ್ಥಿಗಳು ಮತದಾನದಿಂದ ವಂಚಿತರಾಗಲಿದ್ದಾರೆ. ಅದೇ ರೀತಿ ಉಪನ್ಯಾಸಕರು, ನೌಕರರು ಕೂಡ. ಈ ಸಮಸ್ಯೆ ಮಂಗಳೂರು ಮಾತ್ರವಲ್ಲ ಪುತ್ತೂರು, ಬಂಟ್ವಾಳ, ಸುರತ್ಕಲ್, ಬಂಟ್ವಾಳ ಪ್ರದೇಶಗಳಲ್ಲೂ ಕಂಡು ಬರಲಿದೆ. ಚುನಾವಣಾ ಆಯೋಗದ ಈ ವ್ಯವಸ್ಥೆ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಈ ಬಗ್ಗೆ ಯಾವ ಪಕ್ಷದ ವಿದ್ಯಾರ್ಥಿ ಸಂಘಗಳಾಗಲಿ, ನೌಕರರ ಸಂಘದವರಾಗಲಿ ಆಲೋಚಿಸದಿರುವದು ಸೋಜಿಗವಾಗಿದೆ.
ಚುನಾವಣಾ ಆಯೋಗ ಈ ಸಮಸ್ಯೆಯ ಬಗ್ಗೆ ಗಂಭೀರವಾಗಿ ಚಿಂತಿಸದಿರುವುದು ವಿಚಿತ್ರವಾಗಿದೆ. ಅದರಂತೆ ವಿದ್ಯಾರ್ಥಿ ಸಂಘಗಳು, ವಿವಿಧ ರಾಜಕೀಯ ಪಕ್ಷಗಳೂ ಸುಮ್ಮನಿವೆ. ಮತದಾನ ಪವಿತ್ರವಾದ ಕಾರ್ಯ ಎಂದು ಆಯೋಗ ಒತ್ತಿ ಒತ್ತಿ ಹೇಳುತ್ತಿದೆ. ಆದರೆ ಇಲ್ಲಿ ಮಾತ್ರ ಅದು ಸುಳ್ಳಾಗಿದೆ- ಚಂದ್ರಮೋಹನ ಮರಾಠೆ, ಉಪನ್ಯಾಸಕರು ಮಂಗಳೂರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.